ದುಪ್ಪಟ್ಟು ಲಾಭದ ಆಮಿಷವೊಡ್ಡಿ ಬೆಂಗಳೂರಲ್ಲಿ 1.4 ಕೋಟಿ ರೂ ಸೈಬರ್ ವಂಚನೆ; ಬಾವನನ್ನೇ ಕೊಲೆ ಮಾಡಿದ್ದ ರೋಲ್ಡ್ ಗೋಲ್ಡ್ ಆಭರಣ ವ್ಯಾಪಾರಿ ಬಂಧನ
Bangalore Cyber Fraud: ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರಿಗೆ ಹೆಚ್ಚಿನ ಮೊತ್ತದ ಆಸೆ ತೋರಿಸಿ ಭಾರೀ ಹಣವನ್ನು ವಂಚಿಸಿರುವ ಸೈಬರ್ ಪ್ರಕರಣ ವರದಿಯಾಗಿದೆ.ವರದಿ: ಎಚ್.ಮಾರುತಿ. ಬೆಂಗಳೂರು

Bangalore Cyber Fraud: ಎಷ್ಟೇ ಜಾಗೃತಿ ಮೂಡಿಸಿದರೂ ಸೈಬರ್ ವಂಚನೆ ಪ್ರಕರಣಗಳು ಪದೇ ಪದೇ ವರದಿಯಾಗುತ್ತಲೇ ಇವೆ. ಬೆಂಗಳೂರಿನಲ್ಲಿ ಇದೇ ರೀತಿ ಸೈಬರ್ ವಂಚನೆಗೆ ಒಳಗಾಗಿದ್ದಾರೆ. ತಾವು ಸೂಚಿಸಿದ ರೀತಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ದೊರಕಲಿದೆ ಎಂದು ನಂಬಿಸಿ ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ 1.4 ಕೋಟಿ ರೂ ವಂಚಿಸಿರುವ ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಜಿ.ಪಿ. ನಗರದ ಏಳನೇ ಹಂತದ ನಿವಾಸಿಯಾಗಿರುವ ಎಂ.ಎಸ್.ದತ್ತರಾಮ್ ಎಂಬುವರು ದಕ್ಷಿಣ ವಿಭಾಗದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ-2008 ಹಾಗೂ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದತ್ತರಾಮ್ ಅವರು ಫೇಸ್‌ಬುಕ್‌ನಲ್ಲಿ ಬಂದಿದ್ದ ಜಾಹೀರಾತು ಗಮನಿಸಿ ಅದರ ಮೇಲೆ ಕ್ಲಿಕ್ ಮಾಡಿದ್ದರು. ಕೂಡಲೇ 'ವಿಐಪಿ ಡಿ-519' ಎಂಬ ಹೆಸರಿನ ವಾಟ್ಸ್ಆ್ಯಪ್ ಗುಂಪಿಗೆ ಅವರನ್ನು ಸೇರ್ಪಡೆ ಮಾಡಲಾಗಿತ್ತು. ಮೊದಲ ದಿನ ವಾಟ್ಸ್ ಆ್ಯಪ್ ಗುಂಪಿನಲ್ಲಿ ಹೂಡಿಕೆ ಕುರಿತು ಚರ್ಚೆ ನಡೆದಿತ್ತು. ಎರಡನೇ ದಿನ ಸೈಬರ್ ವಂಚಕನೊಬ್ಬ ವಾಟ್ಸ್‌ಆ್ಯಪ್ ಮೂಲಕ ಮೆಸೇಜ್ ಕಳುಹಿಸಿ, ತಾವು ತಿಳಿಸಿದಂತೆ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ದೊರೆಯಲಿದೆ ಎಂದು ಆಮಿಷವೊಡ್ಡಿದ್ದ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ನಂತರ ಲಿಂಕ್‌ವೊಂದನ್ನು ಕಳುಹಿಸಿ 'ಆರ್ಯನ್ ಫಿನ್' ಎನ್ನುವ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಸೂಚಿಸಿದ್ದ. ಅಪ್ಲಿಕೇಷನ್ ಡೌನ್‌ಲೋಡ್ ಆದ ಮೇಲೆ ಹೂಡಿಕೆ ಮಾಡುವಂತೆ ಹೇಳಿದ್ದ. ವಂಚಕನ ಮಾತು ನಂಬಿದ ದೂರುದಾರ, ತಮ್ಮ ವಿವಿಧ ಬ್ಯಾಂಕ್ ಖಾತೆಗಳಿಂದ ರೂ.1.4 ಕೋಟಿ ಹೂಡಿಕೆ ಮಾಡಿದ್ದರು. ಆದರೆ ಯಾವುದೇ ಲಾಭ ಅಥವಾ ಅಸಲನ್ನು ನೀಡಿರಲಿಲ್ಲ. ನಂತರ ದತ್ತರಾಮ್ ಅವರಿಗೆ ತಾವು ವಂಚನೆಗೊಳಗಾಗಿರುವುದು ಅವರಿವಾಗಿ ದೂರು ನೀಡಿದ್ದರು.
ಬಾವನನ್ನೇ ಕೊಲೆ ಮಾಡಿದ್ದ ವ್ಯಾಪಾರಿ ಸೆರೆ
ಕೆಟ್ಟ ಮಾತುಗಳಿಂದ ನಿಂದಿಸುತ್ತಿದ್ದರು ಎಂದು ಭಾವನನ್ನೇ ಕೊಲೆ ಮಾಡಿದ್ದ ರೋಲ್ಡ್ ಗೋಲ್ಡ್ ಆಭರಣ ವ್ಯಾಪಾರಿಯನ್ನು ಬೆಂಗಲೂರಿನ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಚಾಕುವಿನಿಂದ ತಮಿಳುನಾಡಿನ ವೆಂಕಟೇಶ್ ಎಂಬುವರನ್ನು ಕೊಲೆ ಮಾಡಿದ್ದ. ಕೊಲೆ ಆರೋಪಿ ರಾಮು (54) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಬಾವ ಮತ್ತು ಮೈದುನರಾದ ವೆಂಕಟೇಶ್ ಹಾಗೂ ರಾಮು ತಮಿಳುನಾಡಿನಿಂದ 'ರೋಲ್ಡ್ ಗೋಲ್ಡ್' ಅಭರಣಗಳನ್ನು ತಂದು ಮೆಜೆಸ್ಟಿಕ್ ಮತ್ತು ಸುತ್ತಮುತ್ತಲ ರಸ್ತೆಗಳಲ್ಲಿ ವ್ಯಾಪಾರ ಮಾಡುತ್ತಿದ್ದರು. ವೆಂಕಟೇಶ್ ಇತ್ತೀಚೆಗೆ ಕೆಟ್ಟ ಮಾತುಗಳಿಂದ ರಾಮುವನ್ನು ನಿಂದಿಸುತ್ತಿದ್ದ. ವೆಂಕಟೇಶ್ ಸಾಲವಾಗಿ ಪಡೆದಿದ್ದ 500 ರೂ ಹಣವನ್ನು ರಾಮುಗೆ ಮರಳಿಸಿರಲಿಲ್ಲ. ಇದೇ ವಿಚಾರಕ್ಕೆ ಕಳೆದ ವಾರ ಇಬ್ಬರ ನಡುವೆ ಶ್ರೀರಾಂಪುರದ ಬಾರ್ ವೊಂದರ ಬಳಿ ಜಗಳ ನಡೆದಿತ್ತು. ಜಗಳವಾಡಿಕೊಂಡೇ ಇಬ್ಬರೂ ಮೆಜೆಸ್ಟಿಕ್ ರೈಲು ನಿಲ್ದಾಣದ ಹಿಂದಿನ ಗೇಟ್ ಹತ್ತಿರ ಬಂದಿದ್ದರು. ಅಲ್ಲಿ ಗಲಾಟೆ ವಿಕೋಪಕ್ಕೆ ತಿರುಗಿದಾಗ ವೆಂಕಟೇಶ್‌ಗೆ ರಾಮು ಚಾಕುವಿನಿಂದ ಇರಿದು ಪರಾರಿ ಆಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ವೆಂಕಟೇಶ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಫೆ.10ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಮೃತ ವ್ಯಕ್ತಿಯ ಸಹೋದರ ರೈಲ್ವೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಚಿಕ್ಕಪೇಟೆಯಲ್ಲಿ ಅಡ್ಡಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ವೆಂಕಟೇಶ್ ಪದೇ ಪದೇ ಚುಚ್ಚು ಮಾತುಗಳಿಂದ ನಿಂದಿಸುತ್ತಿದ್ದ. ಇದರಿಂದ ನನಗೆ ಅವಮಾನವಾಗಿತ್ತು. ಆದ್ದರಿಂದ ಕೊಲೆ ಮಾಡಿದ್ದೇನೆ ಎಂದು ಆರೋಪಿ ರಾಮು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವ್ಹೀಲಿಂಗ್; 12 ವಾಹನ ಸವಾರರ ಬಂಧನ
ಬೆಂಗಳೂರು ನಗರದ ಸಂಚಾರ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ, ವ್ಹೀಲಿಂಗ್ ಮಾಡುತ್ತಿದ್ದ 12 ಮಂದಿಯನ್ನು ಬಂಧಿಸಿದ್ದಾರೆ. ವಿವಿಧ ಬಡಾವಣೆಗಳ ರಸ್ತೆಗಳು ಮತ್ತು ಮೇಲ್ಸೇತುವೆಗಳ ಮೇಲೆ ವ್ಹೀಲಿಂಗ್
ಮಾಡುತ್ತಿದ್ದ ಸವಾರರಿಂದ 10 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಜತೆಗೆ, 10 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲೂ ಇದೇ ರೀತಿಯ ಕಾರ್ಯಾಚರಣೆ ನಡೆಸಿ ವ್ಹೀಲಿಂಗ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ವರದಿ: ಎಚ್. ಮಾರುತಿ, ಬೆಂಗಳೂರು
