Bangalore cyber fraud: ಐಟಿ ಅಧಿಕಾರಿಯೆಂದು ನಂಬಿಸಿ ಬೆಂಗಳೂರಿನ ವ್ಯಕ್ತಿಯಿಂದ 35 ಲಕ್ಷ ರೂ. ವಂಚನೆ, ಡಿಜಿಟಲ್ ಅರೆಸ್ಟ್‌ನಿಂದ ಹೋಯ್ತು ಹಣ
Bangalore cyber fraud: ಬೆಂಗಳೂರಿನಲ್ಲಿ ಸೈಬರ್ ವಂಚನೆ ಪ್ರಕರಣ ವರದಿಯಾಗಿದ್ದು, ಉದ್ಯಮಿಯೊಬ್ಬರಿಗೆ ಐಟಿ ಅಧಿಕಾರಿಗಳೆಂದು ವಂಚಿಸಿ 35 ಲಕ್ಷ ರೂ. ದೋಚಿದ ಪ್ರಕರಣ ನಡೆದಿದೆ.

Bangalore cyber fraud: ಸೈಬರ್ ವಂಚನೆ ಪ್ರಕರಣಗಳು ದಿನದಿಂಧ ದಿನಕ್ಕೆ ಏರುತ್ತಿರುವ ನಡುವೆಯೇ ಬೆಂಗಳೂರಿನಲ್ಲಿ ಐಟಿ ಅಧಿಕಾರಿಗಳು ಎಂದು ನಂಬಿಸಿ ಉದ್ಯಮಿ ಒಬ್ಬರಿಗೆ ಭಾರೀ ಪ್ರಮಾಣದಲ್ಲಿ ವಂಚನೆ ಮಾಡಿರುವ ಪ್ರಕರಣ ವರದಿಯಾಗಿದೆ. ಉದ್ಯಮಿಯನ್ನು ಡಿಜಿಟಲ್ ಅರೆಸ್ಟ್‌ಗೆ ಒಳಪಡಿಸಿ ಆನಂತರ ಹಂತ ಹಂತವಾಗಿ ಸುಮಾರು 35 ಲಕ್ಷ ರೂ.ಗಳನ್ನು ವಸೂಲಿ ಮಾಡಲಾಗಿದೆ. ಮೊದಲು ಅವರು ಪ್ರತಿರೋಧ ತೋರಿದರೂ ನಾವು ಐಟಿ ಅಧಿಕಾರಿಗಳು ಎಂದು ನಂಬಿಸಿ ಅವರ ವಹಿವಾಟಿನ ಮಾಹಿತಿ ನೀಡಿ ಹಣ ದೋಚಿರುವುದು ಕಂಡುಬಂದಿದೆ. ಈ ಕುರಿತು ಬೆಂಗಳೂರು ಸೆನ್ ಘಟಕದಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ಸೆನ್ ಘಟಕದ ಪೊಲೀಸರು ತಿಳಿಸಿದ್ದಾರೆ
ಬೆಂಗಳೂರಿನ ಪ್ರಸಾದ್( ಹೆಸರು ಬದಲಾಯಿಸಲಾಗಿದೆ) ಎಂಬುವವರಿಗೆ ದೆಹಲಿಯಿಂದ ಕರೆಯೊಂದು ಬಂದಿತ್ತು. ಅಪರಿಚಿತ ಕರೆ ಬಂದಾಗಲೂ ಅದನ್ನು ಸ್ವೀಕರಿಸಿದ ಪ್ರಸಾದ್ ಅವರು ಮಾತನಾಡಿದ್ದರು.ಅಲ್ಲಿ ಕರೆ ಮಾಡಿದವರು ಆದಾಯ ತೆರಿಗೆ ಇಲಾಖೆ (ಐ-ಟಿ) ಎಂದು ಹೇಳಿಕೊಂಡಿದ್ದಾರೆ. ಪ್ರಸಾದ್ ಅವರು ಆದಾಯ ತೆರಿಗೆ ಇಲಾಖೆಗೆ 86 ಲಕ್ಷ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದ್ದೀರಿ. ಅದನ್ನು ಪಾವತಿಸದೇ ಇದ್ದರೆ ನಿಮ್ಮ ಆಸ್ತಿ ಜಪ್ತಿಯೂ ಆಗಬಹುದು ಎಂದು ಬೆದರಿಸಿದ್ದರು.
