ಸರ್ಕಾರಿ ಉದ್ಯೋಗದ ಆಮಿಷ, ನಕಲಿ ನೇಮಕಾತಿ ಪಾತ್ರ ನೀಡಿ 23 ಲಕ್ಷ ರೂ ವಂಚನೆ; ಬೆಂಗಳೂರಿನ 6 ಆರೋಪಿಗಳ ವಿರುದ್ಧ ಎಫ್ ಐ ಆರ್
ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಕಿತ್ತಿದ್ದೂ ಅಲ್ಲದೇ ನಕಲಿ ನೇಮಕಾತಿ ಪತ್ರ ನೀಡಿದ್ದ ಬೆಂಗಳೂರಿನ ಆರು ಮಂದಿ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.(ವರದಿ: ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: ಬೆಸ್ಕಾಂ, ಕೆಪಿಟಿಸಿಎಲ್ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡಿ 23 ಲಕ್ಷ ರೂಪಾಯಿ ವಂಚಿಸಿದ್ದ 6 ಆರೋಪಿಗಳ ವಿರುದ್ಧ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರ್.ಟಿ. ನಗರದ ಶಿವಣ್ಣ, ತಿಪ್ಪಸಂದ್ರದ ಶ್ರೀನಿವಾಸ್, ಸಹಕಾರ ನಗರದ ರಜನೀಶ್, ಟಿ.ದಾಸರಹಳ್ಳಿಯ ಪ್ರವೀಣ್ ಎಂ. ಸೋಮನಕಟ್ಟಿ, ದಾಬಸ್‌ಪೇಟೆಯ ವೆಂಕಟೇಶಯ್ಯ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ವಿಶ್ಲೇಶ್ ಹೆಗಡೆ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಎಲ್ಲ ಆರೋಪಿಗಳು ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳು ಉದ್ಯೋಗ ಆಕಾಂಕ್ಷಿಗಳಿಗೆ ನಕಲಿ ನೇಮಕಾತಿ ಪತ್ರ ನೀಡಿ ಮೋಸ ಮಾಡಿದ್ದಾರೆ. ಹೊರಗುತ್ತಿಗೆ ಕೆಲಸಕ್ಕೆ ಸೇರಿಸಿ, 18 ತಿಂಗಳ ನಂತರ ಕೆಲಸ ಕಾಯಂ ಆಗಲಿದೆಯೆಂದು ನಂಬಿಸಿ ವಂಚಿಸಿದ್ದಾರೆ ಎಂದು ಆರೋಪಿಸಿ ಮಾಧವನಗರ ಯಮುನಾಬಾಯಿ ರಸ್ತೆಯ ನಿವಾಸಿ ಲೋಹಿತ್‌ಗೌಡ ಅವರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
2021ರಲ್ಲಿ ಲೋಹಿತ್ ಗೌಡ ಅವರಿಗೆ ಆರೋಪಿಗಳಾದ ಪ್ರವೀಣ್ ಹಾಗೂ ವಿಶ್ಲೇಶ್ ಅವರು ಪರಿಚಯವಾಗಿದ್ದರು. ನಂತರ, ಲೋಹಿತ್ ಅವರನ್ನು ಇಬ್ಬರೂ ಆರೋಪಿಗಳು ಹೋಟೆಲ್‌ವೊಂದಕ್ಕೆ ಕರೆಸಿಕೊಂಡಿದ್ದರು. ಅಲ್ಲಿಗೆ ಉಳಿದ ಮೂವರು ಆರೋಪಿಗಳು ಬಂದಿದ್ದರು. ಎಲ್ಲರೂ ಸೇರಿಕೊಂಡು ಬೆಸ್ಕಾಂ ಹಾಗೂ ಕೆಪಿಟಿಸಿಎಲ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ್ದರು ಎಂದು ಲೋಹಿತ್ ಗೌಡ ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿ ಪ್ರವೀಣ್, ತಾನು ಬೆಸ್ಕಾಂ ಉದ್ಯೋಗಿ ಎಂದು ಪರಿಚಯಿಸಿಕೊಂಡಿದ್ದ. ವೆಂಕಟೇಶಯ್ಯ ಹಾಗೂ ಶಿವಣ್ಣ ಸಹ ರೈಲ್ವೆ ಇಲಾಖೆಯ ಉದ್ಯೋಗಿಗಳು ಎಂದು ಹೇಳಿಕೊಂಡಿದ್ದರು.
ಶ್ರೀನಿವಾಸ್ ಬೆಸ್ಕಾಂನ ಮೀಟರ್ ರೀಡರ್ ಎಂದು ಪರಿಚಯಿಸಿಕೊಂಡಿದ್ದ. ಎಲ್ಲರೂ ನಕಲಿ ಗುರುತಿನ ಚೀಟಿ ಸಹ ತೋರಿಸಿ ನಂಬಿಕೆ ಹುಟ್ಟಿಸಿದ್ದರು.
ರೈಲ್ವೆ, ಬೆಸ್ಕಾಂ, ಕೆಪಿಟಿಸಿಎಲ್, ಮೆಟ್ರೊ, ವಿಮಾನ ನಿಲ್ದಾಣ ಹಾಗೂ ನೀರಾವರಿ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಹಲವರನ್ನು ನಂಬಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳ ಬಣ್ಣದ ಮಾತುಗಳಿಗೆ ಮರುಳಾದ ಲೋಹಿತ್ ತಮ್ಮ ಸ್ನೇಹಿತರಿಗೂ ಇವರನ್ನು ಪರಿಚಯಿಸಿದ್ದರು. ಹಲವಾರು ಉದ್ಯೋಗ ಆಕಾಂಕ್ಷಿಗಳು 23 ಲಕ್ಷ ರೂಪಾಯಿ ನೀಡಿದ್ದರು. ನಕಲಿ ನೇಮಕಾತಿ ಪತ್ರ ನೀಡಿ ವಂಚಿಸಿದ್ದಾರೆ ಎಂದು ತಿಳಿದು ಬಂದ ನಂತರ ಇವರೆಲ್ಲರೂ ಪೊಲೀಸರಿಗೆ ದೂರು ನೀಡಿದ್ದಾರೆ.
(ವರದಿ: ಎಚ್. ಮಾರುತಿ, ಬೆಂಗಳೂರು)