Bangalore New Airport: ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ, ಸ್ಥಳಗಳ ಆಯ್ಕೆಗೆ ಮುಂದಾದ ಮೂಲಸೌಕರ್ಯ ಇಲಾಖೆ
ಕನ್ನಡ ಸುದ್ದಿ  /  ಕರ್ನಾಟಕ  /  Bangalore New Airport: ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ, ಸ್ಥಳಗಳ ಆಯ್ಕೆಗೆ ಮುಂದಾದ ಮೂಲಸೌಕರ್ಯ ಇಲಾಖೆ

Bangalore New Airport: ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ, ಸ್ಥಳಗಳ ಆಯ್ಕೆಗೆ ಮುಂದಾದ ಮೂಲಸೌಕರ್ಯ ಇಲಾಖೆ

Bangalore New Airport: ಬೆಂಗಳೂರಿನ ಭವಿಷ್ಯದ ಬೆಳವಣಿಗೆ ದೃಷ್ಟಿಯಿಂದ ಮತ್ತೊಂದು ವಿಮಾನ ನಿಲ್ದಾಣದ ನಿರ್ಮಾಣ ಯೋಜನೆ ಚಟುವಟಿಕೆ ಚುರುಕುಗೊಂಡಿದ್ದು, ಸ್ಥಳ ಹುಡುಕಾಟದ ಪ್ರಕ್ರಿಯೆ ನಡೆದಿದೆ.

ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಹುಡುಕಾಟ ನಡೆದಿದೆ.
ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಹುಡುಕಾಟ ನಡೆದಿದೆ.

Bangalore New Airport: ಬೆಂಗಳೂರಿನಲ್ಲಿ ಈಗಾಗಲೇ ಒಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದ್ದರೂ ಭವಿಷ್ಯದ ದೃಷ್ಟಿಯಿಂದ ಇನ್ನೊಂದು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಒಂದು ವರ್ಷದಿಂದಲೂ ಪ್ರಕ್ರಿಯೆಗಳೂ ನಡೆದಿವೆ. ಮುಖ್ಯವಾಗಿ ಎಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎನ್ನುವುದೇ ಪ್ರಮುಖ ವಿಚಾರ. ಬೆಂಗಳೂರಿನ ಯಾವ ಭಾಗದಲ್ಲಿ ವಿಮಾನ ನಿಲ್ದಾಣ ರೂಪಿಸಿದರೆ ಅದು ಅಭಿವೃದ್ದಿಗೆ ಪೂರಕವಾಗಬಹುದು. ಪ್ರಾದೇಶಿಕವಾಗಿಯೂ ಮಹತ್ವ ಪಡೆದುಕೊಂಡು ಬೆಂಗಳೂರಿನ ಸಮಗ್ರ ಬೆಳವಣಿಗೆಗೂ ದಾರಿಯಾಗಬಹುದು ಎನ್ನುವ ಲೆಕ್ಕಾಚಾರ ಜಾಗದ ಆಯ್ಕೆ ಹಿಂದೆ ಇದೆ. ಈ ಕಾರಣದಿಂದಲೇ ಕರ್ನಾಟಕ ಮೂಲ ಸೌಕರ್ಯ ಇಲಾಖೆಯೂ ಜಾಗದ ಹುಡುಕಾಟದಲ್ಲಿ ತೊಡಗಿದೆ. ಈಗಾಗಲೇ ನಾಲ್ಕೈದು ಸ್ಥಳಗಳನ್ನು ಗುರುತಿಸುವ ಪ್ರಕ್ರಿಯೆಗೂ ಚಾಲನೆ ನೀಡಿದೆ.

ಬೆಂಗಳೂರಿನಲ್ಲಿ ದಶಕಗಳ ಹಿಂದೆ ನಗರದಲ್ಲಿಯೇ ವಿಮಾನ ನಿಲ್ದಾಣವಿತ್ತು. ಅದನ್ನು ದೇವನಹಳ್ಳಿ ಬಳಿಯ ವಿಮಾನ ನಿಲ್ದಾಣವಾಗಿ ಪರಿವರ್ತಿಸಲಾಯಿತು. ಆನಂತರ ಇದೇ ವಿಮಾನ ನಿಲ್ದಾಣ ಈಗ ಅಂತರಾಷ್ಟ್ರೀಯ ದರ್ಜೆಯ ವಿಮಾನ ನಿಲ್ದಾಣವಾಗಿ ಪರಿವರ್ತನೆಗೊಂಡಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರನ್ನು ಪಡೆದುಕೊಂಡಿದೆ. ಬೆಂಗಳೂರು ವಿಮಾನ ನಿಲ್ದಾಣ ಭಾರತದ ಪ್ರಮುಖ ನಿಲ್ದಾಣವಾಗಿ ಮಾರ್ಪಟ್ಟಿದೆ. ವಿಶ್ವದ ಪ್ರಮುಖ ನಗರಗಳಿಗೆ ಬೆಂಗಳೂರಿನಿಂದಲೇ ಈಗ ಸಂಪರ್ಕ ಕಲ್ಪಿಸಲಾಗುತ್ತಿದೆ.

ಸಚಿವರು ಹೇಳೋದೇನು

ಬೆಂಗಳೂರು ವಿಮಾನ ನಿಲ್ದಾಣದಲ್ಲಿನ ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಲೇ ಇದೆ. ಅದರಲ್ಲೂ ಒಂದು ದಶಕದಲ್ಲಿ ಬೆಂಗಳೂರಿನ ವಿಮಾನ ನಿಲ್ದಾಣ ಹೆಚ್ಚು ದಟ್ಟಣೆಯೊಂದಿಗೆ ಪ್ರಯಾಣಿಕರನ್ನು ಮಾತ್ರವಲ್ಲದೇ ಸರಕು ಸಾಗಣೆಯಲ್ಲೂ ಮುಂಚೂಣಿಯಲ್ಲಿದೆ. ಭಾರತದ ನಲವತ್ತಕ್ಕೂ ಹೆಚ್ಚು ನಗರಗಳಿಗೆ ಇಲ್ಲಿಂದ ವಿಮಾನ ಸಂಪರ್ಕವಿದೆ. ಜನ ದಟ್ಟಣೆ, ಬೆಂಗಳೂರಿನ ಬೆಳವಣಿಗೆ ಗಮನದಲ್ಲಿಟ್ಟುಕೊಂಡೇ ಎರಡನೇ ವಿಮಾನ ನಿಲ್ದಾಣ ನಿರ್ಮಿಸುವ ಪ್ರಸ್ತಾವನೆಯನ್ನು ಇರಿಸಲಾಗಿದೆ.

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿರುವ ಕರ್ನಾಟಕ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವರೂ ಆಗಿರುವ ಮೂಲಸೌಕರ್ಯ ಇಲಾಖೆಯ ಸಚಿವ ಡಾ.ಎಂ.ಬಿ.ಪಾಟೀಲ, ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಿಸುವ ಪ್ರಕ್ರಿಯ ನಡೆದಿದೆ. ಬೆಂಗಳೂರಿಗೆ ಎರಡನೇ‌ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಸ್ಥಳಗಳ ಆಯ್ಕೆ‌ ನಡೆದಿದ್ದು, ಒಂದೆರಡು ದಿನಗಳಲ್ಲಿ ಮುಖ್ಯಮಂತ್ರಿ ಜತೆ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಹೇಳುತ್ತಾರೆ.

ಎಲ್ಲೆಲ್ಲಿ ಪ್ರಸ್ತಾವ

ಈಗ ದೇವನಹಳ್ಳಿ ಭಾಗದಲ್ಲಿ ವಿಮಾನ ನಿಲ್ದಾಣವಿದೆ. ಆ ಭಾಗವನ್ನು ಬಿಟ್ಟು ಇತರೆಡೆ ವಿಮಾನ ನಿಲ್ದಾಣ ನಿರ್ಮಿಸುವ ಪ್ರಸ್ತಾವವಿದೆ. ಅದರಲ್ಲಿ ಮುಖ್ಯವಾಗಿ ತಮಿಳುನಾಡಿನ ಗಡಿಭಾಗವಾದ ಹೊಸೂರು ಸಮೀಪದಲ್ಲೇ ವಿಮಾನ ನಿಲ್ದಾನ ನಿರ್ಮಿಸುವ ಪ್ರಸ್ತಾವ ಪ್ರಮುಖವಾಗಿದೆ. ತಮಿಳುನಾಡು ಗಡಿ ಭಾಗದಲ್ಲಿ ವಿಮಾನನಿಲ್ದಾಣ ಬಂದರೆ ಆ ಭಾಗದವರೂ ಬಳಸಲು ನೆರವಾಗಲಿದೆ. ಗಡಿ ಭಾಗದ ಅಭಿವೃದ್ದಿಗೂ ಇದು ಕಾರಣವಾಗಲಿದೆ ಎಂದು ಹೊಸೂರು ಸಮೀಪದಲ್ಲಿಯೇ ಭೂಮಿ ಹುಡುಕಾಟ ನಡೆದಿದೆ.

ಈಗಾಗಲೇ ಮೈಸೂರಿನಲ್ಲಿ ವಿಮಾನ ನಿಲ್ದಾಣವಿದೆ. ರಾಮನಗರ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಿಸಿದರೆ ಹೇಗೆ ಎಂಬ ಬೇಡಿಕೆಯೂ ಇದೆ. ಇದರೊಟ್ಟಿಗೆ ಹುಬ್ಬಳ್ಳಿ ಬಿಟ್ಟರೆ ಮಧ್ಯ ಕರ್ನಾಟಕ ಭಾಗದಲ್ಲಿ ವಿಮಾನ ನಿಲ್ದಾಣವಿಲ್ಲ. ತುಮಕೂರು ಸುತ್ತಮುತ್ತಲಿನ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬಹುದೇ ಎನ್ನುವ ಚರ್ಚೆಗೂ ಗಂಭೀರವಾಗಿ ನಡೆದಿದೆ. ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ ಕೂಡ ತುಮಕೂರು ಬಳಿಯೆ ವಿಮಾನ ನಿಲ್ದಾಣ ಆಗಲಿ ಎನ್ನುವ ಬೇಡಿಕೆಯನ್ನು ಇಟ್ಟಿದ್ದಾರೆ.

ಇನ್ನು ಮಲೆನಾಡು, ಕರಾವಳಿ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಹಾಸನ ರಸ್ತೆಯ ಭಾಗದಲ್ಲಿ ವಿಮಾನ ನಿಲ್ದಾಣ ರೂಪಿಸುವ ಕುರಿತು ಚರ್ಚೆಗಳು ನಡೆದಿವೆ ಈ ಭಾಗದಲ್ಲಿ ವಿಮಾನ ನಿಲ್ದಾಣವಾದರೆ ತುಮಕೂರು, ಮಂಡ್ಯ, ಹಾಸನ ಸಹಿತ ಕೆಲವು ಜಿಲ್ಲೆಗಳ ಸಂಪರ್ಕಕ್ಕೆ ಸಹಕಾರಿಯಾಗಬಹುದು ಎನ್ನುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬೇಕಾದ ಜಾಗದ ಹುಡುಕಾಟ ನಡೆದಿದೆ. ನಾಲ್ಕೈದು ಕಡೆ ಜಾಗ ಗಮನಿಸಿ ಸಿಎಂ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಆನಂತರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವ ಉದ್ದೇಶ ಹೊಂದಲಾಗಿದ್ದು, ಕೆಲವೇ ದಿನಗಳಲ್ಲಿ ಇದಕ್ಕೆ ಸ್ಪಷ್ಟ ಚಿತ್ರಣ ಸಿಗಬಹುದು.

Whats_app_banner