ಬೆಂಗಳೂರಿನಲ್ಲಿ 4000 ಕೋಟಿ ರೂ. ಮೌಲ್ಯದ 128 ಎಕರೆ ಅರಣ್ಯ ಒತ್ತುವರಿ ತೆರವು, ದೀರ್ಘಾವಧಿ ಗುತ್ತಿಗೆ ಭೂಮಿ ವಶಕ್ಕೂ ಮುಂದಾದ ಅರಣ್ಯ ಇಲಾಖೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಲ್ಲಿ 4000 ಕೋಟಿ ರೂ. ಮೌಲ್ಯದ 128 ಎಕರೆ ಅರಣ್ಯ ಒತ್ತುವರಿ ತೆರವು, ದೀರ್ಘಾವಧಿ ಗುತ್ತಿಗೆ ಭೂಮಿ ವಶಕ್ಕೂ ಮುಂದಾದ ಅರಣ್ಯ ಇಲಾಖೆ

ಬೆಂಗಳೂರಿನಲ್ಲಿ 4000 ಕೋಟಿ ರೂ. ಮೌಲ್ಯದ 128 ಎಕರೆ ಅರಣ್ಯ ಒತ್ತುವರಿ ತೆರವು, ದೀರ್ಘಾವಧಿ ಗುತ್ತಿಗೆ ಭೂಮಿ ವಶಕ್ಕೂ ಮುಂದಾದ ಅರಣ್ಯ ಇಲಾಖೆ

ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ಅರಣ್ಯ ಒತ್ತುವರಿ ಭೂಮಿ ಮಾತ್ರವಲ್ಲದೇ ಕರ್ನಾಟಕದ ನಾನಾ ಭಾಗಗಳಲ್ಲೂ ಕೋಟ್ಯಂತರ ರೂ. ಬೆಲೆ ಬಾಳುವ ಒತ್ತುವರಿ ಭೂಮಿಯನ್ನು ಅರಣ್ಯ ಇಲಾಖೆಯಿಂದ ತೆರವುಗೊಳಿಸಲಾಗಿದೆ.

ಬೆಂಗಳೂರು ಸೇರಿದಂತೆ ಕರ್ನಾಟಕದ ನಾನಾ ಭಾಗಗಳಲ್ಲಿ ಅರಣ್ಯ ಒತ್ತುವರಿ ತೆರವು ಮಾಡಿಸಿರುವುದಾಗಿ ಸಚಿವ ಈಶ್ವರ ಖಂಡ್ರೆ ತಿಳಿಸಿದ್ಧಾರೆ.
ಬೆಂಗಳೂರು ಸೇರಿದಂತೆ ಕರ್ನಾಟಕದ ನಾನಾ ಭಾಗಗಳಲ್ಲಿ ಅರಣ್ಯ ಒತ್ತುವರಿ ತೆರವು ಮಾಡಿಸಿರುವುದಾಗಿ ಸಚಿವ ಈಶ್ವರ ಖಂಡ್ರೆ ತಿಳಿಸಿದ್ಧಾರೆ.

