Bangalore Water: ಬೆಂಗಳೂರಿಗರಿಗೆ ಕುಡಿಯಲೆಂದೇ ಕೆಆರ್‌ಎಸ್‌ನಿಂದ ಹರಿಯುತಿದೆ ಭಾರೀ ನೀರು
KRS Dam ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯದಿಂದ ಬೆಂಗಳೂರು ನಗರ ಜನತೆಯ ಕುಡಿಯುವುದಕ್ಕೆಂದು 4579 ಕ್ಯೂಸೆಕ್ ನೀರನ್ನು ಕಾವೇರಿ ನದಿ ಮೂಲಕ ಹರಿಬಿಡಲಾಗುತ್ತಿದೆ.

ಮಂಡ್ಯ: ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಹಾಹಾಕಾರ ಮಾರ್ಚ್‌ನಲ್ಲಿಯೇ ಶುರುವಾಗಿದೆ. ಹಲವು ಬಡಾವಣೆಗಳಲ್ಲಿ ಸರಿಯಾಗಿ ನೀರು ಬರುತ್ತಿಲ್ಲ ಎನ್ನುವ ಆಕ್ರೋಶದ ದನಿ, ಟ್ಯಾಂಕರ್‌ಗಳನ್ನು ನಿಲ್ಲಿಸಿ ನೀರು ಹರಿಸಿಕೊಳ್ಳುವಂತಹ ಸನ್ನಿವೇಶವೂ ಕಂಡು ಬಂದಿದೆ. ಈ ಕಾರಣದಿಂದಲೇ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದಿಂದ ಬೆಂಗಳೂರು ನಗರದ ಕುಡಿಯುವ ನೀರಿನ ಸರಬರಾಜಿಗೆಂದೇ ಶನಿವಾರದಿಂದಲೇ ನೀರು ಹರಿಸಲಾಗುತ್ತಿದೆ.
ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಸೇರಿದಂತೆ ಈ ಭಾಗದ ಪ್ರಮುಖ ನಗರ, ಪಟ್ಟಣಗಳಿಗೆ ಕೆಆರ್‌ಎಸ್‌ನಿಂದಲೇ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಅದರಲ್ಲೂ ಶೇ. 60 ಜಲಾಶಯದಿಂದ ನೀರು ಹರಿಸಿದರೆ ಉಳಿಕೆ ಶೇ. 40 ರಷ್ಟನ್ನು ಬೋರ್‌ವೆಲ್‌ಗಳ ಮೂಲಕ ಬೆಂಗಳೂರು ಜನ ಬಳಕೆ ಮಾಡುತ್ತಾರೆ. ಇದರಿಂದ ನೀರಿನ ಸಮಸ್ಯೆ ಬೇಸಿಗೆಯ ಮುಗಿಯುವವರೆಗೂ ಅಷ್ಟಾಗಿ ಬಿಗಡಾಯಿಸುತ್ತಿರಲಿಲ್ಲ. ಸ್ಥಳೀಯವಾಗಿ ಏನಾದರೂ ತಾಂತ್ರಿಕ ಸಮಸ್ಯೆಯಾದರೆ ಮಾತ್ರ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿತ್ತು.
ಈ ಬಾರಿ ಅಂತರ್ಜಲ ಮಟ್ಟ ಕುಸಿತು ಶೇ.10ರಷ್ಟು ಮಾತ್ರ ಅಂತರ್ಜಲ ನೀರನ್ನು ಬಳಕೆ ಮಾಡುವ ಸ್ಥಿತಿ ಬೆಂಗಳೂರಿನಲ್ಲಿದೆ. ಇದರಿಂದ ಅನಿವಾರ್ಯವಾಗಿ ಜಲಾಶಯದ ನೀರನ್ನು ಅವಲಂಬಿಸುವುದು ಅನಿವಾರ್ಯ ಎನ್ನುವ ಸ್ಥಿತಿಯಿದೆ. ಈ ಕಾರಣದಿಂದಲೇ ಜಲಾಶಯದ ನೀರಿನ ಹೊರ ಹರಿವಿನ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಈಗ ಹರಿಸುತ್ತಿರುವ ನೀರಿನಿಂದ ಮುಂದಿನ ಒಂದು ತಿಂಗಳವರೆಗೂ ನಿರ್ವಹಣೆ ಮಾಡಬಹುದು. ಮುಂದಿನ ತಿಂಗಳ ನಂತರ ಮತ್ತೆ ಪರಿಸ್ಥಿತಿ ನೋಡಿಕೊಂಡು ಇದೇ ರೀತಿ ನೀರು ಸಂಗ್ರಹಿಸಿಕೊಂಡು ಬೆಂಗಳೂರಿಗೆ ಕೊಡಲು ಅಧಿಕಾರಿಗಳು ಯೋಜಿಸಿಕೊಂಡಿದ್ದಾರೆ.
ಕೆಆರ್‌ಎಸ್‌ನಿಂದ ಹೊರ ಹೋಗುವ ನೀರನ್ನು ಮಂಡ್ಯ ಹಾಗೂ ಚಾಮರಾಜನಗರ ಗಡಿ ಭಾಗದಲ್ಲಿರುವ ಶಿವನಸಮುದ್ರ ವಿದ್ಯುತ್ ಘಟಕ ವ್ಯಾಪ್ತಿಯಲ್ಲಿರುವ ಶಿವ ಆಣೆಕಟ್ಟಿಗೆ ಹರಿಸಲಾಗುತ್ತದೆ. ಶತಮಾನದಷ್ಟು ಹಳೆಯದಾದ ಈ ಘಟಕ ಈಗಲೂ ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ಈ ಘಟಕಕ್ಕೂ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಇಲ್ಲಿಗೆ ನೀರು ಹರಿಸಲಾಗುತ್ತದೆ. ವಿದ್ಯುತ್ ಘಟಕಕ್ಕೆ ನೀರು ಬಳಕೆ ಮಾಡಿಕೊಂಡು ಅಲ್ಲಿಂದ ನೀರನ್ನು ಬೆಂಗಳೂರಿನ ಕುಡಿಯುವ ನೀರಿಗೆ ಬಳಕೆ ಮಾಡಲಾಗುತ್ತದೆ ಎನ್ನುವುದು ಅಧಿಕಾರಿಗಳ ವಿವರಣೆ.
ಕೆಆರ್‌ಎಸ್‌ನಿಂದ ಹೊರಟ ನೀರು ಶ್ರೀರಂಗಪಟ್ಟಣ, ತಿ.ನರಸೀಪುರ, ತಲಕಾಡು ಮಾರ್ಗವಾಗಿ ಚಾಮರಾಜನಗರ ಜಿಲ್ಲೆಯನ್ನು ತಲುಪಿ ಅಲ್ಲಿಂದ ಶಿವನಸಮುದ್ರಕ್ಕೆ ಬರಲಿದೆ. ಅಲ್ಲಿನ ಘಟಕವನ್ನು ದಾಟಿಕೊಂಡು ಮಳವಳ್ಳಿ ತಾಲ್ಲೂಕಿನ ತೊರೆಕಾಡನಹಳ್ಳಿ ಬಳಿಯಲ್ಲಿ ಸ್ಥಾಪಿಸಿರುವ ಬೆಂಗಳೂರು ಜಲ ಮಂಡಳಿ ಹಾಗೂ ಕರ್ನಾಟಕ ನೀರು ಸರಬರಾಜು ಮಂಡಳಿಯ ನೀರು ಶುದ್ದೀಕರಣ ಘಟಕದಿಂದ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಸರಬರಾಜು ಮಾಡಲಾಗುತ್ತದೆ.
ಮೊದಲ ಬಾರಿ ಬೇಸಿಗೆಯಲ್ಲಿ 4579 ಕ್ಯೂಸೆಕ್ ನೀರನ್ನು ನದಿ ಮೂಲಕ ಹರಿ ಬಿಡಲಾಗುತ್ತಿದೆ. ಶನಿವಾರದಿಂದಲೇ ಇದು ಶುರುವಾಗಿದ್ದು, ಭಾನುವಾರ ಕೂಡ ನೀರು ಹರಿಯಲಿದೆ. ಶಿವನ ಸಮುದ್ರ ಬಳಿ ಇರುವ ಆಣೆಕಟ್ಟು ನೀರು ತುಂಬಿಸಿಕೊಂಡು ಆನಂತರ ಕೆಆರ್‌ಎಸ್‌ನಿಂದ ಹೊರ ಬಿಡುತ್ತಿರುವ ನೀರಿನ ಪ್ರಮಾಣ ಕಡಿಮೆ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಕೆಲ ದಿನಗಳಿಂದ 700 ಕ್ಯೂಸೆಕ್ ನೀರನ್ನು ಕುಡಿಯುವ ನೀರಿಗೆ ಮಾತ್ರ ಜಲಾಶಯದಿಂದ ಬಿಡಲಾಗುತ್ತಿತ್ತು.
ಈ ನಡುವೆ ಕುಡಿಯುವ ನೀರಿಗೆಂದು ನದಿ ಮೂಲಕ ಹರಿ ಬಿಡುತ್ತಿರುವ ನೀರನ್ನು ಮಾರ್ಗಮಧ್ಯದಲ್ಲಿ ಕೃಷಿ ಇನ್ನಿತರ ಚಟುವಟಿಕೆಗಳಿಗೆ ಬಳಸದಂತೆ ಅಧಿಕಾರಿಗಳು ಗಸ್ತು ಹೆಚ್ಚಿಸಿದಾರೆ. ಕಾವೇರಿ ನೀರಾವರಿ ನಿಗಮ, ಬೆಂಗಳೂರು ಜಲಮಂಡಳಿ ಹಾಗೂ ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡ ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಹರಿಯುವ ಕಾವೇರಿ ನದಿಗುಂಟಾ ಮುನ್ನೆಚ್ಚರಿಕೆ ವಹಿಸಿದ್ದಾರೆ. ಇದರಿಂದ ಬೆಂಗಳೂರಿಗೆ ಕುಡಿಯುವ ಉದ್ದೇಶಕ್ಕೆಂದೇ ಹರಿ ಬಿಡುತ್ತಿರುವ ನೀರು ಸೋರಿಕೆಯಾಗುವುದನ್ನು ತಡೆಯಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಕೆಆರ್‌ಎಸ್‌ನಲ್ಲಿ ಸದ್ಯ 88.56 ಅಡಿ ಮಾತ್ರ ನೀರಿದೆ. ಎರಡು ದಿನದಿಂದ ನೀರು ಹರಿಸುತ್ತಿರುವ ಕಾರಣಕ್ಕೆ ಮೊದಲ ಬಾರಿ 90 ಅಡಿಯ ಕೆಳಕ್ಕೆ ಕುಸಿದಿದೆ. ಜಲಾಶಯದಲ್ಲಿ ಸದ್ಯ 15.098 ಟಿಎಂಸಿ ನೀರಿದೆ. ಇದರಲ್ಲಿ ಬಳಕೆಗೆ ಲಭ್ಯ ಇರುವ ನೀರಿನ ಪ್ರಮಾಣ 6.7 ಟಿಎಂಸಿ ಮಾತ್ರ. ಐದು ವರ್ಷದ ಹಿಂದೆ ಇದೇ ರೀತಿಯ ಸನ್ನಿವೇಶವಿತ್ತು. ಈ ಬಾರಿ ಜಲಾಶಯ ಪೂರ್ಣ ತುಂಬಲಿಲ್ಲ. ಜತೆಗೆ ನವೆಂಬರ್ ವೇಳೆ ತಮಿಳುನಾಡಿಗೆ ನೀರು ಹರಿಸಿದ್ದರಿಂದ ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿದೆ ಎನ್ನುವ ಮಾಹಿತಿಯನ್ನು ಅಧಿಕಾರಿಗಳು ನೀಡುತ್ತಾರೆ.

ವಿಭಾಗ