ಮದ್ಯ ಸೇವಿಸಿ ವಾಹನ ಚಾಲನೆ, 1,707 ಪ್ರಕರಣ ದಾಖಲು; ಬಿಎಂಟಿಸಿ ಪರೀಕ್ಷೆ ವೇಳೆ ನಕಲು ಮಾಡುವಾಗ ಸಿಕ್ಕಿಬಿದ್ದ ಅಭ್ಯರ್ಥಿ-bangalore news 1707 cases registered for drunk and driving in bengaluru candidate caught copying during bmtc exam prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಮದ್ಯ ಸೇವಿಸಿ ವಾಹನ ಚಾಲನೆ, 1,707 ಪ್ರಕರಣ ದಾಖಲು; ಬಿಎಂಟಿಸಿ ಪರೀಕ್ಷೆ ವೇಳೆ ನಕಲು ಮಾಡುವಾಗ ಸಿಕ್ಕಿಬಿದ್ದ ಅಭ್ಯರ್ಥಿ

ಮದ್ಯ ಸೇವಿಸಿ ವಾಹನ ಚಾಲನೆ, 1,707 ಪ್ರಕರಣ ದಾಖಲು; ಬಿಎಂಟಿಸಿ ಪರೀಕ್ಷೆ ವೇಳೆ ನಕಲು ಮಾಡುವಾಗ ಸಿಕ್ಕಿಬಿದ್ದ ಅಭ್ಯರ್ಥಿ

Bengaluru Crime News: ಬೆಂಗಳೂರಿನಲ್ಲಿ ಒಂದು ವಾರದಲ್ಲಿ 1,707 ಕುಡಿದು ವಾಹನ ಚಲಾಯಿಸುವ ಪ್ರಕರಣ ದಾಖಲಾಗಿದ್ದು, ಎರಡು ದಿನಗಳಲ್ಲಿ 100 ವಾಹನಗಳ ಟೋಯಿಂಗ್ ಮಾಡಲಾಗಿದೆ. (ವರದಿ - ಎಚ್. ಮಾರುತಿ)

ಮಧ್ಯ ಸೇವಿಸಿ ವಾಹನ ಚಾಲನೆ, 1,707 ಪ್ರಕರಣ ದಾಖಲು
ಮಧ್ಯ ಸೇವಿಸಿ ವಾಹನ ಚಾಲನೆ, 1,707 ಪ್ರಕರಣ ದಾಖಲು

ಬೆಂಗಳೂರು: ನಗರದಲ್ಲಿ ಕಳೆದ ಒಂದು ವಾರದಲ್ಲಿ 1,707 ಕುಡಿದು ವಾಹನ ಚಲಾಯಿಸುವ ಪ್ರಕರಣಗಳು ದಾಖಲಾಗಿದೆ. ಇದು ಅಪಘಾತಗಳಿಗೆ ಕಾರಣವಾಗುತ್ತಿದೆ. ಹೆಚ್ಚಾಗಿ ಈ ಪ್ರಕರಣಗಳು ವಾಹನ ದಟ್ಟಣೆ ಉಂಟಾಗುವ ರಸ್ತೆಗಳಲ್ಲಿ ಪತ್ತೆಯಾಗುತ್ತಿದ್ದು, ಸಾರ್ವಜನಿಕರ ಸುರಕ್ಷತೆಗೆ ಧಕ್ಕೆ ಉಂಟಾಗುತ್ತಿದೆ. ಇದರಿಂದ ಸಂಭವಿಸುವ ಅಪಘಾತಗಳ ದೃಷ್ಟಿಯಿಂದ ಸಂಚಾರಿ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.

ಈ ಬಗ್ಗೆ ಸಂಚಾರಿ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಎಂಎನ್ ಅನುಚೇತ್‌ ಮಾಹಿತಿ ನೀಡಿದ್ದಾರೆ. ಆಗಸ್ಟ್‌ 23ರಿಂದ 31ರವರೆಗೆ ಈ ಕಾರ್ಯಾಚರಣೆ ನಡೆದಿದ್ದು, ಬೆಂಗಳೂರಿನ 50 ಪೊಲೀಸ್‌ ಠಾಣೆಗಳ ಸಂಚಾರಿ ಪೊಲೀಸರು ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.

