Bangalore Flower Show: ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ; ಹೂಗಳಲ್ಲಿ ಅರಳಲಿವೆ ರಾಮಾಯಣದ ಘಟನಾವಳಿಗಳು, ಮಹರ್ಷಿ ವಾಲ್ಮೀಕಿ ಪ್ರತಿಕೃತಿ
Bangalore Flower Show 2025: ಬೆಂಗಳೂರಿನ ಲಾಲ್‌ಬಾಗ್ ಈ ಬಾರಿ ವಿಭಿನ್ನ ಪರಿಕಲ್ಪನೆಯೊಂದಿಗೆ ಫಲಪುಷ್ಪ ಪ್ರದರ್ಶನ ಆಯೋಜಿಸಲು ಅಣಿಯಾಗಿದೆ. ಇದರ ವಿವರ ಇಲ್ಲಿದೆ. (ವರದಿ: ಎಚ್.ಮಾರುತಿ,ಬೆಂಗಳೂರು)
![ಬೆಂಗಳೂರಿನ ಲಾಲ್ ಬಾಗ್‌ನಲ್ಲಿ ಈ ಬಾರಿಯೂ ವಿಭಿನ್ನ ಪರಿಕಲ್ಪನೆಯೊಂದಿಗೆ ಫಲ ಪುಷ್ಪ ಪ್ರದರ್ಶನ ಅಣಿಯಾಗುತ್ತಿದೆ. ಬೆಂಗಳೂರಿನ ಲಾಲ್ ಬಾಗ್‌ನಲ್ಲಿ ಈ ಬಾರಿಯೂ ವಿಭಿನ್ನ ಪರಿಕಲ್ಪನೆಯೊಂದಿಗೆ ಫಲ ಪುಷ್ಪ ಪ್ರದರ್ಶನ ಅಣಿಯಾಗುತ್ತಿದೆ.](https://images.hindustantimes.com/kannada/img/2024/12/31/550x309/flowr_1735615178206_1735615183493.jpeg)
Bangalore Flower Show 2025: ಗಣ ರಾಜ್ಯೋತ್ಸವದ ಅಂಗವಾಗಿ ತೋಟಗಾರಿಕಾ ಇಲಾಖೆ ಹಮ್ಮಿಕೊಳ್ಳುವ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಮಹರ್ಷಿ ವಾಲ್ಮೀಕಿ ಅವರ ವಿಷಯ ಕುರಿತ ಹೂವಿನ ಪ್ರತಿಕೃತಿ ಅರಳಲಿದೆ. 2025ರ ಜನವರಿ 16 ರಿಂದ 26ರವರೆಗೆ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ದೇಶದ ಮೇರು ಕೃತಿಗಳಲ್ಲಿ ಒಂದಾದ ರಾಮಾಯಣ ಮಹಾಕಾವ್ಯ ರಚಿಸಿದ ಮಹರ್ಷಿ ವಾಲ್ಮೀಕಿ ಅವರ ಜೀವನ ಗಾಥೆಯನ್ನು ಪುಷ್ಪಗಳಲ್ಲಿ ಅರಳಿಸಲು ತೋಟಗಾರಿಕೆ ಇಲಾಖೆ ಸಿದ್ಧತೆ ನಡೆಸಿದೆ. ಪುಷ್ಪ ಪ್ರದರ್ಶನ ಹೇಗಿರಬೇಕು ಯಾವ ರೀತಿ ಇರಬೇಕು ಎಂದು ತಜ್ಞರು ಮತ್ತು ಪರಿಣಿತರೊಂದಿಗೆ ಚರ್ಚೆ ನಡೆಸುತ್ತಿದ್ದೇವೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ರಾಮಾಯಣ ಮಹಾಕಾವ್ಯದ ಪ್ರಮುಖ ಘಟನಾವಳಿಗಳನ್ನು ಫಲಪುಷ್ಪ ಪ್ರದರ್ಶನದಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಜತೆಗೆ ವಾಲ್ಮೀಕಿ ಅವರಜೀವನದ ಪ್ರಮುಖ ಘಟನೆಗಳು ಪುಷ್ಪಗಳಲ್ಲಿ ಆರಳಲಿದೆ.
