ಕನ್ನಡ ಸುದ್ದಿ  /  ಕರ್ನಾಟಕ  /  Bangalore Crime: ರೌಡಿಯಿಂದ ಹಣ ಪಡೆದ ಆರೋಪ; ಸಿಸಿಬಿ ಇನ್‌ಸ್ಪೆಕ್ಟರ್ ಅಮಾನತು; ಮಹಿಳೆ ಕೊಲೆ ಮಾಡಿ ಚಿನ್ನಾಭರಣದೊಂದಿಗೆ ಕಳ್ಳರು ಪರಾರಿ

Bangalore Crime: ರೌಡಿಯಿಂದ ಹಣ ಪಡೆದ ಆರೋಪ; ಸಿಸಿಬಿ ಇನ್‌ಸ್ಪೆಕ್ಟರ್ ಅಮಾನತು; ಮಹಿಳೆ ಕೊಲೆ ಮಾಡಿ ಚಿನ್ನಾಭರಣದೊಂದಿಗೆ ಕಳ್ಳರು ಪರಾರಿ

ರೌಡಿಯೊಂದಿಗೆ ಒಡನಾಟ ಬೆಳೆಸಿದ್ದ ಆರೋಪದಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್ ಅಮಾನತುಗೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮತ್ತೊಂದು ಪ್ರಕರಣದಲ್ಲಿ ಒಂಟಿ ಮಹಿಳೆಯನ್ನು ಕೊಲೆ ಮಾಡಿ ಚಿನ್ನಾಭರಣ ಲೂಟಿ ಮಾಡಲಾಗಿದೆ.

ಬೆಂಗಳೂರಿನ ಎರಡು ಪ್ರಮುಖ ಕೈಮ್ ಸುದ್ದಿಗಳನ್ನು ಓದಿ.
ಬೆಂಗಳೂರಿನ ಎರಡು ಪ್ರಮುಖ ಕೈಮ್ ಸುದ್ದಿಗಳನ್ನು ಓದಿ.

ಬೆಂಗಳೂರು: ರೌಡಿಯೊಬ್ಬನಿಂದ ಹಣ ಪಡೆದಿದ್ದ ಆರೋಪದಡಿ ಸಿಸಿಬಿ ರೌಡಿ ನಿಗ್ರಹ ದಳದ ಇನ್ಸ್‌ಪೆಕ್ಟರ್ ಜ್ಯೋತಿರ್ಲಿಂಗ ಹೊನಕಟ್ಟಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ (Bangalore Crime News). ಮಾರತ್ತಹಳ್ಳಿ ಪೊಲೀಸ್ ಠಾಣೆಯ ರೌಡಿಗಳ ಪಟ್ಟಿಯಲ್ಲಿ ಹೆಸರಿರುವ ರೋಹಿತ್‌ ಎಂಬಾತನಿಂದ ಇನ್ಸ್‌ಪೆಕ್ಟರ್ ಜ್ಯೋತಿರ್ಲಿಂಗ ಹಣ ಪಡೆದಿದ್ದಾರೆ ಎಂದು ಸಾರ್ವಜನಿಕರೊಬ್ಬರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ವಿಚಾರಣೆ ನಡೆಸಿದ್ದ ಹಿರಿಯ ಅಧಿಕಾರಿಗಳು ಪೊಲೀಸ್ ಆಯುಕ್ತರಿಗೆ ವರದಿ ಸಲ್ಲಿಸಿದ್ದರು. ಈ ವರದಿ ಆಧರಿಸಿ ಕಮಿಷನರ್ ಬಿ.ದಯಾನಂದ್ ಅವರು ಜ್ಯೋತಿರ್ಲಿಂಗ ಹೊನಕಟ್ಟಿ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರೌಡಿಗಳ ಮೇಲೆ ನಿಗಾ ಇಡಲು ಎಲ್ಲ ಠಾಣೆಗಳಿಗೆ ಸೂಚನೆ ನೀಡಲಾಗಿತ್ತು. ಜ್ಯೋತಿರ್ಲಿಂಗ ಅವರು ರೌಡಿ ರೋಹಿತ್‌ ವಿಚಾರಣೆ ನಡೆಸಿ ಆತನಿಂದ ಯುಪಿಐ ಮೂಲಕ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಜ್ಯೋತಿರ್ಲಿಂಗ ಅವರನ್ನು ಅಮಾನತುಮಾಡಲಾಗಿದೆ. ರೌಡಿ ರೋಹಿತ್, ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದು ಕಾಡುಬೀಸನಹಳ್ಳಿಯಲ್ಲಿ ವಾಸವಿದ್ದ ಎಂದು ತಿಳಿದು ಬಂದಿದೆ.

ಒಂಟಿ ಮಹಿಳೆಯ ಬರ್ಬರ ಹತ್ಯೆ, ಚಿನ್ನಾಭರಣ ಲೂಟಿ

ಒಂಟಿ ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿ ಚಿನ್ನಾಭರಣ ದೋಚಿರುವ ಘಟನೆ ಬೆಂಗಳೂರಿನ ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 48 ವರ್ಷದ ಶೋಭಾ ಹತ್ಯೆಗೀಡಾದ ಮಹಿಳೆ. ಚಿನ್ನಾಭರಣ ದರೋಡೆ ಮಾಡಲೆಂದೇ ಪರಿಚಯ ಇರುವವರು ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಗಣೇಶನಗರದ ನಿವಾಸಿ ಶೋಭಾ ಅವರು ವಾಹನ ಚಾಲನಾ ತರಬೇತಿ ಶಾಲೆ ನಡೆಸುತ್ತಿದ್ದರು. ಇವರು ಎರಡನೇ ಮಗಳು ಹರ್ಷಿತಾ ಜೊತೆ ವಾಸವಿದ್ದರು. ಮೃತಳ ಪತಿ ಮೊದಲ ಪುತ್ರಿಯೊಂದಿಗೆ ಪ್ರತ್ಯೇಕವಾಗಿ ವಾಸವಿದ್ದಾರೆ. ದುಷ್ಕರ್ಮಿಗಳು ಶೋಭಾ ಅವರ ಮಾಂಗಲ್ಯ ಸರ, ಚಿನ್ನದ ಸರ ಮತ್ತು ಮೊಬೈಲ್ ಅನ್ನು ದೋಚಿದ್ದಾರೆ. ಶೋಭಾ ಅವರ ಕಾರಿನಲ್ಲೇ ಆರೋಪಿಗಳು ಪರಾರಿಯಾಗಿದ್ದಾರೆ.

ಮಹಿಳೆಯೊಬ್ಬರೇ ಮನೆಯಲ್ಲಿದ್ದಾಗ ಹೊಂಚು ಹಾಕಿ ಹತ್ಯೆಯ ಶಂಕೆ

ಶೋಭಾ ಅವರ ಪುತ್ರಿ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹರ್ಷಿತಾ ಅವರಿಗೆ ಏಪ್ರಿಲ್ 4ರಂದು ಮದುವೆಯಾಗಿತ್ತು. ಅವರು ಪತಿಯ ಮನೆಗೆ ಹೋಗಿದ್ದರು. ಆದ್ದರಿಂದ ಶೋಭಾ ಒಬ್ಬರೇ ಮನೆಯಲ್ಲಿದ್ದರು. ತಾಯಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿರಲಿಲ್ಲ. ಹೆದರಿಕೊಂಡ ಹರ್ಷಿತಾ ಅಕ್ಕ ಹಾಗೂ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಅಕ್ಕ ಮನೆಗೆ ಹೋಗಿ ನೋಡಿದಾಗ, ಶೋಭಾ ಹತ್ಯೆಗೀಡಾಗಿರುವುದು ಕಂಡು ಬಂದಿತ್ತು.

ಮನೆಯ ರಸ್ತೆಯ ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲಿಸಲಾಗುತ್ತಿದೆ. ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

IPL_Entry_Point