Bangalore News: ಒಂದೇ ಏಟಿಗೆ 13 ಮುದ್ದೆ ತಿಂದ ಭೂಪ, 9 ಮುದ್ದೆ ಸೇವಿಸಿದ ಮಹಿಳೆ ಸವಾಲ್; ಬೆಂಗಳೂರಲ್ಲಿ ಊಟದ ಜತೆ ಆಟದ ಗಮ್ಮತ್ತು ಹೀಗಿತ್ತು
ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದ ಊಟದ ಸ್ಪರ್ಧೆಯಲ್ಲಿ ಮುದ್ದೆಯನ್ನು ಮೆದ್ದ ದಾವಣಗೆರೆಯ ಯೋಗೇಶ್ ಹಾಗೂ ಬೆಂಗಳೂರಿನ ಸೌಮ್ಯ ಭರ್ಜರಿ ಪ್ರದರ್ಶನದೊಂದಿಗೆ ಬಹುಮಾನ ಪಡೆದರು.
ಬೆಂಗಳೂರು: ಕರ್ನಾಟಕದ ನಾನಾ ಭಾಗಗಳಲ್ಲೂ ಊಟದ ಸ್ಪರ್ಧೆಗಳು ಆಗಾಗ ನಡೆಯುತ್ತವೆ. ಅದರಲ್ಲೂ ಬೆಂಗಳೂರು, ಮೈಸೂರು, ತುಮಕೂರು, ಮಂಡ್ಯ ಭಾಗದಲ್ಲಿ ಮುದ್ದೆ ಊಟದ ಸ್ಪರ್ಧೆಯಂತೂ ವಿಶೇಷ ಸಂದರ್ಭದಲ್ಲಿ ಆಯೋಜನೆಗೊಳ್ಳುತ್ತದೆ. ಈಗಲೂ ಮುದ್ದೆಯಿಲ್ಲದೇ ಊಟವೇ ಇಲ್ಲ ಎನ್ನುವವರು ಇದ್ದಾರೆ. ಅದನ್ನು ಸ್ಪರ್ಧೆಗಳಲ್ಲೂ ಸಾಬೀತು ಮಾಡಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರ ಇಂತಹದೇ ಊಟದ ಸ್ಪರ್ಧೆ. ಎಲ್ಲರೂ ನಾವೇನೂ ಯಾರಿಗೂ ಕಡಿಮೆ ಎನ್ನುವಂತೆ ಭರ್ಜರಿ ಊಟ ಮಾಡಿದರು. ಪುರುಷರು ಹಾಗೂ ಮಹಿಳೆಯರು ಎನ್ನದೇ ಎಲ್ಲರೂ ಸ್ಪರ್ಧೆಯಲ್ಲಿ ಭಾಗಿಯಾಗಿ ತಮ್ಮ ಹೊಟ್ಟೆಯ ಜತೆಗೆ ದೈಹಿಕ ಸಾಮರ್ಥ್ಯವನ್ನೂ ಸಾಬೀತುಪಡಿಸಿದರು. ಬೆಂಗಳೂರಿನ ಎಚ್‌ಎಸ್‌ಆರ್ ಬಡಾವಣೆ ವ್ಯಾಪ್ತಿಯಲ್ಲಿರುವ ಪರಂಗಿಪಾಳ್ಯದಲ್ಲಿ ಭಾನುವಾರ ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಆಯೋಜಿಸಲಾಗಿದ್ದ ರಾಗಿ ಮುದ್ದೆ ಹಾಗೂ ನಾಟಿ ಕೋಳಿ ಊಟದ ಸ್ಪರ್ಧೆಯಲ್ಲಿ ಹಲವರು ಭಾಗಿಯಾದರು. ಭರ್ಜರಿ ಊಟ ಸವಿದು ಬಹುಮಾನಗಳನ್ನು ಗೆದ್ದುಕೊಂಡರು.
ಬಹುಮಾನ ಯಾರಿಗೆ
ಈ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ದಾವಣಗೆರೆ ಮೂಲದ ಯೋಗೇಶ್ ಎನ್ನುವವರು ಭರ್ಜರಿ 13 ಮುದ್ದೆ ಜತೆಗೆ ನಾಟಿ ಕೋಳಿ ಸಿವದು ಮೊದಲ ಬಹುಮಾನ ಪಡೆದುಕೊಂಡರು. ಬೆಂಗಳೂರು ವೈಟ್‌ಫೀಲ್ಡ್‌ನವರಾದ ಸೌಮ್ಯ ಎನ್ನುವವರು ಮಹಿಳೆಯರ ವಿಭಾಗದಲ್ಲಿ 9 ಮುದ್ದೆ ಮೆದ್ದು ಬಹುಮಾನ ತಮ್ಮದಾಗಿಸಿಕೊಂಡರು.
ಬೆಂಗಳೂರು, ಕೋಲಾರ, ರಾಮನಗರ, ತುಮಕೂರು,ದಾವಣಗೆರೆ ಜಿಲ್ಲೆಗಳಿಂದಲೂ ಈ ಸ್ಪರ್ಧೆಯಲ್ಲಿ ಊಟ ಪ್ರಿಯರು ಭಾಗಿಯಾದ್ದರು. ಪುರುಷರು ಹಾಗು ಮಹಿಳೆಯರ ವಿಭಾಗದಲ್ಲಿ ಸ್ಪರ್ಧೆಗಳು ನಡೆದವು. ಅತಿ ಹೆಚ್ಚು ಮುದ್ದೆ ತಿನ್ನುವವರಿಗೆ ಬಹುಮಾನವಿತ್ತು. ದಾವಣಗೆರೆ ಯೋಗೇಶ್ 13 ಮುದ್ದೆ ತಿಂದು ಟಗರು ತಮ್ಮದಾಗಿಸಿಕೊಂಡರೆ, ಬೆಂಗಳೂರಿನ ಶ್ರೀನಿವಾಸರೆಡ್ಡಿ ಹನ್ನೆರಡೂವರೆ ಮುದ್ದೆ, ಕುಣಿಗಲ್‌ನ ಲೋಕೇಶ್ 12 ಮುದ್ದೆಯೊಂದಿಗೆ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದುಕೊಂಡರು. ಶ್ರೀನಿವಾಸ ರೆಡ್ಡಿಗೆ ಕುರಿ ಮರಿ, ಲೋಕೇಶ್‌ಗೆ ಎರಡು ನಾಟಿ ಕೋಳಿಗಳು ದೊರೆತವು.
ಮಹಿಳೆಯರೂ ಮುಂದೆ
ಸೌಮ್ಯ ಅವರು 9 ಮುದ್ದೆಯೊಂದಿಗೆ ಮಹಿಳೆಯರ ವಿಭಾಗದ ಬಹುಮಾನ ಪಡೆದು ಟಿವಿಯನ್ನು ತಮ್ಮದಾಗಿಸಿಕೊಂಡರು. ಮಹಿಳೆಯರ ವಿಭಾಗದಲ್ಲಿ ಚಂದ್ರಕಲಾ ಎಂಟು ಮುದ್ದೆ ಹಾಗೂ ಕವಿತಾ ಕ್ರಮವಾಗಿ ಏಳು ಮುದ್ದೆಗಳನ್ನು ಸೇವಿಸಿ ಎರಡು ಹಾಗೂ ಮೂರನೇ ಸ್ಥಾನ ಪಡೆದರು. ಅವರಿಗೂ ಮಿಕ್ಸರ್ ಗ್ರೇಂಡರ್ ಹಾಗೂ ಕಿಚನ್ ಸೆಟ್‌ಗಳು ಬಹುಮಾನಗಳಾಗಿ ದೊರೆತವು.
ಆಯೋಜನೆ ಏಕೆ
ಕಾರ್ಯಕ್ರಮ ಸಂಘಟಕ ಅನಿಲ್ ರೆಡ್ಡಿ ಅವರ ಪ್ರಕಾರ, ಭಾರತದಲ್ಲಿ ಈಗಲೂ ನಮ್ಮದೇ ಆಹಾರ ಪದ್ದತಿ ಗಟ್ಟಿಯಾಗಿದೆ. ದೇಸಿ ಆಹಾರ ಪದ್ದತಿಗೆ ಉತ್ತೇಜನ ನೀಡಬೇಕು ಎನ್ನುವ ಆಶಯದೊಂದಿಗೆ ಇಂತಹ ಸ್ಪರ್ಧೆಯನ್ನು ಆಯೋಜಿಸಿಕೊಂಡು ಬರುತ್ತಿದ್ದೇವೆ. ಈಗಿನ ಜಂಕ್ ಫುಡ್‌ನಿಂದಾಗಿ ಅನಾರೋಗ್ಯತೆ ಕಾಡುತ್ತಿದೆ. ಆರ್ಥಿಕವಾಗಿಯೂ ಹೊರೆ ಬೀಳುತ್ತಿದೆ. ಉತ್ತಮ ಶೈಲಿಯ ಮನೆಯಲ್ಲಿ ಮಾಡಿದ ಆಹಾರ ಸೇವಿಸುವುದು ಎನ್ನುವ ಕಾರಣಕ್ಕೆ ಸ್ಪರ್ಧೆ ನಡೆಸಿದ್ದು ಉತ್ತಮ ಪ್ರತಿಕ್ರಿಯೆ ದೊರೆತಿದೆ ಎನ್ನುತ್ತಾರೆ.\
ವಿಧಾನಪರಿಷತ್ ಸದಸ್ಯ ರಾಮೋಜಿಗೌಡ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ಮುಖಂಡರಾದ ಶ್ರೀನಿವಾಸಗೌಡ, ಉಮಾಪತಿ, ನಾರಾಯಣಗೌಡ ವಾಸುದೇವ ರೆಡ್ಡಿ ಮತ್ತಿತರರು ಹಾಜರಿದ್ದರು. ನೂರಕ್ಕೂ ಅಧಿಕ ಸ್ಪರ್ಧಿಗಳು ಊಟದ ಸ್ಪರ್ಧೆಯಲ್ಲಿ ಭಾಗಿಯಾದರು.