Namma Metro: ಬೆಂಗಳೂರು ಮೆಟ್ರೋದಲ್ಲಿ ಮತ್ತೊಂದು ಅವಘಡ, ಹಳಿಯ ಮೇಲೆ ಬಿದ್ದ ಇಬ್ಬರು ಅಂಧ ಪ್ರಯಾಣಿಕರು, ಸಂಚಾರ ಸ್ಥಗಿತ-bangalore news 2 blind commuters fell into bangalore namma metro lanes at majestic station major accident averted mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Namma Metro: ಬೆಂಗಳೂರು ಮೆಟ್ರೋದಲ್ಲಿ ಮತ್ತೊಂದು ಅವಘಡ, ಹಳಿಯ ಮೇಲೆ ಬಿದ್ದ ಇಬ್ಬರು ಅಂಧ ಪ್ರಯಾಣಿಕರು, ಸಂಚಾರ ಸ್ಥಗಿತ

Namma Metro: ಬೆಂಗಳೂರು ಮೆಟ್ರೋದಲ್ಲಿ ಮತ್ತೊಂದು ಅವಘಡ, ಹಳಿಯ ಮೇಲೆ ಬಿದ್ದ ಇಬ್ಬರು ಅಂಧ ಪ್ರಯಾಣಿಕರು, ಸಂಚಾರ ಸ್ಥಗಿತ

Bangalore Metro ಬೆಂಗಳೂರು ಮೆಟ್ರೋ ನಿಲ್ದಾಣಕ್ಕೆ ಬಂದ ಅಂಧರು ಹಳಿಯ ಮೇಲೆ ಬಿದ್ದ ಘಟನೆ ನಡೆದಿದೆ.ವರದಿ: ಎಚ್.ಮಾರುತಿ,ಬೆಂಗಳೂರು

Bangalore Namma Metro ಬೆಂಗಳೂರಿನ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಅಂಧರಿಬ್ಬರು ಹಳಿ ಮೇಲೆ ಬಿದ್ದು ಅನಾಹುತ ತಪ್ಪಿದೆ.
Bangalore Namma Metro ಬೆಂಗಳೂರಿನ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಅಂಧರಿಬ್ಬರು ಹಳಿ ಮೇಲೆ ಬಿದ್ದು ಅನಾಹುತ ತಪ್ಪಿದೆ.

ಬೆಂಗಳೂರು: ಬೆಂಗಳೂರಿನ ಮೆಜೆಸ್ಟಿಕ್‌ ನಲ್ಲಿರುವ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಮಸೋಮವಾರ ಮಧ್ಯಾಹ್ನ ಇಬ್ಬರು ಅಂಧ ಪ್ರಯಾಣಿಕರು ಆಕಸ್ಮಿಕವಾಗಿ ಹಳಿ ಮೇಲೆ ಬಿದ್ದಿದ್ದು ಅವರನ್ನು ನಮ್ಮ ಮೆಟ್ರೋ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಅತ್ತಿಗುಪ್ಪೆ ಮೆಟ್ರೋ ನಿಲ್ದಾಣಕ್ಕೆ ತೆರಳಲು ಸೋಮವಾರ ಮಧ್ಯಾಹ್ನ 1.13 ರ ವೇಳೆಗೆ ಮೂವರು ಅಂಧ ಪ್ರಯಾಣಿಕರು ಹಸಿರು ಮಾರ್ಗದ ನಿಲ್ದಾಣಕ್ಕೆ ಆಗಮಿಸಿದ್ದರು. ಇವರಲ್ಲಿ ಇಬ್ಬರು ಆಕಸ್ಮಿಕವಾಗಿ ಹಳಿ ಮೇಲೆ ಬಿದ್ದರು. ಕೂಡಲೇ ನಮ್ಮ ಮೆಟ್ರೋ ಭದ್ರತಾ ಸಿಬ್ಬಂದಿ ಇವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇವರು ಕೂಡಲೇ ವಿದ್ಯುತ್‌ ಸರಬರಾಜು ಸ್ಥಗಿತಗೊಳಿಸಿ ತುರ್ತು ಟ್ರಿಪ್‌ ಸಿಸ್ಟಂ ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲಿ ನೆರೆದಿದ್ದ ಇತರ ಪ್ರಯಾಣಿಕರ ಸಹಾಯದಿಂದ ಇವರನ್ನು ಮೇಲಕ್ಕೆ ಎತ್ತಿ ರಕ್ಷಿಸಿದ್ದಾರೆ.

ಅವರಿಗೆ ಯಾವುದೇ ಗಾಯಗಳೂ ಆಗಿಲ್ಲ. ಆದರೆ ಈ ಘಟನೆಯಿಂದ ಹಸಿರು ಮಾರ್ಗದಲ್ಲಿ ಮಧ್ಯಾಹ್ನ 1.13ರಿಂದ 1. 26ರವರೆಗೆ ಮೆಟ್ರೋ ರೈಲು ಸಂಚಾರ ಸ್ಥಗಿತಗೊಂಡಿತ್ತು. ನಂತರ ಸಂಚಾರ ಸುಗಮವಾಗಿ ಅರಂಭವಾಯಿತು ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಆಗಸ್ಟ್‌ ತಿಂಗಳಲ್ಲಿ ಇದುವರೆಗೆ ಹಳಿಗಳ ಮೇಲೆ ಬಿದ್ದ ಎರಡನೇ ಪ್ರಕರಣ ಇದಾಗಿದೆ. ಆಗಸ್ಟ್‌ 3 ರಂದು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ನಾಲ್ಕು ವರ್ಷದ ಮಗುವೊಂದು ಆಟವಾಡುತ್ತಾ ಹಳಿಗಳ ಮೇಲೆ ಬಿದ್ದಿತ್ತು. ಆಗಲೂ ಅ ಮಗುವನ್ನು ಸುರಕ್ಷಿತವಾಗಿ ಕಾಪಾಡಲಾಗಿತ್ತು.

ಯುವ ಕಾಂಗ್ರೆಸ್‌ ಅಧ್ಯಕ್ಷರ ಹೆಸರಿನಲ್ಲಿ ವಿದ್ಯಾರ್ಥಿ ಅಪಹರಣ

ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರ ಹೆಸರನ್ನು ಬಳಸಿಕೊಂಡು ವಿದ್ಯಾರ್ಥಿಯೊಬ್ಬರನ್ನು ಅಪಹರಿಸಿ ಕಿರುಕುಳ ನೀಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ 8 ಮಂದಿ ಆರೋಪಿಗಳ ವಿರುದ್ಧ

ಕೆಂಗೇರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸಿದ ನಂತರ ಯಾರ ಹೆಸರನ್ನು ಹೇಳಿಕೊಂಡು ಇವರು ಕಿರುಕುಳ ನೀಡುತ್ತಿದ್ದರು ಮತ್ತು ಹಣ ವಸೂಲಿ ಮಾಡುತ್ತಿದ್ದರು ಎನ್ನುವುದು ತಿಳಿದು ಬರಲಿದೆ. ಜೀವನ್‌ ಜೈನ್‌ ಎಂಬ ಕಾಲೇಜು ವಿದ್ಯಾರ್ಥಿ ಕಳೆದ ವರ್ಷ ಆಯುಷ್‌ ಶ್ರೀನಿವಾಸ್‌ ಎಂಬಾತನಿಂದ 3 ಲಕ್ಷ ರೂ ಸಾಲ ಪಡೆದಿರುತ್ತಾರೆ. ಸಕಾಲಕ್ಕೆ ಹಣವನ್ನು ಹಿಂತಿರುಗಿಸಲು ಸಾಧ್ಯವಾಗಿರಲಿಲ್ಲ. ತಡವಾಗಿ ಹಣವನ್ನು ಮರಳಿಸಿದ್ದರು. ಆದರೆ 3 ಲಕ್ಷ ರೂಗಳನ್ನು ಹಿಂತಿರುಗಿಸಿದ್ದರೂ ಮತ್ತಷ್ಟು ಹಣ ನೀಡುವಂತೆ ಈ 8 ಮಂದಿಯ ಗುಂಪು ಜೀವನ್‌ ಜೈನ್‌ ಗೆ ಕಿರುಕುಳ ನೀಡುತ್ತಿತ್ತು. ಜೊತೆಗೆ ಜೀವನ್‌ ನನ್ನು ಅಪಹರಿಸಿ

