ಕನ್ನಡ ಸುದ್ದಿ  /  ಕರ್ನಾಟಕ  /  Forest News: ಹುಲಿ ಯೋಜನೆ50, ಮೋದಿ ಕಾರ್ಯಕ್ರಮ ವೆಚ್ಚವೇ 6.33 ಕೋಟಿ ರೂ. ಬಾಕಿ ಪಾವತಿಗೆ ಕೇಂದ್ರ, ಕರ್ನಾಟಕ ಅರಣ್ಯ ಇಲಾಖೆ ತಿಕ್ಕಾಟ !

Forest News: ಹುಲಿ ಯೋಜನೆ50, ಮೋದಿ ಕಾರ್ಯಕ್ರಮ ವೆಚ್ಚವೇ 6.33 ಕೋಟಿ ರೂ. ಬಾಕಿ ಪಾವತಿಗೆ ಕೇಂದ್ರ, ಕರ್ನಾಟಕ ಅರಣ್ಯ ಇಲಾಖೆ ತಿಕ್ಕಾಟ !

Tiger Project ಮೈಸೂರಿನಲ್ಲಿ ಕಳೆದ ವರ್ಷನಡೆದಿದ್ದ ಪ್ರಧಾನಿ ನರೇಂದ್ರ ಮೋದಿ( PM Modi) ವಾಸ್ತವ್ಯದ ಬಿಲ್‌ ಪಾವತಿಯಾಗಿಲ್ಲ. ಈ ಕುರಿತು ವಿವಾದ ಉಂಟಾಗಿದ್ದು, ಕರ್ನಾಟಕ ಅರಣ್ಯ ಸಚಿವ ಈಶ್ವರ ಖಂಡ್ರೆ ಮಧ್ಯೆ ಪ್ರವೇಶಿಸಿದ್ದಾರೆ.

ಹುಲಿ ಯೋಜನೆ ಕಾರ್ಯಕ್ರಮದ ಬಾಕಿ ವಿವಾದ ಏರ್ಪಟ್ಟಿದೆ.
ಹುಲಿ ಯೋಜನೆ ಕಾರ್ಯಕ್ರಮದ ಬಾಕಿ ವಿವಾದ ಏರ್ಪಟ್ಟಿದೆ.

ಬೆಂಗಳೂರು: ಕಳೆದ ವರ್ಷ ಏಪ್ರಿಲ್‌ನಲ್ಲಿ ಮೈಸೂರಿನಲ್ಲಿ ಭಾರೀ ಸಂಭ್ರಮ. ಭಾರತದ ಹುಲಿ ಯೋಜನೆಗೆ 50 ವರ್ಷ ತುಂಬಿದ ಖುಷಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು. ಎರಡು ದಿನ ಮೈಸೂರಲ್ಲೇ ಇದ್ದರು. ಇಲ್ಲಿಯೇ 50 ವರ್ಷದ ನೆನಪಿನ ಕಾರ್ಯಕ್ರಮದಲ್ಲೂ ಭಾಗಿಯಾದರು. ಹುಲಿ ಗಣತಿ ವರದಿಯನ್ನೂ ಬಿಡುಗಡೆ ಮಾಡಿದರು.ಬಂಡೀಪುರಕ್ಕೆ ಹೋದರು. ಅಲ್ಲಿ ಸಫಾರಿ ನಡೆಸಿದರು. ತಮಿಳುನಾಡಿಗೂ ಹೋಗಿ ಆನೆ ಪೋಷಕರಾದ ಬೊಮ್ಮನ್‌ ಹಾಗೂ ಬೆಳ್ಳಿ ಅವರೊಂದಿಗೂ ಕೆಲವು ಕ್ಷಣ ಕಳೆದು ಮೈಸೂರಿಗೆ ವಾಪಾಸಾಗಿದ್ದರು. ಇಲ್ಲಿಂದಲೇ ದೆಹಲಿಗೂ ತೆರಳಿದ್ದರು. ಅವರ ಈ ಭೇಟಿಯ ಒಟ್ಟು ವೆಚ್ಚವೇ 6.33 ಕೋಟಿ ರೂ. ಇಡೀ ಹುಲಿ ಯೋಜನೆ( Tiger Project) ಗೆ ಅನುದಾನ ಕಡಿಮೆಯಾಗುತ್ತಿರುವ ನಡುವೆ ಪ್ರಧಾನಿ ಭೇಟಿ, ವಾಸ್ತವ್ತ, ಕಾರ್ಯಕ್ರಮದ ವೆಚ್ಚದ ಮೊತ್ತ ಕೇಳಿ ವನ್ಯಪ್ರಿಯರಿಗೂ ಅಚ್ಚರಿಯೂ ಆಗಿದೆ. ಇದು ಬೆಳಕಿಗೆ ಬರಲು ಕಾರಣವಾಗಿದ್ದು ಮೋದಿ ಭೇಟಿಯ ಬಾಕಿ ನೀಡದೇ ಇರುವ ವಿಚಾರದಿಂದ.

ಟ್ರೆಂಡಿಂಗ್​ ಸುದ್ದಿ

ಪ್ರಧಾನಿ ಮೋದಿ ಅವರು ಮೈಸೂರಿಗೆ ಬಂದವರು ಇಲ್ಲಿ ಪ್ರಮುಖ ಹೊಟೇಲ್‌ ರಾಡಿಸನ್‌ ಬ್ಲೂನಲ್ಲಿ( Radisson Blue) ಉಳಿದುಕೊಂಡಿದ್ದರು. ಪ್ರಧಾನಿ ಒಬ್ಬರಿಗೋಸ್ಕರವೇ ಭದ್ರತೆ ಕಾರಣದಿಂದ ಇಡೀ ಹೊಟೇಲ್‌ ಬುಕ್‌ ಮಾಡಲಾಗಿತ್ತು. ಕಾರ್ಯಕ್ರಮಕ್ಕೂ ದೇಶ, ವಿದೇಶದಿಂದಲೂ ನಾನಾ ಗಣ್ಯರು ಬಂದಿದ್ದರು.

ಇಡೀ ಕಾರ್ಯಕ್ರಮದ ವೆಚ್ಚ 6 ಕೋಟಿ 33 ಲಕ್ಷ ರೂ. ಆಗಿತ್ತು. ಇದರಲ್ಲಿ 3 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ನೀಡಿ. ಉಳಿಕೆ ಮೊತ್ತವನ್ನು ಕರ್ನಾಟಕ ಅರಣ್ಯ ಇಲಾಖೆ ನೀಡಬೇಕು ಎಂದು ಪತ್ರ ಬರೆಯಲಾಗಿತ್ತು.

ಇದರಲ್ಲಿ ಮೋದಿ ಅವರು ಹೊಟೇಲ್‌ ವಾಸ್ತವ್ಯದ 80 ಲಕ್ಷ ರೂ ಕೂಡ ಸೇರಿತ್ತು. ಹೊಟೇಲ್‌ನವರು ಕರ್ನಾಟಕ ಅರಣ್ಯ ಇಲಾಖೆಗೆ ಪತ್ರ ಬರೆದು ಬಾಕಿ ನೀಡುವಂತೆ ಕೋರಿದ್ದರು. ಇದಕ್ಕೆ ಇಲಾಖೆ ಒಪ್ಪಿರಲಿಲ್ಲ.

ಕೊನೆಗೆ ಹೊಟೇಲ್‌ ಅಧಿಕಾರಿಗಳು ಕಾನೂನು ರೀತಿ ಕ್ರಮಕ್ಕೆ ಮುಂದಾಗುವುದಾಗಿ ಎಚ್ಚರಿಸಿದ್ದರು. ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಸಂಘರ್ಷಕ್ಕೂ ದಾರಿ ಮಾಡಿಕೊಟ್ಟಿತ್ತು.

ಈ ವಿಚಾರವಾಗಿ ಮಧ್ಯಪ್ರವೇಶಿಸಿರುವ ಕರ್ನಾಟಕ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು 80 ಲಕ್ಷ ರೂ.ಗಳನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿದಈಶ್ವರ ಬಿ ಖಂಡ್ರೆ , ಹುಲಿ ಯೋಜನೆಗೆ 50 ವರ್ಷ ತುಂಬಿದ ಅಂಗವಾಗಿ 2023ರ ಏಪ್ರಿಲ್ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಆತಿಥ್ಯದ ಬಿಲ್ ಬಾಕಿಯನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಸ್ಪಷ್ಟಪಡಿಸಿದರು.

ರಾಷ್ಟ್ರಪತಿ ಮೊದಲಾದ ಗಣ್ಯರು ಆಗಮಿಸಿದಾಗ ಆತಿಥ್ಯ ನೀಡುವುದು ರಾಜ್ಯ ಸರ್ಕಾರದ ಸಂಪ್ರದಾಯವಾಗುತ್ತದೆ. ಆದರೆ ಕಳೆದ ವರ್ಷ ಏಪ್ರಿಲ್ ನಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿತ್ತು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ರಾಜ್ಯ ಸರ್ಕಾರ ಈ ಕಾರ್ಯಕ್ರಮದ ಆಯೋಜನೆಯಲ್ಲಿ ಯಾವುದೇ ಪಾತ್ರ ವಹಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಉಂಟಾಗಿರುವ ಗೊಂದಲ ನಿವಾರಿಸಲು ರಾಜ್ಯ ಸರ್ಕಾರವೇ ಮೈಸೂರಿನ ರಾಡಿಸನ್ ಬ್ಲೂ ಹೊಟೆಲ್ ಬಿಲ್ ಬಾಕಿ ಪಾವತಿಸಲು ನಿರ್ಧರಿಸಿದೆ ಎಂದು ತಿಳಿಸಿದರು.

2023ರ ಏಪ್ರಿಲ್ ನಲ್ಲಿ ನಡೆದ ಕಾರ್ಯಕ್ರಮವನ್ನು ಸಂಪೂರ್ಣವಾಗಿ ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರವೇ ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಒಟ್ಟಾರೆ 6 ಕೋಟಿ 33 ಲಕ್ಷ ರೂ. ವೆಚ್ಚವಾಗಿದ್ದು, ಎನ್.ಟಿ.ಸಿ.ಎ. ರಾಜ್ಯಕ್ಕೆ 3 ಕೋಟಿ ರೂ. ಪಾವತಿಸಿದೆ. ಉಳಿದ ಹಣ ಪಾವತಿಸಿಲ್ಲ. ಹೀಗಾಗಿ ಮೈಸೂರಿನ ರಾಡಿಸನ್ ಬ್ಲೂ ಹೊಟೆಲ್ ನವರು ಕಾರ್ಯಕ್ರಮದ ಆಯೋಜನೆಗೆ ಸ್ಥಳೀಯ ಬೆಂಬಲ ನೀಡಿದ್ದ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರವೇ ಹುಲಿ ಯೋಜನೆಯ ಆತಿಥ್ಯದ 80 ಲಕ್ಷ ರೂ. ಹಣ ಪಾವತಿಸುವ ಮೂಲಕ ವಿವಾದಕ್ಕೆ ತೆರೆ ಎಳೆಯಲಿದೆ ಎಂದು ಖಂಡ್ರೆ ತಿಳಿಸಿದರು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024