Bangalore crime: ಬೆಂಗಳೂರಲ್ಲಿ ಕತ್ತು ಹಿಸುಕಿ ಮಹಿಳೆ ಕೊಲೆ, ಬಿಹಾರ ಮೂಲದ ಡೆಲಿವರಿ ಬಾಯ್ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  Bangalore Crime: ಬೆಂಗಳೂರಲ್ಲಿ ಕತ್ತು ಹಿಸುಕಿ ಮಹಿಳೆ ಕೊಲೆ, ಬಿಹಾರ ಮೂಲದ ಡೆಲಿವರಿ ಬಾಯ್ ಬಂಧನ

Bangalore crime: ಬೆಂಗಳೂರಲ್ಲಿ ಕತ್ತು ಹಿಸುಕಿ ಮಹಿಳೆ ಕೊಲೆ, ಬಿಹಾರ ಮೂಲದ ಡೆಲಿವರಿ ಬಾಯ್ ಬಂಧನ

ಬೆಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರೇಮಿಯ ಅಕ್ಕನನ್ನೇ ಕೊಲೆ ಮಾಡಿದ್ದ ಬಿಹಾರ ಮೂಲದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.ವರದಿ: ಎಚ್‌.ಮಾರುತಿ, ಬೆಂಗಳೂರು

ಬಂಧಿತ ಆರೋಪಿ ರಾಜೇಶ್‌ ಕುಮಾರ್
ಬಂಧಿತ ಆರೋಪಿ ರಾಜೇಶ್‌ ಕುಮಾರ್

ಬೆಂಗಳೂರು: ಆಕಸ್ಮಿಕವಾಗಿ ಮಹಿಳೆಯೊಬ್ಬರ ಕತ್ತು ಹಿಸುಕಿ ಕೊಲೆಗೈಯ್ದು ಯುವಕನೊಬ್ಬ ಜೈಲು ಸೇರಿರುವ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ

ವ್ಯಾಪ್ತಿಯಲ್ಲಿ ನಡೆದಿದೆ. ಗುಡಿಯಾ ದೇವಿ(42) ಕೊಲೆಯಾದ ಮಹಿಳೆ. ಈ ಕೊಲೆ ಆರೋಪದಡಿಯಲ್ಲಿ ಬಂಧಿತನಾಗಿರುವ ಯುವಕ ರಾಜೇಶ್ ಕುಮಾರ್(29). ಈತ ಬೆಂಗಳೂರಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ, ಕೊಲೆಯಾದ ಗುಡಿಯಾ ದೇವಿ ಸಹೋದರಿ ಗೀತಾಕುಮಾರಿಯನ್ನು ಪ್ರೀತಿಸುತ್ತಿದ್ದ.

ಬಿಹಾರ ಮೂಲದ ಗುಡಿಯಾದೇವಿ ಮತ್ತು ಅಕೆಯ ಸಹೋದರಿ ಗೀತಾಕುಮಾರಿ. ಇಬ್ಬರೂ ಗಾರ್ಮೆಂಟ್ಸ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಸಿಂಗಸಂದ್ರದಲ್ಲಿ ಮನೆ ಮಾಡಿಕೊಂಡಿದ್ದರು. ಆರೋಪಿ ರಾಜೇಶ್ ಕುಮಾರ ಕೂಡಾ ಬಿಹಾರದವನೇ ಆಗಿದ್ದು, ಗೀತಾ ಅವರನ್ನು ಪ್ರೀತಿಸುತ್ತಿದ್ದ. ಗುಡಿಯಾ ತನ್ನ ಸ್ನೇಹಿತರು ಮತ್ತು ಸಹದ್ಯೋಗಿಗಳೊಂದಿಗೆ ಮೊಬೈಲ್ ನಲ್ಲಿ ಹೆಚ್ಚು ಮಾತನಾಡುತ್ತಿರುವುದಕ್ಕೆ ಗೀತಾ ಆಕ್ಷೇಪ ವ್ಯಕ್ತಪಡಿಸಿದ್ದು, ಇದೇ ವಿಷಯಕ್ಕೆ ಇಬ್ಬರ ನಡುವೆ ಸದಾ ಜಗಳ ನಡೆಯುತ್ತಿತ್ತು.

ಇಬ್ಬರೂ ಮನೆಯಲ್ಲಿದ್ದಾಗ ಎಂದಿನಂತೆ ಅಕ್ಕತಂಗಿಯರ ನಡುವೆ ಜಗಳ ಉಂಟಾಗಿತ್ತು. ಅದೇ ಸಮಯಕ್ಕೆ ರಾಜೇಶ್ ಕುಡಿದುಕೊಂಡು ಇವರ ಮನೆಗೆ ಬಂದಿದ್ದು,ಮೂವರೂ ಒಟ್ಟಿಗೆ ಊಟ ಮುಗಿಸಿರುತ್ತಾರೆ. ಆದರೆ ಗುಡಿಯಾ ಮತ್ತು ಗೀತಾ ಜಗಳ ವಿಪರೀತವಾಗಿ ಪರಿಸ್ಥಿತಿ ಕೈ ಮೀರುವ ಹಂತ ತಲುಪಿದಾಗ ಜಗಳ ಬಿಡಿಸಲು ಮುಂದಾದ ರಾಜೇಶ್, ಗುಡಿಯಾ ಅವರನ್ನು ಹೊಡೆದು ಕತ್ತು ಹಿಸುಕಿರುತ್ತಾರೆ. ಇದರಿಂದ ಗುಡಿಯಾ ಕುಸಿದು ಬಿದ್ದಿದ್ದು, ಗೀತಾ ಮತ್ತು ರಾಜೇಶ್ ಇಬ್ಬರೂ ಗುಡಿಯಾರನ್ನು ಆಸ್ಪತ್ರೆಗೆ ಕರೆದೊಯ್ದಿರುತ್ತಾರೆ. ಆದರೆ ಗುಡಿಯಾ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಪರಪ್ಪನ ಅಗ್ರಹಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಜಗಳ ಬಿಡಿಸುವ ದಾವಂತದಲ್ಲಿ ಆಕಸ್ಮಿಕವಾಗಿ ಕತ್ತು ಹಿಸುಕಿದ್ದೇನೆ. ಕೊಲೆ ಮಾಡುವ ಉದ್ಧೇಶ ನನಗಿರಲಿಲ್ಲ ಎಂದು ರಾಜೇಶ್ ಹೇಳಿಕೆ ನೀಡಿದ್ದಾನೆ. ಈ ಪ್ರಕರಣದಲ್ಲಿ ಗೀತಾ ಅವರ ಪಾತ್ರ ಇಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದು, ರಾಜೇಶ್‌ನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ಮೂವರ ಬಂಧನ; ಕೋಮು ಗಲಭೆ ಅಲ್ಲ

ಬೆಂಗಳೂರಿನ ಕುಮಾಸ್ವಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಗತಿಯನ್ನು ಕೋಮು

ಗಲಭೆ ಎಂದು ಕೆಲವು ಕಿಡಿಗೇಡಿಗಳು ಹಬ್ಬಿಸಿರುತ್ತಾರೆ. ಆದರೆ ಪೊಲೀಸರು ಇದು ಆಟೋ ನಿಲ್ಲಿಸುವ ಸ್ಥಳದ ವಿಷಯಕ್ಕೆ ನಡೆದ ಜಗಳ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಗಳಾದ ಸೈಯದ್ ಮೊಹಮ್ಮದ್ ತಾಹಾ, ಇವರ ತಂದೆಕರೀಂ ಮತ್ತು ಅಫ್ರೀದ್ ಪಾಷಾ ಬಂಧಿತ ಆರೋಪಿಗಳು.

ಇವರ ವಿರುದ್ಧ ದೂರು ನೀಡಿರುವ ಸುಕುಮಾರ್ ಮತ್ತು ಆರೋಪಿಗಳ ನಡುವೆ ಆಟೋ ನಿಲ್ಲಿಸುವ ವಿಷಯಕ್ಕೆ ಸಂಬಂಧಿಸಿದಂತೆ ಆಗಾಗ್ಗೆ ಜಗಳ ನಡೆಯುತ್ತಲೇ ಇರುತ್ತದೆ. ತಾಹಾ ಮತ್ತಷ್ಟು ಜನರನ್ನು ಕರೆ ತಂದು ಸುಕುಮಾರ್ ಮನೆಗೆ ನುಗ್ಗಿ ಗಲಾಟೆ ಮಾಡಿರುತ್ತಾರೆ. ಸುಕುಮಾರ್ ಮೇಲೆ ಹಲ್ಲೆ ನಡೆಸಿ ಅವರ ಪತ್ನಿ ಮತ್ತು ಮಕ್ಕಳ ಮೇಲೂ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ

ತಿಳಿಸಲಾಗಿದೆ. ಮೇಲಾಗಿ ಸುಕುಮಾರ್ ಅವರ ಚಿನ್ನದ ಸರ ಮತ್ತು ಮೊಬೈಲ್ ಅನ್ನು ಕಸಿದುಕೊಂಡು ಹೋಗಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮೆಟ್ರೋ ಪಿಲ್ಲರ್ ಗೆ ಲಾರಿ ಡಿಕ್ಕಿ, ಚಾಲಕ ಸಾವು

ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಪಿಲ್ಲರ್ ಗೆ ಲಾರಿಯೊಂದು ಗುದ್ದಿದ ಪರಿಣಾಮ ಚಾಲಕ ಸಾಹೀದ್ ಖಾನ್ ಎಂಬುವರು ಮೃತಪಟ್ಟಿದ್ದಾರೆ.

ಮಧ್ಯಪ್ರದೇಶದ ಗ್ವಾಲಿಯರ್ ನ 40 ವರ್ಷದ ಸಾಹೀದ್ ಸರಕು ಸಾಕಾಣೆ ಲಾರಿಯನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೀನುಕುಂಟೆ ಹೊಸೂರು ಎಂಬ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಇಲ್ಲಿ ಪಿಲ್ಲರ್ ಗಳನ್ನು ಅಳವಡಿಸಲಾಗಿದೆ. ಲಾರಿ ಚಾಲಕ

ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದು, ನಿಯಂತ್ರಣ ತಪ್ಪಿ ಲಾರಿಯನ್ನು ಪಿಲ್ಲರ್ ಗೆ ಗುದ್ದಿಸಿದ್ದಾನೆ. ಲಾರಿಯ ಮುಂಬಾಗ ಸಂಪೂರ್ಣವಾಗಿ ಜಜ್ಜಿಹೋಗಿದ್ದು ಚಾಲಕ ಸಾಹೀದ್

ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

(ವರದಿ: ಎಚ್.ಮಾರುತಿ. ಬೆಂಗಳೂರು)‌

Whats_app_banner