Bangalore Crime: ಬೆಂಗಳೂರಿನಲ್ಲಿ ಬ್ಯಾಡ್ಮಿಂಟನ್ ತರಬೇತಿಗೆ ಆಗಮಿಸುತ್ತಿದ್ದ ಬಾಲಕಿ ಮೇಲೆ ಅತ್ಯಾಚಾರ, ತಮಿಳುನಾಡಿನ ತರಬೇತುದಾರ ಬಂಧನ
Bangalore Crime: ಬ್ಯಾಡ್ಮಿಂಟನ್ ತರಬೇತಿಗೆಂದು ಬರುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ ತಮಿಳುನಾಡು ಮೂಲದ ತರಬೇತುದಾರನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.ವರದಿ: ಎಚ್.ಮಾರುತಿ,ಬೆಂಗಳೂರು

Bangalore Crime: ಬ್ಯಾಡ್ಮಿಂಟನ್ ತರಬೇತಿಗೆ ಆಗಮಿಸುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಆಕೆಯ ನಗ್ನ ಫೋಟೊ ಹಾಗೂ ವಿಡಿಯೊಗಳನ್ನು ಚಿತ್ರೀಕರಿಸಿಕೊಂಡಿದ್ದ ತರಬೇತುದಾರನನ್ನು ಹುಳಿಮಾವು ಠಾಣೆಯ ಪೊಲೀಸರು ಬಂಧಿಸಿದ್ದಾರೆ. 26 ವರ್ಷದ ತಮಿಳುನಾಡಿನ ಸುರೇಶ್ ಬಾಲಾಜಿ ಆರೋಪಿ. ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ತಾಯಿ ನೀಡಿದ ದೂರು ಆಧರಿಸಿ, ಆರೋಪಿಯ ವಿರುದ್ಧ ಪೋಕ್ಸೊ (ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ) ಕಾಯ್ದೆ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ. ಈತನ ಮೊಬೈಲ್ ವಶಪಡಿಸಿಕೊಳ್ಳಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಅತ್ಯಾಚಾರಕ್ಕೆ ಒಳಗಾದ 16 ವರ್ಷದ ಬಾಲಕಿ ಸೇರಿದಂತೆ ಎಂಟು ಬಾಲಕಿಯರ ನಗ್ನ ಫೋಟೊಗಳು ಹಾಗೂ ವಿಡಿಯೊಗಳು ಮೊಬೈಲ್ ನಲ್ಲಿ ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮಿಳುನಾಡಿನಿಂದ ಬೆಂಗಳೂರಿಗೆ ಬಂದಿದ್ದ ಆರೋಪಿ, ಹಲವು ವರ್ಷಗಳಿಂದ ಬ್ಯಾಡ್ಮಿಂಟನ್ ತರಬೇತುದಾರನಾಗಿ ಕೆಲಸ ಮಾಡುತ್ತಿದ್ದ. ಆತ ಕೆಲಸ ಮಾಡುತ್ತಿದ್ದ ಕೋಚಿಂಗ್ ಕೇಂದ್ರಕ್ಕೆ ಎರಡು ವರ್ಷಗಳ ಹಿಂದೆ ಸಂತ್ರಸ್ತ ಬಾಲಕಿ ತರಬೇತಿಗೆ ಸೇರಿಕೊಂಡಿದ್ದಳು. ಆಕೆಯೊಂದಿಗೆ ಸಲುಗೆ ಬೆಳೆಸಿದ ಸುರೇಶ್ ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಜತೆಗೆ ಯಾರಿಗೂ ವಿಷಯ ತಿಳಿಸದಂತೆ ಬೆದರಿಕೆ ಹಾಕಿದ್ದ ಎಂದು ಪೊಲೀಸರು ಹೇಳಿದ್ದಾರೆ.
10ನೇ ತರಗತಿ ಪರೀಕ್ಷೆ ಮುಗಿದ ಬಳಿಕ ಬಾಲಕಿ ಅಜ್ಜಿಯ ಮನೆಗೆ ತೆರಳಿದ್ದಳು. ಅಪರಿಚಿತ ಮೊಬೈಲ್ ನಂಬರ್ ನಿಂದ ಅಜ್ಜಿಯ ಮೊಬೈಲ್‌ಗೆ ನಗ್ನ ಫೋಟೊಗಳನ್ನು ಕಳುಹಿಸಲಾಗಿತ್ತು.ಇದರಿಂದ ಹೆದರಿದ ಅಜ್ಜಿ ತಕ್ಷಣ ಸಂತ್ರಸ್ತೆಯ ಪೋಷಕರಿಗೆ ಮಾಹಿತಿ ನೀಡಿದ್ದರು. ನಂತರ ಬಾಲಕಿಯ ತಾಯಿ ಮಗಳನ್ನು ವಿಚಾರಿಸಿದಾಗ ತರಬೇತುದಾರ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿರುವುದನ್ನು ಹೇಳಿಕೊಂಡಿದ್ದಳು. ಬಳಿಕ ಪೋಷಕರು ನೀಡಿದ ದೂರು ಆಧರಿಸಿ, ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಮನೆಗೆ ಕರೆದೊಯ್ಯುತ್ತಿದ್ದ ಆರೋಪಿ ಲೈಂಗಿಕ ದೌರ್ಜನ್ಯ ಎಸಗಿ ಫೋಟೊ, ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ಯಾಡ್ಮಿಂಟನ್ ತರಬೇತಿಗೆ ಬರುತ್ತಿದ್ದ ಇತರ ಬಾಲಕಿಯರ ಜತೆ ಸ್ನೇಹ ಮಾಡಿಕೊಳ್ಳುತ್ತಿದ್ದ ಆರೋಪಿ ಲೈಂಗಿಕ ದೌರ್ಜನ್ಯ ಎಸಗಿದ್ದು ಈ ದೃಶ್ಯಗಳೂ ಈತನ ಮೊಬೈಲ್ ನಲ್ಲಿ ಪತ್ತೆಯಾಗಿವೆ. ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗಲೂ ಆರೋಪಿ ಯುವತಿಯರ ಹಿಂಭಾಗ ಸ್ಪರ್ಶಿಸಿ ಪರಾರಿಯಾಗುತ್ತಿದ್ದ. ಅದನ್ನು ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದ ಎಂಬ ಸಂಗತಿಯೂ ತನಿಖೆಯಿಂದ ಹೊರಬಿದ್ದಿದೆ ಎಂಬುದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ.
ನಡುರಸ್ತೆಯಲ್ಲೇ ಪತ್ನಿಯ ಕತ್ತು ಕೊಯ್ದು ಕೊಲೆ ಮಾಡಿದ್ದ ಪತಿರಾಯ
ಬೆಂಗಳೂರು ನಗರದ ದೊಡ್ಡ ತೇಗೂರು ಬಳಿ ಪತ್ನಿಯ ಕತ್ತು ಕೊಯ್ದು ಕೊಲೆ ಮಾಡಿದ್ದ ಪತಿಯನ್ನು ಎಲೆಕ್ರ್ಟಾನಿಕ್ ಸಿಟಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಾಗೇಪಲ್ಲಿಯ ಶಾರದಾ (35) ಕೊಲೆಯಾದ ಮಹಿಳೆ. ಕೃತ್ಯ ಎಸಗಿದ ಆರೋಪಿ ಶಾರದಾ ಅವರ ಪತಿ, ಆಂಧ್ರಪ್ರದೇಶದ ಕೃಷ್ಣಪ್ಪ. ಈತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೃಷ್ಣಪ್ಪ ಕೂಲಿ ಕಾರ್ಮಿಕನಾಗಿದ್ದರೆ ಶಾರದಾ ಮನೆ ಕೆಲಸ ಮಾಡುತ್ತಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕೃಷ್ಣಪ್ಪ ಮದ್ಯಪಾನ ಮಾಡಿ ಪರಪುರುಷನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವೆ ಎಂದು ಪತ್ನಿಯ ಜತೆ ಜಗಳ ಮಾಡುತ್ತಿದ್ದ. ಕೌಟುಂಬಿಕ ಕಲಹದಿಂದ ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.
ದೊಡ್ಡ ತೇಗೂರು ಸಮೀಪದ ಪ್ರಗತಿನಗರದಲ್ಲಿ ಶಾರದಾ ನಡೆದುಕೊಂಡು ಹೋಗುತ್ತಿದ್ದಾಗ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಪತ್ನಿಯ ಕುತ್ತಿಗೆ ಸೀಳಿ ಕೊಲೆ ಮಾಡಿದ್ದ ಆರೋಪಿ ಪರಾರಿಯಾಗಲು ಯತ್ನಿಸಿದನಾದರೂ ಸ್ಥಳೀಯರು ಆತನ್ನು ಹಿಡಿದು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ:ಎಚ್. ಮಾರುತಿ, ಬೆಂಗಳೂರು


