ಮದುವೆಗೆ ನಿರಾಕರಿಸಿದಕ್ಕೆ ಸಿಟ್ಟು; ಬೆಂಗಳೂರಿನಲ್ಲಿ ಪ್ರಿಯತಮೆಯನ್ನ 15 ಬಾರಿ ಚಾಕುವಿನಿಂದ ಇರಿದು ಕೊಂದ ಯುವಕ
ಪ್ರೀತಿಸಿದ್ದ ಮಹಿಳೆ ಮದುವೆಗೆ ನಿರಾಕರಿಸಿದ್ದ ಭಗ್ನ ಪ್ರೇಮಿಯೊಬ್ಬ ಆಕೆಯನ್ನು ಚಾಕುವಿನಿಂದ 15 ಬಾರಿ ಇರಿದು ಕೊಂಡಿದರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೃತ್ಯದ ಬಳಿಕ ಆರೋಪಿ ಜಯನಗರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.
ಬೆಂಗಳೂರು: ಮದುವೆಯಾಗಲು ನಿರಾಕರಿಸಿದ್ದಕ್ಕಾಗಿ ಪ್ರೇಯಸಿಯನ್ನು 15 ಬಾರಿ ಇರಿದು ಕೊಂದಿರುವ ಘಟನೆ ಬೆಂಗಳೂರಿನಲ್ಲಿ (Bangalore Crime News) ನಡೆದಿದೆ. ತೀವ್ರ ರಕ್ತಸ್ರಾವವಾಗಿ ಸಂತ್ರಸ್ತೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಮೃತಳನ್ನು ಕೋಲ್ಕತ್ತ ಮೂಲದ 42 ವರ್ಷದ ಫರೀದಾ ಖಾತೂನ್ ಎಂದು ಗುರುತಿಸಲಾಗಿದೆ. ಘಟನೆಯ ನಂತರ ಆರೋಪಿ ಜಯನಗರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.
ವಿಚ್ಛೇದಿತ ಫರೀದಾ ಖಾತೂನ್ ಅವರು ಕೋಲ್ಕತ್ತದಿಂದ ಬಂದು ಬೆಂಗಳೂರಿ ಸ್ಪಾವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈಕೆಗೆ 22 ವರ್ಷದ ಮಗಳು ಇದ್ದಾಳೆ. ವರದಿಗಳ ಪ್ರಕಾರ, 32 ವರ್ಷದ ಆರೋಪಿ ಗಿರೀಶ್ ಎನ್ಎಲ್ ಅಲಿಯಾಸ್ ರೆಹಾನ್ ಅಹ್ಮದ್ ನಗರದ ಸ್ಪಾದಲ್ಲಿ 42 ವರ್ಷದ ಫರೀದಾ ಖಾತೂನ್ ಅವರನ್ನು ಭೇಟಿಯಾಗಿದ್ದ. ಇವರ ಪರಿಚಯ ಪ್ರೀತಿಗೆ ತಿರುಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಸಂಬಂಧವನ್ನು ಮುಂದುವರಿಸಿದ್ದರು. ಈಗಾಗಲೇ ಇಬ್ಬರು ಮಕ್ಕಳ ತಾಯಿಯಾಗಿದ್ದ ಫರೀದಾ ಅವರನ್ನು ಮದುವೆಯಾಗಲು ಗಿರೀಶ್ ನಿರ್ಧರಿಸಿದ್ದ. ಇದಕ್ಕಾಗಿ ತನ್ನ ಹೆಸರನ್ನು ರೆಹಾನ್ ಅಹ್ಮದ್ ಅಂತ ಬದಲಾಯಿಸಿಕೊಂಡಿದ್ದ.
ಹುಟ್ಟುಹಬ್ಬಕ್ಕಾಗಿ ಬೆಂಗಳೂರಿಗೆ ಕರೆಸಿಕೊಂಡಿದ್ದ ಆರೋಪಿ
ಫರೀದಾ ಇತ್ತೀಚೆಗೆ ತಮ್ಮ ಸ್ವಂತ ಊರಾದ ಕೋಲ್ಕತ್ತಗೆ ಹೋಗಿದ್ದರು. ಆದರೆ ಗಿರೀಶ್ ಹುಟ್ಟುಹಬ್ಬ ಇದೆ ಅಂತ ಪ್ರೇಯಸಿಗೆ ಕರೆ ಮಾಡಿ ಬೆಂಗಳೂರಿಗೆ ಕರೆಸಿಕೊಂಡಿದ್ದಾನೆ. ಮಾರ್ಚ್ 28 ರಂದು ಒರ್ವ ಪುತ್ರಿಯೊಂದಿಗೆ ಬೆಂಗಳೂರಿಗೆ ವಾಪಸ್ ಆಗಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಳು. ಅಂದು ಸಂಜೆ ಗಿರೀಶ್ ನನ್ನ ಭೇಟಿಯಾಗಿ ಹೊರಗಡೆ ಒಟ್ಟಿಗೆ ಊಟಕ್ಕೆ ಹೋಗಿ ಬಂದಿದ್ದಾರೆ. ಫರೀದಾ ತನ್ನ ಮಗಳನ್ನು ಮತ್ತೆ ಹೋಟೆಲ್‌ಗೆ ಬಿಟ್ಟಿದ್ದಾರೆ. ನಂತರ ಅವರಿಬ್ಬರೂ ಶಾಲಿನಿ ಮೈದಾನಕ್ಕೆ ಮಾತನಾಡಲು ಹೋಗಿದ್ದಾರೆ. ಅಲ್ಲಿ ಗಿರೀಶ್ ಫರೀದಾಗೆ ಮದುವೆಯ ಪ್ರಸ್ತಾಪ ಮಾಡಿದರು. ಫರೀದಾ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಾಳೆ. ಅಲ್ಲದೆ ಮದುವೆಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಗಿರೀಶ್ ಆಕೆಯನ್ನ ಚಾಕುವಿನಿಂದ 15 ಬಾರಿ ಇರಿದು ಕೊಂದಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವವನ್ನು ನೋಡಿದ ಹತ್ತಿರದ ತೆಂಗಿನಕಾಯಿ ಮಾರಾಟಗಾರರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಒಂದು ಗಂಟೆಯೊಳಗೆ ಗಿರೀಶ್ ಪೊಲೀಸರಿಗೆ ಶರಣಾಗಿದ್ದಾನೆ. ಪೊಲೀಸರು ಆರೋಪಿಯ ಕೃತ್ಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.