Bangalore News: 8 ಕೋಟಿ ರೂ ಮೌಲ್ಯದ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ ಮಾರಾಟ ಪ್ರತಿನಿಧಿ ಬಂಧನ; ಬೆಂಗಳೂರು ಪೊಲೀಸರ ಕಾರ್ಯಾಚರಣೆ
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: 8 ಕೋಟಿ ರೂ ಮೌಲ್ಯದ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ ಮಾರಾಟ ಪ್ರತಿನಿಧಿ ಬಂಧನ; ಬೆಂಗಳೂರು ಪೊಲೀಸರ ಕಾರ್ಯಾಚರಣೆ

Bangalore News: 8 ಕೋಟಿ ರೂ ಮೌಲ್ಯದ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ ಮಾರಾಟ ಪ್ರತಿನಿಧಿ ಬಂಧನ; ಬೆಂಗಳೂರು ಪೊಲೀಸರ ಕಾರ್ಯಾಚರಣೆ

ಬೆಂಗಳೂರಿನ ವ್ಯಾಪಾರಸ್ಥರೊಬ್ಬರ ಬಳಿ ಚಿನ್ನದ ವಹಿವಾಟು ಪ್ರತಿನಿಧಿಯಾಗಿದ್ದ ವ್ಯಕ್ತಿ ಚಿನ್ನಾಭರಣದೊಂದಿಗೆ ಪರಾರಿಯಾಗಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.ವರದಿ: ಎಚ್.ಮಾರುತಿ. ಬೆಂಗಳೂರು

ಬೆಂಗಳೂರಿನಲ್ಲಿ ಎಟಿಎಂ ಕಳ್ಳರಿಂದ ವಶಪಡಿಸಿಕೊಂಡ ಹಣದೊಂದಿಗೆ ನಗರ ಪೊಲೀಸ್‌ ಆಯುಕ್ತ ದಯಾನಂದ ಹಾಗೂ ಅಧಿಕಾರಿಗಳು.
ಬೆಂಗಳೂರಿನಲ್ಲಿ ಎಟಿಎಂ ಕಳ್ಳರಿಂದ ವಶಪಡಿಸಿಕೊಂಡ ಹಣದೊಂದಿಗೆ ನಗರ ಪೊಲೀಸ್‌ ಆಯುಕ್ತ ದಯಾನಂದ ಹಾಗೂ ಅಧಿಕಾರಿಗಳು.

ಬೆಂಗಳೂರು: ಕೆಲಸ ಕೊಟ್ಟಿದ್ದ ಮಾಲೀಕರ ಅಂಗಡಿ ಮತ್ತು ಪರಿಚಿತರ ಅಂಗಡಿಗಳ ಮಾಲೀಕರು ಮಾರಾಟಕ್ಕೆಂದು ನೀಡಿದ್ದ 8 ಕೋಟಿ ರೂ.ಗಳ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ ಆರೋಪಿಯನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ. ಚೆನ್ನೈ ಮೂಲದ ನರೇಶ್ ಶರ್ಮಾ ಬಂಧಿತ ಆರೋಪಿ. ಈತನಿಂದ ರೂ. 5 ಲಕ್ಷ ನಗದು ಹಾಗೂ 45 ಲಕ್ಷ ಮೌಲ್ಯದ ಚಿನ್ನದ ಗಟ್ಟಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನರೇಶ್ ಶರ್ಮಾ ಕೆಲಸ ಮಾಡುತ್ತಿದ್ದ ಆಭರಣ ಅಂಗಡಿ ಹಾಗೂ ಪರಿಚಿತರ ಅಂಗಡಿಗಳ ಮಾಲೀಕರು ಈತನಿಗೆ ಮಾರಾಟ ಮಾಡಲು ಆಭರಣಗಳನ್ನು ನೀಡುತ್ತಿದ್ದರು. ಹೀಗೆ ನೀಡಿದ್ದ ರೂ. 8 ಕೋಟಿ ಮೌಲ್ಯದ ಸುಮಾರು 9 ಕೆ.ಜಿ 462 ಗ್ರಾಂ. ತೂಕದ ಚಿನ್ನಾಭರಣದೊಂದಿಗೆ ಈತ ಪರಾರಿಯಾಗಿದ್ದ. ಈತನ ಅಂಗಡಿ ಮಾಲೀಕ ವಿಕ್ರಮ್ ಜ್ಯುವೆಲ್ಲರ್ಸ್ ಮಾಲೀಕ ವಿಕ್ರಮ್ ಕಾರ್ಯ ಅವರು ದೂರು ನೀಡಿದ್ದರು.

ಶರ್ಮಾ ಒಂದು ಬಾರಿ ಚಿನ್ನಾಭರಣಗಳನ್ನು ಕೊಯಮತ್ತೂರಿಗೆ ಕೊಂಡೊಯ್ದು ಮಾರಾಟ ಮಾಡಿಕೊಂಡು ಬಂದಿದ್ದ. ಮತ್ತೆ ಜನವರಿ 8ರಂದು ಉಳಿದ ಚಿನ್ನಾಭರಣಗಳನ್ನು ತೆಗೆದುಕೊಂಡು ಮಾರಾಟಕ್ಕೆ ಹೊರ ರಾಜ್ಯಕ್ಕೆ ತೆರಳಿದ್ದ. ಆಗಿನಿಂದ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಯಾರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಲಖನೌ ನಗರದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ವಿಕ್ರಮ್ ಅವರ ಚಿನ್ನಾಭರಣ ಅಂಗಡಿಯಲ್ಲಿ ಆರೋಪಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಈ ನಂಬಿಕೆಯ ಮೆಲೆ ಈತನಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನವನ್ನು ಮಾರಾಟ ಮಾಡಲು ಆರೋಪಿಗೆ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಎಟಿಎಂ ಮೆಷಿನ್‌ ಗಳಲ್ಲಿ ಹಣ ಕಳವು ಮಾಡುತ್ತಿದ್ದ ಆರು ಕಳ್ಳರ ಬಂಧನ

