ಕಾಯುವವರೇ ಕಳ್ಳತನಕ್ಕೆ ಇಳಿದ ಪ್ರಸಂಗ: ಬೆಂಗಳೂರಲ್ಲಿ 15 ಕೋಟಿ ಮೌಲ್ಯದ ನಗದು, ಚಿನ್ನಾಭರಣ ದೋಚಿ ನೇಪಾಳಕ್ಕೆ ಸೆಕ್ಯೂರಿಟಿ ಗಾರ್ಡ್ ದಂಪತಿ ಪರಾರಿ
Bangalore Crime: ಬೆಂಗಳೂರಿನ ಮನೆಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ವ್ಯಕ್ತಿ ಮಾಲೀಕರು ಗುಜರಾತ್‌ಗೆ ತೆರಳಿದಾಗ ಭಾರಿ ಪ್ರಮಾಣ ನಗ, ನಗದು ದೋಚಿಕೊಂಡು ಪರಾರಿಯಾದ ಘಟನೆ ನಡೆದಿದೆ. ಆತನ ಪತ್ತೆಗೆ ಪೊಲೀಸ್ ತಂಡ ನೇಪಾಳಕ್ಕೆ ತೆರಳಿವೆ.ವರದಿ: ಎಚ್.ಮಾರುತಿ. ಬೆಂಗಳೂರು
ಬೆಂಗಳೂರು: ಮನೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಸೆಕ್ಯೂರಿಟಿ ಗಾರ್ಡ್ ವೊಬ್ಬ ಮನೆ ಮಾಲೀಕರು ಊರಿಗೆ ಹೋಗಿದ್ದಾಗ ಮನೆಯಲ್ಲಿದ್ದ ನಗದು ಸೇರಿದಂತೆ 15 ಕೋಟಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೆಕ್ಯೂರಿಟಿ ಗಾರ್ಡ್ ದಂಪತಿ ಹಾಗೂ ಮೂವರು ಸಹಚರರು ಈ ಕಳ್ಳತನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ವಿಜಯನಗರದ ಅರಿಹಂತ್ ಜ್ಯುವೆಲರಿ ಅಂಗಡಿ ಮಾಲೀಕ ಸುರೇಂದ್ರ ಕುಮಾರ್ ಜೈನ್ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ.
ನೇಪಾಳ ಮೂಲದ ಸೆಕ್ಯುರಿಟಿ ಗಾರ್ಡ್ ನಮ್ರಾಜ್ ಭಾತಾ, ಇವರ ಪತ್ನಿ ಹಾಗೂ ಮೂವರು ಸಹಚರರೊಂದಿಗೆ ಸೇರಿಕೊಂಡು ಮನೆಯ ಬೀರು ಒಡೆದು 40 ಲಕ್ಷ ನಗದು, 14.75 ಕೋಟಿ ಮೌಲ್ಯದ 18 ಕೆಜಿ 470 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಇದರಲ್ಲಿ ಗಿರವಿ ಇರಿಸಿಕೊಂಡಿದ್ದ 8 ಕೆಜಿ 900 ಗ್ರಾಂ ಚಿನ್ನಾಭರಣವೂ ಸೇರಿದೆ. ಮನೆಯವರಿಗೆ ಸೇರಿದ 2 ಕೆಜಿ 835 ಗ್ರಾಂ ಚಿನ್ನದ ಆಭರಣ, ಸಹೋದರಿಯರ 2 ಕೆಜಿ 790 ಗ್ರಾಂ ಚಿನ್ನದ ಆಭರಣ, 700 ಗ್ರಾಂ ಚಿನ್ನದ ಬಿಸ್ಕೆಟ್ 212 ಗ್ರಾಂ ವಜ್ರಾಭರಣ ಸೇರಿದೆ.
ಕಳ್ಳತನ ನಡೆದಿದ್ದು ಎಲ್ಲಿ
ಮಾಗಡಿ ರಸ್ತೆಯ ವಿದ್ಯಾರಣ್ಯ ನಗರದ ಒಂದನೇ ಮುಖ್ಯ ರಸ್ತೆಯಲ್ಲಿ ಅರಿಹಂತ್ ಜ್ಯುವೆಲರಿ ಅಂಗಡಿ ಇದೆ. ಸುರೇಂದ್ರ ಕುಮಾರ್ ಅವರ ಹೊಸಹಳ್ಳಿಯ ಪ್ರಿಯಾಂಕಾ ಟೆಂಟ್ ಹೌಸ್ ಎದುರಿನ ಮನೆಯಲ್ಲಿ ವಾಸವಾಗಿದ್ದರು. ಸೆಕ್ಯೂರಿಟಿ ಗಾರ್ಡ್ ಗೆ ಮನೆಯ ಪಾರ್ಕಿಂಗ್ ಸ್ಥಳದ ಕೊಠಡಿಯನ್ನು ವಾಸಕ್ಕೆ ಬಿಟ್ಟುಕೊಟ್ಟಿದ್ದರು. ಭದ್ರತೆಯ ಕೆಲಸದ ಜತೆಗೆ ಮನೆ ಕೆಲಸವನ್ನೂ ಮಾಡಿ ಕೊಡುತ್ತಿದ್ದ. ಹೀಗಾಗಿ ಆತನಿಗೆ ಮನೆಯಲ್ಲಿ ಚಿನ್ನಾಭರಣವಿಡುವ ಸ್ಥಳ ತಿಳಿದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇವರು ನೇಪಾಳಕ್ಕೆ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದ್ದು, ಆರೋಪಿಯ ಬಂಧನಕ್ಕಾಗಿ ಪೊಲೀಸರ ಒಂದು ತಂಡ ಸದ್ಯದಲ್ಲೇ ಅಲ್ಲಿಗೆ ತೆರಳಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುಜರಾತ್‌ಗೆ ಹೋಗಿದ್ದ ದಂಪತಿ
ಸುರೇಂದ್ರ ಕುಮಾರ್ ಅವರು ಧಾರ್ಮಿಕ ಕಾರ್ಯ ನಿಮಿತ್ತ ಕುಟುಂಬ ಸಮೇತ ನವೆಂಬರ್ 1 ರಂದು ತಮ್ಮ ಸ್ವಂತ ಊರು ಗುಜರಾತ್ ನ ಗಿರ್ನಾರ್ ಗೆ ತೆರಳಿದ್ದರು. ಆ ಸಮಯದಲ್ಲಿ ಆರೋಪಿಗಳು ಕಳ್ಳತನ ಮಾಡಿದ್ದಾರೆ.
ಗುಜರಾತಿನಿಂದ ಮನೆಗೆ ಮರಳಿ ಬಂದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಸೆಕ್ಯೂರಿಟಿಗಾರ್ಡ್ ಮೊಬೈಲ್ ಸ್ವಿಚ್ ಆಫ್ ಆಗಿರುವುದಲ್ಲದೆ ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ. ತಕ್ಷಣ ಅವರು ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸ್ ತನಿಖೆ ಚುರುಕು
ಆರೋಪಿಗಳ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಈಗಾಗಲೇ ದೆಹಲಿ, ಬಾಂಬೆ, ಕೋಲ್ಕತ್ತಾದಲ್ಲಿ ಶೋಧ ನಡೆಸಿದಾಗ ಆರೋಪಿಗಳು ನೇಪಾಳಕ್ಕೆ ಪರಾರಿಯಾಗಿರುವ ಮಾಹಿತಿ ಲಭ್ಯವಾಗಿದೆ. ಆರೋಪಿಗಳು ನಗದು ಹಾಗೂ ಚಿನ್ನಾಭರಣ ದೋಚಿಕೊಂಡು ದೆಹಲಿಯಿಂದ ನೇಪಾಳಕ್ಕೆ ಹೋಗಿರುವ ಬಗ್ಗೆ ಪ್ರಾಥಮಿಕ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಸದ್ಯದಲ್ಲೇ ಒಂದು ತಂಡ ನೇಪಾಳಕ್ಕೆ ತೆರಳಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
(ವರದಿ: ಎಚ್. ಮಾರುತಿ, ಬೆಂಗಳೂರು)