Bangalore Crime: ಹೊಟ್ಟೆಯಲ್ಲಿ ಗುಳಿಗೆ ರೂಪದಲ್ಲಿದ್ದ 10 ಕೋಟಿ ರೂ. ಮೌಲ್ಯದ ಕೊಕೈನ್, ಬೆಂಗಳೂರಲ್ಲಿ ನೈಜಿರಿಯಾ ಮಹಿಳೆ ಸೆರೆ
Crime News ಬೆಂಗಳೂರಲ್ಲಿ ಹಲವು ಅಪರಾಧ ಪ್ರಕರಣಗಳು ವರದಿಯಾಗಿದ್ದು, ಕಳ್ಳತನದ ಪ್ರಕರಣಗಳನ್ನು ಬೇಧಿಸಲಾಗಿದೆ. ಹೊಟ್ಟೆಯಲ್ಲಿ ಕೊಕೈನ್ ಸಾಗಿಸುತ್ತಿದ್ದ ಮಹಿಳೆಯನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.ವರದಿ: ಎಚ್.ಮಾರುತಿ, ಬೆಂಗಳೂರು

ಬೆಂಗಳೂರು: ಸುಮಾರು 10 ಕೋಟಿ ರೂ. ಮೌಲ್ಯದ ಕೊಕೈನ್ ಡ್ರಗ್ಸ್ ಅನ್ನು ಗುಳಿಗೆಗಳ ರೂಪದಲ್ಲಿ ಹೊಟ್ಟೆಯಲ್ಲಿಟ್ಟುಕೊಂಡು ಬೆಂಗಳೂರು ಅಂತಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ನೈಜಿರಿಯಾ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ. ವಿಮಾನ ನಿಲ್ದಾಣದ ಕಂದಾಯ ನಿರ್ದೇಶನಾಲಯದ ವಿಚಕ್ಷಣಾ ದಳಕ್ಕೆ ಈ ಮಹಿಳೆ ಮಾದಕ
ವಸ್ತುವನ್ನು ಸಾಗಿಸುತ್ತಿರುವ ಖಚಿತ ಮಾಹಿತಿ ಲಭಿಸಿತ್ತು. ಈ ಮಾಹಿತಿಯನ್ವಯ ಈಕೆಯನ್ನು ಬಂಧಿಸಲಾಗಿದೆ. ಈ ಮಹಿಳೆ ಜುಲೈ 26ರಂದು ದುಬೈನಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈಕೆಯನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಕೊಕೈನ್ ಅನ್ನು ಕಳ್ಳ ಸಾಗಾಣೆ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾಳೆ.
ನಂತರ ಈ ಮಹಿಳೆಯನ್ನು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಡ್ರಗ್ಸ್ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಕೊಕೈನ್ ಗುಳಿಗೆಗಳನ್ನು ಹೊಟ್ಟೆಯಲ್ಲಿ ಅಡಗಿಸಿ ಕೊಂಡಿರುವುದು ಪತ್ತೆಯಾಗಿದೆ. ಒಂದು ಕೆಜಿ ತೂಕದ 57 ಗುಳಿಗೆಗಳನ್ನು ಆಕೆಯ ದೇಹದಿಂದ ವಶಪಡಿಸಿಕೊಳ್ಳಲಾಗಿದೆ. ಮುಂದಿನ ವಿಚಾರಣೆ ನಡೆಯುತ್ತಿದೆ.
ಜುಲೈ 18ರಂದು ಭಾರತದ ಪ್ರಜೆಯೊಬ್ಬನನ್ನು ಬಂಧಿಸಿ 3,6 ಕೋಟಿ ರೂ.ಮೌಲ್ಯದ 3.6 ಕೆಜಿ ತೂಕದ ನಿಷೇಧಿತ ಹೈಡ್ರೋಪೋನಿಕ್ ಎಂಬ ವೀಡ್ ಎಂಬ ಮಾದಕ ವಸ್ತುವನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ.