ಎಟಿಎಂ ಗಳಲ್ಲಿ ಹಣವನ್ನು ಕಳವು ಮಾಡುತ್ತಿದ್ದ ಆರು ಮಂದಿ ದರೋಡೆಕೋರರನ್ನು ಮಹಾಲಕ್ಷ್ಮಿಲೇಔಟ್ ಪೊಲೀಸ್ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಂದ 51 ಲಕ್ಷ ರೂ, ನಗದು ಮತ್ತು ಕಳವು ಮಾಡಿದ್ದ ಹಣದಿಂದ ಖರೀದಿಸಿದ್ದ ಮೂರು ಕಾರುಗಳನ್ನು ಜಪ್ತಿ ಮಾಡಿದ್ದಾರೆ. ಶಿವು, ಸಮೀರ್, ಮನೋಹರ್, ಗಿರೀಶ್, ಜಗ್ಗೇಶ್ ಹಾಗೂ ಜಸ್ವಂತ್ ಪೊಲೀಸರ ಬಲೆಗೆ ಬಿದ್ದ ದರೋಡೆಕೋರರು.

ಕೆಂಪೇಗೌಡ ಲೇಔಟ್ ಸರ್ವೀಸ್ ರಸ್ತೆಯ ಟೀ ಶಾಪ್ ವೊಂದರ ಬಳಿ ಆರೋಪಿಗಳು ಎಟಿಎಂ ಗಳಲ್ಲಿ ಕಳವು ಮಾಡಿದ್ದ ಹಣವನ್ನು ಹಂಚಿಕೊಳ್ಳುವ ಸಂಬಂಧ ಜಗಳವಾಡುತ್ತಿದ್ದರು. ಇದನ್ನು ಗಮನಿಸಿದ್ದ ಬಾತ್ಮೀದಾರನೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದ. ಕೂಡಲೇ ಆಗಮಿಸಿದ ಪೊಲೀಸರು ಇವರನ್ನು ಬಂಧಿಸಿ ಅವರ ಬಳಿಯಿದ್ದ ಒಂದು ಕಾರು ಮತ್ತು ರೂ. 43 ಲಕ್ಷ ಹಣವನ್ನು ಜಪ್ತಿ ಮಾಡಿದ್ದಾರೆ.

ಆರೋಪಿಗಳು ಎಟಿಎಂ ಗಳಿಗೆ ಹಣವನ್ನು ತುಂಬುವ ಹಾಗೂ ಎ.ಟಿ.ಎಂ ಗಳನ್ನು ರಿಪೇರಿ ಮಾಡುವ ಕೆಲಸವನ್ನು ಗುತ್ತಿಗೆಗೆ ಪಡೆದುಕೊಂಡಿದ್ದರು. ಇವರು ಎ.ಟಿ.ಎಂ ಗಳಿಗೆ ಹಣವನ್ನು ತುಂಬುವಾಗ ಕಡಿಮೆ ಹಣವನ್ನು ತುಂಬುತ್ತಿದ್ದರು ಮತ್ತು ಎಟಿಎಂ ಮೆಷಿನ್‌ಗಳನ್ನು ರಿಪೇರಿ ಮಾಡುವಾಗ ಪಾಸ್‌ವರ್ಡ್ ಅನ್ನು ಪಡೆದುಕೊಂಡು ಹಣವನ್ನು ಕಳವು ಮಾಡುತ್ತಿದ್ದನ್ನು ಒಪ್ಪಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಓರ್ವ

ಆರೋಪಿಯ ಮನೆಯಿಂದ 5 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೋರ್ವ ಆರೋಪಿಯ ಕಳವು ಮಾಡಿದ ಹಣದಲ್ಲಿ ಆತನ ಪತ್ನಿಗೆ ಕೊಡಿಸಿದ್ದ ಕಾರು ಮತ್ತು ಇನ್ನೊಬ್ಬ ಆರೋಪಿ ಖರೀದಿ ಮಾಡಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇವರು ಖತರ್‌ ನಾಕ್‌ ಕಳ್ಳರು. ಕದ್ದ ಹಣವನ್ನು ಬೇರೆ ಕಡೆ ಹೂಡಿಕೆ ಮಾಡಿ ಹಣವನ್ನು ಡಬಲ್ ಮಾಡಿಕೊಳ್ಳುವ ಯೋಜನೆ ರೂಪಿಸಿದ್ದರು. ಎಟಿಎಂ ಮೆಷಿನ್‌ಗಳ ಹಣವನ್ನು ಆಡಿಟಿಂಗ್ ಮಾಡುವಾಗ ಬೇರೆ ಎಟಿಎಂನಿಂದ ಹಣ ತಂದು ಅದರಲ್ಲಿ ಹಾಕುವ ಕೆಲಸ ಮಾಡುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಈ ಆರೋಪಿಗಳು ಎಟಿಎಂನಿಂದ ಹಣ ಕಳ್ಳತನ ಮಾಡುತ್ತಿರುವುದಾಗಿ ಪೊಲೀಸರ ವಿಚಾರಣೆಯಿಂದ ಬಯಲಾಗಿದೆ.

ವರದಿ: ಎಚ್.‌ ಮಾರುತಿ, ಬೆಂಗಳೂರು

Whats_app_banner