ಕನ್ನಡ ಸುದ್ದಿ / ಕರ್ನಾಟಕ /
ಬೆಂಗಳೂರು ಅಭಿವೃದ್ದಿಯ ಪ್ರಮುಖ 6 ಯೋಜನೆಗಳು; ಮೆಟ್ರೋ ಹಳದಿ ಮಾರ್ಗ, ಸ್ಕೈಡೆಕ್ ಸಹಿತ 2025 ರಲ್ಲಿ ಯಾವೆಲ್ಲಾ ಯೋಜನೆ ಉದ್ಘಾಟನೆಯಾಗಬಹುದು?
2024 ರಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಸುರಂಗ ರಸ್ತೆಗಳು ಮತ್ತು 250 ಮೀಟರ್ ಸ್ಕೈಡೆಕ್ ನಂತಹ ಬೆಂಗಳೂರಿನ ನಗರಾಭಿವೃದ್ಧಿಗಾಗಿ ಹಲವಾರು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಕೈಗೊಳ್ಳಲಾಯಿತು. ಯೋಜನೆಗಳ ಸ್ಥಿತಿಗತಿ ವಿವರ ಇಲ್ಲಿದೆ.
ನಮ್ಮ ಮೆಟ್ರೋ ಬೆಂಗಳೂರು ಹಳದಿ ಮಾರ್ಗ ಹೊಸ ವರ್ಷದಲ್ಲಿ ಬಳಕೆಗೆ ಸಿಗುವ ನಿರೀಕ್ಷೆಯಿದೆ
ಬೆಂಗಳೂರು: ಬೆಂಗಳೂರಿನಲ್ಲಿ ಪ್ರಮುಖ ಯೋಜನೆಗಳು ಇನ್ನೂ ಪ್ರಗತಿಯ ಹಂತದಲ್ಲೇ ಇವೆ. ಒಂದೂವರೆ ವರ್ಷದ ಹಿಂದೆ ಕರ್ನಾಟಕದಲ್ಲಿ ಬಂದ ಹೊಸ ಸರ್ಕಾರ ಘೋಷಿಸಿದ ಹಲವು ಯೋಜನೆಗಳು, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅನುಷ್ಠಾನಗೊಂಡಿದ್ದ ಕಾರ್ಯಕ್ರಮಗಳು 2024ರಲ್ಲಿ ಜಾರಿಗೊಂಡು ಕೆಲವು ಮುಗಿಯುವ ಹಂತಕ್ಕೆ ಬಂದಿದ್ದರೆ, ಇನ್ನೂ ಹಲವಾರು ಯೋಜನೆಗಳು ಜಾರಿ ಹಂತದಲ್ಲಿಯೇ ಇವೆ. 2025 ರಲ್ಲಿ ಕೆಲವು ಯೋಜನೆಗಳು ಬಳಕೆಗೆ ಲಭ್ಯವಾಗಬಹುದು ಎನ್ನುವ ನಿರೀಕ್ಷೆಯಿದೆ. ಇದರಲ್ಲಿ ಮೆಟ್ರೋ ರೈಲು ಹಳದಿ ಮಾರ್ಗದ ವಿಸ್ತರಣೆ, ಎಲೆವೇಟೆಡ್ ನಿಲ್ದಾಣಗಳು ಮಾರ್ಗಗಳು ಸೇರಿವೆ. ಸುರಂಗ ಮಾರ್ಗಗಳ, ಸ್ಕೈಡೆಕ್‌ನಂತಹ ಯೋಜನೆಗಳು ಜಾರಿಗೊಳಿಸಲು ಸಿದ್ದತೆ ಮಾಡಿಕೊಳ್ಳುವ ಹಂತದಲ್ಲಿಯೇ ಇವೆ.
