ಬೆಂಗಳೂರಲ್ಲಿ ಗೋಲ್‌ಗಪ್ಪಾ ರುಚಿ ಹೆಚ್ಚಳಕ್ಕೆ ಯೂರಿಯಾ ಬಳಕೆ ಆರೋಪ; 200ಕ್ಕೂ ಹೆಚ್ಚು ಮಾದರಿ ಸಂಗ್ರಹಿಸಿದ ಆಹಾರ ಇಲಾಖೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಲ್ಲಿ ಗೋಲ್‌ಗಪ್ಪಾ ರುಚಿ ಹೆಚ್ಚಳಕ್ಕೆ ಯೂರಿಯಾ ಬಳಕೆ ಆರೋಪ; 200ಕ್ಕೂ ಹೆಚ್ಚು ಮಾದರಿ ಸಂಗ್ರಹಿಸಿದ ಆಹಾರ ಇಲಾಖೆ

ಬೆಂಗಳೂರಲ್ಲಿ ಗೋಲ್‌ಗಪ್ಪಾ ರುಚಿ ಹೆಚ್ಚಳಕ್ಕೆ ಯೂರಿಯಾ ಬಳಕೆ ಆರೋಪ; 200ಕ್ಕೂ ಹೆಚ್ಚು ಮಾದರಿ ಸಂಗ್ರಹಿಸಿದ ಆಹಾರ ಇಲಾಖೆ

ಗೋಬಿ ಮಂಚೂರಿ ಬಳಿಕ ಗೋಲ್‌ಗಪ್ಪಾ ಸುದ್ದಿಯ ಕೇಂದ್ರ ಬಿಂದು. ಬೆಂಗಳೂರಲ್ಲಿ ಗೋಲ್‌ಗಪ್ಪಾ ರುಚಿ ಹೆಚ್ಚಳಕ್ಕೆ ಯೂರಿಯಾ ಬಳಕೆ ಆರೋಪ ಎದುರಾಗಿದ್ದು, ಕರ್ನಾಟಕದ ಆಹಾರ ಇಲಾಖೆ 200ಕ್ಕೂ ಹೆಚ್ಚು ಮಾದರಿ ಸಂಗ್ರಹಿಸಿದೆ.

ಗೋಲ್‌ಗಪ್ಪಾ ರುಚಿ ಹೆಚ್ಚಳ; ಬೆಂಗಳೂರಲ್ಲಿ ಗೋಲ್‌ಗಪ್ಪಾ ರುಚಿ ಹೆಚ್ಚಳಕ್ಕೆ ಯೂರಿಯಾ ಬಳಕೆ ಆರೋಪ ವ್ಯಕ್ತವಾಗಿದ್ದು, ಆಹಾರ ಇಲಾಖೆ 200ಕ್ಕೂ ಹೆಚ್ಚು ಮಾದರಿ ಸಂಗ್ರಹಿಸಿದೆ. (ಸಾಂಕೇತಿಕ ಚಿತ್ರ)
ಗೋಲ್‌ಗಪ್ಪಾ ರುಚಿ ಹೆಚ್ಚಳ; ಬೆಂಗಳೂರಲ್ಲಿ ಗೋಲ್‌ಗಪ್ಪಾ ರುಚಿ ಹೆಚ್ಚಳಕ್ಕೆ ಯೂರಿಯಾ ಬಳಕೆ ಆರೋಪ ವ್ಯಕ್ತವಾಗಿದ್ದು, ಆಹಾರ ಇಲಾಖೆ 200ಕ್ಕೂ ಹೆಚ್ಚು ಮಾದರಿ ಸಂಗ್ರಹಿಸಿದೆ. (ಸಾಂಕೇತಿಕ ಚಿತ್ರ) (Pexels/ X)