ಬೆತ್ತಲೆಗೊಳಿಸಿ ಕಿರುಕುಳ ನೀಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈತನನ್ನು ಬೆತ್ತಲೆಗೊಳಿಸಿಯೂ ಹಿಂಸಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ಬೆತ್ತಲೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದಾಗಿ ಬೆದರಿಕೆ ಒಡ್ಡಿ ಮತ್ತೆ 6 ಲಕ್ಷ ರೂ. ಹಣವನ್ನು ವಸೂಲಿ ಮಾಡಿದ್ದರು. ನಂತರವೂ ಮತ್ತಷ್ಟು ಹಣಕ್ಕೆ ಬೇಡಿಕೆ ಇಡುತ್ತಾ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರಿನಲ್ಲಿ ಮತ್ತೆ ಮಾಲ್‌ ಗೆ ಬೆದರಿಕೆ

ವೈಟ್‌ ಫೀಲ್ಡ್‌ ಸಮೀಪದ ವಿ.ಆರ್.‌ ಮಾಲ್‌ ಗೆ ಸೋಮವಾರ ಮಧ್ಯಾಹ್ನ 3 ಗಂಟೆಯ ವೇಳೆಗೆ ಇ ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಹಾಕಲಾಗಿದೆ. ಇದರಿಂದ ಮಾಲ್‌ ನಲ್ಲಿ ಕೆಲ ಸಮಯ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಯಾರೋ ಕಿಡಿಗೇಡಿಗಳು ಈ ದುಷ್ಕೃತ್ಯ ನಡೆಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಇ ಮೇಲ್‌ ನಲ್ಲಿ ಬೆದರಿಕೆ ಸಂದೇಶ ಬಂದಿರುವುದನ್ನು ಗಮನಿಸಿದ ಸಿಬ್ಬಂದಿ ಗ್ರಾಹಕರಿಗೆ ಮಾಹಿತಿ ನೀಡಿದ್ದಾರೆ. ನಂತರ ಎಲ್ಲರನ್ನೂ ಮಾಲ್‌ ನಿಂದ ಹೊರಗೆ ಕಳುಹಿಸಿದ್ದಾರೆ. ಪೊಲೀಸರಿಗೂ ವಿಷಯ ಮುಟ್ಟಿಸಿದ್ದಾರೆ. ನಂತರ ಮಾಲ್‌ ಗೆ ಆಗಮಿಸಿದ ಶ್ವಾನದಳ ಮತ್ತು ಬಾಂಬ್‌ ನಿಷ್ಕ್ರಿಯ ದಳ ಪರಿಶೀಲನೆ ನಡೆಸಿದೆ. ಆದರೆ ಯಾವುದೇ ಸ್ಫೋಟಕ ವಸ್ತು ಅಥವಾ ರಾಸಾಯನಿಕ ಪದಾರ್ಥಗಳು ಪತ್ತೆಯಾಗಿಲ್ಲ. ಇದೊಂದು ಹುಸಿ ಬೆದರಿಕೆ ಎನ್ನುವುದು ದೃಢವಾಗಿದೆ. ವೈಟ್‌ ಫೀಲ್ಡ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇ ಮೇಲ್‌ ನಲ್ಲಿ ನಿಮ್ಮಲ್ಲಿ ಯಾರಿಗೂ ಬದುಕುವ ಅರ್ಹತೆ ಇಲ್ಲ. ಈ ಕಟ್ಟಡದ ಒಳಗಿರುವ ಎಲ್ಲರ ಜೀವಗಳು ರಕ್ತದ ಮಡುವಿನಲ್ಲಿ ಅಂತ್ಯ ಕಾಣಲಿದೆ. ನಾನು ಮಾನವೀಯತೆಯನ್ನು ದ್ವೇಷಿಸುವೆ. ನೀವು ಯಾರೂ ಬದುಕುವ ಅರ್ಹತೆ ಹೊಂದಿಲ್ಲ ಎಂದು ಬರೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ವರದಿ: ಎಚ್.ಮಾರುತಿ,ಬೆಂಗಳೂರು