- 250 ಮೀಟರ್ ಸ್ಕೈಡೆಕ್ ನ ಯೋಜನೆಗಳು ಆರಂಭಿಕ ಪ್ರಸ್ತಾಪಗಳನ್ನು ಮೀರಿ ಇನ್ನೂ ಸಾಗಿಲ್ಲ. ಯೋಜನೆಗೆ ಭೂಮಿಯನ್ನು ಪಡೆಯುವ ಪ್ರಯತ್ನಗಳು ಪದೇ ಪದೇ ಹಿನ್ನಡೆಯನ್ನು ಎದುರಿಸುತ್ತಿವೆ. ಭದ್ರತಾ ಕಾರಣಗಳಿಂದಾಗಿ ಎನ್ ಜಿಇಎಫ್ ಭೂಮಿ ಮತ್ತು ಮೈಸೂರು ಲ್ಯಾಂಪ್ಸ್ ಕಾರ್ಖಾನೆಯ ಭೂಮಿಯನ್ನು ತಿರಸ್ಕರಿಸಲಾಯಿತು. ಹೆಮ್ಮಿಗೆಪುರದಲ್ಲಿ 25 ಎಕರೆ ಜಾಗವನ್ನು ಗುರುತಿಸಲಾಯಿತು. ಆದರೆ ಕಾನೂನು ತೊಡಕುಗಳನ್ನು ಎದುರಿಸಬೇಕಾಯಿತು. ಇಂತಹ ಎಲ್ಲಾ ಪ್ರಯತ್ನಗಳ ನಡುವೆಯೇ ಕಾರ್ಯಸಾಧ್ಯವಾದ ಸೈಟ್ ಗಾಗಿ ಹುಡುಕಾಟ ಮುಂದುವರೆದಿದೆ.
- ಸುರಂಗ ರಸ್ತೆ ಯೋಜನೆಯು ಈ ವರ್ಷ ಬೆಂಗಳೂರಿಗರಿಗೆ ಮಾತ್ರವಲ್ಲದೇ ಹೊರಗಿನವರ ಗಮನವನ್ನೂ ಸೆಳೆಯಿತು., ವಿವರವಾದ ಯೋಜನಾ ವರದಿ (ಡಿಪಿಆರ್) ಕೇವಲ ಮೂರು ತಿಂಗಳಲ್ಲಿ ಪೂರ್ಣಗೊಂಡಿತು, ಈ ಪ್ರಕ್ರಿಯೆಯು ಸಾಮಾನ್ಯವಾಗಿ ಒಂದು ವರ್ಷದವರೆಗೆ ವಿಸ್ತರಣೆಯಾಗುತ್ತದೆ. ಈ ಯೋಜನೆಯು ಎರಡು ಪ್ರಮುಖ ಅವಳಿ-ಟ್ಯೂಬ್ ಸುರಂಗಗಳನ್ನು ಒಳಗೊಂಡಿದೆ. ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ವರೆಗೆ 18 ಕಿ.ಮೀ ಮತ್ತು ಕೆ.ಆರ್.ಪುರಂನಿಂದ ಮೈಸೂರು ರಸ್ತೆಯನ್ನು ಸಂಪರ್ಕಿಸುವ 22 ಕಿ.ಮೀ ಕಾರಿಡಾರ್. ಈ ಯೋಜನೆಗಳು ಆಗಸ್ಟ್‌ನಲ್ಲಿ ರಾಜ್ಯ ಸಚಿವ ಸಂಪುಟದ ಅನುಮೋದನೆಯನ್ನು ಪಡೆದವು. ಅಲ್ಲಿಂದ ಮುಂದೆ ಕೇಂದ್ರ ಸರ್ಕಾರದ ನೆರವು ಪಡೆದು ಯೋಜನೆ ರೂಪಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಸುರಂಗ ಮಾರ್ಗಗಳ ವಿಚಾರದಲ್ಲಿ ಸಾಕಷ್ಟು ಚರ್ಚೆಗಳೂ ನಡೆದಿವೆ. ಇದು ಸಮಸ್ಯೆಗೆ ಪರಿಹಾರವಲ್ಲ. ಹೆಚ್ಚಿನ ಹೊರೆಯಷ್ಟೇ ಎಂದು ಕೆಲವರು ಪ್ರತಿಪಾದಿಸಿದರೆ, ಮತ್ತೆ ಬೆಂಗಳೂರು ಸಂಚಾರ ದಟ್ಟಣೆ ತಗ್ಗಿಸಲು ಇದೂ ಇದು ಒಂದು ಪರಿಹಾರೋಪಾಯ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವಸತಿ ಮತ್ತು ನಗರಾಭಿವೃದ್ಧಿ ನಿಗಮದಿಂದ (ಹುಡ್ಕೊ) 27,000 ಕೋಟಿ ರೂ.