Bangalore News: ಆನ್‌ಲೈನ್ ವಹಿವಾಟಿನಲ್ಲಿ 77 ಸಾವಿರ ರೂ ಕಳೆದುಕೊಂಡ ವೃದ್ದೆ; ಡಿವೈಡರ್‌ಗೆ ಗುದ್ದಿದ ಬೈಕ್, ಸವಾರ ಸಾವು
ಬೆಂಗಳೂರಿನ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ, ಆನ್‌ಲೈನ್ ವಹಿವಾಟಿನಲ್ಲಿ ವೃದ್ಧೆಯೊಬ್ಬರು 77 ಸಾವಿರ ರೂ ಕಳೆದುಕೊಂಡಿದ್ದರೆ, ಡಿವೈಡರ್‌ಗೆ ಬೈಕ್ ಗುದ್ದಿದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. (ವರದಿ ಎಚ್. ಮಾರುತಿ)
ಬೆಂಗಳೂರು: ಆನ್‌ಲೈನ್ ಮೂಲಕ ವ್ಯವಹಾರ ನಡೆಸುವಾಗ ಎಚ್ಚರಿಕೆಯಿಂದ ಇರುವಂತೆ ಎಷ್ಟೇ ಅರಿವು ಮೂಡಿಸಿದರೂ ಮೋಸ ಹೋಗುವವರಿಗೆ ಕೊರತೆಯಿಲ್ಲ. ಹಾಗೆಯೇ ಮೋಸ ಹೋಗುವವರು ಇರುವವರೆಗೆ ವಂಚನೆ ಮಾಡುವವರು ಇದ್ದೇ ಇರುತ್ತಾರೆ. 65 ವರ್ಷದ ವೃದ್ದೆಯೊಬ್ಬರು ಆನ್‌ಲೈನ್ ಆಪ್ ಮೂಲಕ ತರಿಸಿಕೊಂಡಿದ್ದ ಹಾಲು ಕೆಟ್ಟುಹೋಗಿದೆ ಎಂದು ಹಾಲು ಪೂರೈಕೆ ಮಾಡಿದ್ದ ಕಂಪನಿಗೆ ಹಿಂತಿರುಗಿಸುವ ಪ್ರಯತ್ನ ಮಾಡಿದಾಗ 77 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ. ಇ–ಕಾಮರ್ಸ್ ಆಪ್ ಹೆಸರಿನಲ್ಲಿ ಸೈಬರ್ ವಂಚಕ ರುವೃದ್ಧೆಗೆ ಮೋಸ ಮಾಡಿರುವ ಘಟನೆ (Bangalore Crime) ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಹಣ ಕಳೆದುಕೊಂಡ ವೃದ್ಧೆ ಮೈಸೂರು ರಸ್ತೆಯ ಕಸ್ತೂರ್ ಬಾ ನಗರದಲ್ಲಿ ವಾಸವಾಗಿದ್ದಾರೆ. ಇವರು ಇ ಕಾಮರ್ಸ್ ಆಪ್ ಮೂಲಕ ತಮಗೆ ಬೇಕಾದ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದರು. ಯುಪಿಐ ಮೂಲಕ ಮಾರ್ಚ್ 18ರಂದು ದಿನಸಿ ಆರ್ಡರ್ ಮಾಡಿ ತರಿಸಿಕೊಂಡಿದ್ದರು. ಜೊತೆಗೆ ಹಾಲನ್ನು ತರಿಸಿಕೊಂಡಿದ್ದರು. ಹಾಲು ಕೆಟ್ಟು ಹೋಗಿದ್ದು, ವಾಸನೆ ಬರುತ್ತಿತ್ತು. ಆದ್ದರಿಂದ ಹಾಲನ್ನು ವಾಪಸ್ ಕಳುಹಿಸಿ ಹಣವನ್ನು ಹಿಂಪಡೆಯಲು ಪ್ರಯತ್ನ ಮಾಡಿದ್ದಾರೆ. ಇ ಕಾಮರ್ಸ್ ಆಪ್ ಗ್ರಾಹಕ ಸೇವಾ ಕೇಂದ್ರದ ನಂಬರನ್ನು ಗೂಗಲ್‌ನಲ್ಲಿ ಹುಡುಕಿ ಹಾಲನ್ನು ಹಿಂಪಡೆದು ಹಣವನ್ನು ಮರಳಿ ಖಾತೆಗೆ ಹಾಕಲು ಕೇಳಿದ್ದರು.
ಆಪ್ ಪ್ರತಿನಿಧಿಗಳ ಸೋಗಿನಲ್ಲಿ ಆನ್‌ಲೈನ್ ವಂಚಕರು ಬ್ಯಾಂಕ್‌ನ ಮಾಹಿತಿ ಕೇಳಿದ್ದಾರೆ. ವೃದ್ಧೆಯು ಅವರ ಮಾತನ್ನು ನಂಬಿ ಎಲ್ಲ ಮಾಹಿತಿ ನೀಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ವೃದ್ಧೆಯ ಖಾತೆಯಿಂದ ಹಂತ ಹಂತವಾಗಿ 77 ಸಾವಿರ ರೂಪಾಯಿ ಕಡಿತವಾಗಿದೆ.
ವೃದ್ಧೆಯು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಂಚಕರು ಗೂಗಲ್‌ನಲ್ಲಿ ಆಪ್‌ನ ಗ್ರಾಹಕ ಸೇವಾ ಕೇಂದ್ರದ ನಂಬರನ್ನು ಬದಲಾಯಿಸಿ ತಮ್ಮ ಮೊಬೈಲ್ ನಂಬರ್ ಹಾಕಿದ್ದಾರೆ. ಇದರಿಂದ ವೃದ್ದೆಗೆ ಮೋಸವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿವೈಡರ್ ಗೆ ಗುದ್ದಿದ ಬೈಕ್, ಸವಾರ ಸಾವು
ಬೆಂಗಳೂರಿನ ಬಳ್ಳಾರಿ ರಸ್ತೆಯ ದೊಡ್ಡಬಳ್ಳಾಪುರ ಜಂಕ್ಷನ್ ಬಳಿ ರಸ್ತೆ ಡಿವೈಡರ್‌ಗೆ ಬೈಕ್ ಗುದ್ದಿದ ಪರಿಣಾಮ ಬೈಕ್ ಸವಾರ 23 ವರ್ಷದ ಸೂರ್ಯ ಎಂಬುವವರು ಮೃತಪಟ್ಟಿದ್ದಾರೆ. ದೇವನಹಳ್ಳಿ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತ ಸಸೂರ್ಯ ದೇವನಹಳ್ಳಿ ರಿಜಿಸ್ಟ್ರಾರ್ ಕಚೇರಿ ಸಮೀಪ ಜೆರಾಕ್ಸ್ ಅಂಗಡಿ ನಡೆಸುತ್ತಿದ್ದರು. ತಡರಾತ್ರಿ ಊಟ ಮಾಡಿಕೊಂಡು ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಎಂದು ಪೊಲೀಸರು ಹೇಳಿದ್ದಾರೆ.
ಸೂರ್ಯ ಅವರ ಪೋಷಕರು ಕಾರ್ಯಕ್ರಮದ ನಿಮಿತ್ತ ಸಂಬಂಧಿಕರ ಮನೆಗೆ ಹೋಗಿದ್ದರು. ಆದ್ದರಿಂದ ಸೂರ್ಯ ಬಳ್ಳಾರಿ ರಸ್ತೆಯ ಹೋಟೆಲ್‌ವೊಂದರಲ್ಲಿ ಊಟ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದಾಗ ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ ಹೊಡೆದಿದೆ. ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಇದರಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. (ವರದಿ ಎಚ್. ಮಾರುತಿ)