ಅನುಮಾನಗೊಂಡ ಪ್ರಸಾದ್ ಅವರು ಅಂತಹ ಯಾವುದೇ ಬಾಕಿ ಉಳಿಸಿಕೊಂಡಿಲ್ಲ ಎಂದು ಹೇಳಿ ಕರೆ ಕಡಿತ ಮಾಡಲು ಮುಂದಾಗಿದ್ದಾರೆ. ಆಗ ಅವರ ವಹಿವಾಟು ವಿವರ, ದೆಹಲಿಯಲ್ಲಿ ನಡೆಸುತ್ತಿರುವ ಕಂಪೆನಿಯ ವಿವರ ತಿಳಿಸಿದ್ದಾರೆ. ಆನಂತರ ಐಟಿ ಹಿರಿಯ ಅಧಿಕಾರಿ ವಿಕ್ರಂ ಸಿಂಗ್ ಎಂಬುವವರು ಮಾತನಾಡುತ್ತಾರೆ ಎಂದು ಅವರಿಗೆ ಕರೆ ವರ್ಗಾಯಿಸಿದ್ದಾರೆ. ನೀವು ದೆಹಲಿಯಲ್ಲಿ ಉದ್ಯಮ ಸ್ಥಾಪನೆಗೆ ರುಜುಗಳನ್ನು ದುರುಪಯೋಗಪಡಿಸಿಕೊಂಡಿದ್ದೀರಿ. ಈ ಬಗ್ಗೆ ಐಟಿ ಇಲಾಖೆಯಲ್ಲಿ ದೂರು ದಾಖಲಿಸಲಾಗಿದೆ. ಈ ಕಂಪೆನಿ ಮೇಲೆ ಹಣ ಅಕ್ರಮ ವಹಿವಾಟಿನ ಪ್ರಕರಣವೂ ಇದೆ. ಇದು ನಿಮಗೂ ತೊಂದರೆಯಾಗಲಿದೆ ಎಂದು ವಿವರಗಳನ್ನು ಹಿರಿಯ ಅಧಿಕಾರಿ ನೀಡಿದ್ದಾರೆ. ನೀವು ಐಟಿ ಬಾಕಿ 86 ಲಕ್ಷ ರೂ. ಉಳಿಸಿಕೊಂಡಿದ್ದೀರಿ. ಪಾವತಿಸದೇ ಇದ್ದರೆ ನಿಮ್ಮ ವಿರುದ್ದ ಪ್ರಕರಣ ದಾಖಲಿಸಿ ಬಂಧಿಸಲು ನಮ್ಮ ಸಿಬ್ಬಂದಿ ಬರಲಿದ್ದಾರೆ ಎನ್ನುವ ಭಯವನ್ನೂ ಹುಟ್ಟಿಸಿದ್ದಾರೆ. ಈ ಮಾಹಿತಿಯನ್ನು ಕುಟುಂಬದವವರು ಇಲ್ಲವೇ ಪರಿಚಯಸ್ಥರಿಗೆ ತಿಳಿಸಬೇಡಿ. ಇದರಿಂದ ನಿಮಗೆ ತೊಂದರೆಯಾಗಲಿದೆ. ನೀವು ಬಂಧನಕ್ಕೆ ಒಳಗಾಗುವುದು ಅವರಿಗೆ ತಿಳಿಯಬಾರದು ಎಂದರೆ ಯಾರೊಂದಿಗೆ ಮಾಹಿತಿ ಹಂಚಿಕೊಳ್ಳಬೇಡಿ ಎಂದು ಸೂಚಿಸಿದ್ದಾರೆ.ಅಲ್ಲದೇ ಹಲವಾರು ದಾಖಲೆಗಳನ್ನು ಐಟಿ ಇಲಾಖೆಯ ನಕಲಿ ಸಹಿ ಹಾಗೂ ಮೊಹರಿನೊಂದಿಗೆ ಅವರಿಗೆ ಕಳುಹಿಸಿದ್ದಾರೆ.
ದೆಹಲಿ ಕಂಪೆನಿ ವಹಿವಾಟು, ಐಟಿ ಬಾಕಿ ವಿವರ ಕೇಳಿದ ಜತೆಗೆ ದಾಖಲೆಗಳನ್ನು ಪಡೆದ ಪ್ರಸಾದ್ ಅವರು ಕರೆ ಮಾಡಿದವರ ಮಾಹಿತಿಗೆ ನಂಬಿ ತೆರಿಗೆ ಬಾಕಿ ಎಂದು 35,30,000 ರೂ.ಗಳನ್ನು ಹಂತ ಹಂತವಾಗಿ ಅವರು ತಿಳಿಸಿದ ಖಾತೆಗಳಿಗೆ ಹಾಕಿದ್ದಾರೆ.
ಬಾಕಿ ಪಾವತಿಸಿದ ಬಗ್ಗೆ ಬಿಲ್ ಸಹಿತ ಇತರೆ ವಿವರ ಪಡೆಯಲು ಪ್ರಸಾದ್ ಅವರು ನಿರಂತರ ಪ್ರಯತ್ನ ಮಾಡಿದ್ದಾರೆ. ಆದರೂ ಅತ್ತಕಡೆಯಿಂದ ಸಂಪರ್ಕವೇ ಸಿಕ್ಕಿಲ್ಲ. ಆಗ ತಾವು ಮೋಸ ಹೋಗಿರುವುದು ಅವರಿಗೆ ಖಚಿತವಾಗಿದೆ. ಬೆಂಗಳೂರಿನ ಸೆನ್ ಪೊಲೀಸರನ್ನು ಸಂಪರ್ಕಿಸಿದ ಪ್ರಸಾದ್ ಅವರು ದೂರು ದಾಖಲಿಸಿದ್ದಾರೆ.
ನಾನು ಮೊದಲು ಅವರ ಮಾತನ್ನು ಒಪ್ಪಲಿಲ್ಲ. ಆನಂತರ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿಸುವುದಾಗಿ ಹೇಳಿ ಕೆಲವು ದಾಖಲೆ ಕಳುಹಿಸಿದರು. ಕೊನೆಗೆ ಇರಬಹುದು ಎಂದು ಹಣ ವರ್ಗಾಯಿಸಿದ್ದೆ. ಮೋಸ ಹೋಗಿರುವುದರಿಂದ ನನ್ನ ಹಣ ವಾಪಾಸ್ ಕೊಡಿಸಿ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಡಿಜಿಟಲ್ ಅರೆಸ್ಟ್‌ಗೆ ಮುಂದಾಗುವ ವಂಚಕರು ಮೊದಲು ನಿಮ್ಮ ಕಂಪೆನಿ, ಅಲ್ಲಿನ ವಹಿವಾಟು, ಐಟಿ ಬಾಕಿ ಸಹಿತ ಹಲವು ವಿಷಯ ಸಂಗ್ರಹಿಸುತ್ತಾರೆ. ನೀವು ಏನಾದರೂ ತಪ್ಪು ಮಾಡಿದ್ದೀರಾ ಎನ್ನುವ ಜಾಡು ಹಿಡಿದುಕೊಂಡು ನಕಲಿ ದಾಖಲೆ ಸೃಷ್ಟಿಸುತ್ತಾರೆ. ಬ್ಯಾಂಕ್ ಖಾತೆಗಳಲ್ಲಿ ಇರುವ ಮೊತ್ತವನ್ನು ತಿಳಿದುಕೊಂಡು ವಂಚಿಸುತ್ತಾರೆ. ಮೊದಲು ಒಬ್ಬರು ಕರೆ ಮಾಡಿ ನಂತರ ಅಧಿಕಾರಿಕಾರಿ ಎಂದು ಹೇಳಿಕೊಂಡು ಇನ್ನೊಬ್ಬರಿಂದ ಮಾತನಾಡಿಸುತ್ತಾರೆ. ನೀವು ಕೊಂಚ ಗಲಬಿಲಿಗೊಂಡು ಏನಾದರೂ ಮಾಹಿತಿ ಕೊಟ್ಟರೆ ಭಯ ಹುಟ್ಟಿಸಿ ಹಣ ಕೀಳುತ್ತಾರೆ. ಡಿಜಿಟಲ್ ಅರೆಸ್ಟ್ ನಡೆಯುವುದೇ ಹೀಗೆ. ಇಂತಹ ಸಂದರ್ಭದಲ್ಲಿ ಕರೆ ಅಪರಿಚಿತವಾಗಿದ್ದರೆ ಸ್ವೀಕರಿಸಬೇಡಿ. ಅದನ್ನು ಬ್ಲಾಕ್ ಮಾಡಿ. ಹಣವನ್ನು ಹಾಕುವಾಗ ಹಲವು ಬಾರಿ ಯೋಚಿಸಿ. ಐಟಿ ಇಲ್ಲವೇ ಇತರೆ ಇಲಾಖೆಗಳು ಹೀಗೆ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಳ್ಳುವುದಿಲ್ಲ. ಈ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕು ಎನ್ನುವುದು ಬೆಂಗಳೂರು ಸಿಐಡಿ ವಿಭಾಗದ ಡಿವೈಎಸ್ಪಿ ಕೆ.ಎನ್.ಯಶವಂತಕುಮಾರ್ ನೀಡುವ ಸಲಹೆ.
