ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನ ಮಾಜಿ ಮೇಯರ್ ಮನೆಯಲ್ಲಿ ಕಳ್ಳತನ; 1 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ, ನಗದು ದೋಚಿ ಸೆಕ್ಯೂರಿಟಿ ಗಾರ್ಡ್‌ ಪರಾರಿ

ಬೆಂಗಳೂರಿನ ಮಾಜಿ ಮೇಯರ್ ಮನೆಯಲ್ಲಿ ಕಳ್ಳತನ; 1 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ, ನಗದು ದೋಚಿ ಸೆಕ್ಯೂರಿಟಿ ಗಾರ್ಡ್‌ ಪರಾರಿ

ಕೆಲ ದಿನಗಳ ಹಿಂದಷ್ಟೇ ನೇಪಾಳದ ವ್ಯಕ್ತಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ. ಮನೆಯಲ್ಲಿ ಹಣ, ಚಿನ್ನಾಭರಣ ಇರುವುದನ್ನ ಆತ ಗಮನಿಸಿದ್ದ. ಆತನೇ ಕಳ್ಳತನ ಮಾಡಿರುವ ಶಂಕೆ ಇದೆ ಎಂದು ನಾರಾಯಣಸ್ವಾಮಿ ತಿಳಿಸಿದ್ದಾರೆ (ವರದಿ: ಎಚ್. ಮಾರುತಿ)

ಬೆಂಗಳೂರಿನ ಮಾಜಿ ಮೇಯರ್ ಮನೆಯಲ್ಲಿ 1 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನವಾಗಿರುವ ಘಟನೆ ನಡೆದಿದೆ.
ಬೆಂಗಳೂರಿನ ಮಾಜಿ ಮೇಯರ್ ಮನೆಯಲ್ಲಿ 1 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನವಾಗಿರುವ ಘಟನೆ ನಡೆದಿದೆ.

ಬೆಂಗಳೂರಿನ (Bangalore Crime News) ಆರ್‌ಎಂವಿ 2ನೇ ಹಂತದಲ್ಲಿರುವ ಮಾಜಿ ಮೇಯರ್ ಆರ್. ನಾರಾಯಣಸ್ವಾಮಿ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಭದ್ರತಾ ಸಿಬ್ಬಂದಿಯೇ ಕಳ್ಳತನ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಈ ಸಂಬಂಧ ನಾರಾಯಣಸ್ವಾಮಿ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಸೇರಿಕೊಂಡಿದ್ದ ನೇಪಾಳದ ವ್ಯಕ್ತಿಯೇ ಕಳ್ಳತನ ಮಾಡಿರುವ ಅನುಮಾನವಿದೆ. ಕಳ್ಳತನ ನಡೆದ ನಂತರ ಆತ ನಾಪತ್ತೆಯಾಗಿದ್ದಾನೆ. ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಏನೆೆಲ್ಲಾ ಕಳ್ಳತನವಾಗಿದೆ?

ಕೆಲವು ದಿನಗಳ ಹಿಂದೆಯಷ್ಟೇ ನೇಪಾಳದ ವ್ಯಕ್ತಿಯೊಬ್ಬ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ. ಮನೆಯಲ್ಲಿ ನಗದು ಮತ್ತು ಚಿನ್ನಾಭರಣಗಳು ಇರುವುದನ್ನು ಆತ ಗಮನಿಸಿದ್ದ. ಆತನೇ ಕಳ್ಳತನ ಮಾಡಿರುವ ಶಂಕೆ ಇದೆ ಎಂದು ನಾರಾಯಣಸ್ವಾಮಿ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ನಾರಾಯಣಸ್ವಾಮಿ ಮತ್ತು ಅವರ ಕುಟುಂಬದವರೆಲ್ಲ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ಇದೇ ಸಂದರ್ಭವನ್ನು ಬಳಸಿಕೊಂಡು ಆರೋಪಿ ಕಳ್ಳತನ ಮಾಡಿದ್ದಾನೆ. 1 ಕೋಟಿ ಮೌಲ್ಯದ 1 ಕೆ.ಜಿ 425 ಗ್ರಾಂ ಚಿನ್ನಾಭರಣಗಳು, 18.92 ಲಕ್ಷ ರೂಪಾಯಿ ಮೌಲ್ಯದ 22 ಕೆ.ಜಿ ಬೆಳ್ಳಿಯ ಪೂಜಾ ಸಾಮಗ್ರಿ, ಮತ್ತಿತರ ಆಭರಣಗಳು, 6.50 ಲಕ್ಷ ರೂಪಾಯಿ ಮೌಲ್ಯದ ಮೂರು ಕೈ ಗಡಿಯಾರಗಳು ಹಾಗೂ 1.29 ಲಕ್ಷ ನಗದು ಕಳ್ಳತನವಾಗಿದೆ ಎಂದು ನಾರಾಯಣಸ್ವಾಮಿ ತಿಳಿಸಿದ್ದಾರೆ.

