ಐತಿಹಾಸಿಕ ಬೆಂಗಳೂರು ಕರಗ ಇಂದು ರಾತ್ರಿ, ಕರಗ ಮೆರವಣಿಗೆ ಸಾಗುವ ಕಾರಣ ಭಾನುವಾರ ಈ ರಸ್ತೆಗಳಲ್ಲಿ ಸಂಚಾರ ನಿಷೇಧ
ಕನ್ನಡ ಸುದ್ದಿ  /  ಕರ್ನಾಟಕ  /  ಐತಿಹಾಸಿಕ ಬೆಂಗಳೂರು ಕರಗ ಇಂದು ರಾತ್ರಿ, ಕರಗ ಮೆರವಣಿಗೆ ಸಾಗುವ ಕಾರಣ ಭಾನುವಾರ ಈ ರಸ್ತೆಗಳಲ್ಲಿ ಸಂಚಾರ ನಿಷೇಧ

ಐತಿಹಾಸಿಕ ಬೆಂಗಳೂರು ಕರಗ ಇಂದು ರಾತ್ರಿ, ಕರಗ ಮೆರವಣಿಗೆ ಸಾಗುವ ಕಾರಣ ಭಾನುವಾರ ಈ ರಸ್ತೆಗಳಲ್ಲಿ ಸಂಚಾರ ನಿಷೇಧ

Bengaluru Karaga 2025: ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸವ ಇಂದು (ಏಪ್ರಿಲ್ 12) ತಡರಾತ್ರಿ ನಡೆಯಲಿದೆ. ಕರಗ ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಸಂಚಾರ ನಿಷೇಧಿಸಲಾಗಿದೆ. ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ. (ವರದಿ- ಎಚ್.‌ ಮಾರುತಿ, ಬೆಂಗಳೂರು)

ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಇಂದು ರಾತ್ರಿ ನಡೆಯಲಿದ್ದು, ನಾಳೆ (ಏಪ್ರಿಲ್ 13) ಬೆಳಿಗ್ಗೆ ಕರಗ ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಸಂಚಾರ ನಿಷೇಧ ಜಾರಿಯಲ್ಲಿದೆ.
ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಇಂದು ರಾತ್ರಿ ನಡೆಯಲಿದ್ದು, ನಾಳೆ (ಏಪ್ರಿಲ್ 13) ಬೆಳಿಗ್ಗೆ ಕರಗ ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಸಂಚಾರ ನಿಷೇಧ ಜಾರಿಯಲ್ಲಿದೆ.

Bengaluru Karaga 2025: ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ ಈಗಾಗಲೇ ಆರಂಭವಾಗಿದೆ. ಏಪ್ರಿಲ್ 13, ಭಾನುವಾರ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಕರಗ ಮೆರವಣಿಗೆ ಹಾದುಹೋಗಲಿದೆ. ಹೀಗಾಗಿ ಸಂಚಾರ ದಟ್ಟಣೆ ನಿಯಂತ್ರಿಸಲು ಹಾಗೂ ಸುಗಮ ಸಂಚಾರಕ್ಕಾಗಿ ಬೆಂಗಳೂರು ಸಂಚಾರ ಪೊಲೀಸರು ಕೆಲವು ಕ್ರಮಗಳನ್ನು ಕೈಗೊಂಡಿದ್ದಾರೆ.

ಬೆಂಗಳೂರು ಕರಗ ಉತ್ಸವದ ಮೆರವಣಿಗೆ ಇಂದು ನಾಳೆ ಸಂಚಾರ ಮಾರ್ಗ ವ್ಯತ್ಯಾಸ

ಇತಿಹಾಸದ ಪ್ರಸಿದ್ದ ಬೆಂಗಳೂರು ಕರಗ ಉತ್ಸವದ ಮೆರವಣಿಗೆ ಏಪ್ರಿಲ್ 12 ಮತ್ತು 13 ರಂದು ಸಿಟಿ ಮಾರ್ಕೆಟ್, ಚಾಮರಾಜಪೇಟೆ ಹಾಗೂ ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆಯಲಿದೆ. ಹೀಗಾಗಿ ಕೆಲವು ರಸ್ತೆಗಳಲ್ಲಿ ಸಂಚಾರ ನಿರ್ಭಂಧಿಸಲಾಗಿದ್ದು ಪರ್ಯಾಯ ಮಾರ್ಗವನ್ನು ಬಳಸಲು ಸಂಚಾರಿ ಪೊಲೀಸ್‌ ವಿಭಾಗ ಕೋರಿದೆ.

ಸಿಟಿ ಮಾರ್ಕೆಟ್, ಚಾಮರಾಜಪೇಟೆ ಹಾಗೂ ಉಪ್ಪಾರಪೇಟೆ ವ್ಯಾಪ್ತಿಯಲ್ಲಿ ಹಾಗೂ ಧರ್ಮರಾಯಸ್ವಾಮಿ ದೇವಸ್ಥಾನ ವ್ಯಾಪ್ತಿಯಲ್ಲಿ ಕರಗ ಮೆರವಣಿಗೆ ಸಾಗುವಾಗ ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಅವೆನ್ಯೂ ರಸ್ತೆ, ಮಾರುಕಟ್ಟೆ ವೃತ್ತ, ಕಾಟನ್ ಪೇಟೆ, ಕೆಂಪೇಗೌಡ ರಸ್ತೆ ಮತ್ತು ಚಿಕ್ಕಪೇಟೆಯಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಏಪ್ರಿಲ್ 12 ಶನಿವಾರ ರಾತ್ರಿ 10 ಗಂಟೆಯಿಂದ ಏಪ್ರಿಲ್ 13 ರ ಭಾನುವಾರ ಸಂಜೆ 6 ರ ವರೆಗೆ ಸಂಚಾರ ನಿರ್ಬಂಧ ಚಾಲ್ತಿಯಲ್ಲಿರಲಿದೆ.

ಪರ್ಯಾಯ ಮಾರ್ಗಗಳು

1) ಮಾರ್ಕೆಟ್ ವೃತ್ತದಿಂದ ಕೆ.ಜಿ. ರಸ್ತೆ, ಆನಂದರಾವ್ ವೃತ್ತದ ಮೂಲಕ ಮೆಜೆಸ್ಟಿಕ್ ಕಡೆಗೆ ಚಲಿಸುವುದು.

2) ಎ ಎಸ್ ಚಾರ್ ಸ್ಟ್ರೀಟ್ ನಿಂದ ಸಿಸಿಬಿ ಜಂಕ್ಷನ್, ಮೆಡಿಕಲ್ ಜಂಕ್ಷನ್, ಮಿನರ್ವ ವೃತ್ತ ಮತ್ತು ಜೆಸಿ ರಸ್ತೆ ಮೂಲಕ ಟೌನ್‌ ಹಾಲ್ ಕಡೆಗೆ ಚಲಿಸುವುದು.

3) ಶಾಂತಲಾ ಜಂಕ್ಷನ್‌ ನಿಂದ ಖೋಡೆ ಜಂಕ್ಷನ್, ಹುಣಸೆಮರ ಜಂಕ್ಷನ್ ಟ್ಯಾಂಕ್ ಬಂಡ್ ರಸ್ತೆ ಮೂಲಕ ಮೈಸೂರು ರಸ್ತೆಯ ಕಡೆಗೆ ಚಲಿಸುವುದು.

ಬೆಂಗಳೂರಿನ ಇತಿಹಾಸ ಸಾರುವ ಐತಿಹಾಸಿಕ ಕರಗ ಒಟ್ಟು 11 ದಿನಗಳ ಕಾಲ ನಡೆಯುತ್ತಿದ್ದು, ಏಪ್ರಿಲ್ 14 ರಂದು ಮುಕ್ತಾಯಗೊಳ್ಳಲಿದೆ.