ಗಳ ಸಾಲವನ್ನು ಪಡೆಯುವುದರೊಂದಿಗೆ ದೀರ್ಘಕಾಲದಿಂದ ಬಾಕಿ ಇರುವ ಪೆರಿಫೆರಲ್ ರಿಂಗ್ ರಸ್ತೆ (ಪಿಆರ್‌ಆರ್) ಯೋಜನೆಯೂ ಪ್ರಗತಿಯಲ್ಲಿದೆ. 2025 ರಲ್ಲಿ 1,900 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಈ ಹಣವನ್ನು ಭಾಗಶಃ ಬಳಸಲು ಬಿಡಿಎ ಸಿದ್ದತೆ ಮಾಡಿಕೊಂಡಿದೆ. ಆದಾಗ್ಯೂ, ಯೋಜನೆಯು ಪರಿಹಾರ ಚೌಕಟ್ಟುಗಳ ಬಗ್ಗೆ ವಿವಾದವನ್ನು ಎದುರಿಸುತ್ತಿದೆ. 2013ರ ಭೂಸ್ವಾಧೀನ ಕಾಯ್ದೆಯಡಿ ಪರಿಹಾರ ನೀಡುವಂತೆ ರೈತರು ಒತ್ತಾಯಿಸುತ್ತಿದ್ದರೆ, ಬಿಡಿಎ ಕಾಯ್ದೆ 1976ರ ಆಧಾರದ ಮೇಲೆ ಪರಿಹಾರ ನೀಡಲು ಬಿಡಿಎ ಯೋಜಿಸಿದೆ. ಈ ಭಿನ್ನಾಭಿಪ್ರಾಯವು ಹೊರ ವರ್ತುಲ ರಸ್ತೆಯ ಕುರಿತು ಚರ್ಚೆಗಳು ಮುಂದುವರಿಯುವ ಲಕ್ಷಣಗಳಿವೆ. ಭೂಸ್ವಾಧೀನವೂ ಸೇರಿದಂತೆ ಇತರೆ ಚಟುವಟಿಕೆ ಮುಗಿಸಿ ಕಾಮಗಾರಿಯೂ ಆರಂಭವಾಗುವ ಸೂಚನೆಗಳಿವೆ.
- ಬೆಂಗಳೂರಿನ ನಮ್ಮ ಮೆಟ್ರೋ 2024 ರಲ್ಲಿ ಮತ್ತೊಂದು ವರ್ಷ ವಿಳಂಬ ಮತ್ತು ಸೀಮಿತ ಪ್ರಗತಿಯನ್ನು ಕಂಡಿತು. ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರದವರೆಗೆ 18.82 ಕಿ.ಮೀ ಉದ್ದದ 16 ಎಲಿವೇಟೆಡ್ ನಿಲ್ದಾಣಗಳೊಂದಿಗೆ ಬಹು ನಿರೀಕ್ಷಿತ ಹಳದಿ ಮಾರ್ಗ( ಯೆಲ್ಲೋ ಲೈನ್ ) 2025 ರ ಜನವರಿಯಲ್ಲಿ ಮುಕ್ತಗೊಳ್ಳುವ ಸಾಧ್ಯತೆಯಿದೆ. ದಕ್ಷಿಣ ಬೆಂಗಳೂರಿನಲ್ಲಿ ಸಂಪರ್ಕವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಈ ಯೋಜನೆಯು ರೋಲಿಂಗ್ ಸ್ಟಾಕ್ ತಡವಾಗಿ ಬಂದ ಕಾರಣ ವಿಳಂಬವಾಗಿದೆ. ಚೀನಾದ ಸಿಆರ್‌ಆರ್‌ಸಿಯಿಂದ ಒಂದು ಮೂಲಮಾದರಿ ರೈಲು ಮಾತ್ರ ಫೆಬ್ರವರಿ 2024 ರಲ್ಲಿ ಬಂದಿತು. ಆನಂತರ ಹೆಬ್ಬಗೋಡಿ ಮೆಟ್ರೋ ಡಿಪೋದಲ್ಲಿ ಸ್ಥಿರ ಪರೀಕ್ಷೆಗಳಿಗೆ ಒಳಗಾಯಿತು. ಉಳಿದ ರೈಲು ಸೆಟ್ ಗಳನ್ನು ಇನ್ನೂ ಕಾಯಲಾಗುತ್ತಿದೆ, ಇದು ಮತ್ತಷ್ಟು ಹಿನ್ನಡೆಗೆ ಕಾರಣವಾಗಿದೆ. 216 ಮೆಟ್ರೋ ಬೋಗಿಗಳನ್ನು ಪೂರೈಸಲು 2019 ರಲ್ಲಿ 1,578 ಕೋಟಿ ರೂ.ಗಳ ಗುತ್ತಿಗೆ ಪಡೆದ ಸಿಆರ್‌ಆರ್ ಸಿ, ಒಪ್ಪಂದದ ಪ್ರಕಾರ ಭಾರತದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಸಾಧ್ಯವಾಗದ ಕಾರಣ ಸವಾಲುಗಳನ್ನು ಎದುರಿಸಿತು. ಇದರಿಂದಾಗಿ ಬಿಎಂಆರ್‌ಸಿಎಲ್ ಹಲವು ನೋಟಿಸ್‌ಗಳನ್ನು ನೀಡಿ 372 ಕೋಟಿ ರೂ.ಗಳ ಬ್ಯಾಂಕ್ ಗ್ಯಾರಂಟಿಯನ್ನು ನಗದೀಕರಿಸುವ ಬಗ್ಗೆ ಯೋಚಿಸಿತು. ಉಳಿದ ಬೋಗಿಗಳನ್ನು ತಲುಪಿಸಲು ಸಿಆರ್‌ಆರ್‌ಸಿ ಕೋಲ್ಕತಾ ಮೂಲದ ಟಿಟಾಘರ್ ವ್ಯಾಗನ್ಸ್ನೊಂದಿಗೆ ಪಾಲುದಾರಿಕೆ ಹೊಂದಿದೆ. 2025 ರಲ್ಲಿ ಇನ್ನಷ್ಟು ಬೋಗಿಗಳು ಸಿಗುವ ನಿರೀಕ್ಷೆಗಳಿವೆ.
- ನಾಗಸಂದ್ರದಿಂದ ಮಾದಾವರ (ಬಿಐಇಸಿ) ವರೆಗಿನ 3.14 ಕಿ.ಮೀ ಹಸಿರುಮಾರ್ಗ ವಿಸ್ತರಣೆಯು ಈ ವರ್ಷದ ಏಕೈಕ ಗಮನಾರ್ಹ ಪ್ರಗತಿಯಾಗಿದೆ, ಇದು 2024 ರ ನವೆಂಬರ್‌ನಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಆರಂಭದಲ್ಲಿ 27 ತಿಂಗಳಲ್ಲಿ ಪೂರ್ಣಗೊಳ್ಳಬೇಕಿದ್ದ ಈ ಯೋಜನೆಯು ಹಲವಾರು ವಿಳಂಬಗಳನ್ನು ಎದುರಿಸಿತು ಮತ್ತು ನಿರ್ಮಾಣ ಪ್ರಾರಂಭವಾದ ಏಳು ವರ್ಷಗಳ ನಂತರ ಪೂರ್ಣಗೊಂಡಿತು.
- ಬೆಂಗಳೂರಿಗರಿಗೆ ಕಾವೇರಿ ನೀರು ಒದಗಿಸುವ ಐದನೇ ಹಂತದ ಯೋಜನೆಗೆ ಚಾಲನೆ ದೊರೆತು ದಕ್ಷಿಣ ಭಾಗದ ಹಲವು ಪ್ರದೇಶಗಳಿಗೆ ಕಾವೇರಿ ನೀರು ಸಿಗುತ್ತಿದೆ. ಬೆಂಗಳೂರು ಸುತ್ತಲಿನ ಹಳ್ಳಿಗಳಿಗೂ ಕಾವೇರಿ ನೀರು ಲಭ್ಯವಾಗುತ್ತಿದೆ. ಈಗ ಆರನೇ ಹಂತದ ಯೋಜನೆ ಜಾರಿ ಚರ್ಚೆ ನಡೆದಿದ್ದು 2025 ರಲ್ಲಿ ಇದಕ್ಕೊಂದು ರೂಪ ಸಿಗಬಹುದು.