Bangalore News: ಬೆಂಗಳೂರು 7 ವಿಧಾನಸಭಾ ಕ್ಷೇತ್ರಗಳಲ್ಲಿ ಹರಿಯಲಿದ್ದಾಳೆ ಕಾವೇರಿ; 5 ನೇ ಹಂತದ ಯೋಜನೆಗೆ ಇಂದು ಚಾಲನೆ, 6ನೇ ಹಂತಕ್ಕೂ ಸಿದ್ದತೆ
ಬೆಂಗಳೂರು ನಗರದ ಏಳು ವಿಧಾನಸಭಾ ಕ್ಷೇತ್ರಗಳ ಜನರಿಗೆ ಕಾವೇರಿ ನೀರು ಒದಗಿಸುವ ಕುಡಿಯುವ ನೀರಿನ ಯೋಜನೆಗೆ ಬುಧವಾರ ಚಾಲನೆ ದೊರಕಲಿದೆ. ಯೋಜನೆಯ ವಿವರ ಇಲ್ಲಿದೆ.

ಬೆಂಗಳೂರು: ಬೆಂಗಳೂರಿನ ಶೇ. 30 ಭಾಗದ ಜನರಿಗೆ ಕಾವೇರಿ ನೀರು ಒದಗಿಸುವ ಬಹು ನಿರೀಕ್ಷಿತ ಕಾವೇರಿ ಐದನೇ ಹಂತದ ಯೋಜನೆಗೆ ಚಾಲನೆ ದೊರಕುತ್ತಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ತೊರೆ ಕಾಡನಹಳ್ಳಿ ಗ್ರಾಮದಿಂದ ಕಾವೇರಿ ನದಿ ಮೂಲಕ ನೀರನ್ನು ಬೆಂಗಳೂರಿಗೆ ಸರಬರಾಜು ಮಾಡುವ ಯೋಜನೆ ಇದಾಗಿದ್ದು, ಇದರಿಂದ ಬೆಂಗಳೂರಿನ ಏಳು ವಿಧಾನಸಭಾ ಕ್ಷೇತ್ರಗಳು ಹಾಗೂ ಹೊಂದಿಕೊಂಡಂತೆ ಇರುವ 110 ಹಳ್ಳಿಗಳ ಜನರು ನಿತ್ಯ ಕಾವೇರಿ ನೀರನ್ನು ಸೇವಿಸಬಹುದು. ಈವರೆಗೂ ಈ ಭಾಗಗಳಿಗೆ ಬೋರ್‌ವೆಲ್ ನೀರೇ ಗತಿ ಎನ್ನುವ ಸ್ಥಿತಿಯಿತ್ತು. ಈಗ ಆ ಕೊರಗು ನೀಗಲಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿ (ಟಿ. ಕೆ. ಹಳ್ಳಿ ) ಯಲ್ಲಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಆವರಣದಲ್ಲಿ ಅಕ್ಟೋಬರ್ 16 ರ ಬುಧವಾರ ಕಾವೇರಿ 5ನೇ ಹಂತ ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು. ಇದಕ್ಕೆ ಸಿದ್ದತೆಗಳು ಆಗಿವೆ. ಎತ್ತಿನ ಹೊಳೆ ಯೋಜನೆ ಚಾಲನೆ ಬಳಿಕ ಮತ್ತೊಂದು ಮಹತ್ವದ ನೀರಿನ ಯೋಜನೆ ಬಳಕೆಗೆ ಸಮರ್ಪಣೆಯಾಗುತ್ತಿದೆ.
ಕಾವೇರಿ 5ನೇ ಹಂತದ ಯೋಜನೆಯಿಂದಲೇ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಬೆಂಗಳೂರಿನಲ್ಲಿ 4 ಲಕ್ಷ ನೀರಿನ ಸಂಪರ್ಕ ಗುರಿಯನ್ನು ಇಟ್ಟುಕೊಂಡಿದೆ. ಈ ಯೋಜನೆಗೆ 4336 ಕೋಟಿ ರೂ. ವೆಚ್ಚ ಮಾಡಲಾಗಿದೆ. 775 ಎಂ. ಎಲ್. ಡಿ ಹೆಚ್ಚುವರಿ ನೀರು ಪೂರೈಕೆ, ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ನೀರು ಸರಬರಾಜು, ಯಲಹಂಕ, ಯಶವಂತಪುರ, ಬೆಂಗಳೂರು ದಕ್ಷಿಣ, ಬ್ಯಾಟರಾಯನಪುರ, ಬೊಮ್ಮನಹಳ್ಳಿ ವಲಯದ ಮನೆ ಮನೆಗೂ ಕಾವೇರಿ ನೀರು ಪೂರೈಕೆಯಾಗಲಿದೆ.
ಮನೆ ಮನೆಗೂ ಕಾವೇರಿ ನೀರು ಇದು ಸಮೃದ್ಧ ಬೆಂಗಳೂರು ಎನ್ನುವ ಘೋಷಣೆಯೊಂದಿಗೆ ಕಾವೇರಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಈ ಯೋಜನೆಯನ್ನು ಜಾರಿಗೊಳಿಸಿದೆ ಎನ್ನುವುದು ಬೆಂಗಳೂರು ನಗರಾಭಿವೃದ್ದಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನೀಡುವ ವಿವರಣೆ.
ರಾಜರಾಜೇಶ್ವರಿ ನಗರ ಕ್ಷೇತ್ರ, ಬೊಮ್ಮನಹಳ್ಳಿ ಕ್ಷೇತ್ರ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಕೆಆರ್‌ಪುರ, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ನೀರು ಸಿಗಲಿದೆ. ಸುಮಾರು 775 ಎಂಎಲ್‌ಡಿ ನೀರು 5ನೇ ಹಂತದ ಕಾವೇರಿ ಯೋಜನೆಯಿಂದ ಬೆಂಗಳೂರಿಗೆ ಲಭ್ಯವಾಗಲಿದೆ. ಒಟ್ಟು ಬೆಂಗಳೂರು ನಗರ ಭಾಗವಲ್ಲದೇ ಸುತ್ತಮುತ್ತಲಿನ 110 ಹಳ್ಳಿಗಳಿಗೆ ಇದರ ಉಪಯೋಗ ಸಿಗಲಿದೆ.
ಜೈಕಾ ಇಂಡಿಯಾದ ಆರ್ಥಿಕ ನೆರವಿನಿಂದ ಕಾವೇರಿ 5ನೇ ಹಂತದ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಸಾಲ ಯೋಜನೆಯಡಿ ಇದನ್ನು ಅನುಷ್ಠಾನಗೊಳಿಸಲಾಗಿದೆ.
ಕಾವೇರಿ 5ನೇ ಹಂತದ ಯೋಜನೆ ಅತ್ಯಾಧುನಿಕವಾಗಿದೆ. ಸ್ಕಾಡಾ ತಂತ್ರಜ್ಞಾನವನ್ನು ಇಲ್ಲಿ ಬಳಕೆ ಮಾಡಲಾಗಿದೆ. ಇದರಿಂದ ನೀರಿನ ಸೋರಿಕೆ ತಗ್ಗಲಿದ್ದು, ಬೆಂಗಳೂರು ನಿವಾಸಿಗಳಿಗೆ ಸಮರ್ಪಕ ನೀರು ಸಿಗಲಿದೆ.
ನೀರಿನ ಸಂಪರ್ಕ ಪಡೆಯಲು ಏಳು ವಿಧಾನ ಸಭಾ ಕ್ಷೇತ್ರದ ಜನರಿಗೆ ಅವಕಾಶ ಮಾಡಿಕೊಡಲು ಬೆಂಗಳೂರು ಜಲ ಮಂಡಳಿ ಯೋಜನೆ ರೂಪಿಸಿಕೊಂಡಿದೆ. ಈಗಾಗಲೇ ಸಂಪರ್ಕ ಪಡೆದವರಿಗೆ ಸಮಸ್ಯೆ ಇಲ್ಲ. ಈವರೆಗೂ ಸಂಪರ್ಕ ಪಡೆಯದವರಿಗೆ ಇದರ ಸೌಲಭ್ಯ ಸಿಗಲಿದೆ.ಇದರಿಂದ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದ 50 ಲಕ್ಷ ಫಲಾನುಭವಿಗಳಿಗೆ ಉಪಯೋಗವಾಗಲಿದೆ.
ಬೆಂಗಳೂರಿಗೆ ಸದ್ಯ ಪ್ರತಿ ದಿನ 1500 ಕೋಟಿ ಲೀಟರ್ ನೀರು ಕಾವೇರಿ ಸೇರಿದಂತೆ ನಾನಾ ಯೋಜನೆಗಳಿಂದ ಲಭಿಸುತ್ತಿದೆ. ಹೊಸದಾಗಿ ಐದನೇ ಹಂತದ ಸೇರ್ಪಡೆಯಿಂದ ಈ ಪ್ರಮಾಣ 2225 ಕೋಟಿ ಲೀಟರ್‌ಗೆ ಏರಿಕೆಯಾಗಲಿದೆ. ಮುಂದಿನ ಹತ್ತು ವರ್ಷಗಳವರೆಗೂ ಅಗತ್ಯ ನೀರನ್ನು ಬೆಂಗಳೂರಿಗರಿಗೆ ಒದಗಿಸಲು ಸಹಕಾರಿಯಾಗಲಿದೆ.
ಬೆಂಗಳೂರಿನ ಮುಂದಿನ ನೀರಿನ ಬೇಡಿಕೆ ಗಮನದಲ್ಲಿಟ್ಟುಕೊಂಡು 6 ನೇ ಹಂತದ ಕಾವೇರಿ ಯೋಜನೆ ರೂಪಿಸಲು ಕರ್ನಾಟಕ ಸರ್ಕಾರ ಯೋಜಿಸುತ್ತಿದೆ. ಇದಕ್ಕೆ ಬೇಕಾದ ವಿಸ್ತೃತ ಯೋಜನಾ ವರದಿಯನ್ನು ಸಿದ್ದಪಡಿಸಲಾಗಿದೆ. ಆರ್ಥಿಕ ಅನುದಾನ ಲಭ್ಯತೆ ನೋಡಿಕೊಂಡು ಮುಂದೆ 6 ನೇ ಹಂತದ ಯೋಜನೆಯೂ ಜಾರಿಯಾಗಲಿದೆ.