Bengaluru Metro: ಬೆಂಗಳೂರು ಮೆಟ್ರೋ ಪ್ರಯಾಣಿಕರ ಸೇವೆಗೆ ನಾಳೆಯಿಂದ ಮೆಟ್ರೋ ಮಿತ್ರ
Bengaluru Metro Mithra ಬೆಂಗಳೂರು ಮೆಟ್ರೋ ಸೇವೆ ಬಳಸುವವರಿಗೆ ಆಟೋ ರಿಕ್ಷಾವನ್ನು ಸುಲಭ ಹಾಗೂ ಸುರಕ್ಷಿತವಾಗಿ ಬಳಸುವ ಉದ್ದೇಶದಿಂದ ಮೆಟ್ರೋ ಮಿತ್ರ( Metro mitra) ಸೇವೆಯನ್ನು ಬುಧವಾರ ಆರಂಭಿಸಲಾಗುತ್ತಿದೆ.
ಬೆಂಗಳೂರು: ದಿನನಿತ್ಯ ಬೆಂಗಳೂರು ಮೆಟ್ರೋದಲ್ಲಿ ಪ್ರಯಾಣ ಮಾಡುವವರು ಹಾಗೂ ಬೇರೆ ಊರುಗಳಿಂದ ಮೆಜೆಸ್ಟಿಕ್ ಗೆ ಬಂದಿಳಿದು, ಅಲ್ಲಿಂದ ಮೆಟ್ರೋದಲ್ಲಿ ತಮ್ಮ ಸ್ಥಳಗಳಿಗೆ ತಲುಪಬೇಕಾದ ಪ್ರಯಾಣಿಕರು ಓದಲೇಬೇಕಾದ ಸುದ್ದಿಯಿದು.
ಮೆಟ್ರೋ ನಿಲ್ದಾಣದಲ್ಲಿ ಇಳಿದ ನಂತರ ಮನೆಯನ್ನು ತಲುಪುವುದು ಹೇಗೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತದೆ. ಎಷ್ಟು ಹೊತ್ತು ಕಾದರೂ ಆಟೋ ಬರುವುದೇ ಇಲ್ಲ, ಬಂದರೂ ಜಾಸ್ತಿ ಹಣ ಕೇಳುತ್ತಾರೆ. ಇಂತಹ ಎಲ್ಲಾ ಸಮಸ್ಯೆಗಳಿಂದ ದೂರವಾಗಲು ನಾಳೆಯಿಂದ ನಿಮಗೆ ಅವಕಾಶವಿದೆ.
ಹೌದು. ಅದೇ ಮೆಟ್ರೋ ಮಿತ್ರ. ನಿಮ್ಮ ಸಮಸ್ಯೆಗಳಿಗೆ ಮೆಟ್ರೋ ಮಿತ್ರ ಪರಿಹಾರ ನೀಡಲಿದೆ. ಮೆಟ್ರೋ ನಿಲ್ದಾಣದ ಬಳಿ ಇಳಿದಾಗ ನೀವು ಈ ಮೆಟ್ರೋ ಮಿತ್ರ ಆಪ್ ಮೂಲಕ ಆಟೋ ಬುಕ್ ಮಾಡಬಹುದು. ನಂತರ ನೀವು ಸುಲಭವಾಗಿ ನಿಮ್ಮ ಸ್ಥಳವನ್ನು ತಲುಪಬಹುದು.
ಈಗಾಗಲೇ ಜಾರಿಯಲ್ಲಿರುವ ನಮ್ಮ ಯಾತ್ರಿ ಅಪ್ಲಿಕೇಶನ್ ಯಶಸ್ಸಿನ ನಂತರ, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಜೊತೆಗೆ ಆಟೋ ಚಾಲಕರ ಸಂಘದವರು ಮೆಟ್ರೋ ಮಿತ್ರ ಆಪ್ ಅನ್ನು ಆರಂಭಿಸಿದ್ದಾರೆ. ಈ ಆಪ್ ನಾಳೆಯಿಂದ ಅಂದರೆ ಸೆಪ್ಟೆಂಬರ್ 6 ರಿಂದ ಕಾರ್ಯಾರಂಭ ಮಾಡಲಿದೆ.
ಆಟೋರಿಕ್ಷಾ ಸಹಯೋಗ
ಈ ಅಪ್ಲಿಕೇಶನ್ ಅಂದರೆ ಆಪ್ ವಿಭಿನ್ನವಾಗಿದ್ದು, ಮೆಟ್ರೋ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಬೆಂಗಳೂರಿನ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಕ್ಯೂಆರ್ ಕೋಡ್ ಅನ್ನು ಹೊರಗೆ ಹಾಕಲಾಗಿರುತ್ತದೆ. ಅದನ್ನು ಸ್ಕ್ಯಾನ್ ಮಾಡಿ ಆಟೋ ಬುಕ್ ಮಾಡಿಕೊಳ್ಳಬಹುದು. ಸರ್ಕಾರ ನಿಗದಿಪಡಿಸಿರುವ ದರಗಳನ್ನೇ ಈ ಆಟೋ ಚಾಲಕರು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ. ಹೀಗಾಗಿ ಪ್ರಯಾಣಿಕರು ಆಟೋ ದರದ ಬಗ್ಗೆ ಆತಂಕ ಪಡುವ ಅಗತ್ಯವಿರುವುದಿಲ್ಲ.
ಬಳಕೆ ಹೀಗೆ
ಮೆಟ್ರೋ ನಿಲ್ದಾಣಗಳ ಹೊರಗೆ ಪ್ರದರ್ಶಿಸಲಾಗಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದ ನಂತರ ಆಟೋ ಬರಲಿದೆ. ಆಟೋ ಚಾಲಕರು ಆಪ್ ಅನ್ನು ಹೊಂದಿದ್ದು, ಅವರಿಗೆ ನೋಟಿಫಿಕೇಶನ್ ತಲುಪಲಿದೆ ನಂತರ ನೀವು ಒನ್ ಟೈಮ್ ಪಾಸ್ವರ್ಡ್ ಬಳಸಿ ಪ್ರಯಾಣ ಮಾಡಬಹುದು.
ಮೆಟ್ರೋ ನಿಲ್ದಾಣದಿಂದ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಇರುವ ಸ್ಥಳಗಳಿಗೆ ನಿಮ್ಮನ್ನು ಕೊಂಡೊಯ್ಯಲಿದೆ. ಈ ಮೆಟ್ರೋ ಮಿತ್ರ ಆಪ್ ನಲ್ಲಿ ಇರುವ ಸಣ್ಣಪುಟ್ಟ ದೋಷಗಳಿವೆ. ಪ್ರಾರಂಭದಲ್ಲಿ ನಿರ್ದಿಷ್ಟ ಲ್ಯಾಂಡ್ ಮಾರ್ಕ್ ಗಳನ್ನು ಮಾತ್ರ ಆಪ್ ತೋರಿಸುತ್ತದೆ. ಪ್ರಯಾಣಿಕರು ಅಲ್ಲಿಯವರೆಗೆ ಪ್ರಯಾಣ ಮಾಡಬಹುದು. ಬಳಿಕ ಅಲ್ಲಿಂದ ತಮ್ಮ ಸ್ಥಳಗಳಿಗೆ ಚಾಲಕರೊಂದಿಗೆ ಮಾತನಾಡಿಕೊಂಡು ಅಥವಾ ಬೇರೆ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಅಲ್ಲದೆ ಮೆಟ್ರೋ ಮಿತ್ರ ಆಪ್ ಬಳಸಿದ್ದಕ್ಕೆ ಹತ್ತು ರೂಪಾಯಿ ಹೆಚ್ಚುವರಿ ಹಣ ನೀಡಬೇಕಾಗುತ್ತದೆ ಎನ್ನುವುದು ಆಟೋರಿಕ್ಷಾ ಚಾಲಕರ ಸಂಘದ ವಿವರಣೆ.
( ವರದಿ: ಅಕ್ಷರಾ ಕಿರಣ್, ಬೆಂಗಳೂರು)
ಇದನ್ನೂ ಓದಿರಿ