ಮನೆ ಕೆಲಸದಾಕೆ ಬಂಧನ, 60 ಲಕ್ಷ ರೂ. ಮೌಲ್ಯದ ಚಿನ್, ವಜ್ರದ ಆಭರಣ ವಶ
ಕೆಲಸಕ್ಕಿದ್ದ ಮನೆಯಲ್ಲಿ ಸುಮಾರು 50-60 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳನ್ನು ಕಳವು ಮಾಡಿದ್ದ ಮನೆ ಕೆಲಸದಾಕೆಯನ್ನು ಮಾರತ್ತಹಳ್ಳಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮನೆಯಲ್ಲಿರುವ ಆಭರಣಗಳು ಕಳವಾಗಿವೆ ಎಂದು ಮನೆ ಮಾಲೀಕರು ದೂರು ನೀಡಿದ್ದು, ಒಟ್ಟು 7 ಮಂದಿ ಕೆಲಸಗಾರರಲ್ಲಿ ಕೆಲವರು ಕಳ್ಳತನ ಮಾಡಿರುವ ಶಂಕೆ ಇದೆ ಎಂದು ತಿಳಿಸಿದ್ದರು. ಈ ನಿಟ್ಟಿನಲ್ಲಿ ಓರ್ವ ಮನೆ ಕೆಲಸದಾಕೆಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳವು ಮಾಡಿದ ಆಭರಣಗಳನ್ನು ನೀಲಸಂದ್ರದಲ್ಲಿರುವ ತನ್ನ ದೊಡ್ಡಮ್ಮನ ಮನೆಯಲ್ಲಿ ಇಟ್ಟಿರುವುದಾಗಿ ತಿಳಿಸಿದ್ದಳು. ಅದರಂತೆ ನೀಲಸಂದ್ರದ ದೊಡ್ಡಮ್ಮನನ್ನು ಬಂಧಿಸಿ ಕೆಲವು ಆಭರಣಗಳನ್ನು ಆಕೆಯ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ. ಇತರೆ ಚಿನ್ನದ ಆಭರಣಗಳನ್ನು ಈಜಿಪುರದಲ್ಲಿರುವ ತಮ್ಮ ಪರಿಚಯಸ್ಥನಿಗೆ ನೀಡಿರುವುದಾಗಿ ತಿಳಿಸಿದ್ದರು. ಈತ ಈಜಿಪುರದ ವಿವಿಧ ಚಿನ್ನಾಭರಣ ಅಂಗಡಿಗಳಲ್ಲಿ ಈ ಒಡವೆಗಳನ್ನು ಮಾರಾಟ ಮಾಡಿದ್ದ. ಈ ಎಲ್ಲಅಂಗಡಿಗಳಿಂದಲೂ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತನ ಮನೆಯಿಂದ ಉಳಿದ ಚಿನ್ನ ಮತ್ತು ವಜ್ರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲ್ಯಾಪ್ ಟಾಪ್ ಕಳ್ಳತನ ಮಾಡಿದ್ದ ಎಕ್ಸಿಕ್ಯೂಟಿವ್ ಬಂಧನ
ರಾಮಮೂರ್ತಿ ನಗರದ ಮುಖ್ಯ ರಸ್ತೆಯಲ್ಲಿರುವ ಷೋರೂಂ ನಿಂದ ಲ್ಯಾಪ್ ಟಾಪ್ ಮತ್ತು ಪೆನ್ ಡ್ರೈವ್ ಗಳನ್ನು ಕಳ್ಳತನ ಮಾಡಿದ್ದ ಸೇಲ್ಸ್ ಎಕ್ಸಿಕ್ಯೂಟೀವ್ ವೊಬ್ಬನನ್ನು ರಾಮಮೂರ್ತಿ ನಗರ ಪೊಲೀಸರು ಬಂಧಿಸಿದ್ದಾರೆ. ಷೋ ರೂಂ ಮಾಲೀಕರು ಮಳಿಗೆಯಲ್ಲಿ 4ಲ್ಯಾಪ್ ಟಾಪ್ ಮತ್ತು ಎಚ್.ಪಿ. ಕಂಪನಿಯ 16 ಪೆನ್ ಡ್ರೈವ್ ಗಳು ಕಳವಾಗಿರುವುದಾಗಿ ದೂರು ಸಲ್ಲಿಸಿದ್ದರು. ವಿವಿಧ ಆಯಾಮಗಳಿಂದ ತನಿಖೆ ನಡೆಸಿದ ಪೊಲೀಸರು ಷೋರೋಂ ನ ಸೇಲ್ಸ್ ಎಕ್ಸಿಕ್ಯೂಟೀವ್ ವೊಬ್ಬನನ್ನು ವಿಚಾರಣೆಗೊಳಪಡಿಸುತ್ತಾರೆ. ಆತ ಕಳ್ಳತನ ಮಾಡಿರುವುದನ್ನು ಒಪ್ಪಿಕೊಳ್ಳುತ್ತಾನೆ. ಕಳವು ಮಾಡಿದ್ದ 4 ಲ್ಯಾಪ್ ಟಾಪ್ ಗಳಲ್ಲಿ ಒಂದನ್ನು ಅಪರಿಚಿತರೊಬ್ಬರಿಗೆ ಮಾರಾಟ ಮಾಡಿ ಬಂದ ಹಣವನ್ನು ಖರ್ಚು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆತ ಮನೆಯಲ್ಲಿ ಅಡಗಿಸಿಟ್ಟಿದ್ದ ಉಳಿದ ಮೂರು ಲ್ಯಾಪ್ ಟಾಪ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇಬ್ಬರು ಮೊಬೈಲ್ ಕಳ್ಳರ ಬಂಧನ, 44 ಮೊಬೈಲ್ ಗಳ ವಶ
ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನಿಂದ 4.50 ಲಕ್ಷ ರೂ.ಮೌಲ್ಯದ 32 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ ವಾಷ್ ಅಂಗಡಿಯಲ್ಲಿ ಮಲಗಿದ್ದ ಕಾರ್ಮಿಕನೊಬ್ಬ ತಾನು ಮಲಗಿದ್ದಾಗ ಯಾರೋ ಬಂದು ಮೊಬೈಲ್ ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರು ಸಲ್ಲಿಸಿದ್ದ. ಈ ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು ವಿಜಯನಗರ ಮುಖ್ಯ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಓರ್ವ ವ್ಯಕ್ತಿಯನ್ನು ಬಂಧಿಸುತ್ತಾರೆ. ಈತನನ್ನು ಸುಧೀರ್ಘ ವಿಚಾರಣೆಗೊಳಪಡಿಸಿದಾಗ ಕಳ್ಳತನ ಮಾಡುತ್ತಿರುವುದನ್ನು ಒಪ್ಪಿಕೊಳ್ಳುತ್ತಾನೆ. ಈತ ನೀಡಿದ ಮಾಹಿತಿ ಮೇರೆಗೆ ಶೆಡ್ ವೊಂದರಲ್ಲಿ ಅಡಗಿಸಿಟ್ಟಿದ್ದ 4.50. ಲಕ್ಷ ರೂ ಮೌಲ್ಯದ 32 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಗಳನ್ನು ಕಳವು ಮಾಡುತ್ತಿದ್ದ ಕಳ್ಳನೊಬ್ಬನನ್ನು ಬಂಧಿಸಲಾಗಿದೆ. ಸ್ವಿಗ್ಗಿ ಡೆಲಿವರಿ ಮಾಡುತ್ತಿರುವಾಗ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಮೂವರು ಅಪರಿಚಿತರು ಚಾಕು ತೋರಿಸಿ ಬೆದರಿಸಿ ಮೊಬೈಲ್ ಕಳವು ಕಸಿದುಕೊಂಡು ಪರಾರಿಯಾಗಿದ್ದಾರೆ ಎಂದು ದೂರು ನೀಡಿದ್ದರು. ದೂರಿನನ್ವಯ ತನಿಖೆ ನಡೆಸುತ್ತಿದ್ದ ಪೊಲೀಸರು ಬಾಣಸವಾಡಿಯಲ್ಲಿ ದ್ವಿಚಕ್ರ ವಾಹನದಲ್ಲಿ ವೇಗವಾಗಿ ಹೋಗುತ್ತಿದ್ದ ಮೂವರನ್ನು ತಡೆದಾಗ ಇಬ್ಬರು ಪರಾರಿಯಾಗಿದ್ದರು. ಒಬ್ಬ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುತ್ತಾನೆ. ಆತನನ್ನು ವಿಚಾರಣೆಗೊಳಪಡಿಸಿದಾಗ ಮೊಬೈಲ್ ಗಳನ್ನು ಕಳ್ಳತನ ಮಾಡುತ್ತಿರುವುದನ್ನು ಒಪ್ಪಿಕೊಳ್ಳುತ್ತಾನೆ. ಆತನಿಂದ 1.50 ಲಕ್ಷ ರೂ. ಮೌಲ್ಯದ 12 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ವರದಿ: ಎಚ್.ಮಾರುತಿ, ಬೆಂಗಳೂರು
