Bangalore crime: ಬೆಂಗಳೂರಿನಲ್ಲಿ 26 ವರ್ಷಗಳ ಹಿಂದೆ ಸರಗಳ್ಳತನ ಪ್ರಕರಣ, ರಾಮನಗರದಲ್ಲಿ ಸೆರೆ ಸಿಕ್ಕ ಕಳ್ಳ !
ಕನ್ನಡ ಸುದ್ದಿ  /  ಕರ್ನಾಟಕ  /  Bangalore Crime: ಬೆಂಗಳೂರಿನಲ್ಲಿ 26 ವರ್ಷಗಳ ಹಿಂದೆ ಸರಗಳ್ಳತನ ಪ್ರಕರಣ, ರಾಮನಗರದಲ್ಲಿ ಸೆರೆ ಸಿಕ್ಕ ಕಳ್ಳ !

Bangalore crime: ಬೆಂಗಳೂರಿನಲ್ಲಿ 26 ವರ್ಷಗಳ ಹಿಂದೆ ಸರಗಳ್ಳತನ ಪ್ರಕರಣ, ರಾಮನಗರದಲ್ಲಿ ಸೆರೆ ಸಿಕ್ಕ ಕಳ್ಳ !

crime news ಇದು ವಿಶಿಷ್ಟ ಪ್ರಕರಣ. 26 ವರ್ಷಗಳ ಹಿಂದೆ ವ್ಯಕ್ತಿಯೊಬ್ಬರು ಬೆಂಗಳೂರಿನ ಮಹಿಳೆ ಸರ ಎಗರಿಸಿದ್ದರು. ಈ ಪ್ರಕರಣದಲ್ಲಿ ಆಗಿನಿಂದಲೂ ನಾಪತ್ತೆಯಾಗಿ ಈಗ ರಾಮನಗರದಲ್ಲಿ ಸಿಕ್ಕಿಬಿದ್ದಿದ್ದಾರೆ.ವರದಿ: ಎಚ್‌ ಮಾರುತಿ, ಬೆಂಗಳೂರು

ಬೆಂಗಳೂರಿನಲ್ಲಿ  26 ವರ್ಷ ಹಿಂದೆ ಸರಗಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ರಾಮನಗರದಲ್ಲಿ ಬಂಧಿಸಲಾಗಿದೆ.
ಬೆಂಗಳೂರಿನಲ್ಲಿ 26 ವರ್ಷ ಹಿಂದೆ ಸರಗಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ರಾಮನಗರದಲ್ಲಿ ಬಂಧಿಸಲಾಗಿದೆ.

ಬೆಂಗಳೂರಿನಲ್ಲಿ ಮಹಿಳೆಯೊಬ್ಬರ ಸರ ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ಜಾಮೀನು ಪಡೆದು ತಲೆಮರೆಸಿಕೊಂಡಿದ್ದ ಆರೋಪಿ ಗುಲಾಬ್ ಖಾನ್ ಅಲಿಯಾಸ್ ಗುಲ್ಲು ಎಂಬಾತನನ್ನು 26 ವರ್ಷಗಳ ಬಳಿಕ ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. 1998ರ ಜನವರಿ 20ರಂದು ಮಹಿಳೆಯೊಬ್ಬರ ಸರ ಕಳ್ಳತನಮಾಡಿದ್ದ ಗುಲಾಬ್ ಖಾನ್, ಜಾಮೀನು ಪಡೆದು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಇದೀಗ, 26 ವರ್ಷಗಳ ನಂತರ ಈತ ನಮ್ಮ ಕೈಗೆ ಸಿಕ್ಕಿಬಿದ್ದಿದ್ದಾನೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

24 ಗ್ರಾಂ ತೂಕದ ಮಾಂಗಲ್ಯ ಸರ

41 ವರ್ಷದ ಮಹಿಳೆಯೊಬ್ಬರು ಜಯನಗರ 5ನೇ ಹಂತದ 11ನೇ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದರು. ಆಟೊದಲ್ಲಿ ಹಿಂಬಾಲಿಸಿದ್ದ ಆರೋಪಿ ಗುಲಾಬ್ ಖಾನ್, ಮಹಿಳೆಯ 24 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಕೈಗೆ ಸಿಗದೆ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸರ ಕಳ್ಳತನ ಸಂಬಂಧ ಮಹಿಳೆ ಜಯನಗರ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ ಆರೋಪಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗುತ್ತಿರಲಿಲ್ಲ ಎಂದು ತಿಳಿದು ಬಂದಿದೆ.

ಜಮೀನು ಪಡೆದ ನಂತರ ಗುಲಾಬ್ ಖಾನ್, ಬೆಂಗಳೂರನ್ನು ಬಿಟ್ಟು ರಾಮನಗರಕ್ಕೆ ಹೋಗಿದ್ದ. ಅಲ್ಲಿಯೇ ವೆಲ್ಡಿಂಗ್ ಶಾಪ್ ಆರಂಭಿಸಿದ್ದ. ಸ್ಥಳೀಯರನ್ನು ಪರಿಚಯ ಮಾಡಿಕೊಂಡು ಸಾಮಾನ್ಯನಂತೆ ವಾಸಿಸುತ್ತಿದ್ದ. ತಾನು ಕಳ್ಳ ಎನ್ನುವ ಅನುಮಾನ ಬರದಂತೆ ನಡೆದುಕೊಳ್ಳುತ್ತಿದ್ದ. ಈತ ಕಳ್ಳತನ ಪ್ರಕರಣದ ಆರೋಪಿ ಎಂಬುದು ಯಾರಿಗೂ ಗೊತ್ತಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಮತ್ತೆ ಪೊಲೀಸರು ತನ್ನನ್ನು ಬಂಧಿಸಬಹುದು ಎಂಬ ಭಯದಿಂದ ಗುಲಾಬ್ ಖಾನ್, ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರಲಿಲ್ಲ. ಅಪರಾಧ ಎಸಗಿದರೆ, ಪೊಲೀಸರು ಪುನಃ ಬಂಧಿಸಬಹುದು. ಹಳೇ ಪ್ರಕರಣದಲ್ಲೂ ಪುನಃ ಸಿಕ್ಕಿಬೀಳಬಹುದೆಂಬ ಭಯ ಆರೋಪಿಗಿತ್ತು ಎಂದು ತಿಳಿದು ಬಂದಿದೆ.