ಬೆಂಗಳೂರು: ಆಹಾರಗಳ ರುಚಿ ಹೆಚ್ಚಿಸುವುದಕ್ಕೆ ರಾಸಾಯನಿಕ, ಕೃತಕ ಬಣ್ಣ ಇತ್ಯಾದಿಗಳ ಬಳಕೆ ಹೆಚ್ಚಾದ ಕಾರಣ ಆರೋಗ್ಯ ಸಮಸ್ಯೆಗಳು ಕೂಡ ಹೆಚ್ಚಾಗುತ್ತಿವೆ. ಇದನ್ನು ಮನಗಂಡ ಸರ್ಕಾರ ಈಗಾಗಲೇ ಗೋಬಿ ಮಂಚೂರಿಗೆ ಕೃತಕ ಬಣ್ಣ, ರಾಸಾಯನಿಕ ಬಳಸದಂತೆ ನಿಷೇಧ ಹೇರಿತ್ತು. ಈಗ ಗೋಲ್‌ಗಪ್ಪದ ಪಾನಿಗೆ ಯೂರಿಯಾ, ಹಾರ್ಪಿಕ್ ಇತ್ಯಾದಿ ಬಳಸುತ್ತಿರುವ ದೃಶ್ಯಗಳು ವೈರಲ್ ಆಗಿದ್ದು, ಈ ಹಿನ್ನೆಲೆಯಲ್ಲಿ ಗೋಲ್‌ಗಪ್ಪಾ ತಿನ್ನುವುದಕ್ಕೂ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ರಾಜ್ಯಾದ್ಯಂತ 200ಕ್ಕೂ ಹೆಚ್ಚು ಗೋಲ್‌ಗಪ್ಪಾ ತಯಾರಿಕಾ ಘಟಕ ಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ 165 ಘಟಕಗಳಲ್ಲಿ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿದ್ದಾಗಿ ನ್ಯೂಸ್ 18 ವರದಿ ಮಾಡಿದೆ.

ಗೋಲ್‌ಗಪ್ಪಾ ರುಚಿ ಹೆಚ್ಚಳಕ್ಕೆ ಯೂರಿಯಾ, ಹಾರ್ಪಿಕ್ ಬಳಕೆ: ವರದಿ

ಕೆಲವು ದಿನಗಳ ಹಿಂದೆ, ಗೋಲ್‌ಗಪ್ಪಾ ರುಚಿ ಹೆಚ್ಚಳಕ್ಕೆ ಯೂರಿಯಾ ಗೊಬ್ಬರ, ಹಾರ್ಪಿಕ್ ಬಳಕೆ ಮಾಡಲಾಗುತ್ತಿದೆ ಎಂಬ ವರದಿಗಳು ಗಮನಸೆಳೆದಿದ್ದವು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಕಚೇರಿ ಇದನ್ನು ಪರಿಶೀಲಿಸುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಗೆ ಸೂಚಿಸಿತ್ತು. ಇದರಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ಬೆಂಗಳೂರು ಮತ್ತು ರಾಜ್ಯದ ವಿವಿಧೆಡೆ 200ಕ್ಕೂ ಹೆಚ್ಚು ಗೋಲ್‌ಗಪ್ಪ ಮಾದರಿಗಳನ್ನು ಸಂಗ್ರಹಿಸಿ ಪರಿಶೀಲನೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ ಎಂದು ಕನ್ನಡಪ್ರಭ ವರದಿ ಮಾಡಿದೆ.

200ಕ್ಕೂ ಹೆಚ್ಚು ಗೋಲ್‌ಗಪ್ಪಾ ತಯಾರಿಕಾ ಘಟಕಗಳ ಮೇಲೆ ದಾಳಿ

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ರಾಜ್ಯದಲ್ಲಿ 230 ಗೋಲ್‌ಗಪ್ಪಾ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಶೋಧದ ಸಂದರ್ಭದಲ್ಲಿ ನೈರ್ಮಲ್ಯ ಕಾಪಾಡದೆ ಗೋಲ್‌ಗಪ್ಪಾ ತಯಾರಿಸುತ್ತಿದ್ದ 12 ಘಟಕಗಳು ಪತ್ತೆಯಾಗಿದ್ದವು. ಆ ಘಟಕಗಳ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿದ ಇಲಾಖೆ ಅವರಿಂದ ದಂಡ ವಸೂಲಿ ಮಾಡಿದೆ ಎಂದು ವರದಿ ವಿವರಿಸಿದೆ.

ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಗಾಗಿ ದಾಳಿ ನಡೆಸಿದ ಆಹಾರ ಇಲಾಖೆ ಈಗ ಪ್ರಯೋಗಾಲಯದ ವರದಿಗಾಗಿ ಕಾಯುತ್ತಿದ್ದು, ಬಂದ ಕೂಡಲೇ ಕ್ರಮ ತೆಗೆದುಕೊಳ್ಳಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿದ್ದಾಗಿ ವರದಿ ಹೇಳಿದೆ.

ಈ ಹಿಂದೆ 260 ಪಾನಿಪೂರಿ, 43 ಮಾದರಿಗಳಲ್ಲಿ ಕಾರ್ಸಿನೊಗೆಜಿಕ್‌ ರಾಸಾಯನಿಕಗಳು ಪತ್ತೆ

ಕರ್ನಾಟಕದಲ್ಲಿ ಕಳೆದ ಜೂನ್ ತಿಂಗಳಲ್ಲಿ ಸಂಗ್ರಹಿಸಿದ 260 ಪಾನಿಪೂರಿ ಮಾದರಿಗಳಲ್ಲಿ 43 ಮಾದರಿಗಳಲ್ಲಿ ಕಾರ್ಸಿನೊಗೆಜಿಕ್‌ ರಾಸಾಯನಿಕಗಳು ಪತ್ತೆಯಾಗಿದ್ದವು. ವಿಶೇಷವಾಗಿ ಸಾಸ್‌ ಮತ್ತು ಸಿಹಿ(ಮೀಟಾ) ಖಾರಾ ಪೌಡರ್‌ ನಲ್ಲಿ ಹೆಚ್ಚಿನ ಮಟ್ಟದಲ್ಲಿ ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿತ್ತು. ಈ ರಾಸಾಯನಿಕಗಳನ್ನು ಬಣ್ಣದ ರೂಪದಲ್ಲಿ ಬಳಸಲಾಗುತ್ತದೆ. ಇಂತಹ ರಾಸಾಯನಿಕಗಳನ್ನು ಬಳಸುವುದು ಗ್ರಾಹಕರ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ ಎಂದು ಆಹಾರ ಇಲಾಖೆ ಮೂಲಗಳು ಅಂದು ಹೇಳಿದ್ದವು.

ಬೆಂಗಳೂರಿನಲ್ಲೇ 49 ಮಾದರಿಗಳನ್ನು ಸಂಗ್ರಹಿಸಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು, ಅದರಲ್ಲೂ ರಾಸಾಯನಿಕ ಇರುವುದನ್ನು ದೃಢಪಡಿಸಿದ್ದರು. ಆರೇಳು ವರ್ಷ ನಿರಂತರ ಪಾನಿಪೂರಿ ತಿಂದರೆ ಕ್ಯಾನ್ಸರ್, ಅಲ್ಸರ್ ಗ್ಯಾರೆಂಟಿ. ಅಂದರೆ, ನಿರಂತರವಾಗಿ ಪಾನಿಪೂರಿ ಸೇವಿಸುತ್ತಿದ್ದರೆ ಕರುಳಿನ ಕ್ಯಾನ್ಸರ್‌ ಮತ್ತು ಅಲ್ಸರ್‌ ಸಮಸ್ಯೆ ಕಾಡುತ್ತದೆ ಎಂಬ ಅಂಶ ಗಮನಸೆಳದಿತ್ತು. ಅಲ್ಲದೆ, ಆಹಾರದ ರುಚಿ ಹೆಚ್ಚಳಕ್ಕೆ ಬಳಸುವ ರಾಸಾಯನಿಕಗಳು ಸಾರ್ವಜನಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಇದು ಕಳವಳಕಾರಿ ಎಂದು ಅಧಿಕಾರಿಗಳು ಹೇಳಿದ್ದರು.

Whats_app_banner