Bangalore Crime: ಬೆಂಗಳೂರು ಸುತ್ತಮುತ್ತ ಕುರಿ, ಮೇಕೆ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ನ 6 ಮಂದಿ ಬಂಧನ
ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕುರಿ,ಮೇಕೆ ಕಳ್ಳತನ ಮಾಡುತ್ತಿದ್ದ ಉತ್ತರ ಕರ್ನಾಟಕ ಭಾಗದ ಆರು ಮಂದಿ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ.ವರದಿ: ಎಚ್.ಮಾರುತಿ, ಬೆಂಗಳೂರು
ಬೆಂಗಳೂರು: ಬೆಂಗಳೂರಿನ ಹೊರವಲಯದ ದೊಡ್ಡಜಾಲ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ರಾತ್ರಿ ವೇಳೆ ಕುರಿ ಮತ್ತು ಮೇಕೆಗಳನ್ನು ಕಳವು ಮಾಡುತ್ತಿದ್ದ ಗ್ಯಾಂಗ್ ಅನ್ನು ಪತ್ತೆ ಹಚ್ಚುವಲ್ಲಿ ಚಿಕ್ಕಜಾಲ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಗ್ಯಾಂಗ್ ನ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ರುಕ್ಕು ಪೇಟೆ ಗ್ರಾಮದ 28 ವರ್ಷದ ಪರುಶರಾಮ್, ರಾಯಚೂರು ಜಿಲ್ಲೆಯ ಸಿಂಧನೂರಿನ ಅಂಬಮಠದ ಅಮರೇಶ್ ಆಲಿಯಾಸ್ ಗುನ್ನಾ(27), ಅಂಬಮಠ ಸಮೀಪದ ಸೋಮ್ಲಾಪುರದ ರಮೇಶ್ ಆಲಿಯಾಸ್ ಜೋಗಿ(21), ರಾಯಚೂರಿನ ಹಸನ್ ಕಲ್ ಗ್ರಾಮದ ವೆಂಕಟೇಶ್( 19), ಬಾಗಲಕೋಟೆ ಜಿಲ್ಲೆ ಗುಡೂರು ಗ್ರಾಮದ ಹುಲುಗುಪ್ಪ(32) ಹಾಗೂ ಧಾರವಾಡ ನೇಕಾರ ನಗರದ ಈರಣ್ಣ (27) ಬಂಧಿತ ಆರೋಪಿಗಳು.
ಇವರಿಂದ 2.50 ಲಕ್ಷ ರೂ. ನಗದು 29 ಕುರಿ, ಮೇಕೆಗಳು ಮತ್ತು ಸಾಗಣೆಗೆ ಬಳಸುತ್ತಿದ್ದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕುರಿ ಮತ್ತು ವಾಹನದ ಮೌಲ್ಯ ಸುಮಾರು 10 ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ.
ಸೆಪ್ಟಂಬರ್ 15 ರಂದು ರಾತ್ರಿ ದೊಡ್ಡಜಾಲ ಗ್ರಾಮದ ರೈತೊಬ್ಬರು ತಮ್ಮ ಕೊಟ್ಟಿಗೆಯಲ್ಲಿದ್ದ 15 ಮೇಕೆಗಳು ಕಾಣೆಯಾಗಿವೆ ಎಂದು ದೂರು ನೀಡಿದ್ದರು. ಸುತ್ತಮುತ್ತ ಗ್ರಾಮಗಳಲ್ಲಿ ಹುಡುಕಿದರೂ ಕುರಿ ಮೇಕೆಗಳು ಪತ್ತೆಯಾಗಲಿಲ್ಲ ಎಂದು ಅವರು ತಿಳಿಸಿದ್ದರು.
ಪೊಲೀಸರು ಈ ಗ್ರಾಮದ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಕೆಲವು ರಸ್ತೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕುರಿ ಹಾಗೂ ಮೇಕೆ ಕಳ್ಳರ ಗ್ಯಾಂಗ್ ಕಳ್ಳತನ ನಡೆಸುತ್ತಿರುವುದು ಪತ್ತೆಯಾಗಿತ್ತು.
ಈ ಗ್ಯಾಂಗ್ ನ ಸದಸ್ಯರು ಕದ್ದ ಕುರಿಗಳನ್ನು ಬೆಂಗಳೂರು, ಹೊಸಪೇಟೆ, ಕೊಪ್ಪಳ ಮತ್ತು ಬಳ್ಳಾರಿಯಲ್ಲಿ ಮಾರಾಟ ಮಾಡುತ್ತಿದ್ದರು. ಆರೋಪಿ ಜೋಗಿ ರಮೇಶ್ ಹೇರ್ ಪಿನ್ ಮಾರಾಟ ಮಾಡುವ ನೆಪದಲ್ಲಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಕುರಿ ಮತ್ತು ಮೇಕೆಗಳನ್ನು ಕಟ್ಟುವ ಕೊಟ್ಟಿಗೆಗಳನ್ನು ಗುರುತಿಸುತ್ತಿದ್ದ. ನಂತರ ಈ ಗ್ಯಾಂಗ್ ಸದಸ್ಯರಿಗೆ ಮಾಹಿತಿ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರೇಮ ವೈಫಲ್ಯ: ಪಿಜಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ
ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಪೇಯಿಂಗ್ ಗೆಸ್ಟ್ ಪಿಜಿ ಕಟ್ಟಡದ 4ನೇ ಮಹಡಿಯಿಂದ ಜಿಗಿದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೋಡಿದ್ದಾನೆ. ಈತನನ್ನು ತಮಿಳುನಾಡು ಮೂಲದ 28 ವರ್ಷದ ವಿಷ್ಣು ಎಂದು ಗುರುತಿಸಲಾಗಿದೆ.
ಕೆಲವೇ ತಿಂಗಳ ಹಿಂದೆ ವಿಷ್ಣು ಉದ್ಯೋಗ ಹುಡುಕಿಕೊಂಡು ಬೆಂಗಳೂರಿಗೆ ಆಗಮಿಸಿ ಪಿಜಿಯಲ್ಲಿ ನೆಲೆಸಿದ್ದ. ಬಿಪಿಒ ಕಂಪನಿಯಲ್ಲಿ ಕೆಲಸವನ್ನೂ ಹುಡುಕಿಕೊಂಡಿದ್ದ. ಕೆಲವುತಿಂಗಳಿನಿಂದ ಯುವತಿಯೊಬ್ಬರನ್ನು ಈತ ಪ್ರೀತಿಸುತ್ತಿದ್ದ. ಆದರೆ ಆ ಯುವತಿ ಈತನನ್ನು ಕಡೆಗಣಿಸಿದ್ದರು. ಇದೇ ಕಾರಣಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
(ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.)
(ವರದಿ: ಎಚ್.ಮಾರುತಿ,ಬೆಂಗಳೂರು)