ಕಾರವಾರದಲ್ಲಿ ಪರಿಚಯವಾದ ಚಾಲಕನ ಕ್ಯಾಬ್ ಬೆಂಗಳೂರಿನಲ್ಲಿ ಬುಕ್ ಮಾಡಿ ಕಾರ್ ಸಹಿತ ಪರಾರಿಯಾದ ಯುವತಿ
ದೂರದ ಕಾರವಾರದಲ್ಲಿ ಕ್ಯಾಬ್ ಚಾಲಕನಿಗೆ ಯುವತಿ ಪರಿಚಯವಾಗಿದ್ದು, ನಂತರ ಅದೇ ಕಾರನ್ನು ಯುವತಿ ಬೆಂಗಳೂರಿನಲ್ಲಿ ಬುಕ್ ಮಾಡಿದ್ದಾಳೆ. ನಂತರ ಆಕೆ ಅದೇ ಕಾರ್ ಸಹಿತ ಪರಾರಿಯಾಗಿದ್ದು ಹೇಗೆ? ಸಿನೀಮಯ ಮಾದರಿಯಲ್ಲಿದೆ ಈ ಚಾಲಕ ಅನಂತನ ಅವಾಂತರದ ಕಥೆ ವ್ಯಥೆ. (ವರದಿ: ಎಚ್.ಮಾರುತಿ)

ಬೆಂಗಳೂರು: ಕ್ಯಾಬ್ ಚಾಲಕನೊಬ್ಬ ಸುಖಾಸುಮ್ಮನೆ ಮಹಿಳೆಯೊಬ್ಬರನ್ನು ಪರಿಚಯ ಮಾಡಿಕೊಂಡಿದ್ದಾನೆ. ಆ ಪರಿಚಯದ ಪರಿಣಾಮ ತನ್ನ ಕುಟುಂಬ ನಿರ್ವಹಣೆಗೆ ಕಾರಣವಾಗಿದ್ದ ಕಾರನ್ನು ಕಳೆದುಕೊಂಡಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ನಗರದ ಎಚ್‌ಎಂಟಿ ಲೇಔಟ್ ನಿವಾಸಿ ಕ್ಯಾಬ್ ಚಾಲಕ 39 ವರ್ಷದ ಅನಂತ ಕುಮಾರ್ ದೂರನ್ನು ಸಲ್ಲಿಸಿ ತಾನು ಆ ಮಹಿಳೆ ಹೆಣೆದ ಬಲೆಗೆ ಹೇಗೆ ಸಿಕ್ಕಿ ಬಿದ್ದೆ ಎಂದು ವಿವರಿಸಿದ್ದಾನೆ.
ಏಪ್ರಿಲ್ ಕೊನೆಯಲ್ಲಿ ಅನಂತ್ ಕುಮಾರ್ ಕಾರವಾರ ಪ್ರವಾಸಕ್ಕೆ ಪ್ರವಾಸಿಗರನ್ನು ಕರೆದೊಯ್ದಿದ್ದಾನೆ. ಬೀಚ್ ಹತ್ತಿರ ಅವರಿಗಾಗಿ ಕಾಯ್ದುಕೊಂಡು ಕಾರಿನಲ್ಲಿ ಕುಳಿತಿದ್ದಾನೆ. ಆಗ ಅಲ್ಲಿಗೆ ಆಗಮಿಸಿದ 20 ವರ್ಷದ ಯುವತಿಯೊಬ್ಬಳು ತನ್ನನ್ನು ಪರಿಚಯಿಸಿಕೊಂಡಿದ್ದಾಳೆ. ಹೀಗೆ ಮಾತನಾಡುತ್ತಿರುವಾಗ ಕಾರು ಚಾಲಕ ಬೆಂಗಳೂರಿನವ ಎಂಬುದನ್ನು ಯುವತಿ ತಿಳಿದುಕೊಂಡಿದ್ದಾಳೆ. ಬೆಂಗಳೂರಿನಿಂದ ಮೈಸೂರಿಗೆ ಹೋಗಬೇಕಿದ್ದು ನಿಮ್ಮ ಕಾರನ್ನೇ ಬುಕ್ ಮಾಡುವುದಾಗಿ ಹೇಳಿದ್ದಾಳೆ. ಇಬ್ಬರೂ ಪರಸ್ಪರ ಮೊಬೈಲ್ ನಂಬರ್ ಹಂಚಿಕೊಂಡಿದ್ದಾರೆ.
ಯುವತಿಯು ಆಗಾಗ್ಗೆ ಕ್ಯಾಬ್ ಚಾಲಕನಿಗೆ ವಾಟ್ಸಾಪ್ ಕರೆ ಮಾಡುತ್ತಿರುತ್ತಾಳೆ. ಮೇ 6 ರಂದು ರಾತ್ರಿ 9.3೦ ಕ್ಕೆ ಕರೆ ಮಾಡಿ ಮರು ದಿನ ಬೆಂಗಳೂರಿಗೆ ಬರುತ್ತಿದ್ದು, ಕಾರ್‌ನ ಅವಶ್ಯಕತೆ ಇದೆ ಎಂದು ಹೇಳಿದ್ದಾಳೆ. ಆಗ ಅನಂತ್ ಹುಬ್ಬಳ್ಳಿಯಲ್ಲಿರುವುದಾಗಿ ತಿಳಿಸಿದ್ದಾನೆ. ನಂತರ ಮರುದಿನ 11 ಗಂಟೆಗೆ ಭೇಟಿ ಮಾಡುವುದಾಗಿ ತಿಳಿಸಿದ್ದಾಳೆ. ಯುವತಿಯು ಮೆಜೆಸ್ಟಿಕ್‌ನಲ್ಲಿ ರೂಂ ಬುಕ್ ಮಾಡಲು ಹೇಳಿದ್ದಾಳೆ. ಆ ಪ್ರದೇಶದಲ್ಲಿ ತನಗೆ ಯಾರೂ ಪರಿಚಯ ಇಲ್ಲ. ಆದರೆ ತುಮಕೂರು ರಸ್ತೆಯಲ್ಲಿ ಪರಿಚಯ ಇರುವುದಾಗಿ ತಿಳಿಸಿದ್ದಾನೆ. ಆಗ ಯುವತಿಯು ಅಲ್ಲೇ ರೂಂ ಬುಕ್ ಮಾಡಲು ತಿಳಿಸಿ ಆಧಾರ್ ಕಳುಹಿಸಿದ್ದಾಳೆ. ಅನಂತ್ ತನ್ನ ಕಾರ್ ಮಾಲೀಕ ಹಾಗೂ ಸಂಬಂಧಿಯಾದ ಶಂಕರ್ ನಾಯಕ್ ಮೂಲಕ ರೂಂ ಕಾಯ್ದಿರಿಸಿದ್ದಾನೆ. ತುಮಕೂರು ರಸ್ತೆಯ ಎಂಟನೇ ಮೈಲಿಯಲ್ಲಿ ಆಕೆಯನ್ನು ಪಿಕ್ ಅಪ್ ಮಾಡಿದ್ದಾನೆ.
ನಂತರ ಆಕೆಯನ್ನು ಕಾಯ್ದಿರಿಸಿದ್ದ ಕೊಠಡಿಗೆ ಕರೆದುಕೊಂಡು ಹೋಗಿದ್ದಾನೆ. ಯುವತಿಯು ನಾನು ಇಲ್ಲೇ ಇರುವ ಬ್ಯೂಟಿ ಪಾರ್ಲರ್ ಗೆ ಹೋಗಿ ಬರುತ್ತೇನೆ. ನೀವೂ ಫ್ರೆಶ್ ಅಪ್ ಆಗಿ ಬನ್ನಿ ಎಂದು ಅನಂತ್‌ಗೆ ಹೇಳಿದ್ದಾಳೆ. ಆಕೆ ಹೇಳಿದಂತೆ ಅನಂತ್ ವಾಷ್ ರೂಂ ಪ್ರವೇಶಿಸುತ್ತದ್ದಂತೆ ಯುವತಿ ವಾಷ್ ರೂಂ ಮತ್ತು ರೂಂನ ಬಾಗಿಲು ಬಂದ್ ಮಾಡಿದ್ದಾಳೆ. ಕೂಡಲೇ ಆಕೆ ಅನಂತ್‌ನ ಮೊಬೈಲ್, ಮತ್ತು ಕಾರ್ ಕೀ ತೆಗೆದುಕೊಂಡು ಅಲ್ಲಿಗೆ ಆಕೆ ಕರೆಸಿದ್ದ ಮತ್ತೊಬ್ಬ ಪುರುಷನೊಂದಿಗೆ ಕಾರ್ ಸಹಿತ ಪರಾರಿಯಾಗಿದ್ದಾರೆ.
ಅತ್ತ ವಾಷ್ ರೂಂ ನಲ್ಲಿ ಸಿಕ್ಕಿಕೊಂಡಿದ್ದ ಅನಂತ್ ಸಹಾಯಕ್ಕಾಗಿ ಮೊರೆಯಿಟ್ಟಿದ್ದಾನೆ. ಆಗ ಹೋಟೆಲ್ ಸಿಬ್ಬಂದಿ ಆತನನ್ನು ಹೊರಗೆ ಕರೆ ತಂದಿದ್ದಾರೆ. ಯುವತಿಯು ಆ ಪುರುಷನೊಂದಿಗೆ ತುಮಕೂರು, ಹಿರಿಯೂರು, ಚಿತ್ರದುರ್ಗ ಮೂಲಕ ಪ್ರಯಾಣಿಸಿದ್ದಾರೆ. ಆ ನಂತರ ಅವರು ಯಾವ ಮಾರ್ಗದಲ್ಲಿ ತೆರಳಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಹೋಟೆಲ್‌ನ ಸಿಸಿಟಿವಿ ಕ್ಯಾಮೆರಾ ಕೆಲಸ ಮಾಡುತ್ತಿರಲಿಲ್ಲ. ಈ ಕಥೆಯನ್ನು ಅನಂತ್ ಹೇಳಿದ್ದಾನೆ. ಆದರೆ ಪೊಲೀಸರು ಇದನ್ನು ಸಂಪೂರ್ಣವಾಗಿ ನಂಬುವ ಸ್ಥಿತಿಯಲ್ಲಿಲ್ಲ. ಅಪರಾಧಿಗಳು ಪತ್ತೆಯಾದ ನಂತರವಷ್ಟೇ ಸತ್ಯಾಂಶ ತಿಳಿದು ಬರುತ್ತದೆ ಎಂದು ಪೊಲೀಸರು ಹೇಳಿದ್ದಾರೆ.