Bangalore News: ಬೆಂಗಳೂರಿನಲ್ಲಿ ಅರ್ಧ ಗಂಟೆ ಅವಧಿಯಲ್ಲೇ ನಾಲ್ವರಿಗೆ ಇರಿದ ಯುವಕ, ಸ್ಕೂಟರ್ ಕಿತ್ತುಕೊಂಡು ಪರಾರಿ
ಬೆಂಗಳೂರಿನ ಜನ ನಿಬಿಡ ಸ್ಥಳದಲ್ಲಿ ಹಣಕ್ಕಾಗಿ ನಾಲ್ವರ ಮೇಲೆ ಚಾಕುವಿನಿಂದ ಇರಿದು ಸ್ಕೂಟರ್ ಕಿತ್ತುಕೊಂಡು ಪರಾರಿಯಾಗಿರುವ ಯುವಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಬೆಂಗಳೂರು: ಆರೇಳು ತಿಂಗಳ ಹಿಂದೆ ಕೆಲವರ ಮೇಲೆ ಹಣಕ್ಕಾಗಿ ದಾಳಿ ಎಸಗಿ ತೀವ್ರ ಹಲ್ಲೆ ಮಾಡಿ ಜೈಲು ಸೇರಿದ್ದ ಬೆಂಗಳೂರಿನ ಯುವಕನೊಬ್ಬ ಅರ್ಧಗಂಟೆಯ ಅಂತರದಲ್ಲೇ ನಾಲ್ವರ ಮೇಲೆ ಚಾಕುವಿನಿಂದ ದಾಳಿ ಗಾಯಗೊಳಿಸಿದ್ದಾನೆ. ಅಲ್ಲದೇ ಯುವಕನೊಬ್ಬನ ಮೇಲೆ ದಾಳಿ ಮಾಡಿ ಅತನ ಸ್ಕೂಟರ್ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಬೆಂಗಳೂರಿನ ಇಂದಿರಾನಗರದ ಕದಂಬ ಎಂಬಾತ ಇಂತಹ ಕೃತ್ಯ ಎಸಗಿರುವುದು ಕಂಡು ಬಂದಿದ್ದು. ಆತನ ಸೆರೆಗೆ ಪೊಲೀಸರು ನಾಲ್ಕು ತಂಡಗಳನ್ನು ರಚಿಸಿ ಬಲೆ ಬೀಸಿದ್ದಾರೆ. ಆರೋಪಿ ಹೊಸಕೋಟೆ ಮಾರ್ಗದಲ್ಲಿ ಹೋಗಿರುವ ಮಾಹಿತಿ ಆಧರಿಸಿ ಈಗಾಗಲೇ ಪೊಲೀಸ್ ತಂಡಗಳು ಕಾರ್ಯಾಚರಣೆ ನಡೆಸಿವೆ. ಆತನನ್ನು ಸದ್ಯದಲ್ಲೇ ಸೆರೆ ಹಿಡಿಯುವುದಾಗಿ ಬೆಂಗಳೂರು ನಗರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನ ಇಂದಿರಾನಗರದಲ್ಲಿ ಯಾವುದೇ ಪ್ರಚೋದನೆ ಇಲ್ಲದೆ ನಾಲ್ವರನ್ನು ಇರಿದು ತೀವ್ರವಾಗಿ ಗಾಯಗೊಳಿಸಿದ್ದ ರೌಡಿಯೊಬ್ಬನ ಪತ್ತೆಗೆ ಬೆಂಗಳೂರು ಪೊಲೀಸರು ಬಲೆ ಬೀಸಿದ್ದಾರೆ. ಶನಿವಾರ ರಾತ್ರಿ 9.30 ರಿಂದ 10 ಗಂಟೆಯ ನಡುವೆ ಜನನಿಬಿಡ 100 ಅಡಿ ರಸ್ತೆಯಲ್ಲಿ ಮತ್ತು ಸುತ್ತಮುತ್ತ ಈ ಕೃತ್ಯ ನಡೆಸಲಾಗಿದೆ. ಅಲ್ಲದೇ ಬೆಳಗಿನಜಾವ ಯುವಕನ ಮೇಲೆ ದಾಳಿ ಮಾಡಿ ಆತನ ಸ್ಕೂಟರ್ ಕಿತ್ತುಕೊಂಡು ಹೋಗಿರುವುದು ಕಂಡು ಬಂದಿದೆ.
ಇಂದಿರಾನಗರದ ಎಲ್ಲಾ ನಾಲ್ವರು ನಿವಾಸಿಗಳಾದ ಜಶ್ವಂತ್ ಪಿ (19), ಮಹೇಶ್ ಸೀತಾಪತಿ ಎಸ್ (23), ದೀಪಕ್ ಕುಮಾರ್ ವರ್ಮಾ (24) ಮತ್ತು ತಮ್ಮಯ್ಯ (44) ಅವರ ಕುತ್ತಿಗೆ ಮತ್ತು ದವಡೆಯ ಪ್ರದೇಶದಲ್ಲಿ ಕದಂಬ ಹರಿತವಾದ ವಸ್ತುವಿನಿಂದ ಇರಿದಿದ್ದಾನೆ. ಬಹುಶಃ ಪಾಕೆಟ್ ಚಾಕುವಿನಿಂದ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.
ತಪ್ಪು ತಿರುವು ಪಡೆದಿದ್ದಕ್ಕಾಗಿ ಜಶ್ವಂತ್ ಮತ್ತು ಪ್ರಶ್ನೆಗೆ ಸಮರ್ಪಕವಾಗಿ ಪ್ರತಿಕ್ರಿಯಿಸದ ಸೀತಾಪತಿಗೆ ಚಾಕುವಿನಿಂದ ಮೊದಲು ಕದಂಬ ಇರಿದಿದ್ದಾನೆ. ಪಾನಿ ಪುರಿ ಮಾರಾಟಗಾರರಾದ ಇನ್ನಿಬ್ಬರು ಆಹಾರದ ಅಲಭ್ಯತೆ ಮತ್ತು ಬಿಲ್ ಪಾವತಿಗೆ ಸಂಬಂಧಿಸಿದ ಜಗಳ ಮಾಡಿಕೊಂಡು ದಾಳಿ ನಡೆಸಿರುವುದಾಗಿ ಪೊಲೀಸರ ವಿಚಾರಣೆಯಿಂದ ಗೊತ್ತಾಗಿದೆ. ಮುಂಜಾನೆ 2.30 ರ ಸುಮಾರಿಗೆ 80 ಅಡಿ ರಸ್ತೆಯ ಬಳಿ ವಾಹನ ಚಾಲಕ ಆದಿಲ್ (24) ಅವರ ಮೇಲೆ ಚಾಕು ತೋರಿಸಿ ಕೆಆರ್ ಪುರಂ ರೈಲು ನಿಲ್ದಾಣಕ್ಕೆ ಡ್ರಾಪ್ ಕೇಳಿದ ನಂತರ ಸುಜುಕಿ ಆಕ್ಸೆಸ್ ಸ್ಕೂಟರ್‌ನೊಂದಿಗೆ ಪರಾರಿಯಾಗಿದ್ದಾನೆ
ಇಂದಿರಾನಗರ ಪೊಲೀಸರು ಐದು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಶಂಕಿತನನ್ನು ಪತ್ತೆ ಹಚ್ಚಲು ಮತ್ತು ಭದ್ರತೆಗಾಗಿ ನಾಲ್ಕು ತಂಡಗಳನ್ನು ರಚಿಸಿದ್ದೇವೆ ಎಂದು ಬೆಂಗಳೂರು ನಗರ ಜಂಟಿ ಪೊಲೀಸ್ ಆಯುಕ್ತ (ಪೂರ್ವ) ರಮೇಶ್ ಬಾನೋತ್ ಮಾಹಿತಿ ನೀಡಿದ್ದಾರೆ.
ಇಂದಿರಾನಗರದ ಹೊಯ್ಸಳ ಗಸ್ತುಗಾರರು ಕದ್ದ ಸ್ಕೂಟರ್‌ನಲ್ಲಿ ಶಂಕಿತನನ್ನು ಗುರುತಿಸಿ ಹಿಂಬಾಲಿಸಲು ಪ್ರಾರಂಭಿಸಿದರು. ಕೆಆರ್ ಪುರಂ ಕಡೆಗೆ ಹೋದ ಶಂಕಿತ ವ್ಯಕ್ತಿ ರಾತ್ರಿಯಲ್ಲಿ ನಾಪತ್ತೆಯಾಗಿದ್ದಾನೆ.
ಶಂಕಿತ ಆರೋಪಿ ಬೆಂಗಳೂರು ಹೊರವಲಯದಲ್ಲಿರುವ ಹೊಸಕೋಟೆಗೆ ಕಡೆಗೆ ಹೋಗಿದ್ದು ಅಲ್ಲಿ ಹುಡುಕಾಟ ನಡೆದಿದೆ ಎಂದು ಪೂರ್ವ ಪೊಲೀಸ್ ಆಯುಕ್ತ ಡಿ ದೇವರಾಜ್ ತಿಳಿಸಿದ್ದಾರೆ.
ಸಣ್ಣ ವಿಚಾರಗಳಿಗೆ ಜಗಳ ತೆಗೆಯುವುದು, ಆನಂತರ ಚಾಕುವಿನಿಂದ ಇರಿದು ಗಾಯಗೊಳಿಸುವುದು ಕದಂಬ ಎಂಬಾತನ ಚಾಳಿ. ಕಳೆದ ವರ್ಷ ಇದೇ ರೀತಿ ನಡೆದುಕೊಂಡ ಆತನ ವಿರುದ್ದ ಪ್ರಕರಣ ದಾಖಲಾಗಿದ್ದು ಜೈಲು ಸೇರಿದ್ದ. ಸನ್ನತಡೆ ಆಧಾರದ ಮೇಲೆ ಬಿಡುಗಡೆ ಮಾಡಲಾಗಿತ್ತು. ಹೊರ ಬಂದವನು ಮತ್ತೆ ಕೃತ್ಯ ಎಸಗಿದ್ದಾನೆ. ಕುಡಿತದ ಚಟಕ್ಕೆ ದಾಸನಾದ ಈತ ಹಣಕ್ಕಾಗಿಯೇ ಹೀಗೆ ಮಾಡುತ್ತಿರುವುದು ಖಚಿತವಾಗಿದೆ. ಸದ್ಯದಲ್ಲೇ ಆತನನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
