Pavitra Gowda: ರೇಣುಕಾಸ್ವಾಮಿ ಕೊಲೆ ಪ್ರಕರಣ: ಆರೋಪಿಯೊಬ್ಬನಿಗೆ ಗೂಗಲ್ ಪೇ ಮಾಡಿದ್ದ ಪವಿತ್ರಾಗೌಡ ಸ್ನೇಹಿತೆ ವಿಚಾರಣೆ
Darshan Case ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ನೀಡಿದ ವಿಚಾರದಲ್ಲಿ ಪವಿತ್ರಾಗೌಡ ಸ್ನೇಹಿತೆ ಸಮತ ಎಂಬುವವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.ವರದಿ: ಎಚ್.ಮಾರುತಿ. ಬೆಂಗಳೂರು
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯೊಬ್ಬನಿಗೆ ಹಣದ ನೆರವು ನೀಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾಗೌಡ ಅವರ ಸ್ನೇಹಿತೆ ಸಮತಾ ಅವರನ್ನು ವಿಶೇಷ ತನಿಖಾ ದಳದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.ಆರೋಪಿ ಧನರಾಜ್ ಗೆ ಸಮತಾ 3 ಸಾವಿರ ರೂಪಾಯಿಗಳನ್ನು ಗೂಗಲ್ ಪೇ ಮಾಡಿದ್ದರು. ಅವರು ಈ ಹಣ ವರ್ಗಾವಣೆ ಕುರಿತು ದಾಖಲೆಯನ್ನೂ ಎಸ್ ಐಟಿ ಅಧಿಕಾರಿಗಳಿಗೆ ಸಲ್ಲಿದ್ದರು. ನನಗೆ ಧನರಾಜ್ ಪರಿಚಯ ಮೊದಲಿಂದಲೂ ಇತ್ತು. ಆತನಿಗೆ ಹಣ ಬೇಕಾದಾಗಲೆಲ್ಲಾ ನನ್ನನ್ನು ಕೇಳುತ್ತಿದ್ದ. ಈ ಬಾರಿಯೂ ಆತ ಕೇಳಿದ ಎಂದು 3 ಸಾವಿರ ರೂ. ಕೊಟ್ಟಿದ್ದೆ ಅಷ್ಟೇ. ಆದರೆ ಆತ ನನಗೆ ರೇಣುಕಸ್ವಾಮಿ ಹತ್ಯೆ ಕುರಿತು ನನಗೆ ಏನನ್ನೂ ತಿಳಿಸಿಲ್ಲ ಎಂದು ಸಮತಾ ಸ್ಪಷ್ಟನೆ ನೀಡಿದ್ದಾರೆ.
ರಾಜರಾಜೇಶ್ವರಿನಗರದ ಪಟ್ಟಣಗೆರೆಯಲ್ಲಿ ರೇಣುಕಾಸ್ವಾಮಿಗೆ ವಿದ್ಯುತ್ ಶಾಕ್ ನೀಡಲು ಆರೋಪಿ ಧನರಾಜ್ ಎಲೆಕ್ಟ್ರಿಕ್ ಶಾಕ್ ಟಾರ್ಚ್ ತಂದಿದ್ದ. ಈ ಹಣದಿಂದಲೇ ಆತ ವಿದ್ಯುತ್ ಉಪಕರಣ ಖರೀದಿಸಿರಬಹುದು ಎಂಬ ಸಂಶಯವಿದ್ದು, ಸಮತಾ ಅವರಿಂದ ಹೇಳಿಕೆ ಪಡೆಯಲಾಗಿದೆ ಎಂದು ಎಸ್ ಐಟಿ ಮೂಲಗಳು ತಿಳಿಸಿವೆ.
ಸೋಮವಾರ ಪವಿತ್ರಾಗೌಡ ಅವರ ತಂದೆ ಪುಟ್ಟಣ್ಣ, ತಾಯಿ ಶೋಭಾ ಮತ್ತು ಮಗಳು ಭೇಟಿ ಮಾಡಿದ್ದರು. ಪೋಷಕರೊಂದಿಗೆ ಪವಿತ್ರಾ ಕೆಲ ಸಮಯ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಕಡಿಮೆ ರಕ್ತದೊತ್ತಡ, ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಪವಿತ್ರಾ ಬಳಲುತ್ತಿದ್ದು, ಜೈಲೂಟವನ್ನು ಸರಿಯಾಗಿ ಮಾಡುತ್ತಿಲ್ಲ. ಅವರಿಗೆ ಆರೋಗ್ಯ ತಪಾಸಣೆ ಮಾಡಿದ್ದು, ವೈದ್ಯರು ಹೆಚ್ಚಿನ ಪ್ರಮಾಣದಲ್ಲಿ ಹಣ್ಣುಗಳನ್ನು ಸೇವಿಸುವಂತೆ ತಿಳಿಸಿದ್ದಾರೆ ಎಂದೂ ಗೊತ್ತಾಗಿದೆ.
ಮತ್ತೊಂದು ಕಡೆ ಕೊಲೆ ಪ್ರಕರಣದಲ್ಲಿ 23 ದಿನಗಳಿಂದ ಜೈಲಿನಲ್ಲಿರುವ ತೂಗುದೀಪ ಶ್ರೀನಿವಾಸ್ ಅವರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯಿಂದ ಹೊರಬರಲು ಅವರು ಧ್ಯಾನ ಮತ್ತು ಯೋಗದ ಮೊರೆ ಹೋಗಿದ್ದಾರೆ. ಪ್ರತಿದಿನ ಬೆಳಗ್ಗೆ ಧ್ಯಾನ ಮತ್ತು ಯೋಗಾಭ್ಯಾಸ ಮಾಡುತ್ತಿದ್ದಾರೆ. ಕೆಲವು ದಿನಗಳಿಂದ ಪುಸ್ತಕ ಓದುವುದನ್ನೂ ಆರಂಭಿಸಿದ್ದಾರೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ವಿಜಯಲಕ್ಷ್ಮಿ ಅವರು ಪರಪ್ಪನ ಅಗ್ರಹಾರದ ಜೈಲಿಗೆ ಭೇಟಿ ನೀಡಿ ತಮ್ಮ ಪತಿ ದರ್ಶನ್ ಜೊತೆ ಮಾತುಕತೆ ನಡೆಸಿದ್ದಾರೆ.
ನೈಸ್ ರಸ್ತೆಯಲ್ಲಿ ಸರಣಿ ಅಪಘಾತ, ಓರ್ವ ಸಾವು, ನಾಲ್ವರಿಗೆ ಗಾಯ
ಬೆಂಗಳೂರಿನ ನೈಸ್ ರಸ್ತೆಯ ಟೋಲ್ ಗೇಟ್ ಬಳಿ ಮಿನಿ ಬಸ್, ಲಾರಿ ಮತ್ತು ಎರಡುಕಾರುಗಳ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಒಬ್ಬರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಿನಿ ಬಸ್ ನಲ್ಲಿದ್ದ ಸ್ವಿಚ್ ಬೋರ್ಡ್ ಕಂಪನಿ ಉದ್ಯೋಗಿ 42 ವರ್ಷದ ದೇವರಾಜು ಮೃತಪಟ್ಟವರು. ಬಸ್ ನಲ್ಲಿದ್ದ ನಾಲ್ವರಿಗೆ ಗಾಯಗಲಾಗಿದ್ದು, ಅವರನ್ನು ಹೊಸೂರುರಸ್ತೆಯಲ್ಲಿರುವ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ಕಾರುಗಳಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರು ತಿಳಿಸಿದ್ದಾರೆ.
ನೈಸ್ ರಸ್ತೆಯ ಬಸಾಪುರ ಎಂಬಲ್ಲಿ ಈ ಸರಣಿ ಅಪಘಾತ ಸಂಭವಿಸಿದ್ದು, ಬೊಮ್ಮಸಂದ್ರದಲ್ಲಿರುವ ಸ್ವಿಚ್ ಬೋರ್ಡ್ ಕಂಪನಿಯ ಬಸ್ ಉದ್ಯೋಗಿಗಳನ್ನು ಕರೆದೊಯ್ಯುತ್ತಿತ್ತು. ಮಿನಿ ಬಸ್ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ನಂತರ ಹಿಂದಿನಿಂದ ಬರುತ್ತಿದ್ದ ಎರಡು ಕಾರುಗಳು ಮಿನಿ ಬಸ್ ಗೆ ಡಿಕ್ಕಿ ಹೊಡೆದಿವೆ.
ಅಪಘಾತದಿಂದ ಒಂದು ಗಂಟೆ ಕಾಲ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿತ್ತು. ಕಚೇರಿಗಳಿಗೆ ತೆರಳುತ್ತಿದ್ದ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಲಾರಿಯನ್ನು ನೈಸ್ ರಸ್ತೆಯಲ್ಲಿ ನಿಲ್ಲಿಸಿದ್ದೇ ಅಪಘಾತಕ್ಕೆ ಕಾರಣವಾಗಿದೆ. ನಿಲ್ಲಿಸಿದ್ದಾಗಲೂಲಾರಿ ನಿಂತಿರುವುದಕ್ಕೆ ಯಾವುದೇ ಕುರುಹುಗಳಿರಲಿಲ್ಲ. ಲಾರಿ ಚಾಲಕನ ನಿರ್ಲಕ್ಷ್ಯ ಮತ್ತು ಅತಿವೇಗವಾಗಿ ಸಾಗುತ್ತಿದ್ದ ಮಿನಿ ಬಸ್ ಚಾಲಕನ ವಿರುದ್ಧ ಪ್ರಕರಣದಾಖಲಿಸಲಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರು ತಿಳಿಸಿದ್ದಾರೆ.
(ವರದಿ: ಎಚ್.ಮಾರುತಿ, ಬೆಂಗಳೂರು)