ಬೆಂಗಳೂರು ರಸ್ತೆಗೆ ಇಳಿಯಲಿವೆ ಇನ್ನೂ 4500 ಇ ಬಸ್‌ಗಳು, 10,000 ತಲುಪಲಿದೆ ಬಿಎಂಟಿಸಿ ಬಸ್‌ ಸಂಖ್ಯೆ; 2030ರ ವೇಳೆಗೆ ಶೂನ್ಯ ಮಾಲಿನ್ಯ ಗುರಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ರಸ್ತೆಗೆ ಇಳಿಯಲಿವೆ ಇನ್ನೂ 4500 ಇ ಬಸ್‌ಗಳು, 10,000 ತಲುಪಲಿದೆ ಬಿಎಂಟಿಸಿ ಬಸ್‌ ಸಂಖ್ಯೆ; 2030ರ ವೇಳೆಗೆ ಶೂನ್ಯ ಮಾಲಿನ್ಯ ಗುರಿ

ಬೆಂಗಳೂರು ರಸ್ತೆಗೆ ಇಳಿಯಲಿವೆ ಇನ್ನೂ 4500 ಇ ಬಸ್‌ಗಳು, 10,000 ತಲುಪಲಿದೆ ಬಿಎಂಟಿಸಿ ಬಸ್‌ ಸಂಖ್ಯೆ; 2030ರ ವೇಳೆಗೆ ಶೂನ್ಯ ಮಾಲಿನ್ಯ ಗುರಿ

ಕೇಂದ್ರ ಸರ್ಕಾರವು ಬೆಂಗಳೂರಿಗೆ ಈ ಬಾರಿ 4500 ಇ ಬಸ್‌ಗಳನ್ನು ನೀಡಲು ಮುಂದಾಗಿದ್ದು, ಇದರಿಂದ ಬಿಎಂಟಿಸಿ ಬಸ್‌ಗಳಲ್ಲಿ ಇ ಬಸ್‌ಗಳ ಸಂಖ್ಯೆ ಹೆಚ್ಚಲಿದೆ. ಪರಿಸರ ಮಾಲಿನ್ಯ ತಗ್ಗಿಸುವ ಉದ್ದೇಶ ಇದರ ಹಿಂದಿದೆ.ವರದಿ: ಎಚ್‌.ಮಾರುತಿ.ಬೆಂಗಳೂರು

ಬೆಂಗಳೂರಿಗೆ ಬರಲಿವೆ ಮತ್ತಷ್ಟು ಇ ಬಸ್‌ಗಳು.
ಬೆಂಗಳೂರಿಗೆ ಬರಲಿವೆ ಮತ್ತಷ್ಟು ಇ ಬಸ್‌ಗಳು.

ಬೆಂಗಳೂರು: ಪಿಎಂ ಇ-ಡ್ರೈವ್ ಅಡಿಯಲ್ಲಿ ಬೆಂಗಳೂರು ನಗರಕ್ಕೆ 4500 ಇ-ಬಸ್ ಗಳನ್ನುಹಂಚಿಕೆ ಮಾಡಲಾಗಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ ಗಳ ಸಂಖ್ಯೆ ಮುಂದಿನ ಎರಡು ವರ್ಷಗಳಲ್ಲಿ 10,000 ತಲುಪುವ ನಿರೀಕ್ಷೆ ಇದೆ. ಪಿಎಂ ಇ-ಡ್ರೈವ್ ಅಡಿಯಲ್ಲಿ ಮೊದಲ ಹಂತದಲ್ಲಿಯೇ ದೇಶದ ಐದು ಪ್ರಮುಖ ನಗರಗಳಿಗೆ 10,900 ಎಲೆಕ್ಟ್ರಿಕ್ ಬಸ್ ಗಳನ್ನು ಹಂಚಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 7,000 ಎಲೆಕ್ಟ್ರಿಕ್ ಬಸ್ ಗಳಿಗೆ ಬೇಡಿಕೆ ಸಲ್ಲಿಸಿತ್ತು. ಕೆಲ ದಿನಗಳ ಹಿಂದೆ ನವದೆಹಲಿಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೂ ಸಹ ಹೆಚ್ಚಿನ ಬಸ್ ಗಳಿಗೆ ಬೇಡಿಕೆ ಇಟ್ಟಿದ್ದರು.

ಸಚಿವ ಕುಮಾರಸ್ವಾಮಿ ಅವರು, ಬೇಡಿಕೆ ಹಾಗೂ ಜನಸಂಖ್ಯೆಯನ್ನು ಪರಿಗಣಿಸಿ ಮೊದಲ ಹಂತದಲ್ಲಿಯೇ ಬಿಎಂಟಿಸಿಗೆ 4,500 ಬಸ್ ಗಳನ್ನು ಒದಗಿಸುವ ಭರವಸೆಯನ್ನು ನೀಡಿದ್ದಾರೆ. ದೆಹಲಿ ಸಾರಿಗೆ ಸಂಸ್ಥೆ 2800 ಬಸ್, ಸೂರತ್ ನಗರ ಸಾರಿಗೆ ಸಂಸ್ಥೆ 600 ಬಸ್, ಅಹಮದಾಬಾದ್ ನಗರಕ್ಕೆ 1000 ಬಸ್, ಹೈದರಾಬಾದ್ ನಗರ ಸಾರಿಗೆ ಸಂಸ್ಥೆಗೆ 2000 ಬಸ್ ಗಳನ್ನು ಒದಗಿಸಲಾಗುತ್ತಿದೆ.

ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ 2030ರ ವೇಳೆಗೆ ಶೂನ್ಯ ಮಾಲಿನ್ಯ ಸಾಧಿಸುವ ನಿಟ್ಟಿನಲ್ಲಿ ಈ ಬಸ್ ಗಳನ್ನು ಒದಗಿಸಲಾಗುತ್ತಿದೆ.

ರಾಜ್ಯ ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್.ವಿ.ಪ್ರಸಾದ್ ಈ ಯೋಜನೆ 2027 , ಮಾರ್ಚ್ ವರೆಗೆ ಮುಂದುವರೆಯಲಿದೆ. ನಿವ್ವಳ ದರ ಒಪ್ಪಂದ (ಜಿಸಿಸಿ) ಅಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ನೀಡಲಾಗುತ್ತಿದೆ. ಭಾರತ ಸರ್ಕಾರವೇ ಟೆಂಡರ್ ಆಹ್ವಾನಿಸಲಿದ್ದು, ಎಸಿ, ಎಸಿ ರಹಿತ, ಲೋ ಫ್ಲೋರ್, ಹೈ ಫ್ಲೋರ್ ಬಸ್ ಗಳನ್ನು ಗುತ್ತಿಗೆ ಆಧಾರದಲ್ಲಿ ಒದಗಿಸಲಿದೆ ಎಂದರು.

ಬೆಂಗಳೂರು ನಗರದ ಹೆಚ್ಚುತ್ತಿರುವ ಜನಸಂಖ್ಯೆ ಆಧಾರದಲ್ಲಿ ಸುಮಾರು 10,000-12,000 ಇ ಬಸ್ ಗಳ ಅವಶ್ಯಕತೆ ಇದ್ದು, ಆರಂಭದಲ್ಲಿ ಸುಮಾರು 5,000 ಇ ಬಸ್ ಗಳಿಗೆ ಬೇಡಿಕೆ ಇಡಲಾಗಿತ್ತು. ಬಿಎಂಟಿಸಿಯಲ್ಲಿ 1,421 ಇ ಬಸ್ ಸೇರಿ 6,903 ಬಸ್ ಗಳಿವೆ. ಪ್ರತಿ ವರ್ಷ 400-500 ಬಸ್ ಗಳು ನಿವೃತ್ತಿ ಹೊಂದುತ್ತಿವೆ. ಪಿಎಂ-ಡ್ರೈವ್ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ 40 ಲಕ್ಷ ಜನಸಂಖ್ಯೆಗೂ ಹೆಚ್ಚು ಜನಸಂಖ್ಯೆ ಇರುವ 9 ನಗರಗಳಿಗೆ 4,391 ಕೋಟಿ ರೂ. ಸಬ್ಸಿಡಿ ನೀಡುವ ಮೂಲಕ 14,028 ಇ ಬಸ್ ಗಳನ್ನು ಒದಗಿಸುತ್ತಿದೆ ಎನ್ನುತ್ತಾರೆ ಪ್ರಸಾದ್ .

10-12 ಮೀಟರ್‌ ನ ಸ್ಟ್ಯಾಂಡರ್ಡ್‌ ಬಸ್‌ ಗೆ 35 ಲಕ್ಷ ರೂ, 8-10 ಮೀಟರ್‌ ಮಿನಿ ಬಸ್‌ ಗೆ 25 ಲಕ್ಷ ರೂ ಮತ್ತು 6-8 ಮೀಟರ್‌ ಉದ್ದದ ಮಿನಿ ಬಸ್‌ ಗೆ 20 ಲಕ್ಷ ಸಬ್ಸಿಡಿ ನೀಡಲಾಗುತ್ತದೆ. ಎಕ್ಸ್‌ ಫ್ಯಾಕ್ಟರಿ ಬೆಲೆ 2 ಕೋಟಿ ರೂಗಿಂತ ಕಡಿಮೆ ಇರುವ ಇ ಬಸ್‌ ಗಳಿಗೆ ಮಾತ್ರ ಸಬ್ಸಿಡಿ ನೀಡಲಾಗುತ್ತದೆ. ಜಿಸಿಸಿ ಮಾಡಲ್‌ ಪ್ರಕಾರ ಬಿಎಂಟಿಸಿ ಪ್ರತಿ ಕಿಮೀ ಆಧಾರದಲ್ಲಿ ಬಸ್‌ ತಯಾರಿಕಾ ಕಂಪನಿಗೆ ಹಣ ಪಾವತಿ ಮಾಡಲಿದೆ. ಇದಕ್ಕಾಗಿ ಪ್ರತಿದಿನ ಕನಿಷ್ಠ ದೂರ ಬಸ್‌ ಓಡಿರಲೇಬೇಕು. ಕಂಡಕ್ಟರ್‌ ಸಂಬಳ ಹೊರತುಪಡಿಸಿ ಬಸ್‌ನಿರ್ವಹಣೆ ಸೇರಿದಂತೆ ಎಲ್ಲ ವೆಚ್ಚವನ್ನು ಬಸ್‌ ತಯಾರಕರೇ ಭರಿಸಲಿದ್ದಾರೆ.

ಒಂದು ವೇಳೆ ಬಿಎಂಟಿಸಿ ಹಣ ಪಾವತಿಸಲು ವಿಫಲವಾದರೆ ರಾಜ್ಯ ಸರ್ಕಾರ ಪ್ರವೇಶಿಸಲಿದೆ. ರಾಜ್ಯ ಸರ್ಕಾರವೂ ವಿಫಲವಾದರೆ ಕೇಂದ್ರ ಸರ್ಕಾರ ಭರಿಸಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ವರದಿ: ಎಚ್.ಮಾರುತಿ, ಬೆಂಗಳೂರು

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.