Darshan To Bellary Jail: ಬಳ್ಳಾರಿ ಜೈಲಿಗೆ ದರ್ಶನ್‌ ಸ್ಥಳಾಂತರ ನಿಕ್ಕಿ; ಬೆಂಗಳೂರು ಜೈಲಲ್ಲೇ ಉಳಿತಾರೆ ಪವಿತ್ರ ಗೌಡ-bangalore court news bangalore court directed to shift film star darshan from parappana agrahara to bellary jail kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Darshan To Bellary Jail: ಬಳ್ಳಾರಿ ಜೈಲಿಗೆ ದರ್ಶನ್‌ ಸ್ಥಳಾಂತರ ನಿಕ್ಕಿ; ಬೆಂಗಳೂರು ಜೈಲಲ್ಲೇ ಉಳಿತಾರೆ ಪವಿತ್ರ ಗೌಡ

Darshan To Bellary Jail: ಬಳ್ಳಾರಿ ಜೈಲಿಗೆ ದರ್ಶನ್‌ ಸ್ಥಳಾಂತರ ನಿಕ್ಕಿ; ಬೆಂಗಳೂರು ಜೈಲಲ್ಲೇ ಉಳಿತಾರೆ ಪವಿತ್ರ ಗೌಡ

Darshan News ನಟ ದರ್ಶನ್‌ ಎರಡು ತಿಂಗಳು ಬೆಂಗಳೂರಿನ ಜೈಲಿನಲ್ಲಿದ್ದರು. ಈಗ ಬಳ್ಳಾರಿ ಜೈಲಿಗೆ ಸ್ಥಳಾಂತರವಾಗಲಿದ್ದಾರೆ.

ಬಳ್ಳಾರಿ ಜೈಲಿಗೆ ಸ್ಥಳಾಂತರವಾಗಲಿರುವ ನಟ ದರ್ಶನ್‌ .
ಬಳ್ಳಾರಿ ಜೈಲಿಗೆ ಸ್ಥಳಾಂತರವಾಗಲಿರುವ ನಟ ದರ್ಶನ್‌ .

ಬೆಂಗಳೂರು: ಚಿತ್ರದುರ್ಗ ರೇಣುಕಾ ಸ್ವಾಮಿ ಭೀಕರ ಕೊಲೆ( Renuka Swamy Murder Case) ಪ್ರಕರಣದ ಪ್ರಕರಣ ಆರೋಪಿಯಾಗಿ ಎರಡು ತಿಂಗಳಿನಿಂದ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟ ದರ್ಶನ್‌ ತೂಗುದೀಪ ( Darshan) ಸದ್ಯವೇ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆಯಾಗಲಿದ್ದಾರೆ. ಇದೇ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಟಿ ಪವಿತ್ರ ಗೌಡ ಮಾತ್ರ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲೇ ಉಳಿಯಲಿದ್ದಾರೆ. ಬೆಂಗಳೂರಿನ ಸ್ಥಳೀಯ ನ್ಯಾಯಾಲಯದ ಮಂಗಳವಾರ ಈ ಕುರಿತು ನಿರ್ದೇಶನ ನೀಡಿದ್ದು. ಪ್ರಕರಣದ ಎಲ್ಲಾ ಆರೋಪಿಗಳನ್ನು ಕರ್ನಾಟಕದ ವಿವಿಧ ಜೈಲುಗಳಿಗೆ ವರ್ಗ ಮಾಡಲು ಸೂಚಿಸಲಾಗಿದೆ. ದರ್ಶನ್‌ ಹಾಗೂ ಸಹಚರರಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿತ್ತು. ಈ ಕುರಿತು ಪೊಲೀಸ್‌ ಇಲಾಖೆ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯದ ಅನುಮತಿ ಪಡೆದು ಸ್ಥಳಾಂತರಕ್ಕೆ ಕೋರಿತ್ತು.

ದರ್ಶನ್‌ ಅವರು ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡರೆ ಪವಿತ್ರ ಗೌಡ ಬೆಂಗಳೂರು ಜೈಲಲ್ಲೇ ಉಳಿಯುವರು. ಇತರೆ ಆರೋಪಿಗಳಾದ ಅನುಕುಮಾರ್‌ ಹಾಗೂ ದೀಪಕ್‌ ಕೂಡ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಲ್ಲೇ ಉಳಿಯುವರು,. ಪ್ರದೂಷ್‌ನನ್ನು ಬೆಳಗಾವಿ, ಪವನ್‌,ನಂದೀಶ್‌ ಹಾಗೂ ರಾಘವೇಂದ್ರ ಅವರನ್ನು ಮೈಸೂರು ಜೈಲಿಗೆ, ಧನರಾಜ್‌ ಧಾರವಾಡ ಜೈಲಿಗೆ, ಜಗದೀಶ್‌ ಹಾಗೂ ಲಕ್ಷ್ಮಣ ಶಿವಮೊಗ್ಗ ಜೈಲಿಗೆ, ನಾಗರಾಜ್‌ ಕಲಬುರಗಿ ಜೈಲಿಗೆ, ವಿನಯ್‌ ವಿಜಯಪುರ ಜೈಲಿಗೆ ಸ್ಥಳಾಂತರಗೊಳ್ಳುವರು.

ಇದೇ ಪ್ರಕರಣದ ಆರೋಪಿಗಳಾದ ನಿಖಿಲ್, ರವಿ , ಕೇಶವಮೂರ್ತಿ, ಕಾರ್ತಿಕ್ ಅವರನ್ನು ತುಮಕೂರು ಜೈಲಿಗೆ ಕಳೆದ ತಿಂಗಳೇ ಸ್ಥಳಾಂತರ ಮಾಡಲಾಗಿದೆ.

ಎರಡು ತಿಂಗಳ ಹಿಂದೆಯೇ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌, ಪವಿತ್ರ ಗೌಡ ಸಹಿತ ಹದಿನೇಳು ಮಂದಿಯನ್ನು ಬಂಧಿಸಲಾಗಿದೆ. ಅದರಲ್ಲಿ ಹದಿಮೂರು ಮಂದಿಯನ್ನು ಪರಪ್ಪನ ಅಗ್ರಹಾರದಲ್ಲಿಯೇ ಇರಿಸಲಾಗಿದೆ. ಮನೆಯೂಟ ನೀಡುವಂತೆ ದರ್ಶನ್‌ ಸಹಿತ ಇತರರು ಕೋರಿದ್ದ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿರಲಿಲ್ಲ. ಈ ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು. ಇದರ ನಡುವೆ ಮೂರು ದಿನದ ಹಿಂದೆ ದರ್ಶನ್‌ ಇತರರೊಂದಿಗೆ ಜೈಲಲ್ಲೇ ರಾಜಾತಿಥ್ಯ ಪಡೆಯುತ್ತಿರುವ ವಿಡಿಯೋ ಹಾಗೂ ಫೋಟೋ ವೈರಲ್‌ ಆಗಿತ್ತು. ಇದು ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಜೈಲು ಅಧಿಕಾರಿಗಳನ್ನು ಅಮಾನತುಗೊಳಿಸಿದ್ದರು. ಖುದ್ದು ಪರಮೇಶ್ವರ್‌ ಜೈಲಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಪರಾಮರ್ಶಿಸಿದ್ದರು. ತನಿಖೆಗಾಗಿ ಐಪಿಎಸ್‌ ಅಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸುವುದಾಗಿಯೂ ಹೇಳಿದ್ದರು. ಈಗಾಗಲೇ ಮೂವರು ಇನ್ಸ್‌ ಪೆಕ್ಟರ್‌ ಗಳ ನೇತೃತ್ವದಲ್ಲಿ ಮೂರು ಸಮಿತಿಗಳನ್ನು ಕೂಡ ನೇಮಿಸಲಾಗಿದೆ. ಭಾರೀ ಭದ್ರತಾ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ದರ್ಶನ್‌ ಅವರನ್ನು ಬೇರೆ ಕಾರಾಗೃಹಕ್ಕೆ ಸ್ಥಳಾಂತರಿಸುವ ಕುರಿತು ಚರ್ಚೆ ನಡೆದಿತ್ತು.

ಈ ನಡುವೆ ಒಂಬತ್ತು ಅಧಿಕಾರಿಗಳು ಈಗಾಗಲೇ ಅಮಾನತುಗೊಂಡಿದ್ದು ಕರ್ತವ್ಯ ಲೋಪದ ಆಧಾರದ ಮೇಲೆ ವಜಾಗೊಳಿಸುವ ಕುರಿತು ಪರಿಶೀಲನೆ ನಡೆಸುವುದಾಗಿ ಸಚಿವ ಡಾ.ಪರಮೇಶ್ವರ್‌ ಹೇಳಿದ್ದಾರೆ.