ಟೋಯಿಂಗ್ ಕಾರ್ಯಾಚರಣೆ ಯಶಸ್ವಿ

ಮತ್ತೊಂದು ಕಡೆ ನಿಷೇಧಿತ ಸ್ಥಳಗಳಲ್ಲಿ ನಿಲ್ಲಿಸುವ ವಾಹನಗಳನ್ನು ಕೊಂಡೊಯ್ಯುವ ಟೋಯಿಂಗ್ ಕಾರ್ಯಾಚರಣೆಯ ಭಾಗವಾಗಿ 2ನೇ ದಿನವಾದ ಭಾನುವಾರ 70ಕ್ಕೂ ಹೆಚ್ಚು ವಾಹನಗಳನ್ನು ಟೋಯಿಂಗ್ ಮಾಡಲಾಗಿದೆ. ಎರಡೂವರೆ ವರ್ಷಗಳ ನಂತರ ಮತ್ತೆ ಉಪ್ಪಾರಪೇಟೆ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಟೋಯಿಂಗ್ ಕಾರ್ಯಾಚರಣೆ ಆರಂಭಿಸಲಾಗಿದೆ. ಶನಿವಾರ ಮತ್ತು ಭಾನುವಾರ 2 ದಿನಗಳಲ್ಲಿ ಟೋಯಿಂಗ್ ಮಾಡಿದ ವಾಹನಗಳ ಸಂಖ್ಯೆ ನೂರು ದಾಟಿದೆ.

ಮೊದಲ ದಿನವಾದ ಶನಿವಾರ 30 ವಾಹನಗಳನ್ನು ಟೋಯಿಂಗ್ ಮಾಡಲಾಗಿತ್ತು. ಆರಂಭದಲ್ಲಿ ಧ್ವನಿವರ್ಧಕಗಳ ಮೂಲಕ ನಿಷೇಧಿತ ಸ್ಥಳಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡದಂತೆ ಸೂಚನೆ ನೀಡಲಾಗುತ್ತದೆ. ಆದರೂ ನಿಷೇಧಿತ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಿದರೆ ಟೋಯಿಂಗ್ ಮಾಡುವುದು ಅನಿವಾರ್ಯ ಎಂದು ತಿಳುವಳಿಕೆ ನೀಡಲಾಗುತ್ತದೆ. ಆದರೆ ಟೋಯಿಂಗ್‌ ಗೆ ಶುಲ್ಕ ವಿಧಿಸುತ್ತಿಲ್ಲ.

ಸದಾ ಜನಜಂಗುಳಿಯಿಂದ ಗಿಜಗುಡುತ್ತಿರುವ ಗಾಂಧಿನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಯಮ ಉಲ್ಲಂಘಿಸಿ ನಿಷೇಧಿತ ಸ್ಥಳಗಳಲ್ಲಿ ನಿಲುಗಡೆ ಮಾಡಿದ ವಾಹನಗಳನ್ನು ತೆರವುಗೊಳಿಸುವುದಕ್ಕೆ ಆದ್ಯತೆ ನೀಡಲಾಗುತ್ತಿದೆ. ವಾಹನ ಸವಾರರು ಫ್ರೀಡಂ ಪಾರ್ಕಿನಲ್ಲಿರುವ ಹೊಸ ಪಾರ್ಕಿಂಗ್ ಸಮುಚ್ಚಯವನ್ನು ಬಳಸಿಕೊಳ್ಳಬೇಕು. ರಸ್ತೆಗಳಲ್ಲಿ ವಾಹನ ನಿಲುಗಡೆ ಮಾಡಿದರೆ ಟೋಯಿಂಗ್ ಮತ್ತು ದಂಡ ವಿಧಿಸುವುದು ಅನಿವಾರ್ಯ ಎಂದು ಸಂಚಾರಿ ಪೋಲಿಸರು ತಿಳಿಸಿದ್ದಾರೆ.

ಬಿಎಂಟಿಸಿ ಪರೀಕ್ಷೆ: ನಕಲು ಮಾಡುವಾಗ ಸಿಕ್ಕಿಬಿದ್ದ ಓರ್ವ ಅಭ್ಯರ್ಥಿ

ಬೆಂಗಳೂರು: ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಲ್ಲಿ ಖಾಲಿ ಇದ್ದ 2,500 ನಿರ್ವಾಹಕ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ಪರೀಕ್ಷೆ ನಡೆಸಿದೆ. ಈ ಪರೀಕ್ಷೆಗೆ ಶೇ 82ರಷ್ಟು ಅಭ್ಯರ್ಥಿಗಳು ಹಾಜರಾಗಿದ್ದರು. ಬೆಂಗಳೂರು, ಮಂಡ್ಯ, ದಾವಣಗೆರೆ, ಬಳ್ಳಾರಿ, ಕಲ್ಬುರ್ಗಿ, ಧಾರವಾಡ, ದಾವಣಗೆರೆ ಜಿಲ್ಲೆಗಳ ಒಟ್ಟು 50 ಕೇಂದ್ರಗಳಲ್ಲಿ ಪರೀಕ್ಷೆ ಸುಗಮವಾಗಿ ನಡೆಯಿತು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.

ಪರೀಕ್ಷೆಗೆ 23,023 ಮಂದಿ ಅರ್ಜಿ ಸಲ್ಲಿಸಿದ್ದರು. ಬೆಳಿಗ್ಗೆ ಮತ್ತು ಮಧ್ಯಾಹ್ನ 2 ಅವಧಿಯಲ್ಲಿ ಪರೀಕ್ಷೆ ನಡೆದಿದೆ. ಆದರೆ ಈ ಪರೀಕ್ಷೆಯಲ್ಲಿ ಧಾರವಾಡದ ಬಾಶಲ್ ಮಿಷನ್ ವಿದ್ಯಾಲಯ ಕೇಂದ್ರದಲ್ಲಿ ನಡೆದ ಪರೀಕ್ಷೆಯಲ್ಲಿ ಸದಾಶಿವ ಸುಣದೊಳ್ಳಿ ಎಂಬ ಅಭ್ಯರ್ಥಿ ನಕಲು ಮಾಡುವಾಗ ಸಿಕ್ಕಿಬಿದ್ದಿದ್ದಾರೆ. ಇವರು ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಖಾನಟ್ಟಿ ಗ್ರಾಮದವರು ಎಂದು ತಿಳಿದು ಬಂದಿದೆ.

ಬೆಳಿಗ್ಗೆ 10.30 ರಿಂದ 12.30ರವರೆಗೆ ನಡೆದ ಮೊದಲ ಅವಧಿಯ ಪತ್ರಿಕೆಯಲ್ಲಿ ಸದಾಶಿವ ನಕಲು ಮಾಡುವಾಗ ಸಿಕ್ಕಿಬಿದ್ದಿದ್ದಾರೆ. ವಾಂತಿ ಮಾಡಲು ಶೌಚಾಲಯಕ್ಕೆ ಹೋಗುವುದಾಗಿ ಕೊಠಡಿ ಮೇಲ್ವಿಚಾರಕರಿಗೆ ತಿಳಿಸಿ ಸದಾಶಿವ ಕಾಪಿ ಚೀಟಿಗಳನ್ನು ತಂದಿದ್ದಾರೆ. ಮಧ್ಯಾಹ್ನದ ಪರೀಕ್ಷೆ ಬರೆಯಲು ಅಭ್ಯರ್ಥಿಗೆ ಅವಕಾಶ ನೀಡಲಾಗಿತ್ತು. ನಕಲು ಮಾಡಿರುವ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವರದಿ ನೀಡಲಾಗಿದೆ ಎಂದು ಪರೀಕ್ಷೆ ನೋಡೆಲ್ ಅಧಿಕಾರಿ ಸುರೇಶ್ ಅವರು ತಿಳಿಸಿದ್ದಾರೆ.