2nd Puc-2 Exams: ದ್ವಿತೀಯ ಪಿಯುಸಿ ಪರೀಕ್ಷೆ 2, ಪ್ರವೇಶ ಪತ್ರದಲ್ಲಿ ಗೊಂದಲ, ಮಂಡಲಿ ಸ್ಪಷ್ಟನೆ ಏನು
ಕನ್ನಡ ಸುದ್ದಿ  /  ಕರ್ನಾಟಕ  /  2nd Puc-2 Exams: ದ್ವಿತೀಯ ಪಿಯುಸಿ ಪರೀಕ್ಷೆ 2, ಪ್ರವೇಶ ಪತ್ರದಲ್ಲಿ ಗೊಂದಲ, ಮಂಡಲಿ ಸ್ಪಷ್ಟನೆ ಏನು

2nd Puc-2 Exams: ದ್ವಿತೀಯ ಪಿಯುಸಿ ಪರೀಕ್ಷೆ 2, ಪ್ರವೇಶ ಪತ್ರದಲ್ಲಿ ಗೊಂದಲ, ಮಂಡಲಿ ಸ್ಪಷ್ಟನೆ ಏನು

ಕರ್ನಾಟಕದಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆ2ರ ಪ್ರವೇಶ ಪತ್ರದ ಗೊಂದಲ ವಿಚಾರದಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯಮಾಪನ ಮಂಡಲಿ ಸ್ಪಷ್ಟನೆ ನೀಡಿದೆ.

ದ್ವಿತೀಯ ಪರೀಕ್ಷೆ2 ಪ್ರವೇಶ ಪತ್ರದ ಗೊಂದಲಕ್ಕೆ ಮಂಡಲಿ ತೆರೆ ಎಳೆದಿದೆ.
ದ್ವಿತೀಯ ಪರೀಕ್ಷೆ2 ಪ್ರವೇಶ ಪತ್ರದ ಗೊಂದಲಕ್ಕೆ ಮಂಡಲಿ ತೆರೆ ಎಳೆದಿದೆ.

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ-ರ ಪರೀಕ್ಷೆಗಳು ಏಪ್ರಿಲ್‌ 29 ರಿಂದ ಆರಂಭಗೊಳ್ಳಲಿದ್ದು, ಈಗಾಗಲೇ ಪ್ರವೇಶ ಪತ್ರಗಳನ್ನು ಪರೀಕ್ಷೆ ಎದುರಿಸುವ ಅಭ್ಯರ್ಥಿಗಳಿಗೆ ನೀಡಲಾಗಿದೆ. ಆದರೆ ಪ್ರವೇಶ ಪತ್ರ ಪಡೆದ ಹಲವಾರು ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗಿದೆ. ಅದರಲ್ಲೂ ವಿದ್ಯಾರ್ಥಿಗಳು ತೆಗೆದುಕೊಂಡಿರುವ ವಿಷಯ ಬಿಟ್ಟು ಹೆಚ್ಚುವರಿ ವಿಷಯಗಳನ್ನು ಪ್ರವೇಶ ಪತ್ರದಲ್ಲಿ ನೀಡಲಾಗಿದೆ. ಇದರಿಂದ ಗಲಿಬಿಲಿಗೆ ಒಳಗಾದ ವಿದ್ಯಾರ್ಥಿಗಳು ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಪ್ರವೇಶ ಪತ್ರ ಸರಿಪಡಿಸಿಕೊಡುವಂತೆ ಮನವಿ ಮಾಡುತ್ತಿದ್ದಾರೆ. ಇದಕ್ಕೆ ಉತ್ತರ ನೀಡಿರುವ ಅಧಿಕಾರಿಗಳು, ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ಕಿವಿಮಾತು ಹೇಳಿದ್ದಾರೆ.

ಈ ತಿಂಗಳು ಪ್ರಕಟಿಸಲಾದ ಫಲಿತಾಂಶದ ನಂತರ ಅನುತ್ತೀರ್ಣರಾದ, ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಮತ್ತೊಂದು ಪರೀಕ್ಷೆ ನಡೆಸಲಾಗುತ್ತಿದೆ.ಇದರೊಟ್ಟಿಗೆ ಅಂಕಗಳನ್ನು ಉತ್ತಮಪಡಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳೂ ಪರೀಕ್ಷೆಗೆ ಹಾಜರಾಗಲು ವ್ಯವಸ್ಥೆಯನ್ನು ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ಮಾಡಿದೆ.

ಪ್ರವೇಶ ಪತ್ರ ಗೊಂದಲ ಏಕೆ

ಈಗಾಗಲೇ ಎಲ್ಲಾ ವಿದ್ಯಾರ್ಥಿಗಳು ಅರ್ಜಿ ತುಂಬಿ ಶುಲ್ಕವನ್ನೂ ಭರಿಸಿದ್ದಾರೆ. ಅವರಿಗೆ ಮಂಡಲಿಯು ಪ್ರವೇಶ ಪತ್ರವನ್ನೂ ರವಾನಿಸಿದೆ. ಅವರು ಬಾಕಿ ಉಳಿಸಿಕೊಂಡಿರುವ ಪರೀಕ್ಷೆಯ ವಿಷಯಗಳು ಇಲ್ಲವೇ ಅಂಕ ಉತ್ತಮಪಡಿಸಿಕೊಳ್ಳುವ ವಿಷಯದ ಮಾಹಿತಿ ಪ್ರವೇಶ ಪತ್ರದಲ್ಲಿ ಇರಬೇಕಾಗಿತ್ತು.

ಆದರೆ ಹಲವಾರು ವಿದ್ಯಾರ್ಥಿಗಳಿಗೆ ತಾವು ಬಯಸಿದ ಇಲ್ಲವೇ ಅನುತ್ತೀರ್ಣವಾದ ವಿಷಯ ಹೊರತುಪಡಿಸಿ ಇತರೆ ವಿಷಯಗಳನ್ನೂ ಪ್ರವೇಶ ಪತ್ರದಲ್ಲಿ ನಮೂದಿಸಲಾಗಿದೆ.

ಹೆಚ್ಚುವರಿ ವಿಷಯಳ ಮುದ್ರಣಗೊಂಡಿದ್ದನ್ನು ನೋಡಿ ಬೆದರಿದ ವಿದ್ಯಾರ್ಥಿಗಳು ಅಧಿಕಾರಿಗಳು ಹಾಗೂ ಕಾಲೇಜು ಪ್ರಾಂಶುಪಾಲರ ಗಮನಕ್ಕೆ ತಂದರು. ಪರೀಕ್ಷೆ ಆರಂಭಗೊಳ್ಳಲು ಮೂರು ದಿನ ಇದೆ. ನಡುವೆ ರಜೆಗಳು ಬರುವುದರಿಂದ ಪ್ರವೇಶ ಪತ್ರ ಗೊಂದಲವಾಗಿ ನಮಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ವಿದ್ಯಾರ್ಥಿಗಳು ಅಲವತ್ತುಕೊಂಡರು.

ಎಚ್ಚೆತ್ತ ಮಂಡಳಿ

ಕೂಡಲೇ ಮಂಡಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ಇದನ್ನು ತರಲಾಯಿತು. ಈ ಹಿನ್ನೆಲೆಯಲ್ಲಿ ಪ್ರಕಟಣೆ ಹೊರಡಿಸಿರುವ ಮಂಡಲಿಯು, ದ್ವಿತೀಯ ಪಿಯುಸಿ ಪರೀಕ್ಷೆ-2 ತೆಗೆದುಕೊಂಡಿರುವ ವಿದ್ಯಾರ್ಥಿಗಳ ಪ್ರವೇಶ ಪತ್ರದಲ್ಲಿ ವಿದ್ಯಾರ್ಥಿಗಳು ತೆಗೆದುಕೊಂಡಿರುವ ವಿಷಯದ ಜತೆಯಲ್ಲಿ ಹೆಚ್ಚುವರಿ ವಿಷಯಗಳೂ ಮುದ್ರಣಗೊಂಡಿವೆ.

ಇದು ಮಂಡಲಿ ಗಮಕ್ಕೆ ಬಂದಿದೆ. ಅಂತಹ ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೆ ಒಳಗಾಗದೇ ತಾವು ಪರೀಕ್ಷೆಗೆ ನೊಂದಾಯಿಸಿಕೊಂಡಿರುವ ವಿಷಯಗಳಿಗೆ ಮಾತ್ರ ಪರೀಕ್ಷೆಗೆ ಹಾಜರಾಗಬೇಕು ಎಂದು ಮಂಡಲಿ ಅಧ್ಯಕ್ಷರು ತಿಳಿಸಿ ವಿವಾದ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner