Tippu Express: ಬೆಂಗಳೂರು-ಮೈಸೂರು ಟಿಪ್ಪು ಎಕ್ಸ್‌ಪ್ರೆಸ್ ರೈಲು ಇನ್ಮುಂದೆ ಒಡೆಯರ್ ಎಕ್ಸ್‌ಪ್ರೆಸ್, ಇದಕ್ಕೆ ಸಿದ್ದರಾಮಯ್ಯ ಏನು ಹೇಳಿದ್ರು
ಮೈಸೂರು ಮೂಲಕ ಹಾದು ಹೋಗುವ ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರನ್ನು ಇದೀಗ ಕೇಂದ್ರ ಸರಕಾರ ಮರು ನಾಮಕರಣ ಮಾಡಿದೆ. ಟಿಪ್ಪು ಎಕ್ಸ್‌ಪ್ರೆಸ್ ಅನ್ನು ಒಡೆಯರ್ ಎಕ್ಸ್‌ಪ್ರೆಸ್ (Tipu Express is now Wodeyar Express) ಎಂದು ಮರುನಾಮಕರಣ ಮಾಡಲಾಗಿದೆ. ಮರುನಾಮಕರಣವನ್ನು ಬಹುತೇಕರು ಸ್ವಾಗತಿಸಿದರೆ, ಟಿಪ್ಪು ಹೆಸರು ಬದಲಾಯಿಸಿರುವುದಕ್ಕೆ ಕೆಲವೊಂದು ಕಡೆ ಆಕ್ಷೇಪಗಳೂ ವ್ಯಕ್ತವಾಗಿವೆ.
ನವದೆಹಲಿ: ಮೈಸೂರು ಮೂಲಕ ಹಾದು ಹೋಗುವ ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರನ್ನು ಇದೀಗ ಕೇಂದ್ರ ಸರಕಾರ ಮರು ನಾಮಕರಣ ಮಾಡಿದೆ. ಟಿಪ್ಪು ಎಕ್ಸ್‌ಪ್ರೆಸ್ ಅನ್ನು ಒಡೆಯರ್ ಎಕ್ಸ್‌ಪ್ರೆಸ್ ಎಂದು ಮರುನಾಮಕರಣ ಮಾಡಲಾಗಿದೆ. ಮರುನಾಮಕರಣವನ್ನು ಬಹುತೇಕರು ಸ್ವಾಗತಿಸಿದರೆ, ಟಿಪ್ಪು ಹೆಸರು ಬದಲಾಯಿಸಿರುವುದಕ್ಕೆ ಕೆಲವೊಂದು ಕಡೆ ಆಕ್ಷೇಪಗಳೂ ವ್ಯಕ್ತವಾಗಿವೆ.
"ಈಗಾಗಲೇ ಇರುವ ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರು ಬದಲಾಯಿಸುವ ಅಗತ್ಯವಿಲ್ಲ. ಹೊಸ ರೈಲಿಗೆ ಒಡೆಯರ್ ಹೆಸರಿಡಬೇಕಿತ್ತುʼʼ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. "ಬಿಜೆಪಿಯವರು ಬರಿ ಧರ್ಮ ರಾಜಕೀಯ ಮಾಡುತ್ತಾರೆ. ಒಡೆಯರ್ ಹೆಸರು ಇಡಲಿ ಪರವಾಗಿಲ್ಲ. ಆದರೆ, ಬೇರೆ ರೈಲುಗಳು ಇರಲೇ ಇಲ್ವ? ಯಾವಾಗಲೂ ಜಾತಿ ಜಾತಿಗಳ ನಡುವೆ ಧರ್ಮಗಳ ನಡುವೆ ಬೆಂಕಿ ಹಾಕೋ ಕೆಲಸವನ್ನು ಬಿಜೆಪಿಯವರು ಮಾಡುತ್ತಾರೆʼʼ ಎಂದು ಅವರು ಕಿಡಿಕಾರಿದ್ದಾರೆ.
ಶುಕ್ರವಾರದ ಶುಭ ಸುದ್ದಿ. ಇನ್ನು ಮುಂದೆ ಟಿಪ್ಪು ಎಕ್ಸ್ಪ್ರೆಸ್ ಬದಲು “ಒಡೆಯರ್ ಎಕ್ಸ್ಪ್ರೆಸ್ “ ನಿಮಗೆ ಸೇವೆ ನೀಡಲಿದೆ! ಮೈಸೂರು-ತಾಳಗುಪ್ಪ ರೈಲು "ಕುವೆಂಪು ಎಕ್ಸ್ಪ್ರೆಸ್'' ಆಗಲಿದೆ. ಥಾಂಕ್ಯೂ ಅಶ್ವಿನಿ ವೈಷ್ಣವ್ ಮತ್ತು ಈ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತ ಪ್ರಹ್ಲಾದ್ ಜೋಶಿಗೆ ಧನ್ಯವಾದ ಎಂದು ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.
