Namma Metro: 8 ವರ್ಷಗಳ ಬಳಿಕ ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣ ದರ ಶೇ.40-45ರಷ್ಟು ಏರಿಕೆ ಸಾಧ್ಯತೆ; ಜನವರಿ 3ನೇ ವಾರದಿಂದ ಜಾರಿ ನಿರೀಕ್ಷೆ
ಎಂಟು ವರ್ಷಗಳ ಬಳಿಕ ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಗೆ ಮುಂದಾಗಿದ್ದು, ಜನವರಿ ಮೂರನೇ ವಾರ ಇದು ಜಾರಿಯಾಗುವ ಸಾಧ್ಯತೆಯಿದೆ.
ಬೆಂಗಳೂರು: ಈಗಾಗಲೇ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳು, ಬೆಂಗಳೂರು ಮೆಟ್ರೋಪಾಲಿಟಿನ್ ಸಾರಿಗೆ ಸಂಸ್ಥೆ( ಬಿಎಂಟಿಸಿ) ಬಸ್ ಪ್ರಯಾಣ ದರವನ್ನು ಏರಿಕೆ ಮಾಡಿ ಹೊರೆಯಾಗಿರುವ ನಡುವೆಯೇ ಬೆಂಗಳೂರು ಮೆಟ್ರೋ ಕೂಡ ಪ್ರಯಾಣ ದರ ಏರಿಸಲು ಮುಂದಾಗಿದೆ. ಅದೂ ಎಂಟು ವರ್ಷಗಳ ನಂತರ ಮೊದಲ ಬಾರಿಗೆ ಪ್ರಯಾಣ ದರ ಏರಿಕೆ ಮಾಡಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಬಾರಿ ಟಿಕೆಟ್ ದರವು ಶೇ.40-45ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಬೆಂಗಳೂರು ಮೆಟ್ರೋ ಆಡಳಿತ ಮಂಡಳಿಯಲ್ಲಿ ಪ್ರಯಾಣಿಕರ ಟಿಕೆಟ್ ದರ ಏರಿಕೆ ಕುರಿತು ಚರ್ಚೆಗಳಾಗಿದ್ದು, ಸದ್ಯವೇ ಇದು ಜಾರಿಯಾಗಲಿದೆ. ಹೊಸ ಪ್ರಯಾಣ ದರ ಜಾರಿ ದಿನಾಂಕವನ್ನು ನಮ್ಮ ಮೆಟ್ರೋ ಜನವರಿ ಮೂರನೇ ವಾರ ಪ್ರಕಟಿಸಬಹುದು ಎನ್ನಲಾಗುತ್ತಿದೆ.
ಜನವರಿ 17 ರಂದು ಸಭೆ
ಸರ್ಕಾರ ನೇಮಿಸಿದ ದರ ನಿಗದಿ ಸಮಿತಿಯು ಇತ್ತೀಚೆಗೆ ತನ್ನ ವರದಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಮಂಡಳಿಗೆ ಸಲ್ಲಿಸಿದ ಶಿಫಾರಸುಗಳ ನಂತರ ಈ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಸಮಿತಿ ನೀಡಿರುವ ವರದಿಯ ಪ್ರಕಾರ, ಪ್ರಯಾಣ ದರ ಹೆಚ್ಚಳ ಶಿಫಾರಸು ಮಾಡುವ ಮೊದಲು ವಿವಿಧ ಅಂಶಗಳನ್ನು ಸಮಿತಿಯು ವಿಶ್ಲೇಷಿಸಿದೆ. ಅಕ್ಟೋಬರ್ 2024 ರಲ್ಲಿ ಸಾರ್ವಜನಿಕ ಪ್ರತಿಕ್ರಿಯೆಯನ್ನು ಇದಕ್ಕಾಗಿ ಕೋರಲಾಗಿತ್ತು. ಪ್ರಯಾಣಿಕರ ಅಭಿಪ್ರಾಯ, ನಿಗಮದ ಸ್ಥಿತಿಗತಿ, ದರ ಹೆಚ್ಚಳದ ಪ್ರಮಾಣ ಸಹಿತ ಎಲ್ಲಾ ಮಾಹಿತಿ ಒಳಗೊಂಡ ಅಂತಿಮ ವರದಿಯನ್ನು ಕಳೆದ ವಾರ ನೀಡಲಾಯಿತು. ಬಿಎಂಆರ್ ಸಿಎಲ್ ಮಂಡಳಿಯು ಜನವರಿ 17 ರಂದು ಈ ಪ್ರಸ್ತಾಪವನ್ನು ಅನುಮೋದಿಸುವ ಸಾಧ್ಯತೆಯಿದೆ.
ಪರಿಷ್ಕರಣೆ ಯಾವ ರೀತಿ
ಪರಿಷ್ಕೃತ ರಚನೆಯಡಿ, ಮೂಲ ಶುಲ್ಕವನ್ನು 15 ರೂ.ಗೆ ಹೆಚ್ಚಿಸುವ ನಿರೀಕ್ಷೆಗಳಿವೆ. ಗರಿಷ್ಠ ಶುಲ್ಕವನ್ನು ಪ್ರಸ್ತುತ 60 ರೂ.ಗಳಿಂದ 85 ರೂ.ಗೆ ಹೆಚ್ಚಿಸಲಾಗುವುದು. ಪ್ರಯಾಣಿಕರಿಗೆ ಭಾರೀ ಹೊರೆಯಾಗುವುದನ್ನು ತಪ್ಪಿಸಲು ಆಫ್-ಪೀಕ್ ಸಮಯದಲ್ಲಿ ಹಾಗೂ ಭಾನುವಾರಗಳಲ್ಲಿ ಹೆಚ್ಚುವರಿ ರಿಯಾಯಿತಿಗಳು ಲಭ್ಯವಿರಲಿವೆ.
ಸ್ಮಾರ್ಟ್ ಕಾರ್ಡ್ ಮತ್ತು ಕ್ಯೂಆರ್ ಕೋಡ್ ಟಿಕೆಟ್ ಬಳಕೆದಾರರಿಗೆ ನಿಯಮಿತವಾಗಿ ಶೇ. 5 ರಷ್ಟು ರಿಯಾಯಿತಿ ಮುಂದುವರಿಯುತ್ತದೆ. ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ, 2002 ರ ಪ್ರಕಾರ ಹೊಸ ದರಗಳು ಜನವರಿ ಅಂತ್ಯದ ವೇಳೆಗೆ ಜಾರಿಗೆ ಬರುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.
ದರ ಪರಿಷ್ಕರಣೆಗೆ ಕಾರಣಗಳು ಏನೇನು
2017 ರಲ್ಲಿ ಕೊನೆಯ ಬಾರಿಗೆ ನಮ್ಮ ಮೆಟ್ರೋ ಶೇಕಡಾ 10-15 ರಷ್ಟು ದರ ಪರಿಷ್ಕರಣೆ ಮಾಡಿತ್ತು. ಆಗ ಮೆಟ್ರೋ ಜಾಲವು ಕೇವಲ 43.2 ಕಿ.ಮೀ.ವರೆಗೆ ವ್ಯಾಪಿಸಿತ್ತು. ಅಂದಿನಿಂದ, ಕಾರ್ಯಾಚರಣೆಯ ಜಾಲವು ಸುಮಾರು 76.95 ಕಿ.ಮೀ.ಗೆ ದ್ವಿಗುಣಗೊಂಡಿದೆ. ಹಂತ 2, 2 ಎ ಮತ್ತು 2 ಬಿ ಪೂರ್ಣಗೊಂಡ ನಂತರ ಡಿಸೆಂಬರ್ 2026 ರ ವೇಳೆಗೆ 175.55 ಕಿ.ಮೀ.ಗೆ ವಿಸ್ತರಿಸುವ ನಿರೀಕ್ಷೆಯಿದೆ.
ವಿದ್ಯುತ್ ವೆಚ್ಚ ಮತ್ತು ಮೂಲಸೌಕರ್ಯದ ವೆಚ್ಚ ಸೇರಿದಂತೆ ಹೆಚ್ಚುತ್ತಿರುವ ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚಗಳಿಂದಾಗಿ ದರ ಅನಿವಾರ್ಯವಾಗಿದೆ. ಆಗಾಗ್ಗೆ ದುರಸ್ತಿ ಮತ್ತು ದುಬಾರಿ ಬಿಡಿಭಾಗಗಳ ಅಗತ್ಯದಿಂದಾಗಿ ನಿರ್ವಹಣಾ ವೆಚ್ಚ ಮಾತ್ರ ಶೇಕಡಾ 300 ರಷ್ಟು ಹೆಚ್ಚಾಗಿದೆ. ಅಲ್ಲದೇ ಮೆಟ್ರೋ ಭವಿಷ್ಯದ ಹಲವಾರು ಯೋಜನೆಗಳನ್ನು ರೂಪಿಸುತ್ತಿದ್ದು, ಈ ಕಾರಣದಿಂದಲೂ ದರ ಪರಿಷ್ಕರಣೆಗೆ ಮುಂದಾಗಿದೆ ಎನ್ನುವುದು ಬೆಂಗಳೂರು ನಮ್ಮ ಮೆಟ್ರೋ ಅಧಿಕಾರಿಗಳು ನೀಡುವ ವಿವರಣೆ.