ಬೆಂಗಳೂರು ಮಹಾನಗರದಲ್ಲಿ ಹೆಚ್ಚಿರುವ ಅರಣ್ಯ ಭೂಮಿ ಒತ್ತುವರಿಗೆ ಚಾಲನೆ ನೀಡಲಾಗಿದ್ದು, ತ್ವರಿತಗತಿಯಲ್ಲಿ ಸಾಗಿದೆ. ಭೂಮಿಗೆ ಬಂಗಾರದ ಬೆಲೆ ಇದೆ. ಇಲ್ಲಿ ಹಲವು ದಶಕದಿಂದ ಅರಣ್ಯ ಭೂಮಿ ಒತ್ತುವರಿ ಆಗಿದ್ದು, 2 ವರ್ಷದಲ್ಲಿ ಸುಮಾರು 4000 ಕೋಟಿ ರೂ. ಮಾರುಕಟ್ಟೆ ಮೌಲ್ಯದ 128 ಎಕರೆ ಅರಣ್ಯ ಒತ್ತುವರಿಯನ್ನು ತೆರವು ಮಾಡಿಸಲಾಗಿದೆ. ಕಳೆದ 2 ವರ್ಷಗಳಲ್ಲಿ 1205 ಒತ್ತುವರಿ ಪ್ರಕರಣಗಳಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ 6251.31 ಎಕರೆ ಅರಣ್ಯ ತೆರವು ಮಾಡಿಸಲಾಗಿದೆ.ಹಳೆ ಮೈಸೂರು ಭಾಗದಲ್ಲಿ ಬ್ರಿಟಿಷರ ಕಾಲದಲ್ಲಿ ವಿವಿಧ ವ್ಯಕ್ತಿ, ಸಂಸ್ಥೆಗಳಿಗೆ ಸುಮಾರು 5050 ಎಕರೆ ಅರಣ್ಯ ಭೂಮಿಯನ್ನು ದೀರ್ಘಕಾಲದ (999 ವರ್ಷ) ಗುತ್ತಿಗೆ ನೀಡಲಾಗಿತ್ತು. ಈ 999 ವರ್ಷದ ಗುತ್ತಿಗೆ ಅವಧಿಯನ್ನು ಸರ್ಕಾರ 99 ವರ್ಷಕ್ಕೆ ಇಳಿಕೆ ಮಾಡಿ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಈಗ ಇವುಗಳಲ್ಲಿ ಕೆಲವು ಗುತ್ತಿಗೆ ಅವಧಿ ಮುಗಿದಿದ್ದರೂ ಅರಣ್ಯ ಇಲಾಖೆಗೆ ಜಮೀನು ಬಿಟ್ಟುಕೊಡದೇ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ಎಲ್ಲ ಭೂಮಿ ಹಿಂಪಡೆಯಲು ಮತ್ತು ಆ ಸಂಸ್ಥೆಗಳಿಂದ ಇಲಾಖೆಗೆ ಬರಬೇಕಾದ ಸಾವಿರಾರು ಕೋಟಿ ರೂ. ಬಾಕಿ ವಸೂಲಿಗೆ ಕಾನೂನು ಹೋರಾಟ ಮಾಡಲಾಗುತ್ತಿದೆ. ಹೈಕೋರ್ಟ್ ನಲ್ಲಿ ಈ ಪ್ರಕರಣಗಳ ಅರ್ಜಿಯ ವಿಚಾರಣೆ ಹಂತದಲ್ಲಿದೆ.

ಎರಡು ವರ್ಷದ ಅವಧಿ ಪೂರೈಸಿದ ಹಿನ್ನೆಲೆಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ ಸಾಧನೆಯ ವಿವರ ನೀಡಿದರು.

ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್.ಎಂ.ಟಿ. ತನ್ನ ವಶದಲ್ಲಿರುವ ಸುಮಾರು 14,300 ಕೋಟಿ ರೂ. ಮೌಲ್ಯದ 444 ಎಕರೆ ಅರಣ್ಯ ಭೂಮಿಯನ್ನು ರಿಯಲ್ ಎಸ್ಟೇಟ್ ಸಂಸ್ಥೆಗಳು ಸೇರಿದಂತೆ ಹಲವು ಸಂಸ್ಥೆಗಳಿಗೆ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಈ ಅರಣ್ಯ ಜಮೀನು ಹಿಂಪಡೆದು, ಉದ್ಯಾನವಾಗಿ ಉಳಿಸಿಕೊಳ್ಳಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಕಾನೂನು ಹೋರಾಟ ನಡೆದಿದೆ ಎಂದು ತಿಳಿಸಿದರು.