ವಾಲ್ಮೀಕಿ ಅವರು ರಾಮಾಯಣ ರಚಿಸುತ್ತಿರುವ ಪ್ರತಿಮೆಯನ್ನು ವೈವಿಧ್ಯಮಯ ಹೂಗಳ ಮೂಲಕ ರಚಿಸಲು ಇಲಾಖೆ ಪ್ರಯತ್ನ ನಡೆಸುತ್ತಿದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ. ಜಗದೀಶ್ ತಿಳಿಸಿದ್ದಾರೆ.
ಬೆಂಗಳೂರಿನ ಲಾಲ್‌ಬಾಗ್ ಫಲ ಪುಷ್ಪ ಪ್ರದರ್ಶನ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯಲಿದೆ. ಈ ಬಾರಿಯೂ ಸಂಕ್ರಾಂತಿ ಮುಗಿದ ತಕ್ಷಣವೇ ಪ್ರದರ್ಶನ ಶುರುವಾಗಿ ಸತತ ಹತ್ತು ದಿನ ಕಾಲ ಇರಲಿದೆ. ಗಣರಾಜ್ಯೋತ್ಸವ ದಿನ ಮುಕ್ತಾಯಗೊಳ್ಳಲಿದೆ
ಏನೇನಿರಲಿದೆ ವಿಶೇಷ
ಪ್ರದರ್ಶನಕ್ಕಾಗಿ ಕಟ್ ಫ್ಲವರ್ಸ್, ಇಲಾಖೆ ನರ್ಸರಿಗಳಲ್ಲಿ ವೈವಿಧ್ಯಮಯ ಪುಷ್ಪಗಳನ್ನು ಹೂ ಕುಂಡಗಳಲ್ಲಿ ಬೆಳೆಯಲಾಗುತ್ತಿದೆ. ಸನ್ ಫ್ಲವರ್ ನ ಕಟ್ ಫ್ಲವರ್ಸ್, ಶೀತ ಪ್ರದೇಶಗಳಲ್ಲಿ ಬೆಳೆಯುವ ಹೂಗಳು, ಈ ಬಾರಿಯ ಆಕರ್ಷಣೆಯಾಗಿವೆ. ದೇಶ ವಿದೇಶಗಳಿಂದಲೂ ವಿವಿಧ ವೈವಿಧ್ಯಮಯ ತಳಿಯ ಹೂಗಳನ್ನೂ ಆಮದು ಮಾಡಿಕೊಳ್ಳಲಾಗುತ್ತದೆ. ಪ್ರತಿ ಬಾರಿಯಂತೆ ಈ ವರ್ಷವೂ ಸುಮಾರು 7-8 ಲಕ್ಷ ಪಿಂಕ್, ಕಿತ್ತಳೆ ಬಣ್ಣದ ಗುಲಾಬಿ ಹೂಗಳು, ಬಿಳಿ, ಪಿಂಕ್ ಮತ್ತು ಹಳದಿ ವರ್ಣಗಳ ಸೇವಂತಿಗೆ ಹೂಗಳನ್ನು ಬಳಕೆ ಮಾಡಲಾಗುತ್ತಿದೆ.