ಕುಡಿದ ಮತ್ತಿನಲ್ಲಿ ಡೆಲಿವರಿ ಬಾಯ್ ಕೊಲೆ ಮಾಡಿದ್ದ ಆರೋಪಿಗಳು ಅರೆಸ್ಟ್

ಬೆಂಗಳೂರಿನ ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ಡೆಲಿವರಿ ಬಾಯ್ ಸತೀಶ್ ಕುಮಾರ್ ಕೊಲೆ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶಿವಾಜಿನಗರದ ಸತೀಶ್ ಕುಮಾರ್, ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಏಪ್ರಿಲ್ 19ರಂದು ರಾತ್ರಿ ಇವರನ್ನು ಹತ್ಯೆ ಮಾಡಲಾಗಿತ್ತು. ಆರೋಪಿಗಳಾದ ದೊಮ್ಮಲೂರಿನ 36 ವರ್ಷದ ಎಸ್. ಸಂತೋಷ್, ಇಂದಿರಾನಗರದ 26 ವರ್ಷದ ಎಂ. ಪವನ್ ಕುಮಾರ್, 33 ವರ್ಷದ ತಿಪ್ಪಸಂದ್ರದ ರಂಜಿತ್ ಕುಮಾರ್ , ದೊಮ್ಮಲೂರು ಲೇಔಟ್‌ನ 31 ವರ್ಷದ ಜೆ. ವಿನೋದ್ ಮ್ಯಾಥ್ಯೂ ಹಾಗೂ 41 ವರ್ಷದ ರಂಗನಾಥ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸತೀಶ್ ಕುಮಾರ್ ಹಾಗೂ ಕೊಲೆ ಮಾಡಿದ ಆರೋಪಿಗಳು ಹಲವು ವರ್ಷಗಳ ಸ್ನೇಹಿತರಾಗಿದ್ದರು. ಇವರೆಲ್ಲರೂ ದೊಮ್ಮಲೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಸೇರಿದ್ದರು. ಇದೇ ಸಂದರ್ಭದಲ್ಲಿ ಎಲ್ಲರೂ ಹತ್ತಿರದ ಬಿಡಿಎ ಪಾರ್ಕ್‌ಗೆ ತೆರಳಿ ಅಲ್ಲಿಯೇ ಮದ್ಯದ ಪಾರ್ಟಿ ಮಾಡಿದ್ದರು. ಮದ್ಯದ ಅಮಲಿನಲ್ಲಿ ಪರಸ್ಪರ ಜಗಳ ಮಾಡಿ ಕೊಂಡಿದ್ದರು. ಕೋಪದಲ್ಲಿ ಆರೋಪಿಗಳು, ಸತೀಶ್‌ ಕುಮಾರ್ ಮೇಲೆ ಹಲ್ಲೆ ಮಾಡಿ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿದ್ದರು. ಇದರಿಂದ ತೀವ್ರ ರಕ್ತಸ್ರಾವವಾಗಿ ಸತೀಶ್ ಮೃತಪಟ್ಟಿದ್ದ. ನಂತರ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. ಇದೀಗ ಎಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ.

IPL_Entry_Point