ಎಚ್ಎಂಟಿ ಅರಣ್ಯ ಭೂಮಿ ವಿವಾದ; ಸಂದೀಪ್ ದವೆ, ವಿಜಯಕುಮಾರ್ ಗೋಗಿ, ಸ್ಮಿತಾ ಬಿಜ್ಜೂರ್, ಆರ್.ಗೋಕುಲ್ ಗೆ ನೋಟಿಸ್ ಜಾರಿಗೊಳಿಸಿದ ಅರಣ್ಯ ಇಲಾಖೆ
ಕನ್ನಡ ಸುದ್ದಿ  /  ಕರ್ನಾಟಕ  /  ಎಚ್ಎಂಟಿ ಅರಣ್ಯ ಭೂಮಿ ವಿವಾದ; ಸಂದೀಪ್ ದವೆ, ವಿಜಯಕುಮಾರ್ ಗೋಗಿ, ಸ್ಮಿತಾ ಬಿಜ್ಜೂರ್, ಆರ್.ಗೋಕುಲ್ ಗೆ ನೋಟಿಸ್ ಜಾರಿಗೊಳಿಸಿದ ಅರಣ್ಯ ಇಲಾಖೆ

ಎಚ್ಎಂಟಿ ಅರಣ್ಯ ಭೂಮಿ ವಿವಾದ; ಸಂದೀಪ್ ದವೆ, ವಿಜಯಕುಮಾರ್ ಗೋಗಿ, ಸ್ಮಿತಾ ಬಿಜ್ಜೂರ್, ಆರ್.ಗೋಕುಲ್ ಗೆ ನೋಟಿಸ್ ಜಾರಿಗೊಳಿಸಿದ ಅರಣ್ಯ ಇಲಾಖೆ

ಬೆಂಗಳೂರಿನ ಕೋಟ್ಯಂತರ ರೂ. ಬೆಲೆ ಬಾಳುವ ಎಚ್‌ಎಂಟಿ ಭೂಮಿ ವಿಚಾರದಲ್ಲಿ ಕರ್ನಾಟಕ ಅರಣ್ಯ ಇಲಾಖೆ ನಿವೃತ್ತ ಐಎಎಸ್‌ ಅಧಿಕಾರಿ, ಈಗಿನ ಐಎಫ್ಎಸ್‌ ಅಧಿಕಾರಿಗಳಿಗೆ ನೊಟೀಸ್‌ ಜಾರಿ ಮಾಡಿದೆ.

ಬೆಂಗಳೂರಿನ ಎಚ್‌ಎಂಟಿ ಭೂ ವಿವಾದದ ಹಿನ್ನಲೆಯಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಸಂದೀಪ್‌ ದವೆ, ನಿವೃತ್ತ ಐಎಫ್‌ಎಸ್‌ ಅಧಿಕಾರಿ ವಿಜಯಕುಮಾರ್‌ ಗೋಗಿ, ಐಎಫ್‌ಎಸ್‌ ಅಧಿಕಾರಿಗಳಾದ ಸ್ಮಿತಾ ಬಿಜ್ಜೂರ್‌, ಆರ್.ಗೋಕುಲ್‌ ಅವರಿಗೆ ನೊಟೀಸ್‌ ಜಾರಿಗೊಳಿಸಲಾಗಿದೆ.
ಬೆಂಗಳೂರಿನ ಎಚ್‌ಎಂಟಿ ಭೂ ವಿವಾದದ ಹಿನ್ನಲೆಯಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಸಂದೀಪ್‌ ದವೆ, ನಿವೃತ್ತ ಐಎಫ್‌ಎಸ್‌ ಅಧಿಕಾರಿ ವಿಜಯಕುಮಾರ್‌ ಗೋಗಿ, ಐಎಫ್‌ಎಸ್‌ ಅಧಿಕಾರಿಗಳಾದ ಸ್ಮಿತಾ ಬಿಜ್ಜೂರ್‌, ಆರ್.ಗೋಕುಲ್‌ ಅವರಿಗೆ ನೊಟೀಸ್‌ ಜಾರಿಗೊಳಿಸಲಾಗಿದೆ.

ಬೆಂಗಳೂರು: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಕರ್ನಾಟಕದ ಸಚಿವ ಈಶ್ವರ ಖಂಡ್ರೆ ಅವರ ನಡುವಿನ ಪ್ರತಿಷ್ಠೆಯಿಂದಾಗಿ ತೀವ್ರ ವಿವಾದ ಸ್ವರೂಪ ಪಡೆದಿರುವ ಬೆಂಗಳೂರಿನ ಪ್ರತಿಷ್ಠಿತ ಎಚ್ಎಂಟಿ ಭೂಮಿ ವಿಚಾರದಲ್ಲಿ ನಿವೃತ್ತ ಐಎಎಸ್‌, ಐಎಫ್‌ಎಸ್‌ ಅಧಿಕಾರಿಗಳ ಜತೆಗೆ ಹಾಲಿ ಸೇವೆಯಲ್ಲಿರುವ ಹಿರಿಯ ಐಎಫ್‌ಎಸ್‌ ಅಧಿಕಾರಿಗಳಿಗೂ ನೊಟೀಸ್‌ ಜಾರಿ ಮಾಡಲಾಗಿದೆ. ಎಚ್‌ಎಂಟಿ ವಶದಲ್ಲಿರುವ ಅರಣ್ಯ ಭೂಮಿ, ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಡಿನೋಟಿಫಿಕೇಷನ್ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಮತ್ತು ಮೂವರು ಐ.ಎಫ್.ಎಸ್. ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಇದರಿಂದ ಭೂಮಿ ಮಾರಾಟಕ್ಕೆ ಪರೋಕ್ಷ ಬೆಂಬಲ ನೀಡಿದ ಆರೋಪದ ಮೇಲೆ ನೊಟೀಸ್‌ ಜಾರಿಯಾಗಿದ್ದು, ಅವರ ಪ್ರತಿಕ್ರಿಯೆ ನಂತರ ಕ್ರಮದ ಕುರಿತು ಕರ್ನಾಟಕ ಅರಣ್ಯ ಇಲಾಖೆ ಮುಂದಿನ ಹೆಜ್ಜೆ ಇಡಲಿದೆ.

ಏನಿದು ವಿವಾದ

ಎಚ್ಎಂಟಿ ವಶದಲ್ಲಿರುವ ಪೀಣ್ಯ ಪ್ಲಾಂಟೇಷನ್ ಸರ್ವೆ ನಂ.1 ಮತ್ತು 2ರ ಜಮೀನು ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಕೇವಲ ಅಧಿಕಾರಿಗಳ ಮಟ್ಟದಲ್ಲೇ ನಿರ್ಧಾರ ಕೈಗೊಂಡು, ಸುಪ್ರೀಂಕೋರ್ಟ್ ಗೆ ಈ ಅಧಿಕಾರಿಗಳು ಆಂತರಿಕ ವರದಿ( ಐಎ) ಸಲ್ಲಿಸಿದ್ದರು. ಅರ್ಜಿ ಸಲ್ಲಿಸುವ ಪೂರ್ವದಲ್ಲಿ ಅಂದಿನ ಅರಣ್ಯ ಸಚಿವರ ಅಥವಾ ಸಚಿವ ಸಂಪುಟದ ಪೂರ್ವಾನುಮತಿಯನ್ನೂ ಪಡೆದಿರಲಿಲ್ಲ.

ನಿಯಮ ಉಲ್ಲಂಘಿಸಿ ಸಾವಿರಾರು ಕೋಟಿ ರೂ. ಬೆಲೆ ಬಾಳುವ ಭೂಮಿಯನ್ನು ಡಿ ನೋಟಿಫೈ ಮಾಡಲು ಐಎ ಸಲ್ಲಿಸಿದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು, ಕಳೆದ ಸೆಪ್ಟೆಂಬರ್ 24ರಂದು ಸೂಚನೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾಗಿ ನಿವೃತ್ತರಾಗಿರುವ ಸಂದೀಪ್ ದವೆ, ನಿವೃತ್ತ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಗೋಗಿ ಹಾಗೂ ಹಾಲಿ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾಗಿರುವ ಐಟಿಸಿ ವಿಭಾಗದ ಸ್ಮಿತಾ ಬಿಜ್ಜೂರ್, ತಾಂತ್ರಿಕ ಕೋಶದ ಆರ್. ಗೋಕುಲ್ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.

ನೊಟೀಸ್‌ ನಲ್ಲಿ ಏನಿದೆ

ಸುಪ್ರೀಂಕೋರ್ಟ್ ಹೇಳಿರುವಂತೆ “Once a forest is always a forest unless it is de-notified’ ಅಂದರೆ ಅನ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಆಗದ ಹೊರತು ಒಮ್ಮೆ ಅರಣ್ಯ ಎಂದು ನಮೂದಾದ ಭೂಮಿ ಎಂದೆಂದಿಗೂ ಅರಣ್ಯವೇ ಆಗಿರುತ್ತದೆ. ಹೀಗಾಗಿ ಅರಣ್ಯ ಸಂರಕ್ಷಣಾ ಕಾಯಿದೆ 1980ರಡಿ ಅರಣ್ಯ ಭೂಮಿಯನ್ನು ಅರಣ್ಯೇತರ ಬಳಕೆಗೆ ಪರಿಹಾರ ಭೂಮಿ ಒದಗಿಸುವುದರೊಂದಿಗೆ ಎನ್.ಪಿ.ವಿ.ಮೊತ್ತ ಪಾವತಿಸಿ ಕಡ್ಡಾಯವಾಗಿ ಅನುಮತಿ ಪಡೆಯಬೇಕಾಗುತ್ತದೆ. ಹೀಗೆ ಅನುಮತಿ ನೀಡಿದರೂ ಸಹ ಅರಣ್ಯ ಭೂಮಿಯನ್ನು ಗುತ್ತಿಗೆ ಮಾತ್ರ ನೀಡಿ, ಗುತ್ತಿಗೆ ಅವಧಿ ಮುಗಿದ ಬಳಿಕ ಅರಣ್ಯ ಇಲಾಖೆಗೆ ಮರಳಿ ಪಡೆಯಬೇಕಾಗುತ್ತದೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.

ಆದರೆ, ಎಚ್.ಎಂ.ಟಿ. ತನ್ನ ವಶದಲ್ಲಿರುವ ಅರಣ್ಯ ಭೂಮಿಯನ್ನು ವಿವಿಧ ಸರ್ಕಾರಿ, ಖಾಸಗಿ ಸಂಸ್ಥೆ, ವ್ಯಕ್ತಿಗಳಿಗೆ ಭಾಗಶಃ ಮಾರಾಟ ಮಾಡಿದ್ದು, ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರ ರೂಪಿಸಿರುವ ಪರಿಸರ ಮತ್ತು ಅರಣ್ಯ ಸಂರಕ್ಷಣೆ ಹಾಗೂ ಕಂದಾಯ ಕಾಯಿದೆ, ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ. ಮಿಗಿಲಾಗಿ ಪರಿಸರ ಹಾನಿ ತೀವ್ರ ಸ್ವರೂಪದ್ದಾಗಿರುತ್ತದೆ ಹಾಗೂ ಅರಣ್ಯ ಮರುಸ್ಥಾಪನೆಗೆ ಅಡ್ಡಿಯುಂಟಾಗಿರುತ್ತದೆ ಎಂದೂ ನೋಟಿಸ್ ನಲ್ಲಿ ತಿಳಿಸಲಾಗಿದೆ.

ಸರ್ಕಾರದ ನಿಯಮ ಉಲ್ಲಂಘನೆ

ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಸಂಸ್ಥೆಗಳಿಗೆ ನೀಡಲಾಗಿರುವ ಅರಣ್ಯ ಭೂಮಿ ಕುರಿತಂತೆ ಪರಾಮರ್ಶಿಸಲು ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ರಚಿಸಲಾಗಿದ್ದ ಉನ್ನತ ಮಟ್ಟದ ಸಮಿತಿಯ ದಿ.15.07.2020ರ ಸಭೆಯಲ್ಲಿ ‘1980ರ ಪೂರ್ವದಲ್ಲಿ ವಿವಿಧ ಸರ್ಕಾರಿ ಅರೆ ಸರ್ಕಾರಿ ಸಂಸ್ಥೆಗಳಿಗೆ ಆಗಿರುವ ಅರಣ್ಯ ಭೂಮಿ ಮಂಜೂರಾತಿಯ ಬಗ್ಗೆ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯ ಪಡೆದು, ಅಂತಹ ಅರಣ್ಯ ಪ್ರದೇಶಗಳ ಡಿ ನೋಟಿಫಿಕೇಷನ್ ಪ್ರಸ್ತಾವನೆಯನ್ನು ಕ್ಯಾಬಿನೆಟ್ ನಿರ್ಧಾರಕ್ಕೆ ಸಲ್ಲಿಸಲು’ ಸೂಚಿಸಲಾಗಿದ್ದರೂ ಸಂಪುಟದ ಗಮನಕ್ಕೆ ತಾರದೆ, ಉನ್ನತ ಮಟ್ಟದ ಸಮಿತಿಯ ಮುಂದಿನ ಸಭೆಗಳಲ್ಲಿ ಸ್ಥಿರೀಕರಣವನ್ನೂ ಕೋರಿರುವುದಿಲ್ಲ ಇದು ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.

ನಿಯಮ ಉಲ್ಲಂಘನೆ ಮತ್ತು ಕರ್ತವ್ಯಲೋಪ ಎಸಗಿ, ಅರಣ್ಯ, ಪರಿಸರಕ್ಕೆ ಘೋರ ಅನ್ಯಾಯ ಎಸಗಲು ಕಾರಣರಾಗಿರುವ ಕಾರಣ ನೋಟಿಸ್ ತಲುಪಿದ ಒಂದು ವಾರದೊಳಗೆ ಸಮಜಾಯಿಷಿ ನೀಡಲು, ತಪ್ಪಿದಲ್ಲಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.

ಬೆಂಗಳೂರಿನ ಎಚ್‌ ಎಂಟಿ ಭೂಮಿ ವಿಚಾರವಾಗಿ ಕರ್ನಾಟಕ ಅರಣ್ಯ ಇಲಾಖೆ ನೀಡಿರುವ ನೊಟೀಸ್‌
ಬೆಂಗಳೂರಿನ ಎಚ್‌ ಎಂಟಿ ಭೂಮಿ ವಿಚಾರವಾಗಿ ಕರ್ನಾಟಕ ಅರಣ್ಯ ಇಲಾಖೆ ನೀಡಿರುವ ನೊಟೀಸ್‌
Whats_app_banner