ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರಲ್ಲಿ ಸಿಬಿಐ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ದೋಚಿದ್ದ ಕೇರಳದ ನಾಲ್ವರ ಬಂಧನ

Bangalore News: ಬೆಂಗಳೂರಲ್ಲಿ ಸಿಬಿಐ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ದೋಚಿದ್ದ ಕೇರಳದ ನಾಲ್ವರ ಬಂಧನ

ಬೆಂಗಳೂರಿನಲ್ಲಿ ಸಿಬಿಐ ಅಧಿಕಾರಿ ಎಂದು ಹೇಳಿ ಹಣ ದೋಚಿದ್ದ ಕೇರಳದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.ವರದಿ: ಎಚ್‌. ಮಾರುತಿ,ಬೆಂಗಳೂರು

ಬಂಧಿತ ಕೇರಳದ ಆದರ್ಶ
ಬಂಧಿತ ಕೇರಳದ ಆದರ್ಶ

ಬೆಂಗಳೂರು: ಸಿಬಿಐ ಅಧಿಕಾರಿಗಳ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ದೋಚುತ್ತಿದ್ದ ನಾಲ್ವರ ತಂಡವನ್ನು ಬೆಂಗಳೂರಿನ ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ನಾಲ್ವರಲ್ಲಿ ಒಬ್ಬ ಕೇರಳ ಮೂಲದವನಾಗಿದ್ದು ಈತ ಹೋಟೆಲ್ ಮ್ಯಾನೇಜ್ ಮೆಂಟ್ ಪದವೀಧರನಾಗಿದ್ದು ತಿರುವನಂತಪುರಂ ನ ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಈತ ಮತ್ತು ಈತನ ಸಹಚರರು ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಜೈಲಿಗೆ ಕಳುಹಿಸುತ್ತೇವೆ ಎಂದು ಹೆದರಿಸಿ ಹಣ ಸುಲಿಗೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ತಿರುವನಂತಪುರಂ ನ 42 ವರ್ಷದ ಎ.ಎಸ್. ಪ್ರಮೋದ್, 23 ವರ್ಷದ ಅನಂತಕೃಷ್ಣನ್, 37 ವರ್ಷದ ದೀಪಕ್ ಆರ್. ಚಂದ್ರ ಮತ್ತು 22 ವರ್ಷದ ಆದರ್ಶ ಬಂಧಿತ ಆರೋಪಿಗಳು. ಇವರಿಂದ ಎರಡು ಕಾರು, ಪಿಸ್ತೂಲ್, ಕೈ ಕೋಳ, ಲಾಠಿ, ಸಿಬಿಐ ಟ್ರಸ್ಟ್ ಹೆಸರಿನಲ್ಲಿದ್ದ ಗುರುತಿನ ಚೀಟಿಗಳು, ಬ್ಯಾಟನ್ ಹಾಗೂ 4 ಮೊಬೈಲ್ ಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಿರುವನಂತಪುರಂ ನ ಪ್ರಮೋದ್ ಹೆಸರಘಟ್ಟ ಮುಖ್ಯರಸ್ತೆಯ ಎಜಿಬಿ ಬಡಾವಣೆಯಲ್ಲಿ ವಾಸವಾಗಿದ್ದ ತನ್ನ ತಂಗಿಯ ಮನೆಗೆ ಆಗಾಗ್ಗೆ ಬರುತ್ತಿದ್ದ. ಇದೇ ಬಡಾವಣೆಯಲ್ಲಿ ಕೇರಳ ಮೂಲದ ನಾಲ್ವರು ವಿದ್ಯಾರ್ಥಿಗಳು ಬಾಡಿಗೆ ಮನೆಯಲ್ಲಿ ವಾಸವಿದ್ದರು.

ವಿದ್ಯಾರ್ಥಿಗಳ ಜೀವನಶೈಲಿ ಗಮನಿಸಿದ ಪ್ರಮೋದ್, ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ತನ್ನ ಇತರ ಮೂವರು ಸ್ನೇಹಿತರನ್ನು ಸಂಪರ್ಕಿಸಿ ಸಂಚು ರೂಪಿಸುತ್ತಾನೆ.

ಮೇ 27ರಂದು ರಾತ್ರಿ ವಿದ್ಯಾರ್ಥಿಗಳ ಮನೆಗೆ ಆರೋಪಿಗಳು ಸಿಬಿಐ ಅಧಿಕಾರಿಗಳ ಹೆಸರಿನಲ್ಲಿ ನುಗ್ಗಿ ಆರೋಪಿಗಳು ಗನ್, ನಕಲಿ ಗುರುತಿನ ಚೀಟಿ ತೋರಿಸಿ ಸಿಬಿಐ ಅಧಿಕಾರಿಗಳು ಎಂದು ಹೇಳಿಕೊಳ್ಳುತ್ತಾರೆ. ನಿಮ್ಮ ಬಳಿ ಡ್ರಗ್ಸ್ ಇದೆ ಎಂದು ಹೆದರಿಸುತ್ತಾರೆ.

ತಾವು ತಂದಿದ್ದ ಮರಿಜುವಾನಾ ವನ್ನು ವಿದ್ಯಾರ್ಥಿಯೊಬ್ಬನ ಕೈಗೆ ಕೊಟ್ಟು ವಿಡಿಯೊ ಚಿತ್ರೀಕರಣ ಮಾಡಿಕೊಳ್ಳುತ್ತಾರೆ. 3 ಲಕ್ಷ ರೂಪಾಯಿ ಕೊಡಬೇಕು. ಇಲ್ಲದಿದ್ದರೆ, ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿ ಜೈಲಿಗೆ ಕಳುಹಿಸುತ್ತೇವೆ ಎಂದು ಬೆದರಿಸುತ್ತಾರೆ.

ತಮ್ಮ ಬಳಿ ಅಷ್ಟೊಂದು ಹಣ ಇಲ್ಲವೆಂದು ವಿದ್ಯಾರ್ಥಿಗಳು ಹೇಳಿದಾಗ ಆರೋಪಿಗಳು ಮೊಬೈಲ್ ಕಿತ್ತುಕೊಂಡು ಯುಪಿಐ ಮೂಲಕ ಬಲವಂತವಾಗಿ ತಮ್ಮ ಖಾತೆಗೆ ಹಂತಹಂತವಾಗಿ 90 ಸಾವಿರ ರೂಪಾಯಿಗಳನ್ನು ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ.

ನಂತರ ಮತ್ತಷ್ಟು ಹಣ ನೀಡುವಂತೆ ಫೋನ್ ಮೂಲಕ ಒತ್ತಡ ಹೇರುತ್ತಾರೆ. ಕೊನೆಗೆ ಬೇಸತ್ತ ವಿದ್ಯಾರ್ಥಿಗಳು ದೂರು ನೀಡುತ್ತಾರೆ. ದೂರು ನೋಡಿದ 12 ಗಂಟೆಗಳಲ್ಲಿ ಪೊಲೀಸ್ ಇನ್ ಸ್ಪೆಕ್ಟರ್ ಜಿ ಎನ್ ನಾಗೇಶ್ ನೇತೃತ್ವದ ತಂಡ ಆರೋಪಿಗಳ ಹೆಡೆಮುರಿ ಕಟ್ಟಿ ಬಂಧಿಸಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇವರಿಂದ ಎಸ್ ಯುವಿ ಕಾರು, ಕೈ ಕೊಳ, ಗುರುತಿನ ಚೀಟಿ, ಏರ್ ಗನ್ ಮತ್ತು ನಾಲ್ಕುಮೊಬೈಲ್ ಗಳನ್ನು ಜಪ್ತಿ ಮಾಡಿದ್ದಾರೆ.

ಅಕ್ರಮ ವಾಸ: 25 ಬಾಂಗ್ಲಾ ಪ್ರಜೆಗಳು ಪತ್ತೆ

ದೇಶದ ಗಡಿ ಮೂಲಕ ಅಕ್ರಮವಾಗಿ ನುಸುಳಿ ಬೆಂಗಳೂರಿನಲ್ಲಿ ವಾಸವಾಗಿದ್ದ ಬಾಂಗ್ಲಾದೇಶದ 25 ಪ್ರಜೆಗಳನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದಾರೆ. ಇವರಲ್ಲಿ ಮೂವರನ್ನು ಮಾನವ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ್ದ ಆರೋಪದಡಿಯಲ್ಲಿ ಬಂಧಿಸಿದ್ದಾರೆ. ಬಾಂಗ್ಲಾದೇಶದ ಪ್ರಜೆಗಳು ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು.

ಪ್ರಕರಣ ದಾಖಲಿಸಿಕೊಂಡು ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದರು. ಕೊನೆಗೆ ವಿಶೇಷ ಕಾರ್ಯಾಚರಣೆ ನಡೆಸಿ ಬಾಂಗ್ಲಾದೇಶದ ಪ್ರಜೆಗಳನ್ನು ಪತ್ತೆ ಮಾಡಲಾಗಿದೆ ಎಂದು ಸಿಸಿಬಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇವರು ನೆಲೆಸಿದ್ದ ವರ್ತೂರು, ಹೆಬ್ಬಗೋಡಿ ರಾಮಮೂರ್ತಿನಗರ, ಬಂಡೇಪಾಳ್ಯ, ಮಾರತ್ತಹಳ್ಳಿ ಹಾಗೂ ಬೆಳ್ಳಂದೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಇವರೆಲ್ಲರೂ ತಾತ್ಕಾಲಿಕ ಶೆಡ್‌ಗಳಲ್ಲಿ ವಾಸಿಸುತ್ತಿದ್ದರು. ಎಲ್ಲ 25 ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಸೀದಿಬೀಪೊಲೀಸರು ಮಾಹಿತಿ ನೀಡಿದ್ದಾರೆ.

ವಶಕ್ಕೆ ಪಡೆದಿರುವ ಬಾಂಗ್ಲಾದ ಪ್ರಜೆಗಳಲ್ಲಿ ಇಬ್ಬರು ಅಪರಾಧ ಹಿನ್ನೆಲೆಯುಳ್ಳವರಾಗಿದ್ದಾರೆ. ಇವರು ಸುಲಿಗೆ ಪ್ರಕರಣದಲ್ಲಿ ಜೈಲಿಗೂ ಹೋಗಿ ಜಾಮೀನು ಪಡೆದುಕೊಂಡು ಹೊರಗೆ ಬಂದಿದ್ದಾರೆ. ಇನ್ನೂ ಐವರು ಬಾಂಗ್ಲಾ ಪ್ರಜೆಗಳು ತಲೆಮರೆಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇವರ ಬಳಿ ಬಾಂಗ್ಲಾದೇಶ ಹಾಗೂ ಭಾರತದ ವಿವಿಧ ಗುರುತಿನ ಚೀಟಿಗಳು ಪತ್ತೆಯಾಗಿವೆ. ಇವುಗಳನ್ನು ಜಪ್ತಿ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಮಾನವ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ್ದ ಮೂವರು ಬಾಂಗ್ಲಾ ಪ್ರಜೆಗಳನ್ನು ಅಕ್ರಮವಾಗಿ ಬೆಂಗಳೂರಿಗೆ ನಗರಕ್ಕೆ ಕರೆಸಿಕೊಂಡಿದ್ದರು. ಕಟ್ಟಡ ನಿರ್ಮಾಣ, ದಿನಗೂಲಿ ಮತ್ತಿತರ ಕೆಲಸಗಳನ್ನು ಇವರು ಮಾಡುತ್ತಿದ್ದರು. ಇನ್ನಷ್ಟು ಬಾಂಗ್ಲಾದೇಶದ ಪ್ರಜೆಗಳು ಬೆಂಗಳೂರು ನಗರದಲ್ಲಿ ನೆಲೆಸಿರುವ ಶಂಕೆ ಇದ್ದು ಅವರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

(ವರದಿ: ಎಚ್.ಮಾರುತಿ. ಬೆಂಗಳೂರು)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024