ಮೆಟ್ರೊ ಪ್ರಯಾಣ ದರ ಹೆಚ್ಚಳಕ್ಕೆ ಆಕ್ರೋಶ; ಪ್ರಯಾಣಿಕರ ಸಂಖ್ಯೆಯಲ್ಲಿ ಕೊಂಚ ಇಳಿಮುಖ; ದರ ಮರುಪರಿಶೀಲನೆಗೆ ಚಿಂತಿಸುತ್ತಿದೆ ಬಿಎಂಆರ್‌ಸಿಎಲ್
Bangalore Metro fare: ಬೆಂಗಳೂರು ಮೆಟ್ರೊ ದರ ಏರಿಕೆ ಕುರಿತು ಆಕ್ಷೇಪಗಳು ಬಂದ ನಂತರ ಬಿಎಂಆರ್‌ಸಿಎಲ್ ದರ ಮರುಶೀಲನೆ ಮಾಡುವ ಚಿಂತನೆ ನಡೆಸಿದೆ.ವರದಿ: ಎಚ್.ಮಾರುತಿ, ಬೆಂಗಳೂರು

Bangalore Metro fare: ಮೆಟ್ರೊ ಪ್ರಯಾಣ ದರವನ್ನು ಹೆಚ್ಚಳ ಮಾಡಿದ ಒಂದು ದಿನದ ನಂತರ ಮೆಟ್ರೊದಲ್ಲಿ ಪ್ರಯಾಣಿಸಿದ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.4ರಷ್ಟು ಕಡಿಮೆಯಾಗಿದೆ. ಇದು ಮೆಟ್ರೊದಿಂದ ಪ್ರಯಾಣಿಕರು ಮೆಟ್ರೊದಿಂದ ಇಳಿಮುಖವಾಗುತ್ತಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ. ಬಿಎಂಆರ್ ಸಿಎಲ್ ಮೂಲಗಳ ಪ್ರಕಾರ ಸಾಮಾನ್ಯವಾಗಿ ಪ್ರತಿ ಸೋಮವಾರಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುತ್ತದೆ. ಆದರೆ 2025 ರ ಫೆಬ್ರವರಿ 10 ರ ಸೋಮವಾರ ಶೇ.4ರಷ್ಟು ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಸಾರ್ವಜನಿಕರು ಮೆಟ್ರೊದಿಂದ ದೂರ ಸರಿಯುತ್ತಿದ್ದಾರೆ ಎಂಬ ವಾದವನ್ನು ಬಿಎಂಆರ್ ಸಿಎಲ್ ಒಪ್ಪುತ್ತಿಲ್ಲ. ಬೆಂಗಳೂರಿನ ಜನತೆ ಏರ್ ಶೋಗೆ ತೆರಳುತ್ತಿದ್ದು ಸಹಜವಾಗಿಯೇ ನಮ್ಮ ಮೆಟ್ರೊ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ ಎಂದು ವಾದಿಸುತ್ತಿದೆ.
ಗರಿಷ್ಠ ಪ್ರಯಾಣ ದರ 90 ರೂ. ತಲುಪಿದ್ದು, ಇಡೀ ದೇಶದಲ್ಲೇ ನಮ್ಮ ಮೆಟ್ರೊ ದುಬಾರಿಯಾಗಿದ್ದು, ಇದು ದೂರ ಸರಿಯುತ್ತಿರುವುದರ ಮುನ್ಸೂಚನೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ನಮ್ಮ ಮೆಟ್ರೊದ ಮೂಲಗಳ ಪ್ರಕಾರ ಪ್ರತಿ ಸೋಮವಾರ 8.6 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿರುವುದು ಅಂಕಿಅಂಶಗಳಿಂದ ಕಂಡು ಬರುತ್ತಿದೆ.
ನಮ್ಮ ಮೆಟ್ರೊ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವುದು, ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರ ಆಕ್ರೋಶ, ಪ್ರತಿಪಕ್ಷ ಬಿಜೆಪಿ ಪ್ರತಿಭಟನೆಯಿಂದಾಗಿ ಬಿಎಂಆರ್‌ಸಿಎಲ್ ಪ್ರಯಾಣದರವನ್ನು ಇಳಿಸಲು ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ. ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರ ರಾವ್ ಪ್ರಯಾಣದರ ಏರಿಕೆ ಕುರಿತು ಪರಿಶೀಲನೆ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ.
ಸಾರ್ವಜನಿಕರ ಅಭಿಪ್ರಾಯಗಳನ್ನು ಗಮನಿಸಿದ್ದೇವೆ. ಪ್ರಯಾಣ ದರ ಏರಿಕೆ ಕುರಿತ ಟೀಕೆಗಳನ್ನು ರಚನಾತ್ಮಕಾಗಿ ಸ್ವೀಕರಿಸಿದ್ದೇವೆ. ಒಂದು ವೇಳೆ ಕೆಲವು ಮಾರ್ಗಗಳ ದರ ಏರಿಕೆ ದುಬಾರಿ ಎನ್ನುವುದಾದರೆ ಮರುವಿಮರ್ಶೆ ಮಾಡಲು ಸಿದ್ಧರಿದ್ದೇವೆ ಎಂದು ಭರವಸೆ ನೀಡಿದ್ದಾರೆ. ದರ ನಿಗದಿ ಸಮಿತಿ ( ಎಫ್‌ಎಫ್‌ಸಿ) ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು ಅದರ ಶಿಫಾರಸ್ಸುಗಳನ್ನು ಜಾರಿಗೊಳಿಸುವುದಷ್ಟೇ ಬಿಎಂಆರ್ ಸಿಎಲ್ ಕೆಲಸವಾಗಿದೆ ಎಂದೂ ತಿಳಿಸಿದ್ದಾರೆ.
ಪ್ರಯಾಣ ದರ ಏರಿಕೆಗೆ ಸಮಿತಿಯನ್ನು ರಚಿಸುವಂತೆ ಕೇಂದ್ರ ಸೆಕಾರಕ್ಕೆ 2020ರಲ್ಲೇ ಪತ್ರ ಬರೆದಿದ್ದರೂ ಸಮಿತಿ ರಚನೆಯಾಗಿದ್ದು 2024ರಲ್ಲಿ. ಈ ಸಮಿತಿಗೆ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳು ಅಧ್ಯಕ್ಷರಾಗಿದ್ದು ಕೇಂದ್ರ ರಾಜ್ಯ ಸರ್ಕಾರಗಳ ಪ್ರತಿನಿಧಿಗಳ ಸದಸ್ಯರಾಗಿರುತ್ತಾರೆ. ಒಟ್ಟಾರೆ ಶೇ.46ರಷ್ಟು ಪ್ರಯಾಣ ದರ ಏರಿಕೆ ಮಾಡಲಾಗಿದ್ದು ಕೆಲವು ಮಾರ್ಗಗಳಲ್ಲಿ ಶೇ.50ರಷ್ಟು ಮೀರಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮೆಟ್ರೊಗಿಂತ ಬೈಕ್ ವಾಸಿ
ಸಾಮಾಜಿಕ ಜಾಣತಾಣಗಳತ್ತ ಕಣ್ಣಾಡಿಸಿದರೆ ಮೆಟ್ರೊ ಪ್ರಯಾಣದರ ಏರಿಕೆ ಕುರಿತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶೇ.50 ಅಲ್ಲ, ನಾನು ಪ್ರಯಾಣಿಸುವ ಮಾರ್ಗದಲ್ಲಿ 23 ರೂ. ಬದಲಾಗಿ 50 ರೂ ಪಾವತಿಸಬೇಕಾಗಿದೆ. ಒಂದು ದಿನದ ಪ್ರಯಾಣದಲ್ಲಿ ಒಂದು ಲೀ. ಪೆಟ್ರೊಲ್ ಹಾಕಿಸಬಹುದು. ಇದರಿಂದ ನಾನು 45-50 ಕಿಮೀ ವರೆಗೆ ಪ್ರಯಣಿಸಬಹುದಾಗಿದೆ. ಹೀಗಿರುವಾಗ ಮೆಟ್ರೊ ಪ್ರಯಾಣವನ್ನು ಏಕೆ ಆಯ್ಕೆ ಮಾಡಲಿ ಎಂದು ಪ್ರಶ್ನಿಸಿದ್ದಾರೆ.
ದರ ಏರಿಕೆ ಸಮರ್ಥನೆ
ನಮ್ಮ ಮೆಟ್ರೊದ ಖರ್ಚುವೆಚ್ಚಗಳನ್ನು ಸರಿದೂಗಿಸಲು ಬೆಲೆ ಏರಿಕೆ ಅನಿವಾರ್ಯವಾಗಿದೆ. ಮುಖ್ಯವಾಗಿ ಪ್ರತಿ ವರ್ಷ 500-800 ಕೋಟಿ ರೂ. ಸಾಲ ಮರುಪಾವತಿ ಮಾಡಬೇಕಿದೆ. ಮೆಟ್ರೊ ಜಾಲವನ್ನು ವಿಸ್ತರಿಸಬೇಕಿದೆ ಮತ್ತು ಉನ್ನತೀಕರಿಸಬೇಕಿದೆ. ಇದಕ್ಕಾಗಿ ಹೊಸ ಸಾಲ ಬೇಕಿದೆ, ಹೊಸ ರೈಲುಗಳನ್ನು ಖರೀದಿ ಮಾಡಬೇಕಿದೆ, ನಿಲ್ದಾಣಗಳ ಸುಧಾರಣೆ ಮಾಡಬೇಕಿದೆ ಎಂಬ ಪಟ್ಟಿ ನೀಡುತ್ತದೆ.
ಉದಾಹರಣೆಗೆ, ಪ್ರತಿ ನಿಲ್ದಾಣದ ಸುಧಾರಣೆಗೆ 6 ಕೋಟಿ ರೂ. ಅಂದುಕೊಂಡರೂ 300 ಕೋಟಿ ರೂ ಅವಶ್ಯಕತೆ ಇದೆ. ಮೆಟ್ರೋಗೆ 2025-26 ರಲ್ಲಿ 200 ಕೋಟಿ ರೂ ಲಾಭದ ನಿರೀಕ್ಷೆಯಲ್ಲಿದ್ದರೂ ಸಾಲ ಮತ್ತಿತರ ವೆಚ್ಚಗಳನ್ನು ಸರಿದೂಗಿಸಿದ ನಂತರ 20 ಕೋಟಿ ರೂ. ಲಾಭವನ್ನು ನಿರೀಕ್ಷಿಸಬಹುದು ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ವಿವರಿಸುತ್ತಾರೆ.
ಈ ಸಮಿತಿ ಹಾಂಕ್ ಕಾಂಗ್ ಸಿಂಗಾಪುರಕ್ಕೂ ಭೇಟಿ ನೀಡಿ ಅಧ್ಯಯನ ನಡೆಸಿದೆ. ಈ ವಿದೇಶಿ ಪ್ರಯಾಣದಲ್ಲಿ ಬಿಎಂಆರ್ ಸಿಎಲ್ ಅಧಿಕಾರಿಗಳೂ ಭಾಗಿಯಾಗಿದ್ದಾರೆ. ಸಾರ್ವಜನಿಕ ಪ್ರಯಾಣ ವ್ಯವಸ್ಥೆ ಯಾವತ್ತೂ ಪ್ರಯಾಣಿಕರ ಸ್ನೇಹಿಯಾಗಿರಬೇಕು. ಕೆಲವು ದೇಶಗಳಲ್ಲಿ ಮೆಟ್ರೊ ಬಳಸಿದರೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಈ ರೀತಿ ಪ್ರಯಾಣ ದರವನ್ನು ಏಕಾಏಕಿ ಶೇ.50ರಷ್ಟು ಏರಿಸಿದರೆ ಸಾರ್ವಜನಿಕರು ಸಹಜವಾಗಿಯೇ ದ್ವಿಚಕ್ರ ವಾಹನಗಳ ಮೊರೆ
ಹೋಗುವುದು ಅನಿವಾರ್ಯವಾಗುತ್ತದೆ. ಈ ರೀತಿಯ ಅವೈಜ್ಞಾನಿಕ ದರ ಏರಿಕೆಯಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿಂದ ದೂರ ಸರಿಯುವುದು ಅನಿವಾರ್ಯವಾಗುತ್ತದೆ. ಈಗಲಾದರೂ ಬಿಎಂಆರ್‌ಸಿಎಲ್ ಪ್ರಯಾಣ ದರ ಇಳಿಸಲು ಮನಸ್ಸು ಮಾಡಬೇಕು. ಕೇಂದ್ರ ರಾಜ್ಯ ಸರ್ಕಾರಗಳು ಪರಸ್ಪರ ದೂಷಿಸುವುದನ್ನು ಬಿಟ್ಟು ಪ್ರಯಾಣಿಕರಿಗೆ ಯಾವುದು ಅನುಕೂಲವೋ ಅದನ್ನು ಮಾಡಬೇಕು. ಆಗ ಸಹಜವಾಗಿಯೇ ನಮ್ಮ ಮೆಟ್ರೊ ತನ್ನ ಹಳಿಗಳ ಮೇಲೆ ತಾನು ನಿಲ್ಲಲು ಸಹಾಯವಾಗುತ್ತದೆ. ಇಲ್ಲವಾದಲ್ಲಿ ಸಾಲವನ್ನೇ ನೆಚ್ಚಿಕೊಂಡು ಇರಬೇಕಾಗುತ್ತದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.
ವರದಿ: ಎಚ್. ಮಾರುತಿ, ಬೆಂಗಳೂರು
