Suraj Revanna: ಸೂರಜ್‌ ರೇವಣ್ಣಗೆ ಜಾಮೀನು ಮಂಜೂರು, ಜೈಲಿನಿಂದ ಬಿಡುಗಡೆ ಸನ್ನಿಹಿತ
ಕನ್ನಡ ಸುದ್ದಿ  /  ಕರ್ನಾಟಕ  /  Suraj Revanna: ಸೂರಜ್‌ ರೇವಣ್ಣಗೆ ಜಾಮೀನು ಮಂಜೂರು, ಜೈಲಿನಿಂದ ಬಿಡುಗಡೆ ಸನ್ನಿಹಿತ

Suraj Revanna: ಸೂರಜ್‌ ರೇವಣ್ಣಗೆ ಜಾಮೀನು ಮಂಜೂರು, ಜೈಲಿನಿಂದ ಬಿಡುಗಡೆ ಸನ್ನಿಹಿತ

Court News ಬಹುತೇಕ ಮೂರು ವಾರಗಳಿಂದ ಜೈಲಿನಲ್ಲಿದ್ದ ಹಾಸನದ ವಿಧಾನಪರಿಷತ್‌ ಸದಸ್ಯ ಡಾ.ಸೂರಜ್‌ ರೇವಣ್ಣ ಅವರಿಗೆ ಬೆಂಗಳೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಡಾ.ಸೂರಜ್‌ ರೇವಣ್ಣ ಅವರಿಗೆ ಜಾಮೀನು ದೊರೆತಿದೆ.
ಡಾ.ಸೂರಜ್‌ ರೇವಣ್ಣ ಅವರಿಗೆ ಜಾಮೀನು ದೊರೆತಿದೆ.

ಬೆಂಗಳೂರು: ಹಾಸನ ಹಾಗೂ ಹೊಳೆ ನರಸೀಪುರದಲ್ಲಿ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ( Sexual Abuse case) ಆರೋಪದ ಮೇಲೆ ಕಳೆದ ತಿಂಗಳು ಬಂಧನಕ್ಕೆ ಒಳಗಾಗಿದ್ದ ಹಾಸನದ ವಿಧಾನಪರಿಷತ್‌ ಡಾ.ಸೂರಜ್‌ ರೇವಣ್ಣ( Hassan MLC Dr Suraj Revanna) ಅವರಿಗೆ ಬೆಂಗಳೂರಿನ ನ್ಯಾಯಾಲಯ(Bangalore People Representative Court) ಜಾಮೀನು ಮಂಜೂರು ಮಾಡಿದೆ. ಇದರಿಂದ ಅವರು ಬಿಡುಗಡೆಯಾಗುವ ಕ್ಷಣ ಹತ್ತಿರವಾಗುತ್ತಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಡಾ.ಸೂರಜ್‌ ರೇವಣ್ಣ ಅವರಿಗೆ ಜಾಮೀನು ದೊರೆತಿರುವುದರಿಂದ ಮಂಗಳವಾರದ ಮಧ್ಯಾಹ್ನದ ಹೊತ್ತಿಗೆ ಬಿಡುಗಡೆಯಾಗಬಹುದು ಎನ್ನಲಾಗುತ್ತಿದೆ.

ಜೂನ್‌ ಎರಡನೇ ವಾರದಲ್ಲಿ ಸೂರಜ್‌ ರೇವಣ್ಣ ವಿರುದ್ದ ಗಂಭೀರ ಆರೋಪ ಕೇಳಿ ಬಂದಿತ್ತು. ಜೆಡಿಎಸ್‌ ಕಾರ್ಯಕರ್ತನೊಬ್ಬ ಸೂರಜ್‌ ರೇವಣ್ಣ ಅವರು ನನ್ನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಕಾನೂನು ಕ್ರಮ ಕೈಗೊಳ್ಳಿ ಎಂದು ಹೊಳೆ ನರಸೀಪುರ ಪೊಲೀಸರಿಗೆ ದೂರು ನೀಡಿದ್ದರು. ಆನಂತರ ವಿಚಾರಣೆ ನಡೆಸಿದ ಪೊಲೀಸರು ಸೂರಜ್‌ ರೇವಣ್ಣ ಅವರನ್ನು ವಶಕ್ಕೆ ಪಡೆದಿದ್ದರು. ಬಳಿಕ ಬಂಧಿಸಿದ್ದರು. ಜೂನ್ 23 ರಂದು ಸೂರಜ್ ರೇವಣ್ಣ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಹೊಳೆನರಸೀಪುರ, ಹಾಸನಕ್ಕೆ ಆಗಮಿಸಿದ್ದ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಹೇಳಿಕೆಗಳನ್ನು ದಾಖಲಿಸಿದ್ದರು. ಎರಡು ಬಾರಿ ತಮ್ಮ ವಶಕ್ಕೆ ಪಡೆದಿದ್ದ ಪೊಲೀಸರು ನಂತರ ಸೂರಜ್‌ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಆನಂತರ ಸೂರಜ್‌ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿಲಾಗಿತ್ತು. ಮೂರು ವಾರದ ಹಿಂದೆ ಜೈಲಿನಲ್ಲಿಯೇ ಇದ್ದ ಸೂರಜ್‌ ಪರ ವಕೀಲರು ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಸೂರಜ್‌ ರೇವಣ್ಣ ಪರ ವಕೀಲರು ಹಾಗೂ ಸರ್ಕಾರದ ವಿಶೇಷ ಅಭಿಯೋಜಕರ ಅಭಿಪ್ರಾಯ, ವಾದವನ್ನು ಆಲಿಸಿತು. ಜಾಮೀನು ಮಂಜೂರು ಮಾಡುವಂತೆ ಸೂರಜ್‌ ಪರ ವಕೀಲರು ಕೋರಿದರೆ, ವಿಶೇಷ ಅಭಿಯೋಜಕರು ಜಾಮೀನು ನೀಡದಂತೆ ಹೇಳಿಕೆ ದಾಖಲಿಸಿದ್ದರು ಕೊನೆಗೆ ವಿಚಾರಣೆ ನಡೆಸಿದ ನ್ಯಾಯಾಧೀಶರು ಷರತ್ತು ಬದ್ದ ಜಾಮೀನು ಮಂಜೂರು ಮಾಡಿದರು.

ಅರ್ಜಿದಾರರು ತನಿಖಾಧಿಕಾರಿಯ ಮುಂದೆ ಕರೆದಾಗ ಕಡ್ಡಾಯವಾಗಿ ಹಾಜರಾಗಬೇಕು. ತಿಂಗಳ ಪ್ರತಿ 2ನೇ ಭಾನುವಾರ ತನಿಖೆಗೆ ತನಿಖಾಧಿಕಾರಿಗಳ ಮುಂದೆ ಬರಬೇಕು. ಯಾವುದೇ ಕಾರಣಕ್ಕೂ ಸಂತಸ್ತರನ್ನು ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕಿಸಲೇಬಾರದು ಎನ್ನುವ ಷರತ್ತುಗಳನ್ನು ಸೂರಜ್‌ ಅವರಿಗೆ ವಿಧಿಸಲಾಗಿದೆ. ನ್ಯಾಯಾಲಯದ ಆದೇಶ ಪ್ರತಿಯನ್ನು ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಿ ಸೂರಜ್‌ ಅವರ ಬಿಡುಗಡೆಗೆ ಕ್ರಮ ವಹಿಸಲಾಗುವುದು ಎಂದು ವಕೀಲರು ಮಾಹಿತಿ ನೀಡಿದರು. ಎಲ್ಲಾ ಪ್ರಕ್ರಿಯೆಗಳು ಮುಗಿದ ನಂತರ ಸೂರಜ್‌ ಬಿಡುಗಡೆಯಾಗಲಿದ್ಧಾರೆ ಎನ್ನುವುದು ಅವರ ನೀಡಿದ ವಿವರಣೆ.

ಈಗಾಗಲೇ ಲೈಂಗಿಕದೌರ್ಜನ್ಯದ ಪ್ರಕರಣದಲ್ಲಿ ಜೈಲಿನಲ್ಲಿರುವ ಹಾಸನ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಕೂಡ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು ಅವರ ಪ್ರಕರಣ ಬಾಕಿಯಿದೆ. ಇದೇ ಪ್ರಕರಣದಲ್ಲಿ ಅವರ ತಂದೆ, ಮಾಜಿ ಸಚಿವ ಎಚ್.ಡಿ. ರೇವಣ್ಣ ಜಾಮೀನಿನಲ್ಲಿದ್ದಾರೆ. ತಾಯಿ ಭವಾನಿ ರೇವಣ್ಣ ಅವರ ಮೇಲೂ ಪ್ರಕರಣವಿದ್ದು. ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್‌ ನಲ್ಲಿ ಅವರು ಸಲ್ಲಿಸಿದ್ದಾರೆ. ಈ ಪ್ರಕರಣಗಳ ವಿಚಾರಣೆ ಬಾಕಿ ಇರುವ ನಡುವೆ ರೇವಣ್ಣ ಕುಟುಂಬಕ್ಕೆ ನೆಮ್ಮದಿಯ ಸುದ್ದಿ ದೊರೆತಿದೆ.

ಕಳೆದ ವಾರ ಮೈಸೂರಿಗೆ ಬಂದಿದ್ದ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು, ತಮ್ಮ ಪುತ್ರ ಡಾ.ಸೂರಜ್‌ ಯಾವುದೇ ತಪ್ಪು ಮಾಡಿಲ್ಲ. ಆತನ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಎಲ್ಲ ಆಪಾದನೆಗಳಿಂದ ಹೊರ ಬರುತ್ತಾರೆ ಎಂದು ಹೇಳಿದ್ದರು.

Whats_app_banner