Bangalore News: ಬೆಂಗಳೂರು ಲಾಲ್‌ಬಾಗ್‌ ಉದ್ಯಾನದ ವಿಶಾಲ ಕೆರೆಯಲ್ಲಿ ತೇಲುವ ತೋಟಗಳು; ಈ ತೋಟಗಳು ಹೇಗಿರಲಿವೆ?
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರು ಲಾಲ್‌ಬಾಗ್‌ ಉದ್ಯಾನದ ವಿಶಾಲ ಕೆರೆಯಲ್ಲಿ ತೇಲುವ ತೋಟಗಳು; ಈ ತೋಟಗಳು ಹೇಗಿರಲಿವೆ?

Bangalore News: ಬೆಂಗಳೂರು ಲಾಲ್‌ಬಾಗ್‌ ಉದ್ಯಾನದ ವಿಶಾಲ ಕೆರೆಯಲ್ಲಿ ತೇಲುವ ತೋಟಗಳು; ಈ ತೋಟಗಳು ಹೇಗಿರಲಿವೆ?

Bangalore News: ಬೆಂಗಳೂರಿನ ಪ್ರಮುಖ ಪ್ರವಾಸಿ ತಾಣವಾಗಿರುವ ಲಾಲ್‌ಬಾಗ್‌ ಉದ್ಯಾನವನದ ಕೆರೆಯಲ್ಲಿ ತೋಟಗಾರಿಕೆ ಇಲಾಖೆಯು ತೇಲುವ ತೋಟಗಳನ್ನು ರೂಪಿಸಲು ಮುಂದಾಗಿದೆ.ವರದಿ: ಎಚ್‌.ಮಾರುತಿ. ಬೆಂಗಳೂರು

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ತೇಲುವ ತೋಟಗಳಿಗೆ ಸಿದ್ದತೆ ನಡೆದಿದೆ.
ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ತೇಲುವ ತೋಟಗಳಿಗೆ ಸಿದ್ದತೆ ನಡೆದಿದೆ.

Bangalore News: ಬೆಂಗಳೂರಿನ ಪ್ರಸಿದ್ದ ಲಾಲ್‌ ಬಾಗ್‌ ನ ಕೆರೆಯಲ್ಲಿ ತೇಲುವ ತೋಟಗಳನ್ನುಪರಿಚಯಿಸಲು ತೋಟಗಾರಿಕಾ ಇಲಾಖೆ ಮುಂದಾಗಿದೆ. ಈ ಮೂಲಕ 30 ಎಕರೆಯಲ್ಲಿ ಹರಡಿರುವ ಕೆರೆ ಮತ್ತು ಕೆರೆಯ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸಲು ಮತ್ತು ಸುಂದರಗೊಳಿಸುವ ನಿಟ್ಟಿನಲ್ಲಿ ಈ ಪ್ರಯತ್ನಕ್ಕೆ ಕೈ ಹಾಕಿದೆ. ಇಂತಹ 22 ತೇಲುವ ತೋಟಗಳನ್ನು ನಿರ್ಮಿಸಲು ಖಾಸಗಿ ಸಂಸ್ಥೆಯೊಂದಕ್ಕೆ ವಹಿಸಲಾಗಿದೆ. ಈಗಾಗಲೇ ಶೇ. 80 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ 1 ತಿಂಗಳಲ್ಲಿ ತೇಲುವ ತೋಟಗಳು ಕೆರೆಯಲ್ಲಿ ತೇಲಲಿವೆ. ಈ ತೇಲುವ ತೋಟಗಳಲ್ಲಿ ಸಸ್ಯಗಳನ್ನು ನೆಟ್ಟು ಕೆರೆಗೆ ಬಿಡಲಾಗುತ್ತದೆ, 12*15 ಮತ್ತು 6*4 ಅಳತೆಯಲ್ಲಿ ತೇಲುವ ತೋಟಗಳನ್ನು ನಿರ್ಮಿಸಿ ಕನ್ನಾ ಇಂಡಿಕಾ ಗಿಡಗಳನ್ನು ನೆಡಲಾಗುತ್ತದೆ.

ಕನ್ನಾ ಇಂಡಿಕಾ ಸಸ್ಯಗಳೇ ಏಕೆ ಎಂದರೆ ಈ ಸಸ್ಯಗಳು ಜಲ ಸ್ನೇಹಿ ಮತ್ತು ಸುಲಭದ ಬೆಲೆಗೆ ಲಭ್ಯವಾಗುತ್ತವೆ. ಒಮ್ಮೆ ನೀರಿನೊಳಗೆ ಬೇರುಗಳು ಇಳಿದರೆ ಸಸ್ಯಗಳೇ ನೀರಿನಿಂದ ನೇರವಾಗಿ ತಮಗೆ ಬೇಕಾದ ಪೌಷ್ಠಿಕಾಂಶಗಳನ್ನು ಹೀರಿಕೊಳ್ಳುತ್ತವೆ. ಈ ಸಸ್ಯಗಳು ವರ್ಷವಿಡೀ ಹೂಗಳನ್ನು ಬಿಡುತ್ತವೆ ಮತ್ತು ನೀರನ್ನು ಅತ್ಯಂತ ಸಮರ್ಥವಾಗಿ ಶುದ್ದೀಕರಿಸುವ ಗುಣವನ್ನು ಹೊಂದಿವೆ ಎಂದು ತೋಟಗಾರಿಕಾ ಇಲಾಖೆ ನಿರ್ದೇಶಕ ಎಂ. ಜಗದೀಶ್‌ ಹೇಳುತ್ತಾರೆ.

ಇದರ ಸಂಪೂರ್ಣ ವೆಚ್ಚವನ್ನು ಜಾರಿಗೊಳಿಸುತ್ತಿರುವ ಸಂಸ್ಥೆಯೇ ನಿಭಾಯಿಸುತ್ತದೆ. ಒಂದೊಂದು ಪ್ಯಾನೆಲ್‌ ನಲ್ಲಿ ಒಂದೊಂದು ಬಣ್ಣದ ಹೂಗಳ ಸಸಿಗಳನ್ನು ನೆಡಲಾಗುತ್ತದೆ. ಪ್ರತಿಯೊಂದು ಪ್ಯಾನೆಲ್‌ ಗೂ ಪಿವಿಸಿ ಪೈಪ್‌ ಗಳನ್ನು ಅಳವಡಿಸಲಾಗುತ್ತದೆ. ಇದರಿಂದ ನೀರಿನಲ್ಲಿ ಪಾಚಿ ಬೆಳೆಯುವುದು ಕಡಿಮೆಯಾಗುತ್ತದೆ ಮತ್ತು ಬಾತುಕೋಳಿಯಂತಹ ಪಕ್ಷಿಗಳನ್ನು ಆಕರ್ಷಿಸುತ್ತದೆ ಎನ್ನುತ್ತಾರೆ. ಇದರಿಂದ ಕೆರೆಯ ಸೌಂದರ್ಯ ಹೆಚ್ಚುತ್ತದೆ. ಒಮ್ಮೆ ಗಿಡಗಳನ್ನು ನೆಟ್ಟರೆ 3 ರಿಂದ 4 ತಿಂಗಳಲ್ಲಿ ಪೊದೆಯ ರೀತಿಯಲ್ಲಿ ಬೆಳೆಯುತ್ತವೆ. ನಂತರ ಹೂ ಬಿಡುತ್ತವೆ ಎಂದೂ ವಿವರಿಸಿದ್ದಾರೆ.

ಈ ಹೂ ಗಿಡಗಳು ಅಧಿಕ ಪ್ರಮಾಣದಲ್ಲಿ ಆಮ್ಲಜನಕವನ್ನು ಹೊರಬಿಡುತ್ತವೆ. ಮೂರು ನಾಲ್ಕು ತಿಂಗಳಿಗೊಮ್ಮೆ ಹಣ್ಣಾದ ಮತ್ತು ಉದುರಿದ ಎಲೆ ಮತ್ತು ಹೂಗಳನ್ನು ಸ್ವಚ್ಛಗೊಳಸುವ ಕೆಲಸ ಮಾತ್ರ ಮಾಡಬೇಕಾಗುತ್ತದೆ. ಪ್ರಯೋಗಾರ್ಥವಾಗಿ ಎರಡು ಮೂರು ಪ್ಯಾನೆಲ್‌ ಗಳಲ್ಲಿ ಅಲೋಕಾಸಿಯಾ ಗಿಡಗಳನ್ನು ಬೆಳೆಸಲಾಗುತ್ತದೆ ಎಂದು ಜಗದೀಶ್‌ ತಿಳಿಸಿದ್ದಾರೆ. ಇದೇ ಮಾದರಿಯ ಯೋಜನೆಯನ್ನು ಲಾಲ್‌ ಬಾಗ್‌ ನ ಲೋಟಸ್‌ ಕೊಳದಲ್ಲಿ ಜಾರಿಗೊಳಿಸಲಾಗಿದೆ. ಇಲ್ಲಿ 2.5 ಲಕ್ಷ ರೂ ವೆಚ್ಚದಲ್ಲಿ ಆರು ತೇಲುವ ಪ್ಯಾನೆಲ್‌ ಗಳನ್ನು ಸ್ಥಾಪಿಸಲಾಗಿದೆ.

 

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner