Bangalore News: ಬೆಂಗಳೂರಲ್ಲಿ ಫೆ.14ರಿಂದ ಮದ್ಯ ಮಾರಾಟ ಬಂದ್, 3 ದಿನ ನಿಷೇಧಕ್ಕೆ ಪ್ರೇಮಿಗಳ ದಿನ ಕಾರಣ ಅಲ್ಲವೇ ಅಲ್ಲ!
ಬೆಂಗಳೂರಿನಲ್ಲಿ ಫೆ.14ರಿಂದ ಮೂರು ದಿನ ಮದ್ಯ ಸಿಗುವುದಿಲ್ಲ. ಇದಕ್ಕೆ ಪ್ರೇಮಿಗಳ ದಿನ ಕಾರಣವೇನು ಅಲ್ಲ.ಬದಲಿಗೆ ವಿಧಾನಪರಿಷತ್ ಚುನಾವಣೆ ಇರುವುದರಿಂದ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.ವರದಿ: ಎಚ್.ಮಾರುತಿ, ಬೆಂಗಳೂರು
ಬೆಂಗಳೂರಿನಲ್ಲಿ ಫೆ.14ರಿಂದ ಮೂರು ದಿನಗಳ ಕಾಲ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಆದರೆ ನೀವು ಊಹಿಸಿದಂತೆ ಪ್ರೇಮಿಗಳ ದಿನಾಚರಣೆ ಕಾರಣಕ್ಕೆ ಅಲ್ಲ. ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ನಿಷೇಧಿಸಲಾಗಿದೆ. ಫೆ.14ರಿಂದ ಮೂರು ದಿನಗಳ ಕಾಲ ಮದ್ಯ ಮಾರಾಟವನ್ನು ನಿಷೇಧಿಸಲಾಗುತ್ತಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಆದೇಶಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಫೆ. 14 ಸಂಜೆ 5 ಗಂಟೆಯಿಂದ ಫೆ.17 ಬೆಳಗ್ಗೆ 6 ಗಂಟೆಯವರಗೆ ಬೆಂಗಳೂರು ನಗರ ಜಿಲ್ಲೆಯಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ 7 ವಿಧಾನಸಭಾ ಕ್ಷೇತ್ರಗಳಾದ ಯಲಹಂಕ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ ಮತ್ತು ಆನೇಕಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಶಿಕ್ಷಕರು ಮತ ಚಲಾಯಿಸಲಿದ್ದಾರೆ. ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಈಗಾಗಲೇ ಜ.16 ರಿಂದ ಫೆ.23ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ.
ಪರಿಷತ್ ಚುನಾವಣೆ
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಿಂದ ವಿಧಾನ ಪರಿಷತ್ ಗೆ ಪುಟ್ಟಣ್ಣ ಆಯ್ಕೆಯಾಗಿದ್ದರು. ವಿಧಾನಸಭಾ ಚುನಾವಣೆಗೂ ಮುನ್ನ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಪುಟ್ಟಣ್ಣ ರಾಜಾಜಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇದೀಗ ಚುನಾವಣೆ ನಡೆಯುತ್ತಿದೆ.
ಈ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರ ಅವಧಿ 2026ರ ನವೆಂಬರ್ 11ರವರೆಗೆ ಇರಲಿದೆ. ಫೆ. 16ರಂದು ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, 20ರಂದು ಮತ ಎಣಿಕೆ ನಡೆಯಲಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಈ ಕ್ಷೇತ್ರ ವಿಸ್ತರಿಸಿಕೊಂಡಿದೆ. ಶೇ. 80 ರಷ್ಟು ಮತದಾರರು ಬೆಂಗಳೂರು ನಗರ ಜಿಲ್ಲೆಯಲ್ಲೇ ಇದ್ದಾರೆ.
ಇದನ್ನೂ ಓದಿರಿ: ಟೆಸ್ಟ್ ಕ್ರಿಕೆಟ್ನಲ್ಲಿ ವೇಗದ 150 ವಿಕೆಟ್ ಭಾರತೀಯರು
ರಂಗೇರಿದ ಅಖಾಡ
ಬಿಜೆಪಿ ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ವಕೀಲ ಎ. ಪಿ. ರಂಗನಾಥ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಳೆದ ಬಾರಿ ಇವರು ಜೆಡಿಎಸ್ ಅಭ್ಯರ್ಥಿಯಾಗಿ ಪರಾಭವ ಹೊಂದಿದ್ದರು. ಜೆಡಿಎಸ್ ನಿಂದ 3 ಹಾಗೂ ಬಿಜೆಪಿಯಿಂದ ಒಂದು ಬಾರಿ ಗೆಲುವು ಸಾಧಿಸಿದ್ದ ಪುಟ್ಟಣ್ಣ ರಾಜೀನಾಮೆ ಸಲ್ಲಿಸಿದ್ದರು.
ದೇವೇಗೌಡರ ಮನೆ ಮಗನಂತಿದ್ದ ಪುಟ್ಟಣ್ಣ ಬಿಜೆಪಿ ಸೇರುವ ಮೂಲಕ ಅವರ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೂ 2020ರಲ್ಲಿ ಅವರನ್ನು ಮಣಿಸಲಾಗಲಿಲ್ಲ. ಆದರೆ ಈ ಬಾರಿ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಬಿಜೆಪಿ ಪುಟ್ಟಣ್ಣ ಸೋಲಿಗೆ ಅವಿರತ ಶ್ರಮ ಹಾಕುತ್ತಿದ್ದಾರೆ.
2002ರ ಚುನಾವಣೆಯಲ್ಲಿ ಆರ್‌ಎಸ್‌ಎಸ್ ಮುಖಂಡ ಕೆ. ನರಹರಿ ಅವರನ್ನು ಸೋಲಿಸುವ ಮೂಲಕ ಪುಟ್ಟಣ್ಣ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ನೆಲೆಯೂರಲು ಕಾರಣರಾಗಿದ್ದರು. 2008 ಮತ್ತು 2014ರ ಚುನಾವಣೆಯಲ್ಲೂ ಪುಟ್ಟಣ್ಣ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದರು. 2020ರಲ್ಲಿ ಬಿಜೆಪಿ ಸೇರ್ಪಡೆಯಾಗಿ ಗೆಲುವು ಸಾಧಿಸಿದ್ದರು. 22 ವರ್ಷಗಳಿಂದ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಪುಟ್ಟಣ್ಣ, ಶಿಕ್ಷಕರ ಜತೆ ವೈಯಕ್ತಿಕ ಸಂಪರ್ಕವಿರಿಸಿ ಕೊಂಡಿದ್ದಾರೆ. ಶಿಕ್ಷಕರು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಿಷ್ಣಾತರಾಗಿದ್ದಾರೆ. ಈಗ ಸರ್ಕಾರದ ಬೆಂಬಲವೂ ದಕ್ಕಿದೆ. ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕರು ಪುಟ್ಟಣ್ಣ ಗೆಲುವಿಗೆ ಸಾಥ್ ನೀಡಿದ್ದಾರೆ.
ಮೈತ್ರಿ ಅಭ್ಯರ್ಥಿ
ರಂಗನಾಥ ಅವರೂ ಇತ್ತೀಚಿನ ವರ್ಷಗಳಿಂದ ಶಿಕ್ಷಕರು ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಹೋರಾಟಗಳಲ್ಲಿ ಭಾಗಿಯಾಗುತ್ತಿದ್ದಾರೆ. ಕಳೆದ ನಾಲ್ಕೈದು ತಿಂಗಳಿನಿಂದ ಉಪ ಚುನಾವಣೆಗೆ ಪೂರ್ವಸಿದ್ಧತೆ ನಡೆಸಿದ್ದಾರೆ. ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಅವರ ವರ್ಚಸ್ಸನ್ನು ನೆಚ್ಚಿಕೊಂಡಿದ್ದಾರೆ.
ಇದೀಗ ಬಿಜೆಪಿ ಮತ್ತು ಸಂಘ ಪರಿವಾರದ ಶಿಕ್ಷಕ ಸಂಘಟನೆಗಳ ಬಲವೂ ದಕ್ಕಿದ್ದು ರಂಗನಾಥ ಅವರ ಬಲವನ್ನು ಹೆಚ್ಚಿಸಿದೆ.
ಜೆಡಿಎಸ್ ಮತ್ತು ಬಿಜೆಪಿ ನಾಯಕರು ಶಿಕ್ಷಕರನ್ನು ಸಂಪರ್ಕಿಸಿ ಮತ ಯಾಚಿಸುತ್ತಿದ್ದು, ರಂಗನಾಥ ಅವರನ್ನು ಗೆಲುವಿಗೆ ಮತ್ತು ಪುಟ್ಟಣ್ಣ ಅವರಿಗೆ ಪಾಠ ಕಲಿಸುವ ತವಕದಲ್ಲಿದ್ದಾರೆ.
ಒಂದು ಕಾಲದಲ್ಲಿ ಪುಟ್ಟಣ್ಣ ಮತ್ತು ರಂಗನಾಥ್ ಇಬ್ಬರೂ ಕುಮಾರಸ್ವಾಮಿ ಅವರ ಆಪ್ತ ವಲಯದಲ್ಲಿ ಇದ್ದವರು. ಇದೀಗ ಎರಡನೇ ಬಾರಿಗೆ ಮುಖಾಮುಖಿಯಾಗಿದ್ದಾರೆ.
ಬಿಜೆಪಿ ಜೆಡಿಎಸ್ ಗೆ 18 ಶಾಸಕರು, 4 ಸಂಸದರ ಬಲವಿದ್ದರೆ ಕಾಂಗ್ರೆಸ್ ಗೆ 18 ಶಾಸಕರು ಮತ್ತು ಓರ್ವ ಸಂಸದರ ಬಲವಿದೆ.
2020 ರ ಚುನಾವಣೆಯಲ್ಲಿ ಪುಟ್ಟಣ್ಣ (ಬಿಜೆಪಿ) 7,335 ಮತ ಪಡೆದಿದ್ದರೆ ಎ.ಪಿ.ರಂಗನಾಥ್ (ಜೆಡಿಎಸ್) 5,107 ಮತ ಪಡೆದಿದ್ದು, 2,228 ಮತಗಳ ಅಂತರದಿಂದ ಸೋತಿದ್ದರು.