HDK: ಮಳೆಗೆ ಮತ್ತೆ ಮುಳುಗಿದ ಬೆಂ-ಮೈ ಎಕ್ಸ್‌ಪ್ರೆಸ್‌ವೇ; ಎಲ್ಲಾ ಕಾಮಗಾರಿ ಮುಗಿಯುವ ತನಕ ಟೋಲ್ ಕಟ್ಟಬೇಡಿ; ಸವಾರರಿಗೆ ಹೆಚ್ಡಿಕೆ ಕರೆ
ಬೆಂ-ಮೈ ಹೆದ್ದಾರಿಯಲ್ಲಿ ತಕ್ಷಣವೇ ಟೋಲ್ ಸಂಗ್ರಹ ನಿಲ್ಲಿಸಬೇಕು, ಸರ್ವೀಸ್ ರಸ್ತೆ ನಿರ್ಮಾಣ ಸೇರಿ ಬಾಕಿ ಬಿದ್ದಿರುವ ಎಲ್ಲಾ ಕಾಮಗಾರಿಗಳನ್ನು ಕೂಡಲೇ ಮುಗಿಸಬೇಕು. ಅದುವರೆಗೂ ಟೋಲ್ ಸಂಗ್ರಹ ಮಾಡಬಾರದು. ಜನರೂ ಟೋಲ್ ಕಟ್ಟುವ ಅವಶ್ಯಕತೆ ಇಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನ ಸರ್ವೀಸ್ ರಸ್ತೆ ನಿರ್ಮಾಣ ಸೇರಿ ಎಲ್ಲಾ ಬಾಕಿ ಕಾಮಗಾರಿಗಳು ಮುಗಿಯುವ ತನಕ ಟೋಲ್ ಸಂಗ್ರಹ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಅಂಡರ್ ಪಾಸ್ ಗಳಲ್ಲಿ ನೀರು ನಿಲ್ಲದಂತೆ ಮಾಡಬೇಕು ಹಾಗೂ ಇಡೀ ರಸ್ತೆಯ ಕಾಮಗಾರಿಗಳು ಮುಗಿಯುವ ತನಕ ಜನರು ಕೂಡ ಟೋಲ್ ಕಟ್ಟುವ ಅಗತ್ಯ ಇಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿ ಎಕ್ಸ್ ಪ್ರೆಸ್ ಹೆಮ್ಮಾರಿ ಎಂಬ ಹ್ಯಾಷ್ ಟ್ಯಾಗ್ ಹಾಕಿದ್ದಾರೆ.
ಕಳೆದ ವರ್ಷ ಸುರಿದ ಮಹಾಮಳೆಗೆ ಕೊಚ್ಚಿ ಹೋಗಿದ್ದ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ, ಬೆಳಗಿನ ಜಾವದ ಸಣ್ಣ ಮಳೆಗೂ ತತ್ತರಿಸಿ ಹೋಗಿದೆ. ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ಈ ಎಕ್ಸ್‌ಪ್ರೆಸ್‌ವೇ ಹೆಮ್ಮಾರಿ ಈಗ ಜನರ ಪಾಲಿಗೆ ಸಂಕಷ್ಟಗಳ ಸರಮಾಲೆಯನ್ನೇ ಸೃಷ್ಟಿ ಮಾಡುತ್ತಿದೆ. ಇದು ಎಕ್ಸ್‌ಪ್ರೆಸ್ ಹೆದ್ದಾರಿಯೋ, ಎಕ್ಸ್‌ಪ್ರೆಸ್‌ವೇ ಹೆಮ್ಮಾರಿಯೋ? ಎಂದು ಹೆಚ್ ಡಿಕೆ ಕಿಡಿಕಾರಿದ್ದಾರೆ.
ಸಣ್ಣ ಮಳೆಯಿಂದಲೇ ಹೆದ್ದಾರಿಯ ಅಂಡರ್ ಪಾಸ್ ಗಳು ಜಲಾವೃತವಾಗಿವೆ. ವಾಹನಗಳು ಸಿಕ್ಕಸಿಕ್ಕಲ್ಲಿ ನೀರಿನಲ್ಲಿ ಮುಳುಗಿವೆ. ಸರಣಿ ಅಪಘಾತಗಳಾಗಿ ವಾಹನ ಸವಾರರು ಹೈರಾಣಾಗಿದ್ದಾರೆ. ಅವೈಜ್ಞಾನಿಕ ಕಾಮಗಾರಿಯಿಂದಲೇ ಈ ಅವಾಂತರ ಸೃಷ್ಟಿ ಆಗಿದೆ. ಇದಕ್ಕೆ ರಾಜ್ಯ, ಕೇಂದ್ರ ಸರ್ಕಾರಗಳು, ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆದಾರರೇ ನೇರ ಹೊಣೆ ಎಂದು ಹೇಳಿದ್ದಾರೆ.
ಇವರು ಮಾಡಿದ ಪಾಪಕ್ಕೆ ಜನರು ನೋಯುವಂತಾಗಿದೆ. ತಕ್ಷಣವೇ ಟೋಲ್ ಸಂಗ್ರಹ ನಿಲ್ಲಿಸಬೇಕು, ಸರ್ವೀಸ್ ರಸ್ತೆ ನಿರ್ಮಾಣ ಸೇರಿ ಬಾಕಿ ಬಿದ್ದಿರುವ ಎಲ್ಲಾ ಕಾಮಗಾರಿಗಳನ್ನು ಕೂಡಲೇ ಮುಗಿಸಬೇಕು. ಅದುವರೆಗೂ ಟೋಲ್ ಸಂಗ್ರಹ ಮಾಡಬಾರದು. ಜನರೂ ಟೋಲ್ ಕಟ್ಟುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.
ಕಳೆದ ರಾತ್ರಿ ರಾಮನಗರ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ನಲ್ಲಿ ನೀರು ನಿಂತಿದ್ದು, ಕೆರೆಯಂತಾಗಿದೆ. ತಾಲೂಕಿನ ಸಂಗಬಸವನದೊಡ್ಡಿ ಮೇಲ್ಸೇತುವೆ ಬಳಿಯ ಹೆದ್ದಾರಿಯಲ್ಲಿ ನೀರು ತುಂಬಿಕೊಂಡಿದೆ. ಎಕ್ಸ್‌ಪ್ರೆಸ್‌ವೇನಲ್ಲಿ ನಿಂತಿರುವ ಮಳೆ ನೀರಿನಿಂದಾಗಿ ಹಲವು ವಾಹನಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ವರದಿಯಾಗಿತ್ತು.
ಸದ್ಯ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಮಳೆಯಿಂದ ಜಲಾವೃತವಾಗಿರುವುದು ವಾಹನ ಸವಾರರ ಆಕ್ರೋಶಕ್ಕೂ ಕಾರಣವಾಗಿದೆ. ರಸ್ತೆ ಮೇಲೆ ಹೆಚ್ಚಿನ ನೀರು ನಿಂತ ಹಿನ್ನೆಲೆ ವಾಹನಗಳು ಓಡಾಟಕ್ಕೆ ತೊಂದರೆ ಉಂಟಾಗಿದೆ. ನೀರು ನಿಂತ ಹಿನ್ನೆಲೆ ವಾಹನ ರಸ್ತೆ ಮಧ್ಯದಲ್ಲೆ ಕೆಟ್ಟು ನಿಂತಿದೆ. ಈ ವೇಳೆ ಹಿಂದಿನಿಂದ ಬಂದ ವಾಹನ ನಮ್ಮ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ವಾಹನ ಜಖಂ ಗೊಂಡಿದೆ. ಇದಕ್ಕೆ ಪರಿಹಾರ ಕೊಡಬೇಕೆಂದು ಸಿಎಂಗೆ ಮನವಿ ಮಾಡುವುದಾಗಿ ಸವಾರರೊಬ್ಬರು ಹೇಳಿದ್ದಾರೆ.
ರಸ್ತೆ ಮೇಲೆ ನೀರು ನಿಂತಿರುವುದರಿಂದ ವಾಹನಗಳು ನಿಧಾನವಾಗಿ ಚಲಿಸುತ್ತಿವೆ. ಇದರಿಂದ ಸಂಚಾರ ದಟ್ಟಣೆಯುಂಟಾಗಿ ಸಣ್ಣಪುಟ್ಟ ಅಪಘಾತಗಳು ಸಂಭವಿಸಿವೆ. ರಸ್ತೆ ಮೇಲೆ ಸುಮಾರು ಒಂದರಿಂದ ಎರಡು ಅಡಿಗಳಷ್ಟು ನೀರು ನಿಂತಿದ್ದು, ವಾಹನಗಳ ಎಂಜಿನ್‌ಗೆ ನೀರು ನುಗ್ಗುತ್ತಿದೆ. ಇದರಿಂದ ಅಲ್ಲಲ್ಲಿ ವಾಹನಗಳು ಕೆಟ್ಟು ನಿಂತಿವೆ. ವಾಹನ ಸವಾರರ ಪರದಾಟ ಹೇಳತೀರದಾಗಿದೆ.
ಮಳೆ ನೀರಿಗೆ ಕೆಟ್ಟುನಿಂತ ಕಾರಿಗೆ, ಟ್ರಕ್‌ವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ, ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಹೆದ್ದಾರಿ ಪ್ರಾಧಿಕಾರಕ್ಕೆ ಕರೆ ಮಾಡಿದರೆ ಪ್ರಾಧಿಕಾರದ ಸಿಬ್ಬಂದಿ ಕರೆಗೆ ಸ್ಪಂದಿಸಿಲ್ಲ ಎಂಬ ದೂರು ಕೇಳಿಬಂದಿದೆ.