ಪೊಲೀಸರಿಗೆ ಗುಲಾಬ್ ಖಾನ್ ರಾಮನಗರದಲ್ಲಿರುವ ಮಾಹಿತಿ ಇತ್ತೀಚೆಗೆ ಲಭ್ಯವಾಗಿತ್ತು. ಆತನ ಚಲನವಲನಗಳ ಮೇಲೆ ನಿಗಾ ವಹಿಸಿ ಇತ್ತೀಚೆಗೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

300 ಬಾರಿ ಸಂಚಾರ ನಿಯಮ ಉಲ್ಲಂಘನೆ, 3 ಲಕ್ಷ ದಂಡ:

ಬೆಂಗಳೂರು ನಗರದಲ್ಲಿ 300ಕ್ಕೂ ಹೆಚ್ಚು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದ ದ್ವಿಚಕ್ರ ವಾಹನವೊಂದಕ್ಕೆ ರೂಪಾಯಿ 3.04 ಲಕ್ಷ ದಂಡ ವಿಧಿಸಲಾಗಿದೆ. ಬಾಕಿ ದಂಡ ಪಾವತಿಗೆ ಪೊಲೀಸರು ಗಡುವು ನೀಡಿದ್ದಾರೆ.

ಸುಧಾಮನಗರ ನಿವಾಸಿಯೊಬ್ಬರ ಹೆಸರಿನಲ್ಲಿರುವ ಕೆಎ 05 ಕೆಎಫ್ 7969 ನಂಬರ್ ನ ಆಕ್ಟಿವ್ ಹೊಂಡಾ ದ್ವಿಚಕ್ರ ವಾಹನದ ಮೇಲೆ 3.04 ಲಕ್ಷ ರೂಪಾಯಿ ದಂಡ ಬಾಕಿ ಇದೆ. ಇದರ ವಸೂಲಿಗಾಗಿ ದ್ವಿಚಕ್ರ ವಾಹನ ಮಾಲೀಕರ ಮನೆಗೆ ಹೋಗಿ ನೋಟಿಸ್ ನೀಡಲಾಗಿದೆ ಎಂದು ಸಂಚಾರ ವಿಭಾಗದ ಪೊಲೀಸರು ಹೇಳಿದ್ದಾರೆ.

ಹೆಲ್ಮೆಟ್ ರಹಿತ ಚಾಲನೆ, ಸವಾರಿ ವೇಳೆ ಮೊಬೈಲ್‌ ಬಳಕೆ, ಸಿಗ್ನಲ್ ಜಂಪ್ ಸೇರಿದಂತೆ ಹಲವು ಸಂಚಾರ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ರೂಪಾಯಿ 50 ಸಾವಿರ ಮೇಲ್ಪಟ್ಟು ದಂಡ ಬಾಕಿ ಉಳಿಸಿಕೊಂಡವರ ಮನೆಗಳಿಗೆ ಹೋಗಿ, ದಂಡ ವಸೂಲಿ ಮಾಡಲಾಗುತ್ತಿದೆ. ಇದರ ಅಂಗವಾಗಿ ಸುಧಾಮನಗರ ನಿವಾಸಿ ಮನೆಗೂ ಹೋಗಿ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ದ್ವಿಚಕ್ರ ವಾಹನ ಮಾಲೀಕನ ಮನೆಗೆ ಹೋಗಿದ್ದ ಪೊಲೀಸರು, ದಂಡ ತುಂಬುವಂತೆ ಹೇಳಿದ್ದಾರೆ.

ಮೂರು ಲಕ್ಷ ರೂಪಾಯಿ ಹಣ ಇಲ್ಲ. ಆದ್ದರಿಂದ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿ ಕೊಂಡೊಯ್ಯುವಂತೆ ಹೇಳಿದ್ದರು. ಆದರೆ, ಪೊಲೀಸರು ಅದಕ್ಕೆ ಒಪ್ಪಿಲ್ಲ. ದಂಡ ಪಾವತಿ ಕಡ್ಡಾಯ. ಇಲ್ಲದಿದ್ದರೆ, ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ವಾಹನ ಸವಾರ, ದಂಡ ಪಾವತಿಸಲು ಸಮಯ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರು ಕೂಡಲೇ ದಂಡ ಪಾವತಿ ಮಾಡಬೇಕು. ಇಲ್ಲದಿದ್ದರೆ, ಪೊಲೀಸರು ಮನೆ ಬಾಗಿಲಿಗೆ ಬಂದು ದಂಡ ವಸೂಲಿ ಮಾಡಲಿದ್ದಾರೆ ಎಂದು ಉನ್ನತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

(ವರದಿ: ಎಚ್. ಮಾರುತಿ, ಬೆಂಗಳೂರು)

Whats_app_banner