Dharmsthala News: ಧರ್ಮಸ್ಥಳ ಕುರಿತ ಮಾನಹಾನಿ ರೀತಿಯ ವಿಡಿಯೋಗಳನ್ನು ತೆಗೆಯಲು ಬೆಂಗಳೂರು ನ್ಯಾಯಾಲಯ ಸೂಚನೆ
Dharmsthala News: ಧರ್ಮಸ್ಥಳ ಕುರಿತಾಗಿ ಮಾನಹಾನಿ ರೀತಿಯಲ್ಲಿ ಪ್ರಕಟಿಸಿರುವ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಿಂದ ತೆಗೆದು ಹಾಕುವಂತೆ ಬೆಂಗಳೂರಿನ ನ್ಯಾಯಾಲಯ ಸೂಚಿಸಿದೆ.

Dharmsthala News: ಕರ್ನಾಟಕದ ಪ್ರಸಿದ್ದ ಧಾರ್ಮಿಕ ತಾಣವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಅವರ ಕುಟುಂಬವರ ಕುರಿತು ಪ್ರಕಟಿಸಲಾಗಿರುವ ಎಲ್ಲಾ ರೀತಿಯ ವಿವಾದಾತ್ಮಕ ಹಾಗೂ ಮಾನ ಹಾನಿಯಾಗುವ ರೀತಿಯಲ್ಲಿರುವ ವಿಡಿಯೋಗಳನ್ನು ತೆಗೆದು ಹಾಕುವಂತೆ ಬೆಂಗಳೂರಿನ ಸ್ಥಳೀಯ ನ್ಯಾಯಾಲಯವು ಆದೇಶ ನೀಡಿದೆ. ಹಲವು ವರ್ಷಗಳ ಹಿಂದೆಯೇ ಹತ್ಯೆಯಾಗಿರುವ ಸೌಜನ್ಯ ಪ್ರಕರಣದ ವಿಚಾರವಾಗಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ಹಾಗೂ ಅವರ ಕುಟುಂಬದವರ ಕುರಿತು ಬಳ್ಳಾರಿ ಮೂಲದ ಯೂ ಟೂಬರ್ ಎಂ.ಡಿ.ಸಮೀರ್ ನಿರ್ಮಿಸಿದ್ದ ವಿಡಿಯೋಗಳು ಹಾಗೂ ಅವುಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡಿರುವವರು ತೆಗೆದು ಹಾಕಬೇಕು ಎಂದು ನ್ಯಾಯಾಲಯದ ತೀರ್ಪಿನಲ್ಲಿ ತಿಳಿಸಲಾಗಿದೆ.
ಈಗಾಗಲೇ ಹಾಕಿರುವ ಧರ್ಮಸ್ಥಳ ಕುರಿತಾದ ಮಾನಹಾನಿಕರ ಎಲ್ಲಾ ವಿಡಿಯೋಗಳನ್ನು ಹಂಚಿಕೊಂಡಿರುವವರು ತೆಗೆದು ಹಾಕಬೇಕು. ಸಾಮಾಜಿಕ ಜಾಲತಾಲಗಳು, ಮಾಧ್ಯಮಗಳು ಕೂಡ ಇದನ್ನು ಗಮನಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಅಂಗ ಸಂಸ್ಥೆಗಳು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ಪರವಾಗಿ ಶೀನಪ್ಪ, ಎ.ಎಸ್.ಸುಖೇಶ್ ಸಹಿತ ನಾಲ್ವರು ಸಲ್ಲಿಸಿದ ಅಸಲು ದಾವೆಯ ವಿಚಾರಣೆಯನ್ನು ನಡೆಸಿದ ಬೆಂಗಳೂರಿನ ಸಿಸಿಎಚ್ 11ನೇ ನ್ಯಾಯಾಲಯವು ಈ ಆದೇಶ ನೀಡಿದೆ. ಅರ್ಜಿ ವಿಚಾರಣೆಗೆ ಎತ್ತಿಕೊಂಡ ನ್ಯಾಯಾಧೀಶರಾದ ಎನ್.ಎಸ್.ನಟರಾಜ್ ಅವರ ದೂರುದಾರರ ವಿಚಾರ ಆಲಿಸಿದರು.
ಧರ್ಮಸ್ಥಳ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ದ ಮಾನಹಾನಿಕರ ವಿಡಿಯೋಗಳನ್ನು ರೂಪಿಸಲಾಗಿದೆ. ಅವುಗಳನ್ನು ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್, ಇನ್ಸ್‌ಟಾಗ್ರಾಂ, ಫೇಸ್‌ಬುಕ್, ಟ್ವಿಟ್ಟರ್‌ಗಳಲ್ಲಿ ಅಪ್ಲೋಡ್ ಮಾಡಲಾಗಿದೆ. ಕೆಲವು ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳಲ್ಲಿ ಆಧಾರ ರಹಿತ ಮತ್ತು ಜಾಗೂರಕತೆಯೇ ಇಲ್ಲದ ರೀತಿಯಲ್ಲಿ ವೀರೇಂದ್ರ ಹೆಗ್ಗಡೆ ಅವರು ಹಾಗೂ ಅವರ ಕುಟುಂಬದವರ ವಿರುದ್ದ ಸುದ್ದಿ, ವಿಡಿಯೋಗಳನ್ನು ನಿರ್ಮಿಸಿ ಬಿತ್ತರ ಮಾಡಲಾಗಿದೆ. ಇದನ್ನು ಪ್ರಕಟಿಸುವುದು, ಮರು ರವಾನಿಸುವುದು ಕೂಡ ಮಾಡಲಾಗಿದೆ. ಇಂತಹ ವಿಡಿಯೋಗಳನ್ನು ಬಿತ್ತರಿಸುವುದು, ಮತ್ತೊಬ್ಬರೊಂದಿಗೆ ಹಂಚಿಕೊಳ್ಳುವುದು, ಅಪ್ಲೋಡ್ ಮಾಡುವುದು ಸೇರಿದಂತೆ ಎಲ್ಲಾ ರೀತಿಯ ಬಳಕೆಯಿಂದ ಶಾಶ್ವತವಾಗಿ ನಿರ್ಬಂಧ ಹೇರಬೇಕು ಎಂದು ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ಅವರ ಪರ ವಕೀಲರು ಕೋರಿಕೊಂಡಿದ್ದರು. ಅರ್ಜಿದಾರರ ಪರವಾಗಿ ವಕೀಲ ರಾಜಶೇಖರ ಹಿಲಿಯಾರು ವಾದಿಸಿದ್ದರು. ಇವರ ವಾದ ಆಲಿಸಿದ ನ್ಯಾಯಾಲವು ಮಾನಹಾನಿಕರ ವಿಡಿಯೋಗಳನ್ನು ತೆಗೆದು ಹಾಕಲು ಸೂಚಿಸಿದೆ.
ಏನಿದು ವಿವಾದ
ಎಂಡಿ ಸಮೀರ್ ಧೂತ ಎನ್ನುವ ಹೆಸರಿನಲ್ಲಿ ಯೂಟೂಬ್ ಚಾನಲ್ ಅನ್ನು ಹಲವಾರು ವರ್ಷಗಳ ಹಿಂದೆಯೇ ಆರಂಭಿಸಿ ಕುತೂಹಲಕಾರಿ ವಿಷಯಗಳ ಕುರಿತು ವಿಡಿಯೋ ಹಾಕುವುದು ಇದೆ. ಸಮೀರ್ ಯೂಟೂಬ್ ಫಾಲೋರ್ಸ್ ಚೆನ್ನಾಗಿಯೇ ಇದ್ದಾರೆ.
ಕಳೆದ ತಿಂಗಳು ಅಂದರೆ 2025ರ ಫೆಬ್ರವರಿ 27 ರಂದು ಸಮೀರ್ ಹೊಸ ವಿಡಿಯೊವೊಂದನ್ನು ಅಪ್‌ಲೋಡ್ ಮಾಡಿದ್ದರು. ಇದರಲ್ಲಿ ಸಮೀರ್ ಮುಖ್ಯವಾಗಿ ಉಲ್ಲೇಖಿಸಿದ್ದು ಧರ್ಮಸ್ಥಳ ಸಮೀಪದ ಸೌಜನ್ಯಾ ಎಂಬ ಯುವತಿಯ ಕೊಲೆ ಪ್ರಕರಣವನ್ನು.
ಸೌಜನ್ಯಾ ಕೊಲೆ ಪ್ರಕರಣದ ಜತೆಗೆ ಧರ್ಮಸ್ಥಳ ಭಾಗದಲ್ಲಿ ನಡದಿರುವ ನಾರಾಯಣ ಮತ್ತು ಯಮುನಾ ಪ್ರಕರಣ, ವೇದವಲ್ಲ, ಬ್ಯಾಂಕ್ ಮ್ಯಾನೇಜರ್, ಪದ್ಮಲತಾ, ರವಿಪೂಜಾರಿ ಪ್ರಕರಣಗಳನ್ನು ಸಮೀರ್ ವಿಡಿಯೋದಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ತನಿಖೆಯಾಗಲಿ ಎನ್ನುವುದು ಸಮೀರ್ ಆಗ್ರಹ.
ಈ ವಿಡಿಯೋ ಅಪ್ಲೋಡ್ ಆಗುತ್ತಿದ್ದಂತೆ ಕರ್ನಾಟಕದ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅವರಿಗೆ ದೂರು ಹೋದ ಹಿನ್ನೆಲೆಯಲ್ಲಿ ಎಲ್ಲಾ ಪೊಲೀಸ್ ಆಯುಕ್ತರು ಹಾಗೂ ಎಸ್ಪಿಗಳಿಗೆ ಸಂದೇಶವನ್ನು ಅವರು ಕಳುಹಿಸಿದ್ದರು. ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುತ್ತಿರುವ ಸಮೀರ್ ವಿರುದ್ದ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರು. ಬಳ್ಳಾರಿಯ ಕೌಲ್‌ಬಜಾರ್ ಎಸ್‌ಐ ನಿಂಗಪ್ಪ ಅವರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು.ನಂತರ ನ್ಯಾಯಾಲಯ ಇದಕ್ಕೆ ತಡೆಯಾಜ್ಞೆ ನೀಡಿತ್ತು.
