ಸಂಬಳ ಕೊಡಲಿಲ್ಲ ಎಂದು ಬೆಂಗಳೂರಲ್ಲಿ ಮನೆ ಮಾಲೀಕರ ಮನೆಯಲ್ಲೇ ಕಳ್ಳತನ ಮಾಡಿದ್ದ ಕಲಬುರಗಿ ವ್ಯಕ್ತಿ ಬಂಧನ
ಬೆಂಗಳೂರಿನಲ್ಲಿ ಕೆಲಸ ಕೊಟ್ಟರೂ ಸರಿಯಾಗಿ ಸಂಬಳ ಕೊಡದೇ ಸತಾಯಿಸುತ್ತಿದ್ದ ಮನೆಯಲ್ಲಿಯೇ ಭಾರೀ ಕಳ್ಳತನ ಮಾಡಿದ್ದ ಕಲಬುರಗಿ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ.ವರದಿ: ಎಚ್.ಮಾರುತಿ. ಬೆಂಗಳೂರು

ಬೆಂಗಳೂರು: ಸಂಬಳ ಕೊಡಲಿಲ್ಲ ಎಂಬ ಕಾರಣಕ್ಕೆ ಮನೆ ಮಾಲೀಕರ ಮನೆಯಲ್ಲೇ ಕಳ್ಳತನಮಾಡಿದ್ದ ಆರೋಪಿಯನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ಮೂಲದ ಸಿದ್ದು (32) ಬಂಧಿತ ಆರೋಪಿ. ಈತನಿಂದ ರೂ. 45 ಲಕ್ಷ ಮೌಲ್ಯದ 682 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ದೂರು ನೀಡಿದ್ದವರ ಮನೆಯಲ್ಲಿ ಆರೋಪಿ ಸಿದ್ದು ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕೆಲವು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ. ಮಾಲೀಕರು ನಾಲ್ಕು ತಿಂಗಳ ಸಂಬಳ ನೀಡಿರಲಿಲ್ಲ. ಕೆಲಸ ಬಿಟ್ಟ ಬಳಿಕ ಸಂಬಳ ನೀಡುವಂತೆ ಕೇಳಿಕೊಂಡರೂ ಮಾಲೀಕರು ಸಂಬಳ ನೀಡಿರಲಿಲ್ಲ. ಇದರಿಂದ ಆರೋಪಿ ಸಿಟ್ಟಿಗೆದ್ದಿದ್ದು ಪಾಠ ಕಲಿಸಲು ತೀರ್ಮಾನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಮಾಲೀಕರ ಮನೆಯ ಮುಂಬಾಗಿಲಿನ ಕೀಯನ್ನು ನಕಲು ಮಾಡಿಸಿ ಇಟ್ಟುಕೊಂಡಿದ್ದ. ಮನೆ ಮಾಲೀಕರು ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದ ಮಾಹಿತಿ ತಿಳಿದು ನಕಲಿ ಕೀ ಬಳಸಿ ಮನೆಗೆ ನುಗ್ಗಿ ಬೀರುವಿನಲ್ಲಿ ಇಟ್ಟಿದ್ದ 700 ಗ್ರಾಂ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ಅನುಮಾನಗೊಂಡ ಮಾಲೀಕರು ಈತನ ಮೇಲೆಗೆ ಗುಮಾನಿ ವ್ಯಕ್ತಪಡಿಸಿ ಪೊಲೀಸರಿಗೆ ನಿಖರ ಮಾಹಿತಿಯನ್ನು ನೀಡಿದ್ದರು. ಮಾಹಿತಿ ಆಧರಿಸಿಯೇ ಆರೋಪಿ ಬಂಧಿಸಲಾಗಿದೆ ಎಂದು ಬೆಳ್ಳಂದೂರು ಠಾಣೆ ಪೊಲೀಸರು ತಿಳಿಸಿದ್ದಾರೆ.
ಶಾಸ್ತ್ರ ಹೇಳುವ ನೆಪದಲ್ಲಿ ಒಂಟಿ ಮಹಿಳೆಯರ ಚಿನ್ನಾಭರಣ ಲಪಟಾಯಿಸಿ ಸಿಕ್ಕಿಬಿದ್ದ
ಶಾಸ್ತ್ರ ಹೇಳುವ ನೆಪದಲ್ಲಿ ಒಂಟಿ ಮಹಿಳೆಯರು ವಾಸಿಸುವ ಮನೆಗಳಿಗೆ ಹೋಗಿ ಅವರ ಗಮನವನ್ನು ಬೇರೆಡೆಗೆ ಸೆಳೆದು ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. 52 ವರ್ಷದ ಚಿಂತಾಮಣಿಯ ವೆಂಕಟರಮಣಪ್ಪ ಬಂಧಿತ ಆರೋಪಿ. ಈತನಿಂದ ಆರೋಪಿಯಿಂದ 8 ಲಕ್ಷ ರೂ. ಮೌಲ್ಯದ 115 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ. ಈತ ಬುಡುಬುಡಿಕೆ ವೇಷಧರಿಸಿ ಮಹಿಳೆಯರನ್ನು ವಂಚಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಈತ ಮೋಸ ಮಾಡಿರುವ ಬಗ್ಗೆ ಹೊಂಗಸಂದ್ರದ ಸತೀಶ್‌ರೆಡ್ಡಿ ಲೇಔಟ್‌ನ ಮಹಿಳೆಯೊಬ್ಬರು ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿಯು ಬುಡುಬುಡಿಕೆ ವೇಷ ಧರಿಸಿಕೊಂಡು ಮಹಿಳೆಯ ಮನೆಗೆ ಬಂದು ಶಾಸ್ತ್ರ ಹೇಳುತ್ತೇನೆ ಎಂದು ನಂಬಿಸಿದ್ದ. ಶಾಸ್ತ್ರ ಹೇಳುವ ನೆಪದಲ್ಲಿ ಮಹಿಳೆಗೆ ನಿಮಗೆ ಯಾರೋ ಮಾಟ ಮಾಡಿಸಿದ್ದಾರೆ. ಈ ಮಾಟವನ್ನು ನಿವಾರಣೆ ಮಾಡಲು ಪೂಜೆ ಮಾಡಬೇಕು. ಅದಕ್ಕಾಗಿ 100 ಗ್ರಾಂ ಚಿನ್ನಾಭರಣವನ್ನು ಒಂದು ಕುಡಿಕೆಯಲ್ಲಿ ಹಾಕಿಕೊಂಡುವಂತೆ ಹೇಳಿದ್ದ. ಅದರಂತೆ ಮಹಿಳೆ ಕುಡಿಕೆಗೆ 100 ಗ್ರಾಂ ಚಿನ್ನಾಭರಣ ಹಾಕಿಕೊಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೂಜೆ ಮಾಡುವ ನೆಪದಲ್ಲಿ ಮಹಿಳೆಯ ಗಮನವನ್ನು ಬೇರೆಡೆ ಸೆಳೆದು ಚಿನ್ನಾಭರಣ ಇದ್ದ ಮಡಿಕೆಯನ್ನು ಬದಲಾಯಿಸಿ ತಾನು ತಂದಿದ್ದ ಕುಡಿಕೆಯನ್ನು ಅಲ್ಲಿಯೇ ಇಟ್ಟು ಪರಾರಿಯಾಗಿದ್ದ. ಸ್ವಲ್ಪ ಸಮಯದ ನಂತರ ಮಹಿಳೆ ಕುಡಿಕೆಯನ್ನು ಬಿಚ್ಚಿದಾಗ ಚಿನ್ನಾಭರಣದ ಬದಲಿಗೆ ಅಕ್ಕಿ ತುಂಬಿಸಲಾಗಿತ್ತು. ಬಳಿಕ ತಾನು ವಂಚನೆಗೆ ಒಳಗಾಗಿರುವುದು ಗೊತ್ತಾಗಿ ದೂರು ದಾಖಲಿಸಿದ್ದರು.
ಜನವರಿ 10ರಂದು ಬೊಮ್ಮನಹಳ್ಳಿ ಡೆಕ್ಕನ್ ಬಸ್ ನಿಲ್ದಾಣದ ಬಳಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯವನ್ನು ಒಪ್ಪಿಕೊಂಡಿದ್ದಾನೆ. ತಪಾಸಣೆ ವೇಳೆ ವಂಚನೆಗೆ ಬಳಸುತ್ತಿದ್ದ ಕುಡಿಕೆ ಪತ್ತೆಯಾಗಿದೆ. ಮಹಿಳೆಯರ ಗಮನವನ್ನು ಬೇರೆಡೆ ಸೆಳೆದು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ವಿಷಯವನ್ನು ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
(ವರದಿ: ಎಚ್. ಮಾರುತಿ, ಬೆಂಗಳೂರು)