ಧರ್ಮರಾಯ ದೇವಸ್ಥಾನದಲ್ಲಿ ಇಂದು ರಾತ್ರಿ ಕರಗ ಶಕ್ತ್ಯೋತ್ಸವ

ಧರ್ಮರಾಯ ದೇವಸ್ಥಾನದಲ್ಲಿ ಏಪ್ರಿಲ್ 4 ರಂದು ಕರಗ ಉತ್ಸವಗಳು ಆರಂಭವಾಗಿದ್ದವು. ಏ. 14ರ ವರೆಗೂ ಆಚರಣೆಗಳು ನಡೆಯಲಿವೆ. ಈ ಬಾರಿಯೂ ಪೂಜಾರಿ ಎ.ಜ್ಞಾನೇಂದ್ರ ಅವರು ಕರಗ ಹೊರಲಿದ್ದಾರೆ. ಕಳೆದ 14 ವರ್ಷಗಳಿಂದ ಜ್ಞಾನೇಂದ್ರ ಅವರು ನಿರಂತರವಾಗಿ ಕರಗ ಹೊರುತ್ತಾ ಬಂದಿದ್ದಾರೆ. ಈ ವರ್ಷ ಕರಗದಲ್ಲಿ 20 ಲಕ್ಷ ಜನ ಭಾಗಿಯಾಗುವ ನಿರೀಕ್ಷೆ ಇದೆ. ಕರಗ ಮೆರವಣಿಗೆಗೆ ಧರ್ಮರಾಯ ದೇವಸ್ಥಾನದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಇಂದು ಶನಿವಾರ ರಾತ್ರಿ 12.30 ಕ್ಕೆ ಕರಗ ಶಕ್ತ್ಯೋತ್ಸವ ಮತ್ತು ಶ್ರೀ ಧರ್ಮರಾಯ ಸ್ವಾಮಿ ಮಹೋತ್ಸವ ಆರಂಭವಾಗಲಿದೆ. ರಾತ್ರಿಯಿಡೀ ಆಚರಣೆಗಳು ಮತ್ತು ಮೆರವಣಿಗೆ ನಡೆಯಲಿದೆ. ನಾಳೆ ಭಾನುವಾರ ರಾತ್ರಿ 2 ಗಂಟೆ ಹಾಗೂ 4 ಗಂಟೆಗೆ ಪುರಾಣ ಪ್ರವಚನ ಹಾಗೂ ದೇವಸ್ಥಾನದಲ್ಲಿ ಗಾವು ಶಾಂತಿ ನಡೆದರೆ ಏ. 14 ರಂದು ಸೋಮವಾರ ಸಂಜೆ 4 ಗಂಟೆ ಹಾಗೂ ರಾತ್ರಿ 12 ಗಂಟೆಗೆ ‘ವಸಂತೋತ್ಸವ ಧ್ವಜಾರೋಹಣ ನಡೆಯಲಿದೆ.

ಕರಗ ಆಚರಣೆ ಏಕೆ?

ಕುರುಕ್ಷೇತ್ರ ಯುದ್ಧದ ನಂತರ ಪಾಂಡವರು ಸ್ವರ್ಗಾರೋಹಣ ಮಾಡುವ ಸಂದರ್ಭದಲ್ಲಿ ದ್ರೌಪದಿ ಮೂರ್ಛೆ ಹೋಗುತ್ತಾಳೆ. ಇದು ತಿಳಿಯದೆ ಪಾಂಡವರು ಮುಂದೆ ಸಾಗುತ್ತಾರೆ. ಆಕೆ ಎಚ್ಚರಗೊಂಡಾಗ ತಿಮಿರಾಸುರ ಎಂಬ ರಾಕ್ಷಸ ಎದುರಿಗೆ ನಿಂತಿರುತ್ತಾನೆ. ಆಗ ದ್ರೌಪದಿ ತಿಮಿರಾಸುರನ ವಿರುದ್ದ ಹೋರಾಡಲು ವೀರಕುಮಾರರ ಪಡೆಯನ್ನು ಸೃಷ್ಟಿಸುತ್ತಾಳೆ.

ಯುದ್ಧದಲ್ಲಿ ತಿಮಿರಾಸುರ ಅಸುನೀಗುತ್ತಾನೆ. ವೀರಕುಮಾರರು ದ್ರೌಪದಿಯನ್ನು ಸ್ವರ್ಗಕ್ಕೆ ಹೋಗದಂತೆ ತಡೆಯುತ್ತಾರೆ. ಆಗ ದ್ರೌಪದಿ ಪ್ರತಿ ವರ್ಷ ಭೂಲೋಕಕ್ಕೆ ಆಗಮಿಸುವುದಾಗಿ ಭರವಸೆ ನೀಡುತ್ತಾಳೆ. ಹೀಗೆ ದ್ರೌಪದಿ ಪ್ರತಿ ವರ್ಷ ಭೂಲೋಕಕ್ಕೆ ಆಗಮಿಸುವುದನ್ನು ಆಚರಿಸುವ ಹಬ್ಬವೇ ಕರಗ ಎಂಬ ಪ್ರತೀತಿ ಇದೆ.

(ವರದಿ- ಎಚ್ ಮಾರುತಿ, ಬೆಂಗಳೂರು)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner