ಬೆಂಗಳೂರು ಕರಗ ಶಕ್ತ್ಯೋತ್ಸವ ಸಂಪನ್ನ, ಗೋವಿಂದ ನಾಮಸ್ಮರಣೆ ಅನುರಣನೆ, ಮಲ್ಲಿಗೆ ಹೂವಿನ ಕಂಪು ಹರಡಿದ ಕರಗ ಮೆರವಣಿಗೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಕರಗ ಶಕ್ತ್ಯೋತ್ಸವ ಸಂಪನ್ನ, ಗೋವಿಂದ ನಾಮಸ್ಮರಣೆ ಅನುರಣನೆ, ಮಲ್ಲಿಗೆ ಹೂವಿನ ಕಂಪು ಹರಡಿದ ಕರಗ ಮೆರವಣಿಗೆ

ಬೆಂಗಳೂರು ಕರಗ ಶಕ್ತ್ಯೋತ್ಸವ ಸಂಪನ್ನ, ಗೋವಿಂದ ನಾಮಸ್ಮರಣೆ ಅನುರಣನೆ, ಮಲ್ಲಿಗೆ ಹೂವಿನ ಕಂಪು ಹರಡಿದ ಕರಗ ಮೆರವಣಿಗೆ

Bengaluru Karaga 2025: ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಶಕ್ತ್ಯೋತ್ಸವ ಸಂಪನ್ನವಾಗಿದ್ದು, ಕರಗ ಮೆರವಣಿಗೆ ಸಾಗಿದ ದಾರಿಯುದ್ದಕ್ಕೂ ಗೋವಿಂದ ನಾಮಸ್ಮರಣೆ ಅನುರಣನೆಗೊಂಡಿದೆ. ಮಲ್ಲಿಗೆ ಹೂವಿನ ಕಂಪು ಹರಡಿದೆ.

ಬೆಂಗಳೂರು ಕರಗ ಶಕ್ತ್ಯೋತ್ಸವ ಸಂಪನ್ನವಾಗಿದ್ದು, ಗೋವಿಂದ ನಾಮಸ್ಮರಣೆ ಅನುರಣನೆ, ಮಲ್ಲಿಗೆ ಹೂವಿನ ಕಂಪು ಹರಡಿದ ಕರಗ ಮೆರವಣಿಗೆ ಗಮನಸೆಳೆದಿದೆ.
ಬೆಂಗಳೂರು ಕರಗ ಶಕ್ತ್ಯೋತ್ಸವ ಸಂಪನ್ನವಾಗಿದ್ದು, ಗೋವಿಂದ ನಾಮಸ್ಮರಣೆ ಅನುರಣನೆ, ಮಲ್ಲಿಗೆ ಹೂವಿನ ಕಂಪು ಹರಡಿದ ಕರಗ ಮೆರವಣಿಗೆ ಗಮನಸೆಳೆದಿದೆ.

Bengaluru Karaga 2025: ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಶಕ್ತ್ಯೋತ್ಸವ ಶನಿವಾರ ತಡರಾತ್ರಿ ಸಂಪನ್ನವಾಗಿದ್ದು, ಭಾನುವಾರ ಬೆಳಿಗ್ಗೆ ತನಕವೂ ಕರಗದ ಮೆರವಣಿಗೆ ಸಾಗಿದ್ದು, ಸಾವಿರಾರು ವೀರ ಕುಮಾರರ ಉದ್ಘೋಷ, ಭಕ್ತರ ಗೋವಿಂದ ನಾಮಸ್ಮರಣೆ ಅನುರಣನೆ, ಮಲ್ಲಿಗೆ ಹೂವಿನ ಕಂಪು ಹರಡಿ ಗಮನಸೆಳೆಯಿತು. ಕರಗದ ಅರ್ಚಕ ಎ ಜ್ಞಾನೇಂದ್ರ ಅವರು ಪೂರ್ವ ಪೂಜಾಕ್ರಮಗಳನ್ನು ಮುಗಿಸಿಕೊಂಡು ತಿಗಳರ ಪೇಟೆಯ ಧರ್ಮರಾಯ ದೇವಸ್ಥಾನಕ್ಕೆ ಬಂದರು. ಅಲ್ಲಿ ಹಸಿ ಕರಗ ಸ್ಥಾಪಿಸಿದ್ದ ಸ್ಥಳದಲ್ಲಿ ಚೈತ್ರ ಪೌರ್ಣಮಿಯ ಶನಿವಾರ ತಡರಾತ್ರಿ ಕರಗ ಶಕ್ತ್ಯೋತ್ಸವದ ವಿಧಿವಿಧಾನಗಳು ಜರುಗಿದವು. ಮಲ್ಲಿಗೆ ಹೂವಿನಿಂದ ಅಲಂಕೃತವಾಗಿದ್ದ ದ್ರೌಪದಿದೇವಿ ಕರಗ ಉತ್ಸವ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಬೆಂಗಳೂರು ಪೇಟೆಯ ಗಲ್ಲಿಗಲ್ಲಿಗೆ ಹೊರಟಿತು.

ಬೆಂಗಳೂರು ಕರಗ ಶಕ್ತ್ಯೋತ್ಸವ ಸಂಪನ್ನ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಭೇಟಿ

ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ನಡೆದ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ರಾತ್ರಿ 10.30ರ ಸುಮಾರಿಗೆ ತುಂತುರು ಮಳೆಯಲ್ಲಿಯೇ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕೂಡ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ಅಂಗಳದಲ್ಲಿ ಕರಗಕ್ಕೆ ಪುಷ್ಪಾರ್ಚನೆ ಮಾಡಿದರು

ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಶನಿವಾರ (ಏಪ್ರಿಲ್ 12) ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳು, ಧಾರ್ಮಿಕ ವಿಧಿ–ವಿಧಾನಗಳು ನಡೆದವು. ಭಾನುವಾರ ತಡರಾತ್ರಿ ಹಸಿ ಕರಗದ ಪೂಜೆ ನಡೆದು, ಸಂಪಂಗಿ ಕೆರೆಯ ಶಕ್ತಿಪೀಠದಿಂದ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಹಸಿ ಕರಗವನ್ನು ಅರ್ಚಕ ಜ್ಞಾನೇಂದ್ರ ಮೆರಣಿಗೆಯಲ್ಲಿ ಹೊತ್ತು ತಂದಿದ್ದರು. ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ, ಹರಕೆ ತೀರಿಸುವ ಭಕ್ತರು ಬೃಹತ್‌ ಗಾತ್ರದ ಕರ್ಪೂರ ದೀಪ ಬೆಳಗಿ ಆರತಿ ಸಮರ್ಪಿಸಿದರು.

ಗೋವಿಂದ ನಾಮಸ್ಮರಣೆ ಅನುರಣನೆ, ಮಲ್ಲಿಗೆ ಹೂವಿನ ಕಂಪು ಹರಡಿದ ಕರಗ ಮೆರವಣಿಗೆ

ಕರಗ ಶಕ್ತ್ಯೋತ್ಸವದ ಪೂಜಾ ವಿಧಿಗಳು ಮುಗಿದ ಬಳಿಕ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಕರಗ ಮೆರವಣಿಗೆ ಹೊರಟಿತು. ಇದೇವೇಳೆ ಸಹಸ್ರಾರು ಸಂಖ್ಯೆಯಲ್ಲಿದ್ದ ವೀರಕುಮಾರರು ‘ದೀ ಧಿತ್ತಿ...’ ಎಂಬ ಉದ್ಗಾರದೊಂದಿಗೆ ಕತ್ತಿಯನ್ನು ಎದೆಗೆ ಬಡಿಕೊಂಡು ನಮಸ್ಕರಿಸಿದರು. ಭಕ್ತರು ಗೋವಿಂದ ನಾಮಸ್ಮರಣೆ ಮಾಡಿದ್ದು, ಅದು ಅನುರಣನೆಗೊಳ್ಳುತ್ತಿತ್ತು. ದ್ರೌಪದೀದೇವಿ ಕರಗ ಸಾಗಿದಲ್ಲೆಲ್ಲ ಮಲ್ಲಿಗೆ ಹೂವು ಎರಚುತ್ತಿದ್ದ ಕಾರಣ ಊರು ತುಂಬಾ ಮಲ್ಲಿಗೆ ಕಂಪು ಹರಡಿತ್ತು. ಭಕ್ತಿ ಭಾವ ತುಂಬಿ ತುಳುಕುತ್ತಿತ್ತು.

ದ್ರೌಪದಿದೇವಿ ಕರಗ ಶಕ್ತ್ಯೋತ್ಸವದ (ಬೆಂಗಳೂರು ಕರಗ) ಅಂಗವಾಗಿ ತಿಗಳರಪೇಟೆ, ನಗರ್ತರಪೇಟೆ, ಕಬ್ಬನ್‌ ಪೇಟೆ, ಗಾಣಿಗರ ಪೇಟೆ, ದೊಡ್ಡಪೇಟೆಯ ಮುಖ್ಯರಸ್ತೆ ಹಾಗೂ ಗಲ್ಲಿಗಲ್ಲಿಗಳಲ್ಲಿ ಭಕ್ತಿ ಭಾವದ ಸಂಭ್ರಮ ಮನೆ ಮಾಡಿತ್ತು. ಹಲವೆಡೆ ಗಲ್ಲಿಗಳಲ್ಲಿ, ಮನೆಯ ಮೇಲೆನಿಂತಿದ್ದ ನಾಗರಿಕರು ಅಲ್ಲಿಂದಲೇ ಮಲ್ಲಿಗೆಯ ಅಭಿಷೇಕವನ್ನೂ ಮಾಡಿದರು. ಭಕ್ತರು ಕರಗದ ಮೇಲೆ ಮಲ್ಲಿಗೆ ಹೂವನ್ನು ಚೆಲ್ಲಿ ಭಕ್ತಿಭಾವ ಮೆರೆದರು.

ನಗರ್ತಪೇಟೆ, ಸಿದ್ದಣ್ಣ ಗಲ್ಲಿ, ಕಬ್ಬನ್‌ ಪೇಟೆ, ಗಾಣಿಗರ ಪೇಟೆ, ದೊಡ್ಡಪೇಟೆ ಯಿಂದ ಕೆ.ಆರ್. ಮಾರುಕಟ್ಟೆ ತಲುಪಿ, ಮಸ್ತಾನ್ ಸಾಬ್‌ ದರ್ಗಾಕ್ಕೆ ಭೇಟಿ ನೀಡಿ ಪೂಜೆ ಸ್ವೀಕರಿಸಿತು. ಬಳೇಪೇಟೆ ಹಳೇ ಗರಡಿ, ಅಣ್ಣಮ್ಮನ ದೇವಾಲಯ, ಕಿಲಾರಿ ರಸ್ತೆ, ಯಲಹಂಕ ಗೇಟ್, ಅವೆನ್ಯೂ ರಸ್ತೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರ ಪೇಟೆಗಳಲ್ಲಿ ಸಾಗಿತು.

ಇದೇ ವೇಳೆ, ಕರಗ ಉತ್ಸವ ಹೊರಟ ನಂತರ ಧರ್ಮರಾಯಸ್ವಾಮಿ ಮಹಾರಥೋತ್ಸವ ಮುಖ್ಯ ರಸ್ತೆಗಳಲ್ಲಿ ನೆರವೇರಿತು. ಭಕ್ತರು ಬಾಳೆಹಣ್ಣನ್ನು ಮಹಾರಥಕ್ಕೆ ಎಸೆದು ಭಕ್ತಿ ಮೆರೆದರು. ಈ ರಥದ ಹಿಂದೆ ನಗರದ ಹಲವು ಭಾಗ ಗಳಿಂದ ಆಗಮಿಸಿದ್ದ ನೂರಾರು ತೇರು–ರಥಗಳು, ಪಲ್ಲಕ್ಕಿಗಳು ಸಾಗಿದವು.

ಕರಗ ತಲುಪುವ ದೇವಸ್ಥಾನಗಳನ್ನು ದೀಪಾಲಂಕಾರಗಳಿಂದ ಆಕರ್ಷಕವಾಗಿ ಸಿಂಗರಿಸಲಾಗಿತ್ತು. ತಿಗಳರಪೇಟೆ ಸೇರಿದಂತೆ ಕರಗ ಸಾಗುವ ಮಾರ್ಗದಲ್ಲಿ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಬೆಂಗಳೂರಿನ ಅವೆನ್ಯೂ ರಸ್ತೆ, ಬಿ.ವಿ.ಕೆ ಅಯ್ಯಂಗಾರ್‌ ರಸ್ತೆ ಸುತ್ತಮುತ್ತ ಹಾಗೂ ಕರಗ ಸಾಗುವ ಮುಖ್ಯರಸ್ತೆ, ಅಡ್ಡರಸ್ತೆಗಳಲ್ಲಿ ಪಲಾವ್‌, ಬಿಸಿಬೇಳೆಬಾತ್‌ ಸೇರಿ ವಿವಿಧ ರೀತಿಯ ಆಹಾರ, ಭಕ್ಷ್ಯಗಳನ್ನು ವಿತರಿಸಲಾಯಿತು. ಪಾನಕ, ಮಜ್ಜಿಗೆಯನ್ನೂ ಕರಗ ನೋಡಲು ಬಂದ ಭಕ್ತರಿಗೆ ನೀಡುತ್ತಿದ್ದುದು ಕಂಡುಬಂತು.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner