Bangalore Crime: ಮನೆ ಕೆಲಸದ ಮಹಿಳೆ ದುರ್ಬಳಕೆ ಆರೋಪ: ಬೆಂಗಳೂರಲ್ಲಿ ನಿವೃತ್ತ ಐಎಎಸ್ ಅಧಿಕಾರಿ ವಿರುದ್ದ ದೂರು ಪ್ರತಿದೂರು
Complaint against Retd IAS Officer ಬೆಂಗಳೂರಿನಲ್ಲಿ ನೆಲೆಸಿರುವ ಐಎಎಸ್ ಅಧಿಕಾರಿ( ನಿವೃತ್ತ) ವಿರುದ್ದ ಲೈಂಗಿಕ ದುರ್ಬಳಕೆ ಆರೋಪದ ದೂರು ದಾಖಲಾಗಿದ್ದರೆ, ಹಣ ಕೀಳಲು ಬೆದರಿಕೆ ಹಾಕುವ ಕುರಿತು ಅಧಿಕಾರಿ ಪ್ರತಿ ದೂರು ನೀಡಿದ್ದಾರೆ.
ಬೆಂಗಳೂರು: ಕರ್ನಾಟಕದ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ವಿರುದ್ದ ಮನೆ ಗೆಲಸದ ಮಹಿಳೆ ದುರ್ಬಳಕೆ ಮಾಡಿಕೊಂಡ ಆರೋಪ ಕೇಳಿ ಬಂದಿದೆ. ಮಹಿಳೆ ಈ ಸಂಬಂಧ ದೂರು ನೀಡಿದ್ದರೆ, ಬೆದರಿಕೆ ಹಾಕಿ ಹಣ ಕೀಳಲಾಗುತ್ತಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಪ್ರತಿ ದೂರು ನೀಡಿದ್ದಾರೆ.
ನಿವೃತ್ತ ಐಎಎಸ್ ಅಧಿಕಾರಿ ರಾಮಚಂದ್ರ ಎಂಬುವರು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಬೆಂಗಳೂರಿನ ತಿಲಕ್‌ನಗರ ಠಾಣೆಗೆ ದೂರು ನೀಡಿದ್ದಾರೆ.
ಈ ದೂರಿಗೆ ಪ್ರತಿದೂರು ನೀಡಿರುವ ರಾಮಚಂದ್ರ, ‘ಅತ್ಯಾಚಾರದ ಬಗ್ಗೆ ಸುಳ್ಳು ಆರೋಪ ಮಾಡುತ್ತಿರುವ ಮಹಿಳೆ ರೂ. 10 ಕೋಟಿ ನೀಡುವಂತೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಬೆಂಗಳೂರಿನ ತಿಲಕ್ ನಗರ ಪೊಲೀಸರು ಎರಡೂ ಕಡೆಯ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಆಗಿದ್ದಾದರೂ ಏನು?
72 ವರ್ಷದ ರಾಮಚಂದ್ರ ಅವರ ಪತ್ನಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಪತ್ನಿಯ ಆರೈಕೆ ಮಾಡಲು ಸಂತ್ರಸ್ತ ಮಹಿಳೆ ಕೆಲಸಕ್ಕೆ ಎಂದು ಮತ್ತೊಬ್ಬ ಮಹಿಳೆಯನ್ನು ಕಳುಹಿಸಿದ್ದರು. ಈ ರೀತಿ ಪರಿಚಯವಾದ ನಂತರ ಇಬ್ಬರ ನಡುವೆ ಸಲುಗೆ ಏರ್ಪಟ್ಟಿತ್ತು. ಇಬ್ಬರೂ ಪರಸ್ಪರ ಒಪ್ಪಿಗೆಯ ಮೇರೆಗೆ ಸಹಜೀವನ ನಡೆಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಂತ್ರಸ್ತ ಮಹಿಳೆ ರಾಮಚಂದ್ರ ಅವರಿಂದ 20 ಲಕ್ಷ ರೂಪಾಯಿ ಪಡೆದು ಕೊಂಡಿದ್ದರು. ಆದರೆ ಹಣವನ್ನು ಹಿಂತಿರುಗಿಸಿರಲಿಲ್ಲ. ರಾಮಚಂದ್ರ ಹಣವನ್ನು ನೀಡುವಂತೆ ಒತ್ತಾಯಿಸಿದಾಗ 38 ವರ್ಷದ ಸಂತ್ರಸ್ತ ಮಹಿಳೆಯು ಲ್ಯಾಬ್ ವರದಿ ತೋರಿಸಿ ತಾನು ಗರ್ಭಿಣಿ ಎಂದು ಹೇಳಿ ಕೊಂಡಿದ್ದಾರೆ. ನೀವೇ ಮಗುವಿನ ತಂದೆ ಎಂದು ರಾಮಚಂದ್ರ ಅವರಿಗೆ ಹೇಳಿದ್ದಾರೆ.
ಜೊತೆಗೆ ಸಂತ್ರಸ್ತೆ ಹಾಗೂ ಅವರ ಸಂಬಂಧಿಕರು, ರಾಮಚಂದ್ರ ಅವರ ಜೊತೆ ಗಲಾಟೆ ಮಾಡಿದ್ದಾರೆ. ಜೀವನಾಂಶಕ್ಕೆ 10 ಕೋಟಿ ರೂಪಾಯಿ ನೀಡಬೇಕೆಂದು ಒತ್ತಾಯಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಇದರಿಂದ ಹೆದರಿ ರಾಮಚಂದ್ರ, ರೂ .50 ಲಕ್ಷ ನೀಡಿದ್ದರು. ನಂತರವೂ ಸಂತ್ರಸ್ತೆ ಹಾಗೂ ಆಕೆಯ ಸಂಬಂಧಿಕರು ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಕೊನೆಗೆ ರಾಮಚಂದ್ರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಮಹಿಳೆ ಸಹ ದೂರು ಕೊಟ್ಟಿದ್ದಾರೆ.
ಮಹಿಳೆ ದೂರು ಏನು?
ಸಂತ್ರಸ್ತ ಮಹಿಳೆ ತನ್ನ ದೂರಿನಲ್ಲಿ ರಾಮಚಂದ್ರ ಅವರು ಮತ್ತು ಬರುವ ಔಷಧಿ ಬೆರೆಸಿದ್ದ ಆಹಾರವನ್ನು ತಿನ್ನಿಸಿ ಪ್ರಜ್ಞೆ ತಪ್ಪಿಸಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ರಾಮಚಂದ್ರ ಪ್ರತಿ ದೂರು
ರಾಮಚಂದ್ರ ಅವರು ಸಂತ್ರಸ್ತೆ ವಿರುದ್ಧ ಎರಡು ತಿಂಗಳ ಹಿಂದೆಯೇ ಸೆ.14 ರಂದು ತಿಲಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಿಮ್ಮ ಪತ್ನಿಯ ಹಾಗೆ ನಾನೂ ಸಹ ನಿಮ್ಮ ಆರೈಕೆ ನೋಡಿಕೊಳ್ಳುವೆ ಎಂದು ನಂಬಿಸಿದ್ದಳು. ಪರಸ್ಪರ ಒಪ್ಪಿಗೆ ಮೇರೆಗೆ ಇಬ್ಬರು ದೈಹಿಕ ಸಂಬಂಧ ಇಟ್ಟುಕೊಂಡಿದ್ದೆವು ಎಂದು ರಾಮಚಂದ್ರ ತಿಳಿಸಿದ್ದಾರೆ.
ಹಲವಾರು ಬಾರಿ ಅಕ್ರಮವಾಗಿ ನನ್ನಿಂದ ಸುಮಾರು 70 ಲಕ್ಷ ರೂ. ಹಣ ವಸೂಲಿ ಮಾಡಿದ್ದಾರೆ. ಸುಳ್ಳು ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಸಂತ್ರಸ್ತೆ ಮತ್ತು ಆಕೆಯ ತಾಯಿ ಮತ್ತು ತಮ್ಮನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ತಿಲಕ್‌ನಗರ ಪೊಲೀಸರು, ರಾಮಚಂದ್ರ ಹಾಗೂ ಮಹಿಳೆ ಪ್ರತ್ಯೇಕವಾಗಿ ದೂರು ನೀಡಿದ್ದಾರೆ. ಎರಡು ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಎರಡೂ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ಮುಂದುವರಿಸಲಾಗಿದೆ ಎಂದು ಹೇಳಿದ್ದಾರೆ.
( ವರದಿ: ಎಚ್ ಮಾರುತಿ, ಬೆಂಗಳೂರು)