ನವದೆಹಲಿ ಮೈಸೂರು ಬೆಂಗಳೂರು ನಡುವಿನ ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರನ್ನು ಒಡೆಯರ್ ಎಕ್ಸ್‌ಪ್ರೆಸ್ ರೈಲು ಎಂದು ಬದಲಿಸಲು ಹಲವು ಪ್ರಯತ್ನಗಳು ನಡೆದಿತ್ತು. ಇದಕ್ಕೆ ಸ್ಪಂದಿಸಿದ ಕೇಂದ್ರ ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಇಲಾಖೆಗೆ ಮಹತ್ವದ ಸೂಚನೆ ನೀಡಿದ್ದರು. ಈ ಕುರಿತು ರೈಲ್ವೇ ಉಪನಿರ್ದೇಶಕ ರಾಜೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಟಿಪ್ಪು ಎಕ್ಸ್ಪ್ರೆಸ್ ಬದಲಾಗಿ ಒಡೆಯರ್ ಎಕ್ಸ್‌ಪ್ರೆಸ್ ರೈಲು ಎಂದು ಹೆಸರಿಡಲು ಸಂಸದ ಪ್ರತಾಪ್ ಸಿಂಹ ಅವರು ಈ ಹಿಂದೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದರು. ಈ ಸಂಬಂಧ ಫೆಬ್ರವರಿ ತಿಂಗಳಲ್ಲಿ ದೆಹಲಿಯಲ್ಲಿ ಸಚಿವ ಅಶ್ವಿನಿ ವೈಷ್ಣವ್‌ಗೆ ಸಂಸದ ಪ್ರತಾಪ್ ಸಿಂಹ ಭೇಟಿಯಾಗಿ ಲಿಖಿತ ಮನವಿ ಸಲ್ಲಿಸಿದ್ದರು. ಮೈಸೂರಿಗೆ ರೈಲು ಸೇವೆ ಕಲ್ಪಿಸುವಲ್ಲಿ ಮಹಾರಾಜರ ಕೊಡುಗೆ ಬಹಳಷ್ಟು ಇದೆ. ಹೀಗಾಗಿ ಒಡೆಯರ್ ಎಕ್ಸ್‌ಪ್ರೆಸ್ ಎಂದು ಹೆಸರಿಡಲು ಒತ್ತಾಯ ಮಾಡಿದ್ದಾರೆ. ಸಂಸದರ ಮನವಿ ಮೇರೆ ಹೆಸರು ಬದಲಾಯಿಸಲಾಗಿದೆ.
ಕರ್ನಾಟಕದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸರಕಾರಗಳ ನಡುವೆ ಟಿಪ್ಪು ಪರ-ವಿರೋಧ ಅಭಿಪ್ರಾಯಗಳು ಹಲವು ವರ್ಷಗಳಿಂದ ಇದೆ. ಮಾಜಿ ಸಿಎಂ ಯಡಿಯೂರಪ್ಪ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಟಿಪ್ಪು ಜಯಂತಿ ಆಚರಣೆಯನ್ನು ರದ್ದು ಮಾಡಲಾಗಿತ್ತು. ವಿರಾಜಪೇಟೆ ಬಿಜೆಪಿ ಶಾಸಕರಾದ ಕೆ.ಜಿ. ಬೋಪಯ್ಯ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಟಿಪ್ಪು ಜಯಂತಿ ಆಚರಣೆ ರದ್ದತಿಗೆ ಮನವಿ ಮಾಡಿದ್ದರು. ಕೊಡಗಿನಲ್ಲಿ 2016ರಲ್ಲಿ ಟಿಪ್ಪು ಜಯಂತಿ ವೇಳೆ ಭಾರೀ ಗಲಭೆ ನಡೆದು ಕುಟ್ಟಪ್ಪ ಎನ್ನುವ ವ್ಯಕ್ತಿ ಸಾವಿಗೀಡಾಗಿದ್ದರು. ಇಂತಹ ಘಟನೆ ನಡೆಯದಂತೆ ಟಿಪ್ಪು ಜಯಂತಿ ರದ್ದು ಪಡಿಸುವಂತೆ ತಿಳಿಸಲಾಗಿತ್ತು.
7 ನೇ ತರಗತಿ ಪಠ್ಯಪುಸ್ತಕದಿಂದ ಟಿಪ್ಪು ಸುಲ್ತಾನ್ ಪಠ್ಯವನ್ನು ಶಿಕ್ಷಣ ಇಲಾಖೆ ಕೈಬಿಟ್ಟಿದೆ 6 ಹಾಗೂ 10 ನೇ ತರಗತಿಯಲ್ಲಿ ಟಿಪ್ಪು ಪಠ್ಯವನ್ನ ಮುಂದುವರಿಸಲಾಗಿದೆ. ಕಾಂಗ್ರೆಸ್ ಪಕ್ಷವು ಟಿಪ್ಪು ಹೆಸರಿನಲ್ಲಿ ಮುಸ್ಲಿಮರ ಓಲೈಕೆ ಮಾಡುತ್ತದೆ ಎನ್ನುವ ಅಭಿಪ್ರಾಯಗಳೂ ಇವೆ. ಇದೀಗ ರೈಲಿನ ಮರು ನಾಮಕರಣವೂ ಕಾಂಗ್ರೆಸಿಗರಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ.