Bangalore News:ಅಯೋಧ್ಯೆ ಬಾಲರಾಮನಿಗೆ ಪ್ರತಿ ರಾಮನವಮಿಯಂದು ಸೂರ್ಯನ ತಿಲಕ: ಈ ಅಪರೂಪದ ಯಂತ್ರಕ್ಕಿದೆ ಬೆಂಗಳೂರು ನಂಟು
ಅಯೋಧ್ಯೆಯ ಮಂದಿರದಲ್ಲಿ ಶ್ರೀರಾಮನ ವಿಗ್ರಹದ ಹಣೆಯ ಮೇಲೆ ಮೂಡಿ ಬರಲಿದೆ ಸೂರ್ಯನ ರಶ್ಮಿಗಳ ತಿಲಕ; ಈ ಸೂರ್ಯ ರಶ್ಮಿಗಳ ತಿಲಕ ಮೂಡಿ ಬರುವುದಾದರೂ ಹೇಗೆ? ವಿಜ್ಞಾನಿಗಳ ಸಂಶೋಧನೆಯ ಫಲ ಈ ಯಂತ್ರ; ಈ ಯಂತ್ರವನ್ನು ತಯಾರಿಸಿ ಕೊಡುಗೆಯಾಗಿ ನೀಡಿದ್ದು ಬೆಂಗಳೂರಿನ ಉದ್ಯಮಿ ಎನ್ನುವುದು ವಿಶೇಷ. ( ವರದಿ: ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ಪ್ರತಿ ರಾಮ ನವಮಿಯಂದು ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಭು ಶ್ರೀರಾಮನ ಹಣೆಯ ಮೇಲೆ ಸೂರ್ಯರಶ್ಮಿಗಳ ತಿಲಕ ಮೂಡುವ ಹಾಗೆ ವಿನೂತನ ಮತ್ತು ಅತ್ಯಾಧುನಿಕ ಯಂತ್ರವನ್ನು ತಯಾರಿಸಲಾಗಿದೆ. ಈ ಯಂತ್ರದ ವಿನ್ಯಾಸವನ್ನು ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ (ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಜಿಕ್ಸ್ )ಮತ್ತು ರೂರ್ಕೆಯಲ್ಲಿರುವ ಕೇಂದ್ರ ಕಟ್ಟಡ ಸಂಶೋಧನಾ ಸಂಸ್ಥೆ(ಸಿಬಿಆರ್ ಐ) ವಿನ್ಯಾಸಗೊಳಿಸಿದೆ. ಈ ಯಂತ್ರವನ್ನು ತಯಾರಿಸಿರುವುದು ಬೆಂಗಳೂರಿನ ಖಾಸಗಿ ಕೈಗಾರಿಕೆ ಎನ್ನುವುದು ಮತ್ತೊಂದು ವಿಶೇಷವಾಗಿದೆ.
ರಾಮನವಮಿ ದಿನದಂದು ಸೂರ್ಯ ಒಂದು ನಿರ್ದಿಷ್ಟ ಕೋನದಲಿದ್ದಾಗ ಪೆರಿಸ್ಕೋಪ್ ವ್ಯವಸ್ಥೆಯಲ್ಲಿ ಯಂತ್ರದ ಕನ್ನಡಿಯು ಸೂರ್ಯನ ಕಿರಣಗಳನ್ನು ಸೆರೆಹಿಡಿಯುತ್ತದೆ. ನಂತರ ಶ್ರೀರಾಮನ ಹಣೆಯ ಮೇಲೆ ತಿಲಕದ ರೂಪದಲ್ಲಿ ಈ ಸೂರ್ಯನ ಕಿರಣಗಳು ಮೂಡಿ ಬರಲಿವೆ. ಈ ವರ್ಷ ರಾಮನವಮಿ ಆಚರಿಸುವ ಮಾರ್ಚ್ 29ರಂದು ಮೊದಲ ಬಾರಿಗೆ ಈ ವಿಗ್ರಹದ ಹಣೆಯ ಮೇಲೆ ಸೂರ್ಯ ತಿಲಕ ಮೂಡಿ ಬರಲಿದೆ. ಈ ಯಂತ್ರಕ್ಕಾಗಿ ಬ್ಯಾಟರಿ, ಟೈಟಾನಿಯಂ, ಹಿತ್ತಾಳೆ, ತಾಮ್ರವನ್ನು ಬಳಸಲಾಗಿದೆ. ದೇವಸ್ಥಾನದ ನಿಯಮದಂತೆ ಕಬ್ಬಿಣ ಅಥವಾ ಸ್ಟೀಲ್ ಬಳಸಿಲ್ಲ.
ಯೋಜನೆಯ ಸಂಶೋಧಕ ಮತ್ತು ಮುಖ್ಯ ವಿಜ್ಞಾನಿಯೂ ಆಗಿರುವ ಎಸ್ ಕೆ ಪಾಣಿಗ್ರಾಹಿ ಅವರು ಕಬ್ಬಿಣ ಅಥವಾ ಸ್ಟೀಲ್ ಬಳಕೆ ಮಾಡಿಲ್ಲ. 75ಎಂ ಎಂ ನಷ್ಟು ಸೂರ್ಯನ ಕಿರಣಗಳ
ವೃತ್ತಾಕಾರದ ತಿಲಕ ರಾಮನ ಹಣೆಯ ಮೇಲೆ 3-4 ನಿಮಿಷಗಳ ಕಾಲ ಮೂಡಿ ಬರಲಿದೆ. ಈ ಯಂತ್ರವನ್ನು ರಾಮನವಮಿಯಂದು ಮಾತ್ರ ಬಳಕೆ ಮಾಡಲಾಗುತ್ತದೆ. ಈ ಯಂತ್ರವನ್ನು ದೇವಾಲಯದ ಮೂರನೇ ಮಹಡಿಯಲ್ಲಿ ಸ್ಥಾಪಿಸಲಾಗುತ್ತದೆ.
ಉತ್ತಮ ಗುಣಮಟ್ಟದ ಕನ್ನಡಿಗಳು, ಲೆನ್ಸ್ ಮತ್ತು ಲೆನ್ಸ್ ಗಳುಳ್ಳ ಲಂಬಾಕಾರದ ಪೈಪುಗಳನ್ನು ನಿರ್ಧಿಷ್ಟ ಕೋನಗಳಲ್ಲಿ ಅಳವಡಿಸಲಾಗಿರುತ್ತದೆ.
ಮೂರ್ತಿ ಇರುವ ಗರ್ಭಗುಡಿಯಲ್ಲಿ ಮತ್ತೆ ಕನ್ನಡಿಗಳು ಮತ್ತು ಲೆನ್ಸ್ ಗಳನ್ನು ಅಳವಡಿಸಲಾಗಿರುತ್ತದೆ. ಸೂರ್ಯನ ಕಿರಣಗಳು ವಿವಿಧ ಲೆನ್ಸ್ ಗಳ ಮೂಲಕ ಹಾದು ಮೂರ್ತಿಯ ಹಣೆಯ ಮೇಲೆ ವೃತ್ತಾಕಾರದಲ್ಲಿ ತಿಲಕದ ಮಾದರಿಯಲ್ಲಿ ಮೂಡಿ ಬರಲಿದೆ ಎಂದು ಪಾಣಿಗ್ರಾಹಿ ವಿವರಿಸುತ್ತಾರೆ.
ಆಪ್ಟಿಕಲ್ ವಿನ್ಯಾಸಕ್ಕೆ ಸಿಬಿಆರ್ ಐಗೆ ಆಸ್ಟ್ರೋಫಿಜಿಕ್ಸ್ ಸಂಸ್ಥೆಯು ಸಲಹೆ ನೀಡಿದೆ. ಸಿಬಿಆರ್ ಐನ ವಿಜ್ಞಾನಿಗಳಾದ ಆರ್ ಎಸ್ ಬಿಸ್ಥ್, ದೇವದತ್ತ ಘೋಷ್, ವಿ.ಚಕ್ರಧರ್, ಕಾಂತಿಲಾಲ್ ಸೋಲಂಕಿ ಸಮೀರ್ ಮತ್ತು ದಿನೇಶ್ ವಿನ್ಯಾಸಗೊಳಿಸಿದ್ದಾರೆ. ಇಂಗ್ಲೀಷ್.ಕ್ಯಾಲೆಂಡರ್ ಪ್ರಕಾರ ಪ್ರತಿ 19 ವರ್ಷಗಳಿಗೊಮ್ಮೆ ರಾಮನವಮಿ ದಿನಾಂಕ ಪುನರಾವರ್ತನೆಯಾಗುತ್ತದೆ. ಈ ಆಧಾರದ ಮೇಲೆ ಈ ಯಂತ್ರವನ್ನು ಅಭಿವೃದ್ದಿಪಡಿಸಲಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಬೆಂಗಳೂರಿನ ಜಿಗಣಿಯಲ್ಲಿರುವ ಆಪ್ಟಿಕ್ಸ್ ಮತ್ತು ಅಲೈಡ್ ಇಂಜಿನಿಯರಿಂಗ್ ಕಂಪನಿಯು ಉಚಿತವಾಗಿ ತಯಾರಿಸಿಕೊಟ್ಟಿದೆ. ಈ ಯಂತ್ರದ ಬೆಲೆ ಸುಮಾರು 84 ಲಕ್ಷ ರೂ.ಗಳು ಎಂದು ಕಂಪನಿಯ ಮಾಲೀಕರಾದ ರಾಜೇಂದ್ರ ಕೊಠಾರಿಯಾ ಹೇಳುತ್ತಾರೆ. ಈ ಸೇವೆಯನ್ನು ಒದಗಿಸಲು ತುಂಬಾ ಸಂತೋಷವಾಗುತ್ತದೆ. ಈ ಯಂತ್ರವನ್ನು ತಯಾರಿಸಲು 3-4 ತಿಂಗಳು ಹಿಡಿದಿದೆ ಎಂದು ಹೇಳುತ್ತಾರೆ.
(ವರದಿ: ಎಚ್.ಮಾರುತಿ.ಬೆಂಗಳೂರು)