Bangalore News: ಆಹಾರ ಪದಾರ್ಥಗಳಲ್ಲಿ ಲಿಕ್ವಿಡ್ ನೈಟ್ರೋಜನ್ ನಿಷೇಧ: ಕರ್ನಾಟಕದ ಆರೋಗ್ಯ ಇಲಾಖೆ ಮಹತ್ವದ ತೀರ್ಮಾನ
ಆಹಾರ ಪದಾರ್ಥಗಳಲ್ಲಿ ನೈಟ್ರೋಜನ್ ಬಳಕೆ ಮಾಡುವುದನ್ನು ನಿಷೇಧಿಸಿ ಕರ್ನಾಟಕ ಆದೇಶಿಸಿದೆ. ಏನಿದರ ವಿಶೇಷವರದಿ: ಎಚ್.ಮಾರುತಿ. ಬೆಂಗಳೂರು
ಬೆಂಗಳೂರು: ಇತ್ತೀಚೆಗೆ ಲಿಕ್ವಿಡ್ ನೈಟ್ರೋಜನ್ ಬಳಸಿರುವ ಆಹಾರ ಪದಾರ್ಥಗಳ ಖಯಾಲಿ ಹೆಚ್ಚಾಗುತ್ತಿದೆ. ಅದರಲ್ಲೂ ಮಕ್ಕಳು ಮತ್ತು ಯುವ ಜನಾಂಗ ಲಿಕ್ವಿಡ್ ನೈಟ್ರೋಜನ್ ಬಳಸಿರುವ ಸಿಹಿ ತಿನಿಸುಗಳು ಪಾನ್ ಮತ್ತು ಐಸ್ ಕ್ರೀಂಗಳಿಗೆ ಹೆಚ್ಚಾಗಿ ಮಾರು ಹೋಗುತ್ತಿದ್ದಾರೆ. ಆದರೆ ಇದರ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ವರದಿಗಳು ಕೇಳಿ ಬರುತ್ತಿವೆ. ಇದೀಗ ಸರ್ಕಾರ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸಿಹಿ ತಿನಿಸುಗಳು ಹಾಗೂ ಆಹಾರ ಪದಾರ್ಥಗಳಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆಯನ್ನು ನಿಷೇಧಿಸುವ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಈ ಸಂಬಂಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ರಾಜ್ಯದ ವಿವಿಧ ಪ್ರದೇಶಗಳಲ್ಲಿ ಸ್ಮೋಕಿಂಗ್ ಬಿಸ್ಕತ್ತು, ಸಿಹಿ ತಿನಿಸುಗಳು ಮತ್ತು ಆಹಾರ ಪದಾರ್ಥಗಳ ಸೇವನೆ ಮಾಡುವಾಗ ಲಿಕ್ವಿಡ್ ನೈಟ್ರೋಜನ್ ಬಳಕೆ ಮಾಡಲಾಗುತ್ತಿರುವುದು ಕಂಡು ಬರುತ್ತಿದೆ. ಆದರೆ, ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಯ್ದೆ 2006ರ ನಿಯಮಗಳ ಪ್ರಕಾರ ಲಿಕ್ವಿಡ್ ನೈಟ್ರೋಜನ್ ಅನ್ನು ಹೈನು ಉತ್ಪನ್ನ ಹಾಗೂ ಐಸ್‌ಕ್ರೀಂ ತಯಾರಿಕೆಯ ಸಂದರ್ಭದಲ್ಲಿ ಮಾತ್ರ ಬಳಸಲು ಅನುಮೋದನೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಿಹಿ ತಿನಿಸುಗಳು ಹಾಗೂ ಆಹಾರ ಪದಾರ್ಥಗಳನ್ನು ಸೇವಿಸಲು ಗ್ರಾಹಕರಿಗೆ ಪೂರೈಕೆ ಮಾಡುವಾಗ ಲಿಕ್ವಿಡ್ ನೈಟ್ರೋಜನ್ ಬಳಕೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಹೇಳಲಾಗಿದೆ.
ಇತ್ತೀಚೆಗೆ ಬೆಂಗಳೂರಿನಲ್ಲೇ 12 ವರ್ಷದ ಬಾಲಕಿಯೊಬ್ಬಳು ವಿವಾಹ ಸಮಾರಂಭದಲ್ಲಿ ಲಿಕ್ವಿಡ್ ನೈಟ್ರೋಜನ್ ಪಾನ್ ಅಥವಾ ಸ್ಮೋಕಿ ಪಾನ್ ಸೇವಿಸಿ, ಅಸ್ವಸ್ತಳಾಗಿದ್ದಳು. ಈ ಪಾನ್ ಸೇವನೆಯಿಂದ ಬಾಲಕಿಯ ಹೊಟ್ಟೆಯಲ್ಲಿ ರಂಧ್ರ ಕಾಣಿಸಿಕೊಂಡಿತ್ತು. ವೈದ್ಯರು ಸೇರಿದಂತೆ ಅನೇಕ ಆಹಾರ ಮತ್ತು ಆರೋಗ್ಯ ತಜ್ಞರು ಲಿಕ್ವಿಡ್ ನೈಟ್ರೋಜನ್ ಬಳಕೆಯನ್ನು ನಿಷೇಧಿಸುವಂತೆ ಆಗ್ರಹಪಡಿಸಿದ್ದರು.
ಅಡುಗೆ ಅನಿಲ ಸ್ಫೋಟ; ಐವರಿಗೆ ಗಂಭೀರ ಗಾಯ
ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಸ್ಫೋಟ ಸಂಭವಿಸಿ ಮನೆಯಲ್ಲಿದ್ದ ಐವರು ಗಾಯಗೊಂಡಿರುವ ಘಟನೆ ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಎಂ.ಎಸ್. ನಗರದ ಮನೆಯಲ್ಲಿ ತಡರಾತ್ರಿ ಈ ದುರಂಟ್ ಸಂಭವಿಸಿದೆ. ಕುಟುಂಬದ ಯಜಮಾನ 32 ವರ್ಷದ ಮದನ್ ಬಹೋರಾ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಅವರ ಪತ್ನಿ 28 ವರ್ಷದ ಪ್ರೇಮಾ ಜಾಲಾ, ಮಕ್ಕಳಾದ 12 ವರ್ಷದ ಮೀರಾದಾ, 10 ವರ್ಷದ ಒಹೋರಾ ಮತ್ತು 6 ವರ್ಷದ ಪ್ರಶಾಂತ್ ಗಾಯಗೊಂಡಿದ್ದಾರೆ. ಎಲ್ಲರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮದನ್ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೇಪಾಳ ಮೂಲದ ಮದನ್ ಕೆಲಸ ಹುಡುಕಿಕೊಂಡು ಪತ್ನಿ ಮತ್ತು ಮಕ್ಕಳೊಂದಿಗೆ ಬೆಂಗಳೂರಿಗೆ ಆಗಮಿಸಿದ್ದರು. ಇವರು ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದರು. ಪತ್ನಿ ಗೃಹಿಣಿಯಾಗಿದ್ದರು. ಮಕ್ಕಳು ಖಾಸಗಿ ಶಾಲೆಯಲ್ಲಿ ಓದುತ್ತಿದ್ದರು.
ಪ್ರೇಮಾ ಹಾಗೂ ಮಕ್ಕಳು ರಾತ್ರಿ ಊಟ ಮಾಡಿದ ನಂತರ ಅಡುಗೆ ಮನೆ ಸೇರಿದಂತೆ ಮನೆಯ ಎಲ್ಲಾ ಕಿಟಕಿಗಳನ್ನು ಮುಚ್ಚಿ ಮಲಗಿದ್ದರು. ಮದನ್ ಅವರು ಕೆಲಸ ಮುಗಿಸಿಕೊಂಡು ರಾತ್ರಿ 11 ಗಂಟೆಗೆ ಮರಳಿದ್ದರು. ಅವರೂ ಊಟ ಮಾಡಿ ಮಲಗಿದ್ದರು. ತಡರಾತ್ರಿ ಎಚ್ಚರಗೊಂಡ ಪ್ರೇಮಾ ಅಡುಗೆ ಮನೆಯಿಂದ ಅನಿಲದ ವಾಸನೆ ಬರುತ್ತಿರುವುದನ್ನು ಗಮನಿಸಿದ್ದರು.
ಆಕೆ ಪತಿಯನ್ನು ಎಬ್ಬಿಸಿ ಅಡುಗೆ ಮನೆಗೆ ಹೋಗಿ ಸಿಲಿಂಡರ್ ಪರಿಶೀಲಿಸುವಂತೆ ಹೇಳಿದ್ದರು. ಅದರಂತೆ ಮದನ್ ಅಡುಗೆ ಮನೆಗೆ ಹೋಗಿ ಏಕಾಏಕಿ ಬೆಂಕಿ ಕಡ್ಡಿ ಗೀರಿದ್ದರು. ಆದರೆ ಅವರು ಕಿಟಕಿ ಬಾಗಿಲು ತೆರೆದಿರಲಿಲ್ಲ. ಅಡುಗೆ ಅನಿಲ ಮನೆಯೆಲ್ಲಾ ವ್ಯಾಪಿಸಿದ್ದರಿಂದ ತ್ವರಿತವಾಗಿ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿದೆ. ಅಡುಗೆ ಕೋಣೆಯಲ್ಲಿ ಇದ್ದುದರಿಂದ ಮದನ್ ಅವರಿಗೆ ಹೆಚ್ಚು ಬೆಂಕಿ ತಗುಲಿದೆ. ಪಕ್ಕದ ಕೋಣೆಯಲ್ಲಿದ್ದ ಪತ್ನಿ ಹಾಗೂ ಮಕ್ಕಳಿಗೂ ಬೆಂಕಿ ವ್ಯಾಪಿಸಿದೆ. ಇವರ ಕೂಗಾಟ ಕೇಳಿಸಿಕೊಂಡ ನೆರೆಹೊರೆಯವರು ರಕ್ಷಣೆಗೆ ಧಾವಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಯೂ ಆಗಮಿಸಿದ್ದಾರೆ. ನಂತರ ಎಲ್ಲರೂ ಸೇರಿಕೊಂಡು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಸ್ಫೋಟ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
(ವರದಿ: ಎಚ್.ಮಾರುತಿ.ಬೆಂಗಳೂರು)
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ವಿಭಾಗ