Bangalore Flower Show: ಪುಷ್ಪಗಳಲ್ಲಿ ಅರಳಲಿರುವ ಡಾ.ಅಂಬೇಡ್ಕರ್; ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ ಬೆಂಗಳೂರು ಫಲಪುಷ್ಪ ಪ್ರದರ್ಶನ ವಿಶೇಷ
ಕನ್ನಡ ಸುದ್ದಿ  /  ಕರ್ನಾಟಕ  /  Bangalore Flower Show: ಪುಷ್ಪಗಳಲ್ಲಿ ಅರಳಲಿರುವ ಡಾ.ಅಂಬೇಡ್ಕರ್; ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ ಬೆಂಗಳೂರು ಫಲಪುಷ್ಪ ಪ್ರದರ್ಶನ ವಿಶೇಷ

Bangalore Flower Show: ಪುಷ್ಪಗಳಲ್ಲಿ ಅರಳಲಿರುವ ಡಾ.ಅಂಬೇಡ್ಕರ್; ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ ಬೆಂಗಳೂರು ಫಲಪುಷ್ಪ ಪ್ರದರ್ಶನ ವಿಶೇಷ

Dr Ambedkar in Flowers ಬೆಂಗಳೂರಿನ ಲಾಲ್‌ಬಾಗ್‌ ಫಲ ಪುಷ್ಪ ಪ್ರದರ್ಶನದಲ್ಲಿ(Lal Bagh Flower Show 2024) ಈ ಬಾರಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರೇ ವಿಶೇಷ ಆಕರ್ಷಣೆ.ವರದಿ: ಎಚ್.ಮಾರುತಿ. ಬೆಂಗಳೂರು

ಬೆಂಗಳೂರಿನ ಲಾಲ್‌ ಬಾಗ್‌ನಲ್ಲಿ ಪುಷ್ಪಗಳಲ್ಲಿ ಅರಳುತ್ತಿದ್ದಾರೆ ಡಾ.ಬಿ.ಆರ್‌.ಅಂಬೇಡ್ಕರ್‌.
ಬೆಂಗಳೂರಿನ ಲಾಲ್‌ ಬಾಗ್‌ನಲ್ಲಿ ಪುಷ್ಪಗಳಲ್ಲಿ ಅರಳುತ್ತಿದ್ದಾರೆ ಡಾ.ಬಿ.ಆರ್‌.ಅಂಬೇಡ್ಕರ್‌.

ಬೆಂಗಳೂರು: ಬೆಂಗಳೂರಿನ ಲಾಲ್‌ ಬಾಗ್‌ ಪ್ರಮುಖ ಪ್ರವಾಸಿ ತಾಣ. ಅಲ್ಲಿನ ಫಲಪುಷ್ಪ ಪ್ರದರ್ಶನವೂ ಕೂಡ ಅಷ್ಟೇ ಆಕರ್ಷಕ. ಪ್ರತಿ ವರ್ಷ ಇಲ್ಲವೇ ವಿಶೇಷ ಸಂದರ್ಭದಲ್ಲಿ ವಿಭಿನ್ನ ಫಲ ಪುಷ್ಪ ಪ್ರದರ್ಶನದ( Lal Bagh Flower Show 2024) ಮೂಲಕ ಲಾಲ್‌ಬಾಗ್‌ನಲ್ಲಿ ಅಸಂಖ್ಯಾತ ಜನರನ್ನು ಆಕರ್ಷಿಸಲಾಗುತ್ತದೆ.ಮುಂಬರುವ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಲಾಲ್ ಬಾಗ್ ನಲ್ಲಿ ಈ ವರ್ಷ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಜೀವನ ಗಾಥೆಯನ್ನು ಬಿಂಬಿಸುವ ಪುಷ್ಪ ಪ್ರದರ್ಶನ ಆಯೋಜಿಸಲು ನಿರ್ಧಾರ ಮಾಡಲಾಗಿದೆ. ಈ ವರ್ಷ ಆಗಸ್ಟ್ 8 ರಿಂದ 19 ರವರೆಗೆ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಎಂದಿನಂತೆ ಆಕರ್ಷಕ ಫಲಪುಷ್ಪ ಪ್ರದರ್ಶನಕ್ಕೆ ಲಾಲ್ ಬಾಗ್ ಸಜ್ಜುಗೊಳ್ಳಲಿದೆ.

ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ ಮತ್ತು ಜನವರಿ 26 ಗಣರಾಜ್ಯೋತ್ಸವ ಅಂಗವಾಗಿ ಲಾಲ್ ಬಾಗ್ ನಲ್ಲಿ ಪ್ರತಿ ವರ್ಷ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳುತ್ತಾ ಬರಲಾಗಿದೆ.

ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದ್ದು, ಹೂಗಳ ಆಯ್ಕೆ ನಡೆಯುತ್ತಿದೆ. ವಿಭಿನ್ನ ಮತ್ತು ಅತ್ಯಾಕರ್ಷಕವಾಗಿ ನಡೆಸಲು ಉದ್ದೇಶಿಸಲಾಗಿದೆ ಎಂದು ಲಾಲ್ ಬಾಗ್ ತೋಟಗಾರಿಕೆ ವಿಭಾಗದ ಉಪ ನಿರ್ದೇಶಕಿ ಜಿ. ಕುಸುಮಾ ತಿಳಿಸಿದ್ದಾರೆ.

ವಯಸ್ಕರಿಗೆ ರೂ.80 ಪ್ರವೇಶ ಶುಲ್ಕ ನಿಗದಿಯಾಗಲಿದ್ದು ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.ಇದು 214ನೇ ಫಲಪುಷ್ಪ ಪ್ರದರ್ಶನವಾಗಿದ್ದು ಹಲವು ವಿಶೇಷತೆಗಳನ್ನು ಒಳಗೊಂಡಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಂದಿನಂತೆ ಅಂಥೋರಿಯಂ, ಲಿಲ್ಲಿ, ಆರ್ಕಿಡ್, ಜರ್ ಬೆರಾ, ಸೇವಂತಿಗೆ ಸೇರಿದಂತೆ 30 ಸಾವಿರ ಬಗೆಯ ಹೂ ಗಳಿಂದ ಅಂಬೇಡ್ಕರ್ ಅರಳಲಿದ್ದಾರೆ. 10-12 ದೇಶಗಳಿಂದ ಹೂಗಳನ್ನು ತರಿಸಿಕೊಳ್ಳಲಾಗುತ್ತದೆ. ಕೊಲಂಬಿಯಾ, ನೆದರ್ ಲ್ಯಾಂಡ್ಸ್, ಬೆಲ್ಜಿಯಂ, ಕೀನ್ಯಾ, ಆಸ್ಟ್ರೇಲಿಯಾದಿಂದ ಹೂಗಳು ಲಾಲ್ ಬಾಗ್ ಗೆ ಆಗಮಿಸಲಿವೆ..ಜೊತೆಗೆ ಆಕರ್ಷಕ ಬೋನ್ಸಾಯ್ ಪ್ರದರ್ಶನ ಇದ್ದೇ ಇರುತ್ತದೆ.

ಗಾಜಿನ ಮನೆಯ ಹೊರಭಾಗದಲ್ಲೂ ಹೂವಿನ ಕಲಾಕೃತಿಗಳು ಅರಳಲಿವೆ. ಬ್ಯಾಂಡ್ ಸ್ಟ್ಯಾಂಡ್, ರಾಕ್ ಗಾರ್ಡನ್ ಸೆಲ್ಫಿ ಪಾಯಿಂಟ್ ಮಿಸ್ ಮಾಡಿಕೊಳ್ಳುವಂತಿಲ್ಲ. ಇಕಾಬೇನಾ ಹಾಗೂ ಇತರ ಪೂರಕ ಕಲೆಗಳ ಪ್ರದರ್ಶನ ಕೈಬೀಸಿ ಕರೆಯುವುದರಲ್ಲಿ ಸಂಶಯವಿಲ್ಲ.

ಈ ವರ್ಷ ಸುಮಾರು 50 ಮಾದರಿಯ ಪ್ರದರ್ಶನಕ್ಕೆ ಸಲಹೆಗಳು ಬಂದಿದ್ದು ಅಂತಿಮವಾಗಿ ಅಂಬೇಡ್ಕರ್ ಅವರ ಥೀಮ್ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಹಿಂದೆ ಭಕ್ತಿ ಭಂಡಾರಿ ಬಸವಣ್ಣ ಮತ್ತು ಹೆಮ್ಮೆಯ ನಟ ಪುನೀತ್ ರಾಜ್ ಕುಮಾರ್ ಅವರ ಫಲಪುಷ್ಪ ಪ್ರದರ್ಶನ ನಡೆದಿತ್ತು.

ಪುಷ್ಪಗಳಲ್ಲಿ ಅಂಬೇಡ್ಕರ್ ಅರಳಲಿದ್ದು, ಸಂವಿಧಾನ, ಅವರ ಮಾರ್ಗಸೂಚಿ ತತ್ವಗಳು ಮತ್ತು ಅವರ ಜೀವನದ ವಿವಿಧ ಹಂತಗಳನ್ನು ಪುಷ್ಪಗಳಲ್ಲಿ ಕಾಣಬಹುದಾಗಿದೆ.

ವರದಿ: ಎಚ್. ಮಾರುತಿ, ಬೆಂಗಳೂರು

Whats_app_banner