ಕನ್ನಡ ಸುದ್ದಿ  /  Karnataka  /  Bangalore Crime News Pro Pakistan Slogan Case In Vidhana Soudha 3 Accused Arrested Mrt

Bangalore News: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪ ಪ್ರಕರಣ; ಮೂವರು ಆರೋಪಿಗಳ ಬಂಧನ

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಆರೋಪ ಪ್ರಕರಣದಲ್ಲಿ ಬೆಂಗಳೂರು, ಬ್ಯಾಡಗಿ, ದೆಹಲಿಗೆ ಸೇರಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಾರ್ಚ್ 3ರ ಭಾನುವಾರ ಸಿಎಂ ಸಿದ್ದರಾಮಯ್ಯ ಅವರು ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಪಾಕಿಸ್ತಾನ ಪರ ಘೋಷಣೆ ಪ್ರಕರಣದಲ್ಲಿ ಮೂವರು ಆರೋಪಿಗಳ ಬಂಧನವಾಗಿದೆ. (PTI)
ಮಾರ್ಚ್ 3ರ ಭಾನುವಾರ ಸಿಎಂ ಸಿದ್ದರಾಮಯ್ಯ ಅವರು ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಪಾಕಿಸ್ತಾನ ಪರ ಘೋಷಣೆ ಪ್ರಕರಣದಲ್ಲಿ ಮೂವರು ಆರೋಪಿಗಳ ಬಂಧನವಾಗಿದೆ. (PTI)

ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿ ಮೂಲದ ಇಲ್ತಾಜ್, ಬೆಂಗಳೂರಿನ ಆರ್‌ ಟಿ ನಗರದ ಮುನಾವರ್ ಹಾಗೂ ಬ್ಯಾಡಗಿಯ ಮೊಹಮದ್ ಶಫಿ ನಾಶಿಪುಡಿ ಎಂದು ಗುರುತಿಸಲಾಗಿದೆ. ಸೈಯದ್ ನಾಸಿರ್ ಹುಸೇನ್ ಅವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ನಂತರ ನಡೆದ ಸಂಭ್ರಮಾಚರಣೆಯಲ್ಲಿ ಈ ಮೂವರು ಆರೋಪಿಗಳು ವಿಧಾನಸೌಧದ ಕಾರಿಡಾರ್‌ನಲ್ಲಿ ಪಾಕಿಸ್ತಾನ ಪರ ಎಂದು ಘೋಷಣೆ ಕೂಗಿದ್ದರು. ವಿಧಿವಿಜ್ಞಾನ ಪ್ರಯೋಗಾಲಯದ ವರದಿಯ ಆಧಾರದ ಮೇಲೆ ಇವರನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಸೆಂಟ್ರಲ್ ಉಪ ಪೊಲೀಸ್ ಆಯುಕ್ತ ಎಚ್. ಟಿ. ಶೇಖರ್ ಖಚಿತಪಡಿಸಿದ್ದಾರೆ.

ಎಫ್‌ಎಸ್‌ಎಲ್‌ ವರದಿ, ಸಾಂದರ್ಭಿಕ ಸಾಕ್ಷ್ಯ ಮತ್ತು ಅಲ್ಲಿ ನೆರೆದಿದ್ದವರ ಸಾಕ್ಷ್ಯಗಳ ಹೇಳಿಕೆ ಆಧಾರದ ಮೇಲೆ ಇವರನ್ನು ಬಂಧಿಸಲಾಗಿದೆ. ಈ ಮೂವರು ಆರೋಪಿಗಳನ್ನು ಮುಂದಿನ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಫೆ. 27ರಂದು ರಾಜ್ಯಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಕಾಂಗ್ರೆಸ್ ಬೆಂಬಲಿಗರು ಜಿಂದಾಬಾದ್ ಜಿಂದಾಬಾದ್ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೇಳಿಬಂದಿತ್ತು. ನಂತರ ಪೊಲೀಸರು ವಿಡಿಯೋಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು.

ಒತ್ತಡಕ್ಕೆ ಮಣಿದು ಸರ್ಕಾರಿಂದ ಮೂವರು ಆರೋಪಿಗಳ ಬಂಧನ-ಬಿವೈ ವಿಜಯೇಂದ್ರ

ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ಅವರು ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದು, ಮಧ್ಯೆ ಪ್ರವೇಶಿಸುವುದಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಅತ್ತ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ, ಬಿಜೆಪಿಯ ನಿರಂತರ ಹೋರಾಟದ ಒತ್ತಡಕ್ಕೆ ಮಣಿದು ಸರ್ಕಾರ ಮೂವರನ್ನು ಬಂಧಿಸಿದೆ. ತನಿಖೆ ಇಲ್ಲಿಗೆ ನಿಲ್ಲಬಾರದು. ಇವರು ಯಾರು? ಇವರ ಹಿನ್ನೆಲೆ ಏನು? ಇನ್ನೂ ಎಷ್ಟು ಮಂದಿ ಭಾಗಿಯಾಗಿದ್ದಾರೆ ? ಈ ಘೋಷಣೆ ಕೂಗಲು ಪ್ರೇರೇಪಣೆ ನೀಡಿದ್ದು ಯಾರು ಎನ್ನುವುದು ಸೇರಿದಂತೆ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಬ್ಯಾಡಗಿಯ ಮೊಹಮದ್ ಶಫಿ ನಾಶಿಪುಡಿ ಮೆಣಸಿನಕಾಯಿ ವ್ಯಾಪಾರಿ ಎಂದು ಗೊತ್ತಾಗಿದೆ. ಈತನ ಬಂಧನವಾಗುತ್ತಿದ್ದಂತೆ ಬ್ಯಾಡಗಿಯ ಈತನ ನಿವಾಸದಲ್ಲಿ ನೀರವ ಮೌನ ಆವರಿಸಿದೆ. ನಾಶಿಪುಡಿ ಕುಟುಂಬದ ಸದಸ್ಯರು ಗೇಟ್‌ಗೆ ಒಳಗಿನಿಂದಲೇ ಬೀಗ ಹಾಕಿಕೊಂಡು ಲೈಟ್‌ಗಳನ್ನು ಆರಿಸಿ ಒಳಗೆ ಸೇರಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆತನ ಸಹೋದರಿ ನನ್ನ ಸೋದರ ಅಂತಹವನಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಆರಂಭದಲ್ಲಿ ಕಾಂಗ್ರೆಸ್ ಈ ಘೋಷಣೆಯನ್ನು ನಿರಾಕರಿಸಿತ್ತು. ನಾಸಿರ್ ಹುಸೇನ್ ಬೆಂಬಲಿಗರು ನಾಸಿರ್ ಸಾಬ್ ಜಿಂದಾಬಾದ್ ಎಂದು ಮಾತ್ರ ಕೂಗಿದ್ದಾರೆ ಎಂದು ವಾದಿಸುತ್ತಿತ್ತು. ಆದರೆ ಬಿಜೆಪಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಧಾನಸೌಧದಲ್ಲೇ ಪ್ರತಿಭಟನೆ ನಡೆಸಿತ್ತು. ವಿಧಾನಮಂಡಲ ಅಧಿವೇಶನ ಮತ್ತು ಹೊರಗೆ ರಾಜ್ಯಾದ್ಯಂತ ಈ ಪ್ರಕರಣವನ್ನು ಇಟ್ಟುಕೊಂಡು ಭಾರಿ ಹೋರಾಟ ನಡೆಸಿತ್ತು.

(This copy first appeared in Hindustan Times Kannada website. To read more like this please logon to kannada.hindustantimes.com )

IPL_Entry_Point