ಡೀಮ್ಡ್ ಅರಣ್ಯ ಗೊಂದಲ ನಿವಾರಣೆಗೆ ಕ್ರಮ

ನಿರ್ದಿಷ್ಟ ಕ್ಷೇತ್ರೀಯ ಮಾನದಂಡಗಳ ರೀತ್ಯ ಜಿಲ್ಲಾಮಟ್ಟದ ಸಮಿತಿಗಳ ಶಿಫಾರಸಿನಂತೆ 3,30,186.93 ಹೆಕ್ಟೇರ್ ಪ್ರದೇಶವನ್ನು ಪರಿಭಾವಿತ ಅರಣ್ಯ ಅಥವಾ ಡೀಮ್ಡ್ ಫಾರೆಸ್ಟ್ ಎಂದು ಅಧಿಸೂಚಿಸಲಾಗಿದೆ. ಹೀಗೆ ಗುರುತಿಸಿರುವ ಭೂಮಿಯಲ್ಲಿ ಸರ್ಕಾರಿ ಕಚೇರಿ, ಆಸ್ಪತ್ರೆ, ಪಟ್ಟಾ ಜಮೀನು ಇರುವ ಕಾರಣ ಸುಪ್ರೀಂಕೋರ್ಟ್ ಗೆ ಮನವಿ ಮಾಡಲಾಗಿದ್ದು, ಸಮಿತಿ ರಚಿಸಿ ಪರಿಷ್ಕರಣೆ ಮಾಡಿ ಸಲ್ಲಿಸಲು ಸೂಚಿಸಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ಈಗ ಕೊನೆಯ ಅವಕಾಶ ಇದ್ದು, ಪರಿಭಾವಿತ ಅರಣ್ಯ ಎಂದು ಈಗಾಗಲೇ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಪ್ರದೇಶದ ಪೈಕಿ ಕೈಬಿಡುವ ಪ್ರದೇಶಕ್ಕೆ ಪರ್ಯಾಯವಾಗಿ ಬೇರೆ ಜಮೀನು ನೀಡಿ ಪರಿಭಾವಿತ ಪ್ರದೇಶದ ವ್ಯಾಪ್ತಿಯನ್ನು 3,30,186.93 ಹೆಕ್ಟೇರ್ ಉಳಿಸಿಕೊಂಡು, ಪರಿಹಾರ ಒದಗಿಸಲು ತೀರ್ಮಾನಿಸಲಾಗಿದೆ. ಈ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

15 ಸಾವಿರ ಎಕರೆ ಅರಣ್ಯ ಹೆಚ್ಚಳ

ರಾಜ್ಯದಲ್ಲಿ ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಆದರೆ ಅದಕ್ಕೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳವಾಗುತ್ತಿಲ್ಲ. ಇದನ್ನು ಮನಗಂಡು, ನಾನು ಅರಣ್ಯ ಸಚಿವನಾದ ಬಳಿಕ ಅರಣ್ಯ ವಿಸ್ತರಣೆಗೆ ಕ್ರಮ ವಹಿಸಿದ್ದು, 2 ವರ್ಷದಲ್ಲಿ 15000 ಎಕರೆಗೂ ಹೆಚ್ಚು ಭೂಮಿಯನ್ನು ಅರಣ್ಯ ಎಂದು ಅಧಿಸೂಚನೆ ಮಾಡಲಾಗಿದೆ.

ಹೆಸರಘಟ್ಟ ಹುಲ್ಲುಗಾವಲು- ಹಲವು ದಶಕಗಳ ಬೇಡಿಕೆ ಈಡೇರಿಕೆ

ಬೆಂಗಳೂರು ನಗರದ ಹೆಸರಘಟ್ಟದಲ್ಲಿ ಅಪರೂಪದ ಹುಲ್ಲುಗಾವಲಿದೆ. ಇದು ನೂರಾರು ಪ್ರಭೇದದ ಪಕ್ಷಿಗಳ ಸಂತಾನೋತ್ಪತ್ತಿಯ ತಾಣವಾಗದ್ದು, ಇಷ್ಟು ಸುಂದರ ಪರಿಸರ ಉಳಿಸಲು ದಶಕಗಳಿಂದ ಹೋರಾಟ ನಡೆದಿತ್ತು. ತಾವು ಸಚಿವನಾದ ಬಳಿಕ, ಹಲವು ಒತ್ತಡದ ನಡುವೆಯೂ ಹೆಸರುಘಟ್ಟ ಕೆರೆ ಸುತ್ತಮುತ್ತಲ್ಲಿರುವ ಅಪರೂಪದ ಹುಲ್ಲುಗಾವಲು ರಕ್ಷಣೆಗಾಗಿ 5678 ಎಕರೆ ಪ್ರದೇಶವನ್ನು ಗ್ರೇಟರ್ ಹೆಸರುಘಟ್ಟ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಿದ್ದಾಗಿ ತಿಳಿಸಿದರು.

ಚಿರತೆ ಸಫಾರಿಗೆ ಉತ್ತಮ ಸ್ಪಂದನೆ

ಬೆಂಗಳೂರಿಗೆ ಸಮೀಪದಲ್ಲೇ ಇರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆ ಸಫಾರಿ ಆರಂಭಿಸಬೇಕೆಂಬ ಬೇಡಿಕೆ ಇತ್ತು, ತಾವು ಸಚಿವನಾದ ತರುವಾಯ ಇದಕ್ಕೆ ಚಾಲನೆ ನೀಡಿದ್ದು, ಇದು ಜನಾಕರ್ಷಣೆಯ ಕೇಂದ್ರವಾಗಿದೆ. ಉದ್ಯಾನಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದರು.

ಆನೆ ನಿಯಂತ್ರಣಕ್ಕೆ ರೈಲ್ವೆ ಬ್ಯಾರಿಕೇಡ್

ಕಾಡಿನಿಂದ ನಾಡಿಗೆ ಕಾಡಾನೆಗಳು ಬಾರದಂತೆ ತಡೆಯಲು ಆನೆ ಕಂದಕ, ಸೌರ ತಂತಿ ಬೇಲಿ ಮತ್ತು ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ. ನಾನು ಅರಣ್ಯ ಸಚಿವನಾಗುವವರೆಗೆ ಅಂದರೆ 2023ರ ಜೂನ್ ವರೆಗೆ ರಾಜ್ಯದಲ್ಲಿ 312.918 ಕಿ.ಮೀ ಮಾತ್ರ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಆದರೆ ಕಳೆದ 2 ವರ್ಷದಲ್ಲಿ 115.085 ಕಿ.ಮೀ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಪೂರ್ಣಗೊಳಿಸಲಾಗಿದ್ದು, ಇನ್ನೂ 193 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ಅನುಮೋದನೆ ನೀಡಲಾಗಿದೆ ಎಂದು ವಿವರ ನೀಡಿದರು.

ಅರಣ್ಯದಂಚಿನಲ್ಲಿ ಅಳವಡಿಸಲಾಗಿರುವ ರೈಲ್ವೆ ಬ್ಯಾರಿಕೇಡ್ ಗೆ ಹೊಂದಿಕೊಂಡಂತೆ ಬಿದಿರು ಮತ್ತು ಕತ್ತಾಳೆ ಬೆಳೆಸಿದರೆ ಅದು ಜೈವಿಕ ಮತ್ತು ಸ್ವಾಭಾವಿಕ ಬ್ಯಾರಿಕೇಡ್ ನಂತೆ ಕಾರ್ಯ ನಿರ್ವಹಿಸುತ್ತದೆ. ಅರಣ್ಯ ಒತ್ತುವರಿಯನ್ನೂ ತಡೆಯುತ್ತದೆ. ಜೊತೆಗೆ ಆನೆಗಳಿಗೆ ಆಹಾರವೂ ಆಗುತ್ತದೆ.

ಆನೆಗಳನ್ನು ಮರಳಿ ಕಾಡಿಗೆ ಕಳುಹಿಸಲು ಮತ್ತು ಚಿರತೆಗಳನ್ನು ಸೆರೆ ಹಿಡಿಯಲು ಕಳೆದ 2 ವರ್ಷದಲ್ಲಿ ಹೊಸದಾಗಿ 2 ಆನೆ ಕಾರ್ಯಪಡೆ ಹಾಗೂ 1 ಚಿರತೆ ಕ್ಷಿಪ್ರ ಕಾರ್ಯಪಡೆ ರಚಿಸಲಾಗಿದೆ ಎಂದು ತಿಳಿಸಿದರು.

ಹಾಸನ, ಚಿಕ್ಕಮಗಳೂರು ಮತ್ತು ರಾಜ್ಯದ ಇತರ ಭಾಗಗಳಲ್ಲಿ ಸಾರ್ವಜನಿಕರಿಗೆ ಉಪಟಳ ನೀಡುತ್ತಿದ್ದ ಪುಂಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರಿಸಲಾಗಿದೆ ಎಂದರು.

ಸೆರೆ ಹಿಡಿದ ಆನೆಗಳಿಗೆ ಅಳವಡಿಸಲು ಇಷ್ಟು ದಿನ ವಿದೇಶದಿಂದ ಭಾರವಾದ ರೆಡಿಯೋ ಕಾಲರ್ ಖರೀದಿಸಲಾಗುತ್ತಿತ್ತು. ಈಗ ದೇಶೀಯವಾಗಿ ರೇಡಿಯೋ ಕಾಲರ್ ಅಭಿವೃದ್ಧಿ ಪಡಿಸಲಾಗಿದ್ದು, ಇವುಗಳ ಅಳವಡಿಕೆ ಮಾಡಲಾಗುತ್ತಿದೆ.

ಆನೆ ಸೆರೆ ಕಾರ್ಯಾಚರಣೆ ವೇಳೆ ಹುತಾತ್ಮನಾದ ದಸರಾ ಆನೆ ಅರ್ಜುನನಿಗೆ ಬಳ್ಳೆ ಶಿಬಿರದಲ್ಲಿ ಮತ್ತು ಯಸಳೂರು ಬಳಿ ಸ್ಮಾರಕ ನಿರ್ಮಿಸಲು ಕ್ರಮವಹಿಸಲಾಗಿದ್ದು, ಸ್ಮಾರಕ ಸಿದ್ಧವಾಗಿದೆ. ಮುಂದಿನ ತಿಂಗಳು ಇದರ ಲೋಕಾರ್ಪಣೆ ನೆರವೇರಲಿದೆ ಎಂದು ತಿಳಿಸಿದರು.

ಸಿಬ್ಬಂದಿ ನೇಮಕಾತಿ

ಅರಣ್ಯ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆಗೆ ಹಾಗೂ ರಾಜ್ಯದ ಹಸಿರು ಹೊದಿಕೆ ಹೆಚ್ಚಿಸಲು ಸಿಬ್ಬಂದಿ ಸೇವೆ ಅತಿ ಮುಖ್ಯವಾಗಿದ್ದು, ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗಿದೆ.

310 ಅರಣ್ಯ ವೀಕ್ಷಕರ ಹುದ್ದೆಗಳ ಭರ್ತಿಗೆ ಪ್ರಕ್ರಿಯೆ ನಡೆದು 265 ಜನರಿಗೆ ನೇಮಕಾತಿ ಪತ್ರ ನೀಡಲಾಗಿದೆ. 540 ಅರಣ್ಯ ರಕ್ಷಕರ ಮತ್ತು ಇನ್ನಿತರ ಉದ್ದೆಗಳ ನೇಮಕಾತಿಗೆ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ತಿಳಿಸಿದರು.

ಅರಣ್ಯವಾಸಿಗಳ ಸ್ವಯಂ ಇಚ್ಛೆಯಂತೆ ಸ್ಥಳಾಂತರ

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕು ಭೀಮಗಢ ಅರಣ್ಯದೊಳಗೆ ಹಲವು ದಶಕಗಳಿಂದ ವಾಸಿಸುತ್ತಿದ್ದ 27 ಕುಟುಂಬಗಳು ಸ್ವಯಂ ಪ್ರೇರಿತವಾಗಿ ಅರಣ್ಯದಿಂದ ಹೊರಬಂದು ಮುಖ್ಯವಾಹಿನಿಗೆ ಸೇರಲು ಬಯಸಿದ ಹಿನ್ನೆಲೆಯಲ್ಲಿ. ಪ್ರತಿ ಕುಟುಂಬ ಘಟಕಕ್ಕೆ ತಲಾ 15 ಲಕ್ಷ ರೂ. ಹಣವನ್ನು ರಾಜ್ಯ ಕಾಂಪಾನಿಧಿಯಿಂದ ನೀಡಿ ಸ್ಥಳಾಂತರ ಮಾಡಲಾಗುತ್ತಿದ್ದು, ಇತ್ತೀಚೆಗೆ ಪ್ರಥಮ ಕಂತಿನ 10 ಲಕ್ಷ ರೂ. ಚೆಕ್ ಅನ್ನು ವಿತರಿಸಲಾಗಿದೆ. ಹುಲಿ ಸಂರಕ್ಷಿತ ಪ್ರದೇಶವಲ್ಲದ ಅರಣ್ಯದಲ್ಲಿ ನಡೆದ ಪ್ರಥಮ ಸ್ಥಳಾಂತರ ಇದಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ಪರಿಸರ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗಿದ್ದು, ರಾಜ್ಯದ ಎಲ್ಲ ಚಾರಣ ಪಥಗಳ ಬುಕ್ಕಿಂಗ್ ಅನ್ನು ಆನ್ ಲೈನ್ ಮಾಡಲಾಗಿದೆ, ಅರಣ್ಯ ಅಪರಾಧಗಳನ್ನು ತಡೆಯಲು ಮತ್ತು ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಲು ಗರುಡಾಕ್ಷಿ – ಆನ್ ಲೈನ್ ಎಫ್.ಐ.ಆರ್. ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.

ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಜುಂ ಪರ್ವೇಜ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಪಿಸಿಸಿಎಫ್‌ ಬಿ.ಪಿ.ರವಿ, ಎ.ರಾಧಾದೇವಿ, ಪಿ.ಸಿ.ರೇ ಮತ್ತಿತರರು ಉಪಸ್ಥಿತರಿದ್ದರು.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.