ವಿದೇಶದಿಂದಲೂ ಬರಲಿವೆ ಹೂವುಗಳು
ಈ ಬಾರಿಯೂ ಕೊಲಂಬಿಯಾ, ನೆದರ್ ಲ್ಯಾಂಡ್ಸ್, ಬೆಲ್ಜಿಯಂ, ಕೀನ್ಯಾ, ಆಸ್ಟ್ರೇಲಿಯಾದಿಂದ ಹೂಗಳನ್ನು ತರಿಸಲು ಇಲಾಖೆ ನಿರ್ಧರಿಸಿದೆ. ಜೊತೆಗೆ ಆಕರ್ಷಕ ಬೋನ್ಸಾಯ್, ಇಕಾಬೇನಾ ಪ್ರದರ್ಶನವಿರುತ್ತದೆ. ಗಾಜಿನ ಮನೆಯ ಹೊರ ಭಾಗದಲ್ಲೂ ಹೂವಿನ ಕಲಾಕೃತಿಗಳನ್ನು ನಿರ್ಮಿಸಲಾಗುತ್ತಿದೆ. ಬ್ಯಾಂಡ್ ಸ್ಟ್ಯಾಂಡ್, ರಾಕ್ ಗಾರ್ಡನ್ ಸೆಲ್ಫಿ ಪಾಯಿಂಟ್ ಇದ್ದೇ ಇರುತ್ತದೆ. ಮೊದಲ ಆರು ದಿನಗಳ ನಂತರ ಹೂಗಳನ್ನು ಬದಲಾಯಿಸಲು ನಿರ್ಧರಿಸಲಾಗಿದೆ. ಈ ಬಾರಿಯೂ ಸುಮಾರು 10 ಲಕ್ಷಕ್ಕೂ ಹೆಚ್ಚು ವೀಕ್ಷಕರನ್ನು ನಿರೀಕ್ಷಿಸಲಾಗಿದೆ. ಹೊರ ಜಿಲ್ಲೆ ಹೊರ ರಾಜ್ಯಗಳಿಂದ ಹೆಚ್ಚಿನ ಪ್ರವಾಸಿಗರು ಬರುವ ನಿರೀಕ್ಷೆ ಇದೆ.
ಶಾಲಾ ಮಕ್ಕಳಿಗೆ ಉಚಿತ ಪ್ರವೇಶ
ಪಾರ್ಕಿಂಗ್ ವ್ಯವಸ್ಥೆ ಹಾಗೂ ಭದ್ರತೆಯ ದೃಷ್ಟಿಯಿಂದ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪ್ರವೇಶ ಶುಲ್ಕ ಕುರಿತು ಅಂತಿಮ ನಿರ್ಧಾರ ಕೈಗೊಂಡಿಲ್ಲ. ಶಾಲೆಯ ಗುರುತಿನ ಚೀಟಿ ತೋರಿಸಿದರೆ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗುತ್ತದೆ. ಸ್ವಾತಂತ್ರ್ಯ ದಿನಾಚರಣೆ ಪ್ರದರ್ಶನದಲ್ಲಿ ವಯಸ್ಕರಿಗೆ ರೂ.80 ಪ್ರವೇಶ ಶುಲ್ಕ ನಿಗದಿ ಮಾಡಲಾಗಿತ್ತು.
ಇದು 215ನೇ ಫಲಪುಷ್ಪ ಪ್ರದರ್ಶನವಾಗಿದ್ದು ಹಲವು ವಿಶೇಷತೆಗಳನ್ನು ಒಳಗೊಂಡಿರುತ್ತದೆ. ಇಡೀ ಪ್ರದರ್ಶನಕ್ಕೆ ಏಕ ಕಾಲಕ್ಕೆ 7-8 ಲಕ್ಷ ವೈವಿಧ್ಯಮಯ ಹೂಗಳನ್ನು ಬಳಕೆ ಮಾಡಲಾಗುತ್ತಿದೆ. ಅಂಥೋರಿಯಂ, ಲಿಲ್ಲಿ, ಆರ್ಕಿಡ್, ಜರ್ ಬೆರಾ, ಸೇವಂತಿಗೆ, ದ್ರಸಿನಾ, ಜನಾಡೋ ಹೂಗಳಿಂದ ವಾಲ್ಮೀಕಿ ಗಮನ ಸೆಳೆಯಲಿದ್ದಾರೆ. (ವರದಿ: ಎಚ್.ಮಾರುತಿ.ಬೆಂಗಳೂರು)
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.
![Whats_app_banner Whats_app_banner](https://kannada.hindustantimes.com/static-content/1